ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಹಿ ಆಸೆಗೆ ಓದಿ ಶಿಕ್ಷಕನಾದೆ’

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ನಮ್ಮ ಓಣಿಯಲ್ಲಿ ಎಲ್ಲಾ ಮಕ್ಕಳು ಈಗಿನ ಹಾಗೆ ಪ್ರತಿನಿತ್ಯ ಶಾಲೆಗೆ ಹೋಗುತ್ತಿದ್ದರು. ಹಾಗೆ ಹೋಗಿ ಬಂದ ಮಕ್ಕಳು ಸಾಯಂಕಾಲದ ನಂತರ ಬೀದಿ ದೀಪದ ಬೆಳಕಿನಲ್ಲಿ ಓದು ಬರಹ ಕಲಿಯುತ್ತಿದ್ದರು. ಅದರಲ್ಲಿ ಕೆಲವರು ಇಪ್ಪತ್ತರವರೆಗಿನ ಮಗ್ಗಿಯನ್ನು ಎಲ್ಲಿಯೂ ತಪ್ಪದೇ ಹೇಳುತ್ತಿದ್ದರು. ಹೀಗೆ ಕಂಠಪಾಠ ಮಾಡಿದ ಗೆಳೆಯರಿಗೆ ಓಣಿಯ ಜನರು ಗುತ್ತಿಗೆ ಹಿಡಿದು ಕೂಲಿ ಕೆಲಸ ಮಾಡಿದ ಲೆಕ್ಕವನ್ನು ಮಾಡುವ ‘ಆಫರ್‌’ ಬರುತ್ತಿತ್ತು. 
 
ಸರಿಯಾಗಿ ಹಣ ವಿಂಗಡಿಸಿದ ನಂತರ ಲೆಕ್ಕ ಮಾಡಿದವನಿಗೆ ಎರಡು ರೂಪಾಯಿಯೋ ಮೂರು ರೂಪಾಯಿಯೋ ಪುರಸ್ಕಾರ ಸಿಗುತ್ತಿತ್ತು. ಆಗಲೇ ನಮ್ಮಪ್ಪನ ಮನದಲ್ಲಿ ಸಣ್ಣದಾದ ಆಸೆ ಮೊಳಕೆಯೊಡೆಯಿತು. ನನ್ನ ಮಗನನ್ನು ಶಾಲೆಗೆ ಕಳುಹಿಸಬೇಕು, ಓಣಿಯ ಜಾಣ  ಹುಡುಗರ ಹಾಗೆ ಇವನು ಕೂಲಿ ಲೆಕ್ಕ, ಪತ್ರ ಓದಿ ‘ಬ್ಯೆಸ್’ ಹುಡುಗ ಅನ್ನಿಸಿಕೊಳ್ಳಬೇಕು ಎಂದು ನನ್ನನ್ನು ಶಾಲೆಗೆ ಕಳುಹಿಸಿದರು. 
 
ನಾನು ಸಹಿತ ತಂದೆಯ ಆಸೆಯಂತೆ ಶಾಲೆಗೆ ಹೋಗಲು ಪ್ರಾರಂಭಿಸಿದೆ. ಜೊತೆಗೆ ಒಂದರಿಂದ ಇಪ್ಪತ್ತರವರೆಗೆ  ಮಗ್ಗಿಯನ್ನು ಕಲಿತುಕೊಂಡು ಒಂದೆರಡು ವರ್ಷಗಳ ಶಾಲಾ ಕಲಿಕೆಯ ನಂತರ ಓಣಿಯ ಇತರೆ ಮನೆಯವರಿಗೆ ಬಂದ ಪತ್ರಗಳನ್ನು ಓದಿ ಹೇಳಲು ಪ್ರಾರಂಭಿಸಿದೆ. ಇತರ  ಮಕ್ಕಳಿಗಿಂತ ನಾನು ನಿಖರವಾಗಿ ಓದುವುದು  ತಪ್ಪಿಲ್ಲದೇ ಲೆಕ್ಕ ಮಾಡುವುತ್ತಿದ್ದೆ. ಹೀಗಾಗಿ ಉಳಿದ ಸ್ನೇಹಿತರಿಗಿಂತ ನನಗೆ ಬೇಡಿಕೆ ಹೆಚ್ಚಾಯಿತು.
 
ಇದರಿಂದ  ಕೇರಿಯ ಇತರ ಮನೆಯವರು ನನ್ನನ್ನೂ ಕರೆಯುವುದು ಹೆಚ್ಚಾಯಿತು. ಪ್ರತಿಯೊಂದು ಮನೆಯವರು ಪತ್ರ ಓದಿದ ನಂತರ ಕೆಲವು ಸಂದರ್ಭಗಳಲ್ಲಿ, ಲೆಕ್ಕ ಮಾಡಿದ ನಂತರ ಅವರ ಮನೆಯಲ್ಲಿನ  ಸಿಹಿ ತಿನಿಸುಗಳನ್ನು ನನಗೆ ಕೊಡುವುದು, ರಾತ್ರಿಯಾಗಿದ್ದರೆ ಊಟ ಮಾಡಿಸಿ ಕಳಿಸುತ್ತಿದ್ದರು.
 
ನಾನು ಹೀಗೆ ಎಲ್ಲಿಯೂ ತಪ್ಪಿಲ್ಲದೆ ಓದುವುದು, ಸರಿಯಾಗಿ ಲೆಕ್ಕ ಮಾಡುವ ವಿಷಯ ಓಣಿ (ಕೇರಿ)ಯನ್ನು ದಾಟಿ ಪಕ್ಕದ ಓಣಿಯವರಿಗೂ ಹೋಗಿತ್ತು. ಹೀಗಾಗಿ ನನಗೆ ಬಾರಿ ಬೇಡಿಕೆಯಿತ್ತು. ಪ್ರತಿದಿನ ಬೆಳಗ್ಗೆ ಸಾಯಂಕಾಲ ನಮ್ಮ ಮನೆಗೆ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಇನ್ನೂ ಕೆಲವರು ನಮ್ಮ ಮನೆಗೆ ಬಂದು ಲೆಕ್ಕಪತ್ರ ಓದಿಸಿಕೊಂಡು ಹೋಗುತ್ತಿದ್ದರು. ಒಂದು ಮನೆಯವರು ಕುರಿ ವ್ಯಾಪಾರ ಮಾಡುತ್ತಿದ್ದರಿಂದ ನನ್ನನ್ನು ಗುಮಾಸ್ತನಂತೆ ನೇಮಿಸಿಕೊಂಡಿದ್ದರು. 
 
ನನಗೂ ಸಹಿತ ಆ ಮನೆಯವರ ಲೆಕ್ಕವನ್ನು ಮಾಡಲು ಖುಷಿ ಅನಿಸುತ್ತಿತ್ತು. ಯಾಕಂದ್ರ ಆ ಮನೆಯಲ್ಲಿ ನೆಲ್ಲಕ್ಕಿ (ಅಕ್ಕಿ) ಯಿಂದ ಅನ್ನ ಮತ್ತು ಆಲೂಗಡ್ಡೆ ಸಾರನ್ನು ಹಾಕಿ ನನಗೆ ಊಟಕ್ಕೆ ಕೊಡುತ್ತಿದ್ದರು. ಈ ಅನ್ನಸಾರು ಉಣ್ಣಲು ಸದಾ ಹಾತೊರೆಯುತ್ತಿದ್ದೆ.
 
ಇದಕ್ಕೆ ಕಾರಣ ನಮ್ಮ ಮನೆಯಲ್ಲಿ ಬಡತನವಿತ್ತು. ನವಣಕ್ಕಿ ಅನ್ನ ಹಿಟ್ಟಿನ ಸಾರು ಮಾಡುತ್ತಿದ್ದರು. ಹೀಗಾಗಿ ಈ ಅನ್ನ–ಆಲೂಸಾರು ನನಗೆ ಪಂಚಾಮೃತಕ್ಕೆ ಸಮವಾಗಿತ್ತು. ಜೊತೆಗೆ ರೆನಾಲ್ಡ್ಸ್‌ ಪೆನ್ನು ತೆಗೆದುಕೊಳ್ಳಲು ತಿಂಗಳಿಗೋ- ಎರಡು ತಿಂಗಳಿಗೋ ನಾಲ್ಕಾರು ರೂಪಾಯಿ ಕೊಡುತ್ತಿದ್ದರು. ಇದು ಒಂದು ರೀತಿಯ ಬಹುಮಾನವಾಗಿತ್ತು.
 
ಓದಿದರೆ ನೌಕರಿ ಸಿಗುತ್ತೆ ಎಂಬ ಕಲ್ಪನೆಗಿಂತ ಓಣಿಯವರ ಲೆಕ್ಕ ಮಾಡಿದರೆ ತಿಂಡಿ ತಿನಿಸುಗಳನ್ನು ಕೊಡಿಸುತ್ತಾರೆ, ಅನ್ನ–ಆಲೂ ಸಾರು ಹಾಕಿ ಊಟ ಕೊಡುತ್ತಾರೆ ಎಂದು ತಿಳಿದು ಚೆನ್ನಾಗೆ ಓದಲು ಪ್ರಾರಂಭಿಸಿದೆ. ಅದಕ್ಕೆ ತಕ್ಕ ಹಾಗೆ ಉತ್ತಮ ಅಂಕಗಳು ಬಂದವು.
 
ತಂದೆಯ ಆಸೆಯಂತೆ ಸರ್ಕಾರಿ ಶಾಲಾ ಶಿಕ್ಷಕನಾದೆ. ಈಗ ಮನೆಯಲ್ಲಿ ಮಾಡಿದ ಅನ್ನ–ಆಲೂಗಡ್ಡೆ ಸಾರು ಊಟ ಮಾಡುವಾಗ ಆ ಬಾಲ್ಯದ ದಿನಗಳು ಕಣ್ಮುಂದೆ ಸಾಗುತ್ತವೆ. ಆ ಆಲೂಗಡ್ಡೆ ಸಾರು-ಅನ್ನ ನನ್ನಪ್ಪನ ಆಸೆ ಈಡೇರಿಸಿ, ನನಗೊಂದು ಪವಿತ್ರವಾದ ಹುದ್ದೆ ಕೊಡಿಸಿತು.
ಮಲ್ಲಪ್ಪ ಫ ಕರೇಣ್ಣನವರ, ಹನುಮಾಪುರ, ಬ್ಯಾಡಗಿ  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT