ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಸಮೂಹದ ಬೆರಳ ತುದಿಗೆ ಬ್ಯಾಂಕಿಂಗ್ ವ್ಯವಸ್ಥೆ’

Last Updated 25 ಏಪ್ರಿಲ್ 2017, 6:54 IST
ಅಕ್ಷರ ಗಾತ್ರ

ಮಂಗಳೂರು: ‘ನೋಟು ರದ್ದತಿಯ ನಂತರ ಡಿಜಿಟಲ್ ವಹಿವಾಟಿನತ್ತ ಹೆಚ್ಚಿನ ಒಲವು ವ್ಯಕ್ತವಾಗುತ್ತಿದ್ದು, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜನಸಮೂಹದ ಬೆರಳ ತುದಿಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು’ ಎಂದು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಬಲೇಶ್ವರ ಎಂ.ಎಸ್‌. ಸಲಹೆ ನೀಡಿದರು.

ನಗರದ ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ಸೋಮವಾರ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಬ್ಯಾಂಕಿಂಗ್ ಕ್ಷೇತ್ರ ಅತ್ಯಂತ ಉತ್ಸಾಹದ ಸ್ಥಿತಿಯಲ್ಲಿದ್ದು, ಗ್ರಾಹಕರ ಕೇಂದ್ರಿತ ಮನೋಭಾವ, ಇ–ಬ್ಯಾಂಕಿಂಗ್‌ ಸೇವೆಯಂತಹ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿರುವ ಕರ್ಣಾಟಕ ಬ್ಯಾಂಕ್‌ಗೆ ಹೆಚ್ಚಿನ ಅವಕಾ ಶಗಳು ತೆರೆದಿವೆ’ ಎಂದು ತಿಳಿಸಿದರು.

‘ಬರುವ ಮೂರು ವರ್ಷಗಳಲ್ಲಿ 50 ಲಕ್ಷ ಹೊಸ ಗ್ರಾಹಕರನ್ನು ಕರ್ಣಾಟಕ ಬ್ಯಾಂಕ್‌ ಪರಿವಾರಕ್ಕೆ ಸೇರ್ಪಡೆ ಮಾಡಲಾಗುವುದು. ಸದ್ಯಕ್ಕೆ 80 ಲಕ್ಷ ಗ್ರಾಹಕರಿದ್ದು, ಈ ಸಂಖ್ಯೆಯನ್ನು 1.30 ಕೋಟಿಗೆ ಕೊಂಡೊಯ್ಯಬೇಕು’ ಎಂದು ತಿಳಿಸಿದರು.

‘ಕರ್ಣಾಟಕ ಬ್ಯಾಂಕ್‌ನ ವಹಿವಾಟು ಸದ್ಯಕ್ಕೆ ₹94 ಸಾವಿರ ಕೋಟಿಯಿದ್ದು, ಬರುವ ಮೂರು ವರ್ಷಗಳಲ್ಲಿ ಇದನ್ನು ₹1.80 ಲಕ್ಷ ಕೋಟಿಗೆ ಏರಿಸಬೇಕು’ ಎಂದ ಅವರು, ‘ಅವಕಾಶಗಳ ಪ್ರಯೋಜನ ಪಡೆಯುವ ಭರದಲ್ಲಿ ಸೇವೆಯ ಗುಣಮಟ್ಟದ ಜತೆಗೆ ರಾಜಿ ಮಾಡಿಕೊಳ್ಳುವಂತಿಲ್ಲ. ಬೆಳವಣಿಗೆಯ ಜತೆಗೆ ಗುಣಮಟ್ಟದ ಬ್ಯಾಂಕಿಂಗ್‌ ಸೇವೆಗೂ ಆದ್ಯತೆ ನೀಡಬೇಕು’ ಎಂದು ಸ್ಪಷ್ಟಪಡಿಸಿದರು.

ಮಹಾಪ್ರಬಂಧಕ ಚಂದ್ರಶೇಖರ್ ರಾವ್ ಬಿ. ಸ್ವಾಗತಿಸಿದರು. ಮಹಾಪ್ರಬಂಧಕ ವೈ.ವಿ. ಬಾಲಚಂದ್ರ, ಕರ್ಣಾಟಕ ಬ್ಯಾಂಕಿನ ವಹಿವಾಟಿನ ವರದಿ ಮಂಡಿಸಿದರು.
ಮಹಾಪ್ರಬಂಧಕರಾದ ರಘು ರಾಮ್‌, ರಾಘವೇಂದ್ರ ಭಟ್‌ ಎಂ., ಸುಭಾಷಚಂದ್ರ ಪುರಾಣಿಕ್‌, ಮುರಳೀಧರ ಕೃಷ್ಣರಾವ್‌, ನಾಗರಾಜ್‌ ರಾವ್‌ ಬಿ. ವೇದಿಕೆಯಲ್ಲಿದ್ದರು. ಬ್ಯಾಂಕಿನ ಎಲ್ಲ ಪ್ರಾದೇಶಿಕ ಕಚೇರಿಗಳ ಮುಖ್ಯ ಸ್ಥರು, ಹಿರಿಯ ಅಧಿಕಾರಿಗಳು ಇದ್ದರು. ಉಪ ಮಹಾಪ್ರಬಂಧಕ ವಿಜಯಶಂಕರ್‌ ರೈ ಕೆ.ವಿ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT