ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಕಾಫಿ ಮಂಡಳಿ

Last Updated 25 ಏಪ್ರಿಲ್ 2017, 6:35 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕಾಫಿ ಬೆಳೆಗಾರರು ಸಂಕಷ್ಟದ ಜೀವನ ನಡೆಸುತ್ತಿದ್ದರೆ, ದೆಹಲಿಯಲ್ಲಿ  ಎರಡು ವರ್ಷಗಳಿಂದ ಕಾಫಿ ಮಂಡಳಿ ಒಂದೂ ಸಭೆ ನಡೆಸದೆ, ಬೆಳೆಗಾರರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಕಾಫಿ ಮಂಡಳಿಗೆ ನೂತನವಾಗಿ ನೇಮಕವಾಗಿರುವ ಸದಸ್ಯ ಎಂ.ಬಿ. ಅಭಿಮನ್ಯುಕುಮಾರ್‌ ದೂರಿದರು.

ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ಇಲ್ಲಿನ ವಿ.ಎಸ್.ಎಸ್.ಎನ್. ಸಹಕಾರ ಭವನದಲ್ಲಿನ ಬೆಳೆಗಾರರ ಸಂಘದ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬೆಳೆಗಾರರ ಸಭೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಕಾಫಿ ತೋಟದ ಮಾಲೀಕರ ಬದುಕು ಈಗ ಕಾರ್ಮಿಕರ ಬದುಕಿಗಿಂತ ಶೋಚನೀಯವಾಗಿದೆ. ಮಧ್ಯವರ್ತಿಗಳ ಹಾವಳಿ, ಕಾರ್ಮಿಕರ ಸಮಸ್ಯೆ ಹಾಗೂ ಹವಾಮಾನ ವೈಪರೀತ್ಯಕ್ಕೆ ಸಿಲುಕಿರುವ ಕಾಫಿ ಬೆಳೆಗಾರರ ಪರಿತಪಿಸುತ್ತಿದ್ದಾರೆ. ಕಾಫಿಗೆ ಅಂತರರಾಷ್ಟ್ರೀಯ ಮಾನ್ಯತೆ ಇದ್ದರೂ ತೋಟ ನಿರ್ವಹಣೆಗೆ ಕಷ್ಟವಾಗಿದೆ. ಅರೇಬಿಕಾ ಕಾಫಿ ಅವನತಿಯತ್ತ ಸಾಗುತ್ತಿದೆ. ಆದರೆ, ಕಾಫಿ ಮಂಡಳಿ ಮಾತ್ರ ಇದರತ್ತ ಗಮನಹರಿಸದೆ, ಕಾಫಿ ಮಂಡಳಿಯ ಸಭೆ ಕರೆಯದೆ, ಮಂಡಳಿಗೆ ಅಧ್ಯಕ್ಷರನ್ನು ನೇಮಿಸದೆ ಮೌನಕ್ಕೆ ಶರಣಾಗಿದೆ. ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರ ಪುನಶ್ಚೇತನಕ್ಕೆ ಕಾಫಿ ಮಂಡಳಿ ಮುಂದಾಗಬೇಕೆಂದು ಒತ್ತಾಯಿಸಿದರು.

ಕಾಫಿ ಮಾರುಕಟ್ಟೆ ಮೇಲೆ ನಿಯಂತ್ರಣ ಇಲ್ಲದಿರುವುದರಿಂದ ದಿನೇ ದಿನೇ ಕಾಫಿ ದರ ಏರುಪೇರಾಗುತ್ತಿದ್ದು, ಇದರ ಲಾಭ ಮಧ್ಯವರ್ತಿಗಳು ಪಡೆದು ಶ್ರೀಮಂತರಾಗುತ್ತಿದ್ದಾರೆ. ಕಾಫಿ ಬೆಳೆಗಾರರಿಗೆ ದರದ ನಿಜ ಸ್ಥಿತಿ, ನಿಖರ ದರ ತಿಳಿಯದೆ ನಷ್ಟಕ್ಕೊಳಗಾಗುತ್ತಿದ್ದಾರೆ ಎಂದರು.

ಅಂತರರಾಷ್ಟ್ರೀಯ ಮಾರುಕಟ್ಟೆ ದರದ ನಿಖರ ಮಾಹಿತಿಯನ್ನು ಮಾಧ್ಯಮಗಳ ಮೂಲಕ ತಿಳಿಸಿದರೆ ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರಕಲು ಸಾಧ್ಯ. ಇದರೊಂದಿಗೆ ಕಳೆದ ಹಲವು ವರ್ಷಗಳಿಂದ ಅರೇಬಿಕಾ ಕಾಫಿಯನ್ನು ಕಾಡುತ್ತಿರುವ ಬಿಳಿಕಾಂಡ ಕೊರಕದ ಹುಳುವಿಗೆ ಪರಿಹಾರಕ್ಕಾಗಿ ಸರ್ಕಾರವು ಕೋಟಿಗಟ್ಟಲೆ ಹಣ ಖರ್ಚು ಮಾಡಿ ವಿಜ್ಞಾನಿಗಳನ್ನು ಸಾಕುತ್ತಿದ್ದು ಈವರೆಗೆ ಪರಿಹಾರ ಮಾತ್ರ ಶೂನ್ಯ. ಅನವಶ್ಯಕವಾಗಿ ಖರ್ಚು ಮಾಡುವ ಬದಲು ಅದೇ ಹಣವನ್ನು ಕಾಫಿ ಮಂಡಳಿ ಬೆಳೆಗಾರರ ರಕ್ಷಣೆಗೆ ವಿನಿಯೋಗಿಸಲಿ ಎಂದರು.

ಅತಿಥಿಗಳಾಗಿದ್ದ ಕಾಫಿ ಮಂಡಳಿಯ ನಿವೃತ್ತ ಜಂಟಿ ನಿರ್ದೇಶಕ ಮೋಹನ್‌ದಾಸ್ ಮಾತನಾಡಿ, ಪ್ರತಿ ತಿಂಗಳು ಸಭೆಯನ್ನು ಆಯೋಜಿಸುವ ಮೂಲಕ ಬೆಳೆಗಾರರ ಸಮಸ್ಯೆಯನ್ನು ಕಾಫಿ ಮಂಡಳಿ ಮೂಲಕ ಕೇಂದ್ರ ಸರ್ಕಾರಕ್ಕೆ ತಿಳಿಸಬೇಕು. ಮಂಡಳಿಯ ವರದಿಯನ್ನೇ ಸರಕಾರವು ಪ್ರಥಮವಾಗಿ ಪರಿಶೀಲಿಸುತ್ತದೆ ಎಂದು ಹೇಳಿದರು.

ಕಾಫಿ ಮಂಡಳಿ ಮಣ್ಣು ಪರೀಕ್ಷೆಗೆ ಹೆಚ್ಚಿನ ಶುಲ್ಕವನ್ನು ₹ 20ರಿಂದ ₹ 250ಕ್ಕೆ ಹೆಚ್ಚಿಸಿದೆ. ಕಾಫಿ ಬೀಜಕ್ಕೆ ₹ 200ರಿಂದ 500ಕ್ಕೆ ಹೆಚ್ಚಿಸಿರುವುದು ಬೆಳೆಗಾರರಿಗೆ ಹೊರೆಯಾಗಿದೆ. ಇವುಗಳನ್ನು ವೈಜ್ಞಾನಿಕವಾಗಿ ನಿಗದಿಗೊಳಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಕಾಫಿ ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ , ಕಾಫಿ ಮಂಡಳಿಯಿಂದ 2016-17ನೇ ಸಾಲಿಗೆ ಈಗ ನೀಡುತ್ತಿರುವ ವಿವಿಧ ಸಲಕರಣೆ ಹೊಸತೋಟಗಳ ಅಭಿವೃದ್ಧಿ ಮುಂತಾದ ಸಹಾಯಧನ ಯೋಜನೆಯನ್ನು ಸ್ಥಗಿತಗೊಳಿಸುವ ಸೂಚನೆ ಇದ್ದು, ಬೆಳೆಗಾರರ ಹಿತದೃಷ್ಟಿಯಿಂದ ಯೋಜನೆಯನ್ನು  ಮುಂದುವರಿಸಿಕೊಂಡು ಹೋಗಬೇಕೆಂದು ಮನವಿ ಮಾಡಿದರು.

ತಾಲ್ಲೂಕಿನಲ್ಲಿ ರಾಸಾಯನಿಕ ತಪಾಸಣಾ ಕೇಂದ್ರವನ್ನು ಸ್ಥಾಪಿಸುವಂತೆ ಹಿಂದಿನಿಂದಲೂ ಮನವಿ ಮಾಡಲಾಗಿದ್ದರೂ, ಈವರೆಗೆ ಈಡೇರಿಲ್ಲ. ಬೆಳೆಗೆ ಫಸಲ್ ವಿಮಾ ಯೋಜನೆಯನ್ನು ರೂಪಿಸಿರುವುದು ಅವೈಜ್ಞಾನಿಕವಾಗಿರುತ್ತದೆ.  ವಿಮಾ ನೀತಿಯಲ್ಲಿ ರೈತರಿಗೆ ಅನಾನುಕೂಲವೇ ಹೆಚ್ಚಾಗಿದೆ. ಅರಣ್ಯದ ಅಸುಪಾಸಿನಲ್ಲಿ ವ್ಯವಸಾಯ ಮಾಡಿಕೊಂಡಿರುವ ರೈತರಿಗೆ ಕಸ್ತೂರಿರಂಗನ್ ವರದಿ ಮಾರಕವಾಗಿ ಪರಿಣಮಿಸಿದ್ದು, ಕೇಂದ್ರ ಸರಕಾರ ವರದಿಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಮನವಿ ಮಾಡಿದರು.

ವೇದಿಕೆಯಲ್ಲಿ ಬೆಳೆಗಾರರ ಸಂಘದ ಉಪಾಧ್ಯಕ್ಷರಾದ ಬಿ.ಎಂ.ಲವ, ಕೆ.ಪಿ. ಬಸಪ್ಪ, ಕಾರ್ಯದರ್ಶಿ ಪ್ರಕಾಶ್‌, ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT