ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಅರ್ಥ ಮಾಡಿಸುವ ಶಿಕ್ಷಣ ಅಗತ್ಯ

Last Updated 25 ಏಪ್ರಿಲ್ 2017, 5:57 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಇತಿಹಾಸ ಅರ್ಥ ಮಾಡಿಸುವ ಶಿಕ್ಷಣ ಪ್ರಸ್ತುತ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಸೋಮವಾರ ಇಲ್ಲಿನ ಬಾಹುಬಲಿ ಎಂಜಿನಿಯರಿಂಗ್‌ ಕಾಲೇಜು ಮೈದಾನದಲ್ಲಿ ಮಹಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಇತಿಹಾಸ ಗೊತ್ತಿರದವನಿಂದ ದೇಶದ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ. ದಯೆಯೇ ಧರ್ಮದ ಮೂಲ ಎಂದು ಅರ್ಥ ಮಾಡಿಕೊಳ್ಳಬೇಕು. ಅರ್ಥ ವಾಗದ ಭಾಷೆಯಲ್ಲಿ ಧರ್ಮ ಬೋಧನೆ ಮಾಡಿದರೆ ಪ್ರಯೋಜನವಿಲ್ಲ. ಹಿಂದೂ ಧರ್ಮದ ಸಾರ ಸಹಿಷ್ಣುತೆ. ಎಲ್ಲಾ ಧರ್ಮವನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿಇದರು.

ಮಹಾಮಸ್ತಕಾಭಿಷೇಕ ಕೇವಲ ಧರ್ಮಾಧಿಕಾರಿಗಳಿಗಷ್ಟೇ ಸೀಮಿತವಲ್ಲ. ಇದು ವಿಶ್ವ ಮಟ್ಟದ ಹಬ್ಬ. ಹೆಚ್ಚಿನ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಗಿದೆ. ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಪ್ರಾಕೃತ ವಿ.ವಿ ಸ್ಥಾಪಿಸಲಾಗುತ್ತಿದೆ ಎಂದರು.

ಹೆಚ್ಚಿನ ನೆರವು ನೀಡಿದ್ದೇವೆ: ನಾಲ್ಕು ವರ್ಷಗಳಲ್ಲಿ ಹಾಸನ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ₹  1,400 ಕೋಟಿ ಮತ್ತು ಲೋಕೋಪಯೋಗಿ ಇಲಾಖೆಯಿಂದ ₹ 1,750 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಿದರು.

‘ರಾಜ್ಯದ ಎಲ್ಲಾ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಮೀಸಲಿಟ್ಟ ₹ 5 ಸಾವಿರ ಕೋಟಿಯಲ್ಲಿ ಈಗಾಗಲೇ ₹ 2,500 ಕೋಟಿ ಖರ್ಚು ಮಾಡಲಾಗಿದೆ’ ಎಂದು ವಿವರಿಸಿದರು.

ಸಚಿವ ಜಿ.ಪರಮೇಶ್ವರ್‌, ‘ವಿಶ್ವಕ್ಕೆ ಭಗವಾನ್‌ ಬಾಹುಬಲಿ ಸಾರಿದ ತ್ಯಾಗ, ಶಾಂತಿ ಸಂದೇಶ ಪ್ರಸ್ತುತ ವಿಶ್ವಕ್ಕೆ ಅಗತ್ಯವಾಗಿದೆ’ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಸಿದ್ಧರಾಮಯ್ಯ, ಎಚ್‌.ಡಿ.ದೇವೇಗೌಡ ಹಾಗೂ ಇತರೆ ಗಣ್ಯರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಮಧ್ಯಾಹ್ನ ಎಲ್ಲರೂ ಹೋಳಿಗೆ, ಬಿಸಿ ಬೇಳೆ ಬಾತ್‌, ಮುದ್ದೆ, ಸಾಂಬರು, ಬಜ್ಜಿ, ಮೊಸರನ್ನ ಸವಿದರು.

ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ಕೆ.ಅಭಯಚಂದ್ರ ಜೈನ್‌, ಡಿ. ಸುಧಾಕರ್‌, ಎಚ್‌.ಡಿ.ರೇವಣ್ಣ, ಎಚ್‌.ಎಸ್‌. ಪ್ರಕಾಶ್‌, ಕೆ.ಎಂ. ಶಿವಲಿಂಗೇ ಗೌಡ, ಎಚ್‌.ಕೆ. ಕುಮಾರ ಸ್ವಾಮಿ, ವೈ.ಎನ್‌, ರುದ್ರೇಶ್‌ ಗೌಡ, ವಿಧಾನ ಪರಿಷತ್‌ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌. ಶ್ವೇತಾ ದೇವರಾಜ್‌, ಮಲೆನಾಡು ಪ್ರದೇಶಾ ಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಪಿ. ಮೋಹನ್‌, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್‌. ವೆಂಕಟೇಶ್‌,  ಜಿ.ಪಂ ಸದಸ್ಯೆ ಮಮತಾ ರಮೇಶ್‌, ತಾ.ಪಂ ಸದಸ್ಯರಾದ ಮಹಾಲಕ್ಷ್ಮೀ ಶಿವರಾಜ್‌, ರಂಜಿತಾ ರಂಗೇಗೌಡ, ಗ್ರಾ.ಪಂ ಅಧ್ಯಕ್ಷೆ ಹೇಮಾ ಪ್ರಭಾಕರ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ  ನವೀನ್‌ ರಾಜ್‌ ಸಿಂಗ್‌,  ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್‌. ವೆಂಕಟೇಶ್‌ ಕುಮಾರ್‌,  ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಮಹಾಮಸ್ತಕಾಭಿಷೇಕ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ. ಜೈನ್‌, ಕಾರ್ಯಾಧ್ಯಕ್ಷ ಎಸ್‌. ಜಿತೇಂದ್ರಕುಮಾರ್‌ ಇದ್ದರು.

ಜಿಲ್ಲಾಧಿಕಾರಿ ವಿ.ಚೈತ್ರಾ ಸ್ವಾಗತಿಸಿದರು, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ವಿನೋದ್‌ ಚಂದ್ರ ನಿರೂಪಿಸಿದರು, ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ವಂದಿಸಿದರು.

**

‘ಕೇಂದ್ರ ಸಾಲ ಮನ್ನಾ ಮಾಡಲಿ...’

ಹಾಸನ: ಸಹಕಾರ ಸಂಘಗಳ ಮೂಲಕ ಸಾಲ ನೀಡಿರೋದು ಶೇ.22ರಷ್ಟು ಮಾತ್ರ.  ಉಳಿದ ಶೇ.78 ರಷ್ಟು ಸಾಲವನ್ನು ರಾಷ್ಟ್ರೀಯ ಮತ್ತು ವಾಣಿಜ್ಯ ಬ್ಯಾಂಕ್‌ಗಳು ನೀಡಿವೆ. ಹೀಗಾಗಿ ಕೇಂದ್ರ ಅವುಗಳನ್ನು ಮನ್ನಾ ಮಾಡಿದರೆ  ನಾವು ಮನ್ನಾ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.

ಜೈನ್‌ ಮಾತಿಗೆ ತಪ್ಪುವುದಿಲ್ಲ: ‘ಅಹಿಂಸೆ, ತ್ಯಾಗಕ್ಕೆ ಮತ್ತೊಂದು ಹೆಸರು ಜೈನ ಧರ್ಮ. ಅಭಯ್‌ ಕುಮಾರ್‌ ಜೈನ್‌ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಾಗ ಏನು ಮಾತ ನಾಡಲಿಲ್ಲ. ಮುಂದಿನ ಚುನಾವಣೆ ಯಲ್ಲಿ ತಾವು ಸ್ಪರ್ಧಿಸುವುದಿಲ್ಲ. ಅವರು ಕೊಟ್ಟ ಮಾತಿಗೆ ತಪ್ಪುವುದಿಲ್ಲ’ ಎಂದು ಹೇಳಿದರು.

***

ಯಾವುದೇ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾದರೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿ.ಪಂ ಸಿಇಒ ಅವರೇ ಹೊಣೆಗಾರರು
-ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT