ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನರೇಗಾ’ ಜಾರಿಯಲ್ಲಿ ಹಿಂದುಳಿದ ಜಿಲ್ಲೆ

Last Updated 25 ಏಪ್ರಿಲ್ 2017, 6:33 IST
ಅಕ್ಷರ ಗಾತ್ರ

ಮೈಸೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಜಿಲ್ಲೆಯ ಪ್ರಗತಿ ತೃಪ್ತಿದಾಯಕವಾಗಿಲ್ಲ ಎಂದು ಇಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಧ್ರುವನಾರಾಯಣ ಅಧಿಕಾರಿಗಳ ಮೇಲೆ ಹರಿಹಾಯ್ದರು.

ಮೈಸೂರು, ಕೆ.ಆರ್.ನಗರ ತಾಲ್ಲೂಕುಗಳು ಕಳಪೆ ಸಾಧನೆ ತೋರಿವೆ. ಬರಗಾಲದ ಸಂದರ್ಭದಲ್ಲಿ ಯೋಜನೆಯ ನೆರವಿನಿಂದ ಕೆರೆಗಳ ಹೂಳೆತ್ತಿಸಬಹುದಿತ್ತು, ವೈಯಕ್ತಿಕವಾಗಿ ಕೊಟ್ಟಿಗೆ ನಿರ್ಮಾಣದಂತ ಕೆಲಸಗಳನ್ನೂ ಕೈಗೊಳ್ಳಬಹುದಿತ್ತು. ಪಿಡಿಒಗಳು ಹೆಚ್ಚು ಆಸಕ್ತಿ ವಹಿಸಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಿಡಿಕಾರಿದರು.

₹ 224ಕ್ಕೆ ಯಾರು ಬರ್ತಾರೆ?: ಮಧ್ಯ ಪ್ರವೇಶಿಸಿದ ಶಾಸಕ ಚಿಕ್ಕಮಾದು, ನರೇಗಾದಡಿ ದಿನಕ್ಕೆ ಕೊಡುವ ₹ 224 ಕೂಲಿ ಹಣಕ್ಕೆ ಯಾವ ಕಾರ್ಮಿಕರೂ ಬರುವುದಿಲ್ಲ. ಪಿಡಿಒಗಳು ಎರಡು ದಿನದ ಕೂಲಿಯನ್ನು ಒಬ್ಬರಿಗೆ ಕೊಟ್ಟು ಗುರಿ ಸಾಧನೆ ಮಾಡಿರುತ್ತಾರೆ. ಸಾಮಾಜಿಕ ಲೆಕ್ಕಪರಿಶೋಧನೆಯ ಕಟ್ಟುನಿಟ್ಟಿನ ನಿಯಮಗಳ ಜಾರಿಯಿಂದ ಪಿಡಿಒಗಳ ಮೇಲೆ ವಿಚಾರಣೆಗಳು ನಡೆ ಯುತ್ತಿವೆ. ಮೂರು ವರ್ಷದ ಹಿಂದಿನ ಕಚ್ಚಾ ರಸ್ತೆಯನ್ನು ತೋರಿಸು ಎಂದರೆ ಹೇಗೆ ತೋರಿಸುವುದು ಎಂದು ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ಕೆಲವು ಪಿಡಿಒಗಳು ಸಾಮಾಜಿಕ ಲೆಕ್ಕ ಪರಿಶೋ ಧನೆಯ ನಿಯಮಗಳಿಂದ ನರೇಗಾದಡಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದರು. ಸಮಸ್ಯೆ ಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸು ವುದಾಗಿ ಚಿಕ್ಕಮಾದು ಭರವಸೆ ನೀಡಿದರು.

ಕಸ್ತೂರಿರಂಗನ್ ವರದಿ ಚರ್ಚೆ: ಕಸ್ತೂರಿರಂಗನ್ ವರದಿಯಲ್ಲಿ ಹಲವು ಅಪನಂಬಿಕೆಗಳಿವೆ. ಅವುಗಳನ್ನು ಬಗೆಹರಿಸಬೇಕು ಎಂದು ಆರ್.ಬಾಲ ಸುಬ್ರಹ್ಮಣ್ಯಂ ಆಗ್ರಹಿಸಿದರು.

ಮಾಧವ ಗಾಡ್ಗಿಲ್ ವರದಿಯ ‘ಭೂತ’ ಎಲ್ಲರ ತಲೆಯಲ್ಲಿದ್ದವರಿಗೆಲ್ಲ ಕಸ್ತೂರಿರಂಗನ್ ವರದಿ ‘ಭೂತ’ದಂತೆ ಕಾಣುತ್ತಿದೆ. ವಾಸ್ತವದಲ್ಲಿ ವರದಿಯಿಂದ ಹಾಡಿ ಜನರ ಮೇಲೆ ನಕರಾತ್ಮಕ ಪರಿಣಾಮ ಬೀರದು ಎಂದು ಸಂಸದ ಪ್ರತಾಪಸಿಂಹ ಪ್ರತಿಕ್ರಿಯಸಿದರು.

ಕಂಬಿಗಳ ಬೇಲಿ ದಾಟಿದ್ದು ಹೇಗೆ?
ಮೈಸೂರು:
ಆನೆಯೊಂದು ರೈಲು ಕಂಬಿಗಳ ಬೇಲಿ ದಾಟಿದ್ದು ಹೇಗೆ ಎಂದು ಸಂಸದ ಧ್ರುವನಾರಾಯಣ ಇಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ರಕ್ಷಿತಾರಣ್ಯದ ಸಿಸಿಎಫ್ ಹೀರಾಲಾಲ್, ಬೇಲಿಯ ಬಳಿ ಆನೆಗಳು ಸೊಂಡಿಲಿನಿಂದ ಮಣ್ಣನ್ನು ಹಾಕಿ, ಸಣ್ಣ ದಿಬ್ಬವನ್ನಾಗಿ ಮಾಡಿ ಅದರ ಮೇಲೆ ಕಾಲಿಟ್ಟು ದಾಟುವ ಅಭ್ಯಾಸ ಮಾಡಿಕೊಂಡಿವೆ. ಆದರೆ, ಈ ಬಗೆಯ ಪ್ರಕರಣಗಳು ವಿರಳಾತಿವಿರಳ. ರೈಲು ಹಳಿಗಳ ತಡೆಬೇಲಿಯಿಂದ ಆನೆಗಳ ಹಾವಳಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ವಿವರಿಸಿದರು.

ಉಪವಲಯ ಅರಣ್ಯಾಧಿಕಾರಿ ಕರಿಕಾಳನ್ ಮಾತನಾಡಿ, ಜಿಲ್ಲೆಯಲ್ಲಿ ಮಾನವ, ವನ್ಯಜೀವಿ ಸಂಘರ್ಷದಲ್ಲಿ ಚಿರತೆಯ ಪಾಲೇ ಅಧಿಕ. ಎರಡೂವರೆ ವರ್ಷದಲ್ಲಿ 60 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ ಎಂದರು.

ಲಿಂಗಾಂಬುಧಿ ಕೆರೆ ಅಭಿವೃದ್ಧಿ, ಹೊರವರ್ತುಲ ರಸ್ತೆಯಲ್ಲಿ ಸಸಿಗಳನ್ನು ಬೆಳೆಸಿರುವುದು ಸೇರಿದಂತೆ ಇಲಾಖೆಯ ಹಲವು ಯೋಜನೆಗಳನ್ನು ಸಮಿತಿ ಸದಸ್ಯರು ಶ್ಲಾಘಿಸಿದರು.

**

ಜಿಲ್ಲೆಗೆ 13 ಮೊರಾರ್ಜಿ ಶಾಲೆ ಮಂಜೂರು

ಮೈಸೂರು: ಜಿಲ್ಲೆಗೆ 13 ಹೊಸ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿದ್ದು, ಶೀಘ್ರ ಸ್ಥಳ ನಿಗದಿ ಮಾಡುವಂತೆ ಸಂಸದ ಧ್ರುವ ನಾರಾಯಣ ಅವರು ಜಿಲ್ಲಾಧಿಕಾರಿ ಡಿ.ರಂದೀಪ್ ಅವರಿಗೆ ಸೂಚಿಸಿದರು.

ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದ ಮಕ್ಕಳ ಶಿಕ್ಷಣಕ್ಕಾಗಿ ಹೋಬಳಿಗೊಂದು ಶಾಲೆ ತೆರೆಯಲು ಉದ್ದೇಶಿಸಲಾಗಿದ್ದು, ಜಿಲ್ಲೆಗೆ 13 ಮಂಜೂರಾಗಿವೆ. ಪ್ರತಿ ಶಾಲೆಗೂ ಕನಿಷ್ಠ 10 ಎಕರೆ ಭೂಮಿ ಅಗತ್ಯ ಇದೆ. ಎರಡು ತಿಂಗಳಲ್ಲಿ ಶಾಲೆ ಆರಂಭ ವಾಗಬೇಕಿದೆ. ಸಮರೋಪಾದಿಯಲ್ಲಿ ಭೂಮಿ ಗುರುತಿಸಬೇಕು ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿರುವ ಆರೋಗ್ಯ ರಕ್ಷಾ ಸಮಿತಿಯಲ್ಲಿ ಸಾರ್ವಜನಿಕರನ್ನೂ ಸೇರಿಸಿಕೊಳ್ಳಬೇಕು ಎಂದು ಸಂಸದ ಪ್ರತಾಪಸಿಂಹ ಜಿಲ್ಲಾಆರೋಗ್ಯಾಧಿಕಾರಿ ಡಾ.ಬಿ.ಬಸವರಾಜು ಅವರಿಗೆ ಸೂಚಿಸಿದರು.

ಸಾರ್ವಜನಿಕರು ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಸಲಹೆ ನೀಡುವುದರ ಜತೆಗೆ ಆರ್ಥಿಕ ನೆರವನ್ನೂ ನೀಡುತ್ತಾರೆ. ಇದರ ಸದುಪಯೋಗ ಪಡೆಯಬೇಕು ಎಂದರು.

ಜಿಲ್ಲೆಯ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬ ವೈದ್ಯರೂ ಇಲ್ಲ. ಇಂತಹ ಕಡೆ ಆಯುಷ್ ವೈದ್ಯರನ್ನು ನೇಮಕ ಮಾಡ ಲಾಗುವುದು ಎಂದು ಬಸವರಾಜು ಮಾಹಿತಿ ನೀಡಿದರು.

ಅಧಿಕಾರಿಗಳ ರಾಜಕೀಯ: ‘ಯಾವುದೇ ಕಾಮಗಾರಿಗಳ ಉದ್ಘಾಟನೆಗೆ ಆಹ್ವಾನಿಸುವುದೇ ಇಲ್ಲ. ಅಧಿಕಾರಿಗಳು ನಮಗಿಂತ ದೊಡ್ಡ ರಾಜಕೀಯ ಮಾಡುತ್ತಾರೆ. ಹುಣ ಸೂರಿನಲ್ಲಿ ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಯೋಜನೆ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಿಲ್ಲ. ಇದು ಹುಣಸೂರಿನ ‘ವೆಂಕಟೇಶ್ವರ ಮಹಿಮೆಯಾ’ ಎಂದು ಪ್ರತಾಪಸಿಂಹ ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಡಿಡಿಪಿಐ ಬಸಪ್ಪ, ‘ಅಲ್ಲಿ ಕಾರ್ಯಕ್ರಮ ನಡೆದ ಕುರಿತು ನನಗೂ, ಬಿಇಒಗೂ ಮಾಹಿತಿ ಇಲ್ಲ. ಶಾಲೆಯ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ’ ಎಂದರು.

ನೋಟಿಸ್‌ ನೀಡಿದರೆ ಪ್ರಯೋಜನ ವಿಲ್ಲ. ಶಿಸ್ತು ಕ್ರಮ ಕೈಗೊಳ್ಳಿ ಎಂದು ಧ್ರುವನಾರಾಯಣ ಸೂಚಿಸಿದರು.

ನಿಮ್ಮ ಮನೆಯವರು ಸಾಯಲಿಲ್ಲ: ‘ನಂಜನಗೂಡು ರಸ್ತೆಯಲ್ಲಿ ಈಚೆಗೆ ಸಂಭವಿಸಿದ ಅಪಘಾತದಲ್ಲಿ ನಿಮ್ಮ ಮನೆಯವರಾರೂ ಸಾಯಲಿಲ್ಲ. ಹಾಗಾಗಿ, ಸುಮ್ಮನಿದ್ದೀರಿ’ ಎಂದು ಪ್ರತಾಪಸಿಂಹ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮೇಲೆ ಹರಿಹಾಯ್ದರು.
ಗಣಪತಿ ಸಚ್ಚಿದಾನಂದ ಆಶ್ರಮದ ಬಳಿ ಹೆಚ್ಚು ಜಾಗ ಬಿಟ್ಟಿದ್ದು, ಮತ್ತೊಂದು ಬದಿಗೆ ಕಡಿಮೆ ಜಾಗ ಬಿಡಲಾಗಿದೆ. ಇದರಿಂದ ಅಪಘಾತ ಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಂದಿನ ವಾರದಲ್ಲಿ ಈ ಕುರಿತು ಪರಿಶೀಲನೆ ನಡೆಸಲು ವ್ಯವಸ್ಥೆ ಮಾಡುವಂತೆ ಧ್ರುವನಾರಾಯಣ ಸೂಚಿಸಿದರು.

ಬ್ಯಾಂಕುಗಳು ರೈತರನ್ನು ಒಳಗೆ ಬಿಟ್ಟುಕೊಡುವುದೇ ಇಲ್ಲ ಎಂದು ಪ್ರತಾಪಸಿಂಹ ಲೀಡ್ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸಬ್ಸಿಡಿ ಇರುವ ಸಾಲಗಳನ್ನೂ ವಿತರಿಸಲು ಹಿಂದೇಟು ಹಾಕುತ್ತಿವೆ ಎಂದು ಚಿಕ್ಕಮಾದು ದನಿಗೂಡಿಸಿದರು.

ಶಾಸಕ ಕಳಲೆ ಕೇಶವಮೂರ್ತಿ ಸಭೆಯಲ್ಲಿ ಮೊದಲಬಾರಿಗೆ ಭಾಗವಹಿಸಿದ್ದರು.

ಸಭೆಯ ಸೂಚನೆಗಳು
* ನಗರದಲ್ಲಿ ಕೈಗಾರಿಕಾ ತ್ಯಾಜ್ಯ ವಿಲೇವಾರಿ ಮಾಡಲು 3 ಎಕರೆ ಜಾಗ ನಿಗದಿ
* ಸರ್ಕಾರಿ ಕಾರ್ಯಕ್ರಮಗಳಿಗಾದರೂ ಬಿಎಸ್ಎನ್‌ಎಲ್‌ ನೆಟ್‌ವರ್ಕ್ ಬಲಪಡಿಸಬೇಕು
* ಜವಳಿ ಪಾರ್ಕ್‌ಗೆ ಸ್ಥಳ ಗುರುತಿಸಿ
* ಅನುಪಯುಕ್ತ ಕೊಳವೆಬಾವಿ ಮುಚ್ಚಿಸಲು ಕ್ರಮವಹಿಸಬೇಕು

**

ಪತ್ರಗಳಿಗೆ ಉತ್ತರವೇ ಇಲ್ಲ!
ಮೈಸೂರು:
‘ನಾನು ಬರೆದ ಯಾವ ಪತ್ರಕ್ಕೂ ಜಿಲ್ಲಾಧಿಕಾರಿ, ಸಿಇಒ ಉತ್ತರ ನೀಡಿಲ್ಲ. ಹಾಗಿದ್ದ ಮೇಲೆ ಸಮಿತಿ ಸದಸ್ಯನಾಗಿ ಸಭೆಯಲ್ಲಿ ನನ್ನ ಪಾತ್ರವೇನು’ ಎಂದು ಸಮಿತಿ ಸದಸ್ಯ ಆರ್.ಬಾಲಸುಬ್ರಹ್ಮಣ್ಯಂ ಅಸಮಾಧಾನ ವ್ಯಕ್ತಪಡಿಸಿದರು.

ಗುಣಮಟ್ಟದ ವಿಮರ್ಶಾತ್ಮಕ ಚರ್ಚೆ ನಡೆಯುತ್ತಿಲ್ಲ. ನಿಗದಿತ ಗುರಿ ತಲುಪದಿರುವುದಕ್ಕೆ ಅಧಿಕಾರಿಗಳು ನೆವಗಳನ್ನು ಹೇಳುವುದು ಮುಂದುವರಿಯುತ್ತಲೇ ಇದೆ. ಯಾವುದಾದರೂ ಒಂದು ಯೋಜನೆಯಿಂದ ಇಡೀ ಸಮಾಜದ ಮೇಲೆ ಬೀರಿದ ಪರಿಣಾಮದ ಕುರಿತು ಯಾರೂ ಮಾತನಾಡುವುದೇ ಇಲ್ಲ’ ಎಂದು ಹೇಳಿದರು.

‘ಪತ್ರಗಳು ಗಮನಕ್ಕೆ ಬಂದಿಲ್ಲ. ಹಳೆಯ ಪತ್ರಗಳನ್ನು ನೋಡಿ, ಪ್ರತಿಕ್ರಿಯಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಪ್ರತಿಕ್ರಿಯಿಸಿದರು.

**

‘ನರೇಗಾ’ ಸ್ಥಿತಿ–ಗತಿ; ಮಾರ್ಚ್ ಅಂತ್ಯಕ್ಕೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 2016–17ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ರಾಜ್ಯದಲ್ಲಿ ಮೈಸೂರು 6ನೇ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಎಚ್.ಡಿ.ಕೋಟೆ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ನಂಜನಗೂಡು, ತಿ.ನರಸೀಪುರ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಮೈಸೂರು ತಾಲ್ಲೂಕುಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT