ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ರಾಜ್‌ಕುಮಾರ್ ಆದರ್ಶ ಅನುಕರಣೀಯ

Last Updated 25 ಏಪ್ರಿಲ್ 2017, 6:26 IST
ಅಕ್ಷರ ಗಾತ್ರ
ADVERTISEMENT

ಚಾಮರಾಜನಗರ: ‘ನಟ ಸಾರ್ವಭೌಮ ಡಾ.ರಾಜ್‌ಕುಮಾರ್‌ ಅವರ ಕಲಾನಿಷ್ಠೆ, ಕಲಾಬದ್ಧತೆ ಹಾಗೂ ಅವರ ವ್ಯಕ್ತಿತ್ವ ಸದಾ ಎಲ್ಲರಿಗೂ ಆದರ್ಶವಾಗಿದೆ’ ಎಂದು ಚಲನಚಿತ್ರ ವಸ್ತ್ರ ವಿನ್ಯಾಸಕ ಎಂ.ಎನ್‌. ಸ್ವಾಮಿ ಹೇಳಿದರು.

ನಗರದ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ರಂಗತರಂಗ ಟ್ರಸ್ಟ್‌ ಹಾಗೂ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಿಂದ ನಡೆದ ಡಾ.ರಾಜ್‌ಕುಮಾರ್‌ ಅವರ 88ನೇ ಜನ್ಮದಿನ ಹಾಗೂ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಕಲಾ ಜಗತ್ತಿನಲ್ಲಿ ಎಂದೂ ಮರೆಯಲಾಗದ ಮಹಾನ್‌ ನಟ ರಾಜ್‌ಕುಮಾರ್‌ ಅವರ ಸರಳ ಮತ್ತು ಸಜ್ಜನಿಕೆಯ ಸ್ವಭಾವ ಎಲ್ಲರಿಗೂ ಸ್ಫೂರ್ತಿ. ಅವರ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಜ್‌ಕುಮಾರ್‌ ಅವರ ನಟನಾ ಚಾತುರ್ಯ ದಿಂದ ಎಂತಹ ಪಾತ್ರವನ್ನೂ ನಿಭಾಯಿಸುತ್ತಿದ್ದರು. ನಟರಾಗಬೇಕು ಎನ್ನುವವರು ಯಾವುದೇ ತರಬೇತಿ ಪಡೆಯಬೇಕಿಲ್ಲ. ರಾಜ್‌ಕುಮಾರ್‌ ಅವರ ಎಲ್ಲ ಚಿತ್ರ ನೋಡಿದರೆ ಸಾಕು ಉತ್ತಮ ನಟರಾಗಬಹುದು ಎಂದು ತಿಳಿಸಿದರು.

ರಾಜ್‌ಕುಮಾರ್‌ ಅವರು ಸಾಮಾನ್ಯ ಜನರೊಂದಿಗೆ ಹೆಚ್ಚು ಬೆರೆಯುತ್ತಿದ್ದರು. ಅವರ ಮಾನವೀಯ ಗುಣ ಹಾಗೂ ಆದರ್ಶವನ್ನು ಯುವಜನರು ಪಾಲಿಸಬೇಕು ಎಂದು ಸಲಹೆ ನೀಡಿದರು.

ಬರಹಗಾರ ಎಸ್‌. ಲಕ್ಷ್ಮಿನರಸಿಂಹ ಮಾತನಾಡಿ, ರಾಜ್‌ಕುಮಾರ್ ಅವರು ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಅಪಾರ ಕಾಳಜಿ ಹಾಗೂ ಗೌರವ ಹೊಂದಿದ್ದರು. ಅವರ ಬದುಕು, ನಡೆ, ನುಡಿ, ಜೀವನ ಪ್ರತಿಯೊಬ್ಬ ಕನ್ನಡಿಗನಿಗೂ ಆದರ್ಶವಾಗಿದೆ ಎಂದರು.

ರಾಜ್‌ಕುಮಾರ್‌ ಸಿನಿಮಾ ಹಾಗೂ ವೈಯಕ್ತಿಕ ಬದುಕಿನಲ್ಲಿ ಒಂದೇ ತೆರನಾಗಿ ಬಾಳಿದ ಕಲಾವಿದ. ಕಲಾತ್ಮಕ, ಭಕ್ತಿ ಪ್ರಧಾನ, ಪೌರಾಣಿಕ ಹಾಗೂ ಕಾದಂಬರಿ ಆಧಾರಿತ ಸೇರಿದಂತೆ ಎಲ್ಲ ರೀತಿಯ ಕಥಾಹಂದರದ ಸಿನಿಮಾದಲ್ಲಿ ನಟಿಸಿದ್ದ ಅವರು ಪಾತ್ರಗಳಿಗೆ ಜೀವ ತುಂಬಿ ಉತ್ತಮ ಸಂದೇಶವನ್ನು ಸಮಾಜಕ್ಕೆ ಸಾರಿದ ಕಲಾವಿದ ಎಂದು ತಿಳಿಸಿದರು.

ಇತಿಹಾಸ ಅಧ್ಯಯನ ಮಾಡುವವರು ರಾಜ್‌ಕುಮಾರ್‌ ಚಿತ್ರ ನೋಡಿದರೆ ಸಾಕು ಇತಿಹಾಸ ಅರಿವು ತಿಳಿಯುತ್ತದೆ ಎಂದ ಅವರು ಏ. 24 ಅನ್ನು ಸಂಸ್ಕೃತಿಯ ದಿನ ಅಥವಾ ಕಲಾವಿದರ ದಿನವನ್ನಾಗಿ ಆಚರಿಸಬೇಕು ಎಂದು ಒತ್ತಾಯಿಸಿದರು.

ರಂಗತರಂಗ ಟ್ರಸ್ಟ್‌ನ ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ ಮಾತನಾಡಿ, ರಾಜ್‌ಕುಮಾರ್‌ ಅವರಿಗೆ ಸಂಸ್ಥೆಯಿಂದ ‘ಭೀಷ್ಮ ತಾರೆ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.

ಈ ವೇಳೆ ರಾಜ್‌ಕುಮಾರ್‌ ಅವರ ಜೀವನ ಚರಿತ್ರೆ ಕುರಿತು ನಡೆಸಲಾಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರಂಗತರಂಗ ಕಲಾವಿದ ಎಲ್‌. ರವೀಂದ್ರ, ಪ್ರಾಂಶುಪಾಲ ಎನ್‌. ಮಹದೇವಸ್ವಾಮಿ ಹಾಜರಿದ್ದರು.

**

‘ಎಲ್ಲಾ ವರ್ಗದ ಜನರ ಹೃದಯದಲ್ಲಿ ರಾಜ್‌’
ಗುಂಡ್ಲುಪೇಟೆ:
ತಾಲ್ಲೂಕಿನ ಕಗ್ಗಳ ಗ್ರಾಮದಲ್ಲಿ ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ತಹಶೀಲ್ದಾರ್ ಕೆ.ಸಿದ್ದು ಡಾ.ರಾಜ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ,  ರಾಜ್‌ಕುಮಾರ್ ತಮ್ಮ ಸಹಜ ಅಭಿನಯದ ಮೂಲಕ ಸಮಾಜ ಎಲ್ಲಾ ವರ್ಗಗಳ ಜನರ ಹೃದಯದಲ್ಲಿ ನೆಲೆಸಿದರು. ಯಾವುದೇ ಪಾತ್ರ ನಿರ್ವಹಿಸಿದರೂ ತಮ್ಮ ಛಾಪು ಮೂಡಿಸಿ ಎಲ್ಲರಿಗೂ ಮಾದರಿಯಾಗಿದ್ದರು ಎಂದರು.

ಡಾ.ರಾಜ್ ಅವರ ಚಿತ್ರಗಳನ್ನು ನೋಡಿ ಎಷ್ಟೋ ಜನ ಸಂಸ್ಕಾರವನ್ನು ಕಲಿತಿದ್ದರು.ಜನರ ಮನಸ್ಸಿನಲ್ಲಿ ಅವರು ಇನ್ನೂ ಬದುಕಿದ್ದಾರೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ರಾಜ್ ಅಭಿಮಾನಿಗಳು, ಗ್ರಾಮದ ಯುವಕರು ಹಾಗೂ ಸಾರ್ವಜನಿಕರು ಹಾಜರಿದ್ದರು.

**

ಡಾ.ರಾಜ್‌ಕುಮಾರ್ ಕೇವಲ ನಟರಾಗಿರದೇ ನಾಡಿನ ಎಲ್ಲ ಕನ್ನಡಿಗರಿಗೂ ಜೀವನೋತ್ಸಾಹದ ಸ್ಫೂರ್ತಿಯಾಗಿ ಬಾಳಿದ ಅಪರೂಪದ ಕಲಾವಿದ. ಪಾತ್ರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ ಮೇರುನಟ.
-ಎಂ.ಎನ್. ಸ್ವಾಮಿ, ಚಲನಚಿತ್ರ ವಸ್ತ್ರವಿನ್ಯಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT