ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರಿನಿಂದ ರಕ್ಷಿಸಿದ್ದ ಹೆಣ್ಣಾನೆ ಸಾವು

Last Updated 25 ಏಪ್ರಿಲ್ 2017, 6:13 IST
ಅಕ್ಷರ ಗಾತ್ರ

ಎಚ್‌.ಡಿ.ಕೋಟೆ: ಬಂಡೀಪುರ ಹುಲಿ ರಕ್ಷಿತಾರಣ್ಯದ ಗುಂಡ್ರೆ ವಲಯದ ಕಬಿನಿ ಜಲಾಶಯದ ಹಿನ್ನೀರಿನ ಕೆಸರಿನಲ್ಲಿ ಸಿಲುಕಿ, ನಿತ್ರಾಣಗೊಂಡಿದ್ದ ಹೆಣ್ಣಾನೆ ಸೋಮವಾರ ಮೃತಪಟ್ಟಿದೆ. ಒಂದು ವಾರದಲ್ಲಿ ಕೆಸರಿನಲ್ಲಿ ಸಿಲುಕಿ ಎರಡು ಆನೆಗಳು ಮೃತಪಟ್ಟಂತಾಗಿದೆ.

ಕೆಸರಿನಲ್ಲಿ ಸಿಲುಕಿದ್ದ ಆನೆಯನ್ನು ಮೇಲೆತ್ತಿ ಚಿಕಿತ್ಸೆ ನೀಡಿದರೂ ಸ್ಪಂದಿಸದೆ ಮೃತಪಟ್ಟಿತ್ತು.

ಶನಿವಾರ ಹಿನ್ನೀರಿಗೆ ನೀರು ಕುಡಿಯಲು ಬಂದಿದ್ದ 30 ವರ್ಷದ ಹೆಣ್ಣಾನೆ ಕೆಸರಿನಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಗಮನಿಸಿದ್ದರು. ನಂತರ ಸಾಕಾನೆಗಳ ಸಹಾಯದಿಂದ ಮೇಲೆತ್ತಿದ್ದರು. ಆದರೆ, ಸೋಮವಾರ ಬೆಳಿಗ್ಗೆ ಸಾವನ್ನಪ್ಪಿದೆ.

‘ಕೆಸರಿನಲ್ಲಿ ಸಿಕ್ಕಿಕೊಂಡು ಈಚೆಗೆ ಬರಲು ತುಂಬ ಪ್ರಯತ್ನಿಸಿ ವಿಫಲಗೊಂಡಿತ್ತು. ಇದರಿಂದ ಅದು ಸಾಕಷ್ಟು ಬಳಲಿತ್ತು. ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಜತೆಗೆ, ನಿರ್ಜಲೀಕರಣದಿಂದಲೂ ಸಾವನ್ನಪ್ಪಿದೆ’ ಎಂದು ಪಶುವೈದ್ಯರಾದ ಡಿ.ಎನ್‌.ನಾಗರಾಜು ತಿಳಿಸಿದರು.

‘ಕಾಡಿನ ಸಣ್ಣಕೆರೆಗಳು ಬತ್ತಿರುವುದರಿಂದ ನೀರು ಕುಡಿಯಲು ಕಬಿನಿ ಜಲಾಶಯದ ಹಿನ್ನೀರಿಗೆ ಪ್ರಾಣಿಗಳು ಬರುತ್ತಿವೆ. ಈ ಭಾಗದಲ್ಲಿ ಸುಮಾರು 14 ಕಿ.ಮೀ ದೂರದಷ್ಟು ಕೆಸರಿದ್ದು, ನೀರಿಗಾಗಿ ಬರುವ ಪ್ರಾಣಿಗಳು ಸಿಲುಕುತ್ತವೆ. ಮಳೆಯಾದರೆ ಹಿನ್ನೀರಿಗೆ ಬರುವುದು ತಪ್ಪುತ್ತದೆ’ ಎಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಸಿಸಿಎಫ್ ಹೀರಾಲಾಲ್‌ ಹೇಳಿದರು.

ನಿತ್ರಾಣಗೊಂಡು ಹೆಣ್ಣಾನೆ ಸಾವು
ಹುಣಸೂರು:
ರಾಷ್ಟ್ರೀಯ ಉದ್ಯಾನ ನಾಗರಹೊಳೆ ಅರಣ್ಯದ ವೀರನಹೊಸ ಹಳ್ಳಿ ಮುಖ್ಯದ್ವಾರದ ಬಳಿ ಹೆಣ್ಣಾನೆ ಸಾವನ್ನಪ್ಪಿದ ಘಟನೆ ನಡೆದಿದೆ.

‘ಮುಖ್ಯದ್ವಾರದ ಬಳಿಯ ಅರಣ್ಯ ಇಲಾಖೆ ಕಚೇರಿ ಹಿಂಭಾಗದಲ್ಲಿ ನಿತ್ರಾಣಗೊಂಡು ನೆಲಕ್ಕುರುಳಿದ್ದ 60 ವರ್ಷದ ಹೆಣ್ಣಾನೆ ಸಾವು ಬದುಕಿನ ನಡುವೆ ಹೋರಾಟ ನಡೆಸಿತ್ತು. ವಿಷಯ ತಿಳಿದ ಅರಣ್ಯ ಇಲಾಖೆ ಚಿಕಿತ್ಸೆ ನೀಡಿತು. ಆದರೆ, ಸಂಜೆ ಹೊತ್ತಿಗೆ ಸಾವನ್ನಪ್ಪಿತು’ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಲಿ ಯೋಜನಾ ನಿರ್ದೇಶಕ ಮಣಿಕಂಠನ್‌ ತಿಳಿಸಿದ್ದಾರೆ.

‘ಹೆಣ್ಣಾನೆ ಗುದದ್ವಾರದ ಬಳಿ ಗಾಯವಾಗಿರುವುದು ಪತ್ತೆಯಾಗಿದೆ. ಗಂಡು– ಹೆಣ್ಣಾನೆಗಳ ಮಿಲನದ ಸಮಯದಲ್ಲಿ ಗಾಯಗೊಂಡು ನಿತ್ರಾಣ ಗೊಂಡಿರುವುದು ಸಾವಿಗೆ ಕಾರಣ ಇರಬಹುದು’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯಾಧಿಕಾರಿ ಡಾ.ಉಮಾಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT