ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ

Last Updated 25 ಏಪ್ರಿಲ್ 2017, 6:30 IST
ಅಕ್ಷರ ಗಾತ್ರ

ರಬಕವಿ- ಬನಹಟ್ಟಿ:  ‘ಸ್ವಾತಂತ್ರ್ಯದ ನಂತರದ ದಿನಗಳಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನೇಕಾರ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ತಿಳಿಸಿದರು.ಸ್ಥಳೀಯ ಕೆಎಚ್‌ಡಿಸಿ ಪ್ರಧಾನ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ನಿವೇಶನ ರಹಿತ 65 ಜನ ಕೈಮಗ್ಗ ನೇಕಾರ ಕುಟುಂಬಗಳಿಗೆ  ನಿವೇಶನ ಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಕೂಡಾ ಅನೇಕ ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಜೊತೆಗೆ ನೇಕಾರರ ಅಭಿವೃದ್ಧಿಯ        ಸಲುವಾಗಿ ಶ್ರಮಿಸುತ್ತಿದೆ. ಎಂಓಯು (ಸರ್ಕಾರಿ ಇಲಾಖೆಗಳ ಒಪ್ಪಂದ ಪತ್ರ)ದಿಂದ ಮಹತ್ವದ ವಿದ್ಯಾ ವಿಕಾಸ ಯೋಜನೆ ಅಡಿಯಲ್ಲಿ ಬಟ್ಟೆ ನೇಯ್ಗೆಯಲ್ಲಿ ಕೆಎಚ್‌ಡಿಸಿಗೆ ಸಂಬಂಧಪಟ್ಟಂತೆ  ಪ್ರತಿ 3 ವರ್ಷಕ್ಕೊಮ್ಮೆ ಒಪ್ಪಂದವನ್ನು ನವೀಕರಿಸುವ ಮೂಲಕ ಇಲಾಖೆಗೆ ಬಹುದೊಡ್ಡ ರಕ್ಷಣೆಯಾಗಿದೆ. ಆಧುನಿಕ ಜಗತ್ತಿನ ಭರಾಟೆಯಲ್ಲಿ 40 ಸಾವಿರ ಕೈಮಗ್ಗ ನೇಕಾರರಲ್ಲಿ ಈಗ ಕೇವಲ 10 ಸಾವಿರದಷ್ಟು ನೇಕಾರರು  ಇಳಿಮುಖ ಕಂಡಿದ್ದಾರೆ. ಇತರೆ ನೇಕಾರರು ವಿದ್ಯುತ್ ಮಗ್ಗ ಸೇರಿದಂತೆ ನೇಕಾರಿಗೆ ಸಂಬಂಧಪಟ್ಟ ಬೇರೆ ಉದ್ಯೋಗದತ್ತ ಮುಖ ಮಾಡಿದ್ದಾರೆ’ ಎಂದು ಉಮಾಶ್ರೀ ತಿಳಿಸಿದರು.

‘ನೇಕಾರರ ಅಭಿವೃದ್ಧಿಯಲ್ಲಿ ಅಧಿಕಾರಿಗಳ ಪಾತ್ರವೂ ಮುಖ್ಯವಾದುದು. ನಿರ್ಲಕ್ಷತನದಿಂದ ಕಾರ್ಯ ನಿರ್ವಹಿಸಿದರೆ ಸರ್ಕಾರಕ್ಕೂ ಕೂಡಾ  ಕೆಟ್ಟ ಹೆಸರು ಬರುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.‘₹ 115 ಕೋಟಿ ನೀಡುವುದರ ಮೂಲಕ ನಿಗಮದ ಪುನಶ್ಚೇತನ ಮಾಡಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ  ನಿಗಮ ಪುನಶ್ಚೇತನಗೊಳ್ಳಲಿದೆ’ ಎಂಬ ಭರವಸೆ ನೀಡಿದರು.‘ನೇಕಾರರಿರುವ ಪ್ರದೇಶಗಳಲ್ಲಿ  ಶುದ್ಧ ಕುಡಿಯುವ ನೀರಿನ ಘಟಕವನ್ನೂ ಕೂಡಾ ಶೀಘ್ರದಲ್ಲಿಯೇ ತೆರೆಯಲಾಗುವುದು’ ಎಂದು ಸಚಿವೆ ಉಮಾಶ್ರೀ ತಿಳಿಸಿದರು.

ಕೆಎಚ್‌ಡಿಸಿ  ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ‘ನೇಕಾರರು ನಿಗಮದ ಆಸ್ತಿ, ದುಡಿಯುವ ಕೈಗಳಿಗೆ ನಿರಂತರ ಉದ್ಯೋಗ ಒದಗಿಸುವುದು ನಿಗಮದ ಕರ್ತವ್ಯವಾಗಿದೆ. ನೇಕಾರರ ಸಮಸ್ಯೆಗಳನ್ನು ಈಡೇರಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ’ ಎಂದರು.ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ರಮೀಜಾ ಝಾರೆ, ಉಪಾಧ್ಯಕ್ಷ ಸಂಜಯ ಜೀರಗಾಳ, ನಿಗಮದ ನಿರ್ದೇಶಕ ಪ್ರವೀಣ ನಾಡಗೌಡ, ನೂಲಿನ ಗಿರಣಿ ಮಹಾಮಂಡಳದ ರಾಜ್ಯ ಘಟಕದ ಉಪಾಧ್ಯಕ್ಷ ಶಂಕರ ಸೊರಗಾಂವಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದುಂಡಪ್ಪ ಕರಿಗಾರ, ವಾಸು ಕೋಪರ್ಡೆ, ಸತ್ಯಪ್ರಸಾದ, ವೈ.ಎನ್. ಹಾವರಗಿ, ನಶೀಮ ಮೊಕಾಶಿ,  ಹಾರೂನ ಸಾಂಗ್ಲಿಕರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT