ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿನಗೂಲಿ, ಗುತ್ತಿಗೆ ನೌಕರರ ಶೋಷಣೆ’

Last Updated 25 ಏಪ್ರಿಲ್ 2017, 6:09 IST
ಅಕ್ಷರ ಗಾತ್ರ

ಹಾವೇರಿ: ‘ಲೋಕವನ್ನು ಬೆಳಗಿಸುವ ವಿದ್ಯುತ್ ಘಟಕಗಳಲ್ಲಿ ಗುತ್ತಿಗೆ ಹಾಗೂ ದಿನಗೂಲಿ ನೌಕರರು ಅತ್ಯಂತ ಅಪಾಯಕಾರಿ ಕೆಲಸವನ್ನು ನಿರ್ವಹಿಸುತ್ತಾರೆ. ಆದರೆ, ಸರ್ಕಾರವು ಅವರಿಗೆ ಕನಿಷ್ಠ ಕೂಲಿಯನ್ನೂ ನೀಡದೇ ಶೋಷಣೆ ಮಾಡುತ್ತಿದೆ’ ಎಂದು ಕರ್ನಾಟಕ ವಿದ್ಯುತ್‌ ನೌಕರರ ಫೆಡರೇಶನ್‌ ರಾಜ್ಯ ಘಟಕದ ಅಧ್ಯಕ್ಷ ಸತ್ಯಬಾಬು.ಜೆ ಹೇಳಿದರು.

ನಗರದ ಜಿಲ್ಲಾ ನೌಕರರ ಸಭಾಭವನದಲ್ಲಿ ಸೋಮವಾರ ಜಿಲ್ಲಾ ಹೊರಗುತ್ತಿಗೆ ವಿದ್ಯುತ್‌ ಕಾರ್ಮಿಕರ ಸಂಘ ಆಯೋಜಿಸಿದ ‘ಜಿಲ್ಲಾ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ದೇಶದ ಅಭಿವೃದ್ಧಿಗೆ ನೀರು ಮತ್ತು ವಿದ್ಯುತ್‌ ಮೂಲಾಧಾರ. ಆದರೆ, ವಿದ್ಯುತ್ (ಇಂಧನ)ಇಲಾಖೆಯ ಗುತ್ತಿಗೆ ಹಾಗೂ ದಿನಗೂಲಿ ನೌಕರರು ತಮ್ಮ ಮೂಲ ಹಕ್ಕುಗಳನ್ನು ಪಡೆಯದೇ ಕೆಲಸ ನಿರ್ವಹಿಸುತ್ತಿದ್ದಾರೆ.

ರಾಜ್ಯದಲ್ಲಿ ಪವನ ಶಕ್ತಿ, ಜಲ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಗುತ್ತಿಗೆ ಹಾಗೂ ದಿನಗೂಲಿ ನೌಕರರು ಅತ್ಯಂತ ಅಪಾಯಕಾರಿ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ’ ಎಂದರು.‘ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಗುತ್ತಿಗೆ ಹಾಗೂ ದಿನಗೂಲಿ ನೌಕರರಿಗೆ ಕನಿಷ್ಠ ಕೂಲಿ ನೀಡಬೇಕು. ಸರ್ಕಾರ ಆದೇಶವನ್ನೂ ಪಾಲಿಸುತ್ತಿಲ್ಲ. ನೀಡುವ ಕೂಲಿಯನ್ನೂ ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ   ನೀಡುತ್ತಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ’ ಎಂದರು.

‘ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ನೌಕರರಿಗೆ ತಿಂಗಳಿಗೆ ₹18ರಿಂದ ₹21 ಸಾವಿರ ತನಕ ವೇತನ ನೀಡಬೇಕು. 2 ವರ್ಷ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದವರನ್ನು ಕಾಯಂಗೊಳಿಸಬೇಕು. ಎಲ್ಲ ಸೌಲಭ್ಯಗಳನ್ನು ನೀಡಬೇಕು. ಅದಕ್ಕಾಗಿ ಸಂಘಟಿತ ಹೋರಾಟ ನಡೆಸೋಣ’ ಎಂದರು.‘ದಿನಗೂಲಿ ಹಾಗೂ ಗುತ್ತಿಗೆ ನೌಕರರ ಬೇಡಿಕೆ ಈಡೇರಿಕೆ ಹಾಗೂ ಕಾಯಮಾತಿಗೆ ಆಗ್ರಹಿಸಿ ಆಗಸ್ಟ್‌ನಲ್ಲಿ ಹೈದರಾಬಾದ್‌ನಲ್ಲಿ ‘ಅಂತರ ರಾಷ್ಟ್ರೀಯ ಸಮಾ ವೇಶ’, ಜೂನ್‌ ಅಥವಾ ಜುಲೈಯಲ್ಲಿ ಬೆಂಗಳೂರಿನಲ್ಲಿ ‘ರಾಜ್ಯ ಮಟ್ಟದ ಸಮಾ ವೇಶ’ ನಡೆಸಲಾಗುವುದು. ಅಲ್ಲದೇ, ಸೆಪ್ಟೆಂಬರ್ 14ರಂದು  ‘ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದರು.

ಜಿಲ್ಲಾ ಹೊರಗುತ್ತಿಗೆ ವಿದ್ಯುತ್‌ ಕಾರ್ಮಿಕರ ಸಂಘದ ಅಧ್ಯಕ್ಷ ದೊಡ್ಡಪ್ಪ ಬೊಳಕಟ್ಟಿ, ಕಾರ್ಯದರ್ಶಿ ಸುರೇಶ ಅಂಗೂರ, ಕರ್ನಾಟಕ ರಾಜ್ಯ ವಿದ್ಯುತ್‌ ನೌಕರರ ಫೆಡರೇಶನ್‌ ಜಿಲ್ಲಾ ಸಂಚಾಲಕ ವಿನಾಯಕ ಕುರುಬರ, ಸಿ.ಐ.ಟಿ.ಯು ಜಿಲ್ಲಾ ಮುಖಂಡ ನಾರಾಯಣ ಕಾಳೆ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಹುಚ್ಚಪ್ಪನವರ, ಜಿಲ್ಲಾ ರೈತ ಸಂಚಾಲಕ ಮಾಲತೇಶ ಪೂಜಾರ, ಚಂದ್ರಶೇಖರ ಹಾಗೂ ಯಲ್ಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT