ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆ: ರೈತರ ಆಕ್ರೋಶ

Last Updated 25 ಏಪ್ರಿಲ್ 2017, 7:08 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕು  ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ  ರೈತರ ಸಮಸ್ಯೆಗಳ ಕುರಿತು ಸೋಮವಾರ ಸಭೆ ನಡೆಯಿತು.

ಸಭೆ ಆರಂಭದಲ್ಲಿ ರೈತರ ಸಮಸ್ಯೆ ಮತ್ತು ಬೇಡಿಕೆಗಳ ಮನವಿ ಕುರಿತು ಮಾತನಾಡಿದ ಗ್ರಾಮಾಂತರ ಜಿಲ್ಲಾಧಿಕಾರಿ ಎಸ್. ಪಾಲಯ್ಯ ಮನವಿಯಲ್ಲಿನ ವಿಷಯ ಹೊರತು ಪಡಿಸಿ ಇತರೆ ವಿಷಯದ ಬಗ್ಗೆ ಪ್ರಸ್ತಾಪ ಬೇಡ ನೇರ ವಿಷಯಕ್ಕೆ ಬನ್ನಿ ಎಂದರು.

ವಿಷಯ ಪ್ರಸ್ತಾಪಿಸಿ ಮಾತನಾಡಿದ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ. ಎಸ್. ಹರೀಶ್ ಮತ್ತು ಕೋಯಿರಾ ಗ್ರಾಮದ ರೈತ ಚಿಕ್ಕೆಗೌಡ, ಅರ್ಕಾವತಿ ಮತ್ತು ಪಾಲರ್ ನದಿ ಪಾತ್ರದಲ್ಲಿರುವ ತಾಲ್ಲೂಕಿನ ತೈಲಗೆರೆ ಗ್ರಾಮದ ಸ. ನಂ. 110ರಲ್ಲಿ ಅಕ್ರಮ ಗಣಿಗಾರಿಕೆ ಮೇಲೆ ದಾಳಿ ನಡೆಸಿದ ನಂತರ ಮತ್ತೆ ಅದೇ ಜಾಗದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಗಣಿಗಾರಿಕೆ ನಿಯಮ ಮೀರಿ 250 ಅಡಿ ಆಳದ ವರೆಗೆ ಕೊಳವೆ ಬಾವಿಯಂತೆ ಕೊರೆದು ಕಲ್ಲು ಸ್ಫೋಟಿಸಲಾಗುತ್ತಿದೆ ಎಂದು ದೂರಿದರು.

‘ಹತ್ತಾರು ಗ್ರಾಮಗಳಲ್ಲಿರುವ ಮನೆಗಳ ಗೋಡೆಗಳು ಬಿರುಕು ಬಿದ್ದಿವೆ. ಸತತ 20 ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದ್ದು, ಕೃಷಿ ಚಟುವಟಿಕೆ ಮಾಡುವಂತಿಲ್ಲ. ಧೂಳಿನ ತ್ಯಾಜ್ಯ ಬೇರೆ, ರೈತರು ಸಾಯಬೇಕೋ ಬದುಕಬೇಕೋ, ನಮಗೂ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡಿ ಇಲ್ಲದಿದ್ದರೆ ಗಣಿಗಾರಿಕೆ ರದ್ದುಗೊಳಿಸಿ’ ಎಂದರು.

ಈ ಎಲ್ಲ ಬೆಳವಣಿಗೆ ನಡೆದರೂ ನಿರಂತರ ಗಣಿಗಾರಿಕೆ ಎಂದರೆ ಹೇಗೆ. ಈಗಾಗಲೇ ನಾಲ್ಕು ಮಂದಿ ರೈತರು ದಯಾ ಮರಣಕ್ಕಾಗಿ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ, ಈ ಅಕ್ರಮ ಪ್ರಶ್ನೆಮಾಡಲು ಹೋದರೆ ನನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ಐದು ಕೌಂಟರ್ ಪ್ರಕರಣ ದಾಖಲಾಗಿದೆ. ಪ್ರಕೃತಿ ಸಂಪತ್ತು ಲೂಟಿ ಬಗ್ಗೆ ಪ್ರಶ್ನಿಸಿದರೆ ನಮಗೆ ರಕ್ಷಣೆ ಇಲ್ಲ’ ಇದಕ್ಕೆ ಉತ್ತರ ನೀಡಿ ಎಂದರು.

ರೈತ ಚಿಕ್ಕೆಗೌಡ ಮಾತನಾಡಿ, ಕೊಯಿರಾ ಗ್ರಾಮದ ಸ. ನಂ 438 ರಲ್ಲಿ 4.20 ಎಕರೆಯಲ್ಲಿನ ಸ್ಮಶಾನ ಜಾಗ ಒತ್ತುವರಿಯಾಗಿದೆ. ಕಳೆದ 2008ರಲ್ಲಿ ಸರ್ವೆ ಮಾಡಿ ಎಂದು ಅರ್ಜಿ ಸಲ್ಲಿಸಿದ್ದರೂ ಈವರೆಗೂ ಅಳತೆಯಾಗಿಲ್ಲ ಏನು ಮಾಡುತ್ತಿದ್ದಾರೆ ಅಧಿಕಾರಿಗಳು ಎಂದು ಪ್ರಶ್ನಿಸಿದರು.

ಈ ಬೆಳವಣಿಗೆಗಳಿಂದ ಸ್ವಲ್ಪ ಕಸಿವಿಸಿಗೊಂಡಂತೆ ಕಂಡು ಬಂದ ಜಿಲ್ಲಾಧಿಕಾರಿ ಪಾಲಯ್ಯ ಮಾತನಾಡಿ, ‘ನೀವು ನೀಡಿದ ದೂರಿನನ್ವಯ ದಾಳಿ ನಡೆಸಿ, ಅಕ್ರಮ ಕಲ್ಲು ವಶಕ್ಕೆ ಪಡೆದು ದೂರು ದಾಖಲಿಸಲಾಗಿದೆ. ಗಣಿಗಾರಿಕೆಗೆ ಒಬ್ಬರೆ ಅನುಮತಿ ನೀಡಲು ಬರುವುದಿಲ್ಲ ಟಾಸ್ಕ್ ಪೊರ್ಸ್ ಸಮಿತಿ ನೀಡುತ್ತದೆ. ಸ್ಮಶಾನ ಸರ್ವೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು’  ಎಂದರು.

ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ಜಿಲ್ಲಾಧಿಕಾರಿ ಎಸ್.ಪಾಲಯ್ಯ, ಡಿವೈಎಸ್‌ಪಿ ನಾಗರಾಜ್, ತಹಶೀಲ್ದಾರ್ ಜಿ.ಎ. ನಾರಾಯಣಸ್ವಾಮಿ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

**

ರೈತರು ಒಂದೆರಡು ಗುಂಟೆ ಖರೀದಿಸುವ ಜಮೀನಿಗೆ 79 ಎ ಮತ್ತು ಬಿ ಅಡಿಯಲ್ಲಿ ನೋಟಿಸ್ ನೀಡಿ ವಿನಾ ಕಾರಣ ಅಲೆದಾಟ ನಡೆಸುವುದಾದರೂ ಏಕೆ ಎಂಬುದೇ ಅರ್ಥವಾಗುತ್ತಿಲ್ಲ.

-ಹೊಸಕೋಟೆ ಕೆಂಚೇಗೌಡ, ರೈತ ಸಂಘ ಜಿಲ್ಲಾ  ಘಟಕದ  ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT