ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿದವರಿಗೆ ಅನ್ನ; ಬಾಯಾರಿದವರಿಗೆ ನೀರಿನ ವ್ಯವಸ್ಥೆ

Last Updated 25 ಏಪ್ರಿಲ್ 2017, 5:59 IST
ಅಕ್ಷರ ಗಾತ್ರ

ಝುಂಜರವಾಡ (ಅಥಣಿ ತಾಲ್ಲೂಕು): ಜನನಿಬಿಡ ನಿರ್ಜನ ಪ್ರದೇಶ. ಸಮೀಪ­ದಲ್ಲಿ ಇರೋದೊಂದೇ ತೋಟದ ವಸತಿ. ಬಾಯಾರಿದರೆ ಗುಟುಕು ನೀರು ದೊರೆಯದ ವಾತಾವರಣ... ನೀರು ಅರಸಿ ಹೊರಟರೆ ಕನಿಷ್ಠ ನಾಲ್ಕೈದು ಕಿ.ಮೀ. ವಾಹನದಲ್ಲೇ ಪಯಣಿಸಬೇಕು.ಜಿಲ್ಲಾಡಳಿತ ಕಲ್ಪಿಸಿರುವ ವ್ಯವಸ್ಥೆ ಸಿಬ್ಬಂದಿ, ವಿಐಪಿಗಳಿಗಾಗಿ ಮಾತ್ರ... ಇದು ಝುಂಜರವಾಡ ಪುನರ್ವಸತಿ ಕೇಂದ್ರ­ದಿಂದ ಕೂಗಳತೆ ದೂರದಲ್ಲಿನ ವಿಫಲ ಕೊಳವೆಬಾವಿಯೊಳಗೆ ಶನಿವಾರ ಮುಸ್ಸಂಜೆ ಕಾಲುಜಾರಿ ಬಿದ್ದಿರುವ ‘ಕಾವೇರಿ’ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲಿನ ಮೂರು ದಿನಗಳ ಚಿತ್ರಣ.

ದೂರದೂರುಗಳಿಂದ ರಕ್ಷಣಾ ಕಾರ್ಯಾ­ಚರಣೆ ವೀಕ್ಷಿಸಲು ಬರುವ ಜನಸ್ತೋಮದ ದಾಹ ಇಂಗಿಸಲು, ಕೊಂಚ ಹಸಿವು ತಣಿಸಲು ಝುಂಜರ­ವಾಡ ಗ್ರಾಮಸ್ಥರು ನೀರು–ಉಪಾಹಾರದ ವ್ಯವಸ್ಥೆ ಕಲ್ಪಿಸಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.‘ಝುಂಜರವಾಡ ಗ್ರಾಮದಿಂದ ಪುನರ್ವಸತಿ ಕೇಂದ್ರ 10 ಕಿ.ಮೀ. ದೂರವಿದೆ. ಇಲ್ಲಿನ ಕಾವೇರಿ ಕೊಳವೆ­ಬಾವಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಶನಿವಾರ ರಾತ್ರಿ 8 ಗಂಟೆ ವೇಳೆಗೆ ತಲಾ 20 ಲೀಟರ್‌ ಸಾಮರ್ಥ್ಯದ 20 ಶುದ್ಧ ಕುಡಿಯುವ ನೀರಿನ ಕ್ಯಾನ್‌ ತಂದು ಬಂದಂತಹ ಜನರಿಗೆ ನೀಡಿದೆವು’ ಎಂದು ಗ್ರಾಮದ ರಫೀಕ್ ಮೀರಾಗೋಳ್‌ ತಿಳಿಸಿದರು.

‘ಭಾನುವಾರ ನಸುಕಿನ ಐದಕ್ಕೆ ಗ್ರಾಮದ ಆನಂದ ಶಿರಹಟ್ಟಿ, ಸಿದ್ದು ಹೊಸಲಕರ, ಬಸಪ್ಪ ಹೊಸಲಕರ, ಸುರು ಪೂಜಾರಿ, ಸದಾಶಿವ ಪೂಜಾರಿ, ವೆಂಕಪ್ಪ ನೇಮಗೌಡ, ಸಹದೇವ ಕೋಳಿ, ನಾನು ಸೇರಿದಂತೆ ಇತರರು ಒಂದೆಡೆ ಸೇರಿ ರಕ್ಷಣಾ ಕಾರ್ಯಾಚರಣೆಯ ಸ್ಥಳಕ್ಕೆ ಬರುವ ಜನರಿಗೆ ನಾಷ್ಟಾ–ಊಟದ ವ್ಯವಸ್ಥೆ ಮಾಡಲು ನಿರ್ಣಯ ಕೈಗೊಂಡೆವು.

ಅಡುಗೆ ಭಟ್ಟನನ್ನು ಒಪ್ಪಿಸಿಕೊಂಡು ಗ್ರಾಮದ ಆನಂದ ಬಾಗೇವಾಡಿ ಅಂಗಡಿಗೆ ತೆರಳಿ ಸಾಲದ ಪುಸ್ತಕ ಬರೆಸಿ ದಿನಸಿ ಸಾಮಗ್ರಿ ತಂದೆವು. ಭಾನುವಾರ ಬೆಳಿಗ್ಗೆ ಒಂದು ಕ್ವಿಂಟಲ್ ಮಸಾಲ ರೈಸ್‌, ಮಧ್ಯಾಹ್ನ 50 ಕೆ.ಜಿ. ಅಕ್ಕಿಯ ಮಸಾಲ ರೈಸ್‌, ರಾತ್ರಿ 25 ಕೆ.ಜಿ. ಅಕ್ಕಿಯ ಪಲಾವ್‌ ಮಾಡಲಾಗಿತ್ತು. ಸೋಮವಾರ ಬೆಳಿಗ್ಗೆ 30 ಕೆ.ಜಿ. ರವೆಯ ಉಪ್ಪಿಟ್ಟು, ಮಧ್ಯಾಹ್ನ 50 ಕೆ.ಜಿ. ಅನ್ನ–ಸಾಂಬಾರ್‌, ರಾತ್ರಿಯೂ ಕೊಂಚ ಊಟದ ವ್ಯವಸ್ಥೆ ಮಾಡಿದ್ದೆವು’ ಎಂದು ರಫೀಕ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯ್ತಿ ಆಡಳಿತ ಕುಡಿ­ಯುವ ನೀರಿನ ಟ್ಯಾಂಕರ್‌ ನಿಲ್ಲಿಸಿತ್ತು. ಇದು ಮುಗಿಯುವ ವೇಳೆಗೆ ಝುಂಜರ­ವಾಡ ಗ್ರಾಮದ ಜೈನ ಸಮಾಜದ ಜನತೆ ಸಹ ಟ್ಯಾಂಕರ್‌ ನೀರು ನಿಲ್ಲಿಸಿ ಜನರ ದಾಹ ಇಂಗಿಸುವ ಯತ್ನ ನಡೆಸಿತು ಎಂದು ಅವರು ಹೇಳಿದರು.ಆಸರೆಯಾದ ತೋಟದ ವಸತಿ: ನಿರ್ಜನ ಪ್ರದೇಶದಲ್ಲಿರುವ ತೋಟದ ವಸತಿ ಎಲ್ಲರ ಪಾಲಿನ ವಿಶ್ರಾಂತಿ ಕೇಂದ್ರ­ವಾ­ಗಿತ್ತು. ಬಿಸಿಲ ಝಳಕ್ಕೆ ಬಸವಳಿದ ಪೊಲೀ­ಸರು, ವಿವಿಧ ಇಲಾಖೆಯ ಅಧಿಕಾರಿ­ಗಳು, ಮಾಧ್ಯಮದವರ ಆಶ್ರಯ ತಾಣವಾಗಿತ್ತು.

ಮನೆಯ ಮಂದಿ ಸಹ ಎಲ್ಲರಿಗೂ ಮುಕ್ತ ಆಹ್ವಾನದ ಪ್ರವೇಶ ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು. ಹೊರ ಭಾಗದಲ್ಲಿ 200 ಲೀಟರ್‌ ಸಾಮರ್ಥ್ಯದ ಸಿಂಟೆಕ್ಸ್‌ಗೆ ಕುಡಿಯುವ ನೀರು ತುಂಬಿಸಿ, ಬಾಯಾರಿ ಬಂದವರ ದಾಹ ತಣಿಸಿದರು. ಈ ತೋಟದ ವಸತಿ ಇರದಿದ್ದರೇ ಅಕ್ಷರಶಃ ನಾವು ಬೀದಿ ಪಾಲಾಗಬೇಕಿತ್ತು ಎಂದು ದೃಶ್ಯ ಮಾಧ್ಯಮದ ಮಿತ್ರರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಝುಂಜರವಾಡ ಗ್ರಾಮಸ್ಥರ ಸೇವೆ, ತೋಟದ ವಸತಿಯ ಮಾಲೀಕರ ಉದಾರತೆಯಿಂದ ಇಂತಹ ನಿರ್ಜನ ಪ್ರದೇಶದಲ್ಲಿ ನಾವು ಕರ್ತವ್ಯ ನಿರ್ವಹಿಸಲು ಯಶಸ್ವಿಯಾಗಿದ್ದೇವೆ. ನಮ್ಮ ಬಳಿಯೇ ಬಂದು ನಾಷ್ಟಾ–ಊಟ ಕೊಟ್ಟ ಇವರ ಸೇವಾಮನೋಭಾವವನ್ನು ಎಷ್ಟು ಶ್ಲಾಘಿಸಿದರೂ ಸಾಲದು. ಇವರನ್ನು ಎಂದೆಂದೂ ನಾವು ಮರೆಯಲು ಸಾಧ್ಯವಿಲ್ಲ’ ಎಂದು ಕೆಲ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT