ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌ ಮಲ್ಯ ಕಲಿಸಿದ ಪಾಠಗಳು

ಪ್ರವರ್ತಕರ ಪಾಪ ಕಾರ್ಯಗಳಿಗೆ ಕಂಪೆನಿಯನ್ನು ಶಿಕ್ಷಿಸಬಹುದೇ?
Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ವಿಜಯ್ ಮಲ್ಯ ವೃತ್ತಾಂತವು ಊಹಾಪೋಹಗಳಿಗೆ ಆಹಾರ ಒದಗಿಸುತ್ತಿದೆ, ಮನೆಗಳ ಜಗುಲಿಯಲ್ಲಿ, ದೇಶದಾದ್ಯಂತ ಟಿ.ವಿ. ಸ್ಟುಡಿಯೊಗಳಲ್ಲಿ ಕುತೂಹಲಕಾರಿ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಏಪ್ರಿಲ್‌ 18ರಂದು ಲಂಡನ್‌ನಲ್ಲಿ ಮಲ್ಯ ಬಂಧನವಾದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ಆರಂಭವಾಯಿತು. ಈ ಬಗ್ಗೆ ತಕ್ಷಣ ಟ್ವೀಟ್ ಮಾಡಿದ ಮಲ್ಯ, ‘ಭಾರತದ ಮಾಧ್ಯಮಗಳು ಎಂದಿನಂತೆ ಅತಿರಂಜಿತವಾಗಿವೆ. ಹಸ್ತಾಂತರದ ವಿಚಾರಣೆ, ನ್ಯಾಯಾಲಯದಲ್ಲಿ ಇಂದು ನಿರೀಕ್ಷೆಯಂತೆಯೇ ಆರಂಭವಾಯಿತು’ ಎಂದು ಹೇಳಿದರು. ಬಂಧನವಾದ ಕೆಲವು ಗಂಟೆಗಳಲ್ಲಿ ಜಾಮೀನಿನ ಮೇಲೆ ಅವರ ಬಿಡುಗಡೆಯೂ ಆಯಿತು.

ಆದರೆ, ಈ ಸುದ್ದಿಗದ್ದಲದಲ್ಲಿ ವಾಸ್ತವ ಸಂಗತಿಗಳ ಮೇಲೆ ಕಪ್ಪು ಹೊದಿಕೆ ಬಿದ್ದಿದೆ. ದೇಶದಿಂದ ಪಲಾಯನಗೈದು ಈಗ ಬ್ರಿಟನ್ನಿನಲ್ಲಿರುವ ವರ್ಣರಂಜಿತ ಉದ್ಯಮಿ ಮಲ್ಯ ಅವರ ಕಿಂಗ್‌ಫಿಷರ್ ಏರ್‌ಲೈನ್ಸ್‌ ದಿವಾಳಿಯೆದ್ದಿದೆ. ಅದಕ್ಕೆ ಸಾಲ ಕೊಟ್ಟಿರುವ ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಮಲ್ಯ ಅವರಿಗೆ ದಿಗ್ಬಂಧನ ವಿಧಿಸಿವೆ. ಈ ವಿಮಾನಯಾನ ಕಂಪೆನಿಯ ಸಂಪೂರ್ಣ ಒಡೆತನ ಮಲ್ಯ ಅವರದ್ದಾಗಿರಲಿಲ್ಲ, ಅದು ಷೇರುದಾರರ ಒಡೆತನದಲ್ಲಿತ್ತು. ಮಲ್ಯ ಅವರು ಕಂಪೆನಿಯ ಪ್ರವರ್ತಕ ಆಗಿದ್ದರು, ಕಂಪೆನಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವಷ್ಟು ಷೇರುಗಳು ಅವರ ನಿಯಂತ್ರಣದಲ್ಲಿದ್ದವು. ಆದರೆ, ಷೇರುದಾರರ ಒಡೆತನದಲ್ಲಿದ್ದರೂ, ಕುಟುಂಬದ ನಿಯಂತ್ರಣದಲ್ಲಿರುವ ಭಾರತದ ಹಲವು ಕಂಪೆನಿಗಳಂತೆ ಮಲ್ಯ ಅವರು ಕಿಂಗ್‌ಫಿಷರ್‌ ಏರ್‌ಲೈನ್ಸ್‌ಅನ್ನು ಖಾಸಗಿ ಕಂಪೆನಿಯಂತೆ ಮಾಡಿಕೊಂಡಿದ್ದರು.

ನಿರ್ದೇಶಕರ ಮಂಡಳಿಯು ಕಾಟಾಚಾರಕ್ಕೆ ಎಂಬಂತಿತ್ತು. ಸ್ವತಂತ್ರ ನಿರ್ದೇಶಕರನ್ನು ಹೊಂದುವುದು ಕಾನೂನಿನ ಅನ್ವಯ ಅನಿವಾರ್ಯವಾಗಿದ್ದ ಕಾರಣ, ಅವರೂ ನಿರ್ದೇಶಕರ ಮಂಡಳಿಯಲ್ಲಿದ್ದರು. ಇವರನ್ನು ಸೇರಿಸಿಕೊಳ್ಳುವುದು ಪ್ರವರ್ತಕರಿಗೆ ಪ್ರತಿಷ್ಠೆಯ ವಿಚಾರವೂ ಆಗಿರುತ್ತದೆ. ಕಂಪೆನಿಯಲ್ಲಿ ಪ್ರಾಮಾಣಿಕತೆ ಕಾಯುವ, ಸಣ್ಣ ಗುಂಪುಗಳ ಹಕ್ಕು ರಕ್ಷಿಸುವ ಕೆಲಸವನ್ನು ಅವರು ಮಾಡುವುದು ಅಪರೂಪ. ಅವರು ಇಂತಹ ಕೆಲಸ ಮಾಡಲಿ ಎಂದು ಪ್ರವರ್ತಕರು, ದೊಡ್ಡ ಪ್ರಮಾಣದಲ್ಲಿ ಷೇರು ಹೊಂದಿರುವವರು ಬಯಸುವುದೂ ಇಲ್ಲ.
ಸಮಸ್ಯೆ ಇರುವುದೇ ಇಲ್ಲಿ. ಸ್ವತಂತ್ರ ನಿರ್ದೇಶಕರು ಸ್ವಾತಂತ್ರ್ಯವನ್ನು ಬಳಸಿಕೊಳ್ಳುವ ವರ್ತನೆ ತೋರಿದರೆ, ಅಪ್ರಾಮಾಣಿಕತೆ ಬಗ್ಗೆ ಮಾತನಾಡಿದರೆ ಅವರಿಗೆ ಹೊರಹೋಗುವ ದಾರಿ ತೋರಿಸಲಾಗುತ್ತದೆ. ಭಾರತದಲ್ಲಿ ಇದು ಸಹಜ. ಈ ‘ಸಂಪ್ರದಾಯ’ಕ್ಕೆ ಮಲ್ಯ ಹೊರತಾದವರಲ್ಲ.

ಕ್ರಾಸ್‌–ಹೋಲ್ಡಿಂಗ್ (ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಒಂದು ಕಂಪೆನಿಯು ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಇನ್ನೊಂದು ಕಂಪೆನಿಯಲ್ಲಿ ಪಾಲು ಹೊಂದಿರುವುದು) ಕಂಪೆನಿಗಳ ಮೂಲಕ ಹಣದ ವರ್ಗಾವಣೆ ನಡೆಸಲು ಕುಟುಂಬ ನಿಯಂತ್ರಣದಲ್ಲಿರುವ ವಾಣಿಜ್ಯ ವಹಿವಾಟುಗಳು ಕಂಪೆನಿಗಳ ಬೊಕ್ಕಸಕ್ಕೆ ತಮಗೆ ಇಷ್ಟಬಂದಂತೆ ಕೈಹಾಕಿದಾಗ ಕೂಡ ಕಂಪೆನಿಯಲ್ಲಿ ಗಣನೀಯ ಪ್ರಮಾಣದ ಪಾಲು ಹೊಂದಿರುವವರು, ಷೇರು ಖರೀದಿಸಿಟ್ಟುಕೊಂಡವರು ಈ ಬಗ್ಗೆ ಮಾತನಾಡುವುದಿಲ್ಲ. ಹೂಡಿದ ಬಂಡವಾಳಕ್ಕೆ ಉತ್ತಮ ಲಾಭಾಂಶ  ಸಿಗುವಷ್ಟೂ ಕಾಲ ಅವರು ಏನೂ ಹೇಳುವುದಿಲ್ಲ. ಇದೊಂದು ರೀತಿಯ ಪರೋಕ್ಷ ಒಪ್ಪಂದ.

ಪಾಶ್ಚಿಮಾತ್ಯ ದೇಶಗಳಂತೆ, ಭಾರತದ ಷೇರುಪೇಟೆ ನಿಯಂತ್ರಕರು ಇಲ್ಲಿ ನಡೆಯುವ ಕರ್ತವ್ಯಲೋಪಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಿಲ್ಲ. ಕಂಪೆನಿಗಳು ನಡೆಸುವ ದುರ್ವರ್ತನೆಗಳನ್ನು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸುವ ಸುಧಾರಣಾ ಪ್ರಕ್ರಿಯೆಗಳು ಪೂರ್ಣಗೊಂಡಿಲ್ಲ. ಕಂಪೆನಿಗಳು ನಿಯಮ ಉಲ್ಲಂಘಿಸುವುದಕ್ಕೆ ಇರುವ ಅಡ್ಡಿ ನಿವಾರಿಸಲು ‘ಪಾವತಿ’ಸುವ ಸಾಮರ್ಥ್ಯ ಹೊಂದಿದ್ದರೆ, ಸಾಮಾನ್ಯ ಷೇರುದಾರರು ಉಲ್ಲಂಘನೆಗೆ ಅಸಮ್ಮತಿ ಸೂಚಿಸುವುದಿಲ್ಲ.

ಪ್ರವರ್ತಕರಲ್ಲಿ ಯಾರಿಗೆ ಇಂತಹ ಗುಣಗಳಿವೆ, ತನ್ನ ಅನುಕೂಲಕ್ಕೆ ಅನುಗುಣವಾಗಿ ನಿಯಮಗಳನ್ನು ಬದಲಿಸಿಕೊಳ್ಳುವ ಶಕ್ತಿ ಯಾರಿಗಿದೆ ಎಂಬ ವಿಚಾರಗಳು ಕಂಪೆನಿಗಳಲ್ಲಿ ಹೂಡಿಕೆ ಮಾಡುವವರಿಗೆ ಸಹಜವಾಗಿಯೇ ತಿಳಿಯುತ್ತವೆ. ಇಂಥ ಪ್ರವರ್ತಕರನ್ನು ಕೆಚ್ಚು ಇರುವ ಉದ್ಯಮಿಗಳು ಎಂಬಂತೆ ಕಾಣಲಾಗುತ್ತದೆ. ಹೂಡಿಕೆಯ ಹಣದಲ್ಲಿ ಒಂದು ಪಾಲು ಪ್ರವರ್ತಕರ ಖಾಸಗಿ ಖಜಾನೆಗೆ ಸೇರುವ ಸಾಧ್ಯತೆಯೂ ಇರುತ್ತದೆ. ಸಾಲದ ಕಂತು ಕಟ್ಟುತ್ತಿರುವವರೆಗೆ, ಶಾಸನಬದ್ಧ ಶುಲ್ಕಗಳನ್ನು ಪಾವತಿಸುವವರೆಗೆ, ಕಂಪೆನಿಯ ಷೇರು ಮೌಲ್ಯ ಏರುಗತಿಯಲ್ಲಿ ಇರುವವರೆಗೆ ಪ್ರವರ್ತಕರ ಎಲ್ಲ ಅಪ್ರಾಮಾಣಿಕ ವ್ಯವಹಾರಗಳನ್ನು ಸಾರ್ವಜನಿಕರು, ಪ್ರಾಧಿಕಾರಗಳು ಹಾಗೂ ಬ್ಯಾಂಕ್‌ಗಳು ಕ್ಷಮಿಸುತ್ತವೆ.
ಕಂಪೆನಿಯ ಸಾಲ ಹೆಚ್ಚುತ್ತಿದ್ದ ಅವಧಿಯಲ್ಲಿ, ತೆರಿಗೆ ಪಾವತಿ ಬಾಕಿ ಉಳಿದಿದ್ದ ಕಾಲದಲ್ಲಿ ಮತ್ತು ವೇತನ ಪಾವತಿ ಬಾಕಿ ಉಳಿದಿದ್ದ ಅವಧಿಯಲ್ಲಿ ಕೂಡ ಮಲ್ಯ ತೋರಿದ ಭಂಡತನ ಕೊನೆಯಲ್ಲಿ ಅವರನ್ನು ಹೈರಾಣಾಗಿಸಿತು.

ಮಲ್ಯ ಅವರು ರಾಜಕೀಯ ವರ್ಗದ ಪಾಲಿಗೆ ಇರುಸುಮುರುಸಿನ ವ್ಯಕ್ತಿಯಾದರು, ಬ್ಯಾಂಕ್‌ಗಳು ಅವರ ಬೆಂಬತ್ತಿದವು. ಕಿಂಗ್‌ಫಿಷರ್‌ ವಿಮಾನಯಾನ ಕಂಪೆನಿಯ ಆಡಳಿತ ಮಂಡಳಿಯಲ್ಲಿ ಹಲವು ಬ್ಯಾಂಕರ್‌ಗಳು ಇದ್ದು, ಮಲ್ಯ ತೀರ್ಮಾನದಲ್ಲಿ ಪಾಲುದಾರರಾಗಿದ್ದರೂ, ಬ್ಯಾಂಕ್‌ಗಳು ಮಲ್ಯ ಬೆನ್ನಿಗೆ ಬಿದ್ದಿದ್ದು ಒಂದು ವ್ಯಂಗ್ಯ. ಇತರರಿಗೆ ಆದಂತೆ, ಬ್ಯಾಂಕ್‌ಗಳಿಗೂ ಮಲ್ಯ ಅವರ ಪತನದ ಬಗ್ಗೆ ಗೊತ್ತಾಗಲಿಲ್ಲ. ‘ಸೋಲುವಂತಹ ವ್ಯಕ್ತಿಯಲ್ಲ ಮಲ್ಯ’ ಎಂದು ಇತರರಂತೆ ಅವರೂ ನಂಬಿದ್ದರು.

ಆದರೆ ಕಿಂಗ್‌ಫಿಷರ್ ಏರ್‌ಲೈನ್ಸ್‌ ಕಂಪೆನಿ ಮುಳುಗಿದ ನಂತರ ಅದನ್ನು ಎಲ್ಲರೂ ಮರೆತುಬಿಟ್ಟರು. ಅದರಲ್ಲಿ 10 ಸಾವಿರ ನೌಕರರಿದ್ದರು. ಏರ್‌ ಇಂಡಿಯಾ ಹೊಂದಿದ್ದ ಮಾರುಕಟ್ಟೆ ಪಾಲಿಗಿಂತ ಎರಡು ಪಟ್ಟು ಹೆಚ್ಚಿನ ಪಾಲನ್ನು ಕಿಂಗ್‌ಫಿಷರ್‌ ಕಂಪೆನಿ ಹೊಂದಿತ್ತು, ದೇಶದ 80 ವಿಮಾನ ನಿಲ್ದಾಣಗಳಿಗೆ ವಿಮಾನ ಸಂಪರ್ಕ ಕಲ್ಪಿಸಿತ್ತು. ಇವುಗಳ ಪೈಕಿ 30 ನಿಲ್ದಾಣಗಳು ಕೊಲ್ಹಾಪುರ, ಬಳ್ಳಾರಿ, ಧರ್ಮಶಾಲಾದಂತಹ ಸಣ್ಣ ನಗರಗಳಿಗೆ ಸೇರಿದ್ದವು.

ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಹೊಂದಿದ್ದ ಮೂಲಸೌಕರ್ಯ ಹಾಗೂ ಉದ್ಯೋಗಗಳನ್ನು ರಕ್ಷಿಸಲು ಯುಪಿಎ ಸರ್ಕಾರ ಹಾಗೂ ಬ್ಯಾಂಕ್‌ಗಳು ಮುಂದಾಗಬೇಕಿತ್ತು. ‘ಉಡಾನ್’ ಯೋಜನೆಯ ಮೂಲಕ ಕೇಂದ್ರ ಸರ್ಕಾರ ಈಗ ಸಣ್ಣ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಲು ಮುಂದಾಗಿರುವಂತೆ, ಯುಪಿಎ ಸರ್ಕಾರವು ಸಣ್ಣ ನಗರಗಳಲ್ಲಿದ್ದ ವಿಮಾನ ಸಂಪರ್ಕವನ್ನು ಉಳಿಸಬೇಕಿತ್ತು. ಕಂಪೆನಿಯು ಬ್ಯಾಂಕ್‌ಗಳಿಗೆ ಪಾವತಿಸಬೇಕಿದ್ದ ಸಾಲವನ್ನು ಷೇರು ಬಂಡವಾಳವನ್ನಾಗಿ ಪರಿವರ್ತಿಸಿ, ಮಲ್ಯ ಅವರನ್ನು ಆಡಳಿತ ಮಂಡಳಿಯಿಂದ ಹೊರಹಾಕಬಹುದಿತ್ತು. ಹೊಸ ಆಡಳಿತ ಮಂಡಳಿ ರಚಿಸಿ, ಕಂಪೆನಿಯನ್ನು ಹರಾಜಿಗೆ ಇಡಬಹುದಿತ್ತು. ವಂಚನೆ ಆರೋಪದ ಅಡಿ ಮಲ್ಯ ಅವರನ್ನು ವಿಚಾರಣೆಗೆ ಒಳಪಡಿಸಬಹುದಿತ್ತು.

ಹೀಗೆ ಮಾಡಿದ್ದರೆ ಕಂಪೆನಿ ಹಾಗೂ ಅದು ನೀಡಿದ್ದ ಉದ್ಯೋಗ ಉಳಿಯುತ್ತಿತ್ತು. ಬ್ಯಾಂಕ್‌ಗಳು ತಾವು ಸಾಲ ಕೊಟ್ಟಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ವಸೂಲು ಮಾಡಲು ಆಗುತ್ತಿತ್ತು. ಕಿಂಗ್‌ಫಿಷರ್ ಹೊಂದಿದ್ದ ಸಾಲ ₹ 6,000  ಕೋಟಿ ಆಗಿತ್ತು. ಏರ್‌ ಇಂಡಿಯಾ ಕಂಪೆನಿಗೆ ₹ 50 ಸಾವಿರ ಕೋಟಿ ಹಣ ನೀಡಿ ಅದನ್ನು ಉಳಿಸಬಹುದು ಎಂದಾದರೆ, ಕಿಂಗ್‌ಫಿಷರ್‌ ಉಳಿಸಲು ಆಗುತ್ತಿರಲಿಲ್ಲವೇ?

ವಿಜಯ್ ಮಲ್ಯ ಅಧ್ಯಾಯದಿಂದ ಬ್ಯಾಂಕ್‌ಗಳು ಹಾಗೂ ಅಧಿಕಾರಸ್ಥರು ಕಲಿಯಬೇಕಾದ ಪಾಠವೊಂದಿದೆ: ಪ್ರವರ್ತಕರ ಪಾಪ ಕಾರ್ಯಗಳಿಗೆ ಕಂಪೆನಿಯನ್ನು ಶಿಕ್ಷಿಸಬಾರದು.

ಲೇಖಕ ಡೆಕ್ಕನ್ ಏವಿಯೇಷನ್ ಕಂಪೆನಿಯ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT