ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಯುದ್ಧದ ದಿಕ್ಕು ಬದಲಿಸಿದ ಓಕಿನೋವಾ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
‘ಯಾವುದೇ ಸೇನೆ ತನ್ನ ದೇಶದ ನಾಗರಿಕರ ರಕ್ಷಣೆಗಾಗಿ ಹೋರಾಡುತ್ತದೆ. ಆದರೆ, ನಾವು ಮಾಡಿದ್ದೇನು? ಸೈನಿಕ ತರಬೇತಿಯೇ ಇಲ್ಲದ ಜನರನ್ನು ಮುಂದೆ ಬಿಟ್ಟು ನಾವು ಅವರ ಹಿಂದೆ ನಿಂತೆವು. ನಾವು ಯಾರಿಗಾಗಿ ಹೋರಾಡಿದೆವು...?’
 
–ಇದು ಎರಡನೇ ಮಹಾಯುದ್ಧದ ನಿರ್ಣಾಯಕ ಯುದ್ಧ ಎನಿಸಿದ ಓಕಿನೋವಾ ಕದನದಲ್ಲಿ ಜಪಾನ್ ಸೇನೆಯನ್ನು ಮುನ್ನಡೆಸಿದ್ದ ಕ್ಯಾಪ್ಟನ್ ಕೊಯಿಚಿ ಇಥೊ ಅವರ ಮಾತು. ಈ ಹೋರಾಟ ನಡೆದ 70 ವರ್ಷವಾಗಿದೆ. ಆದರೆ ಇಂದಿಗೂ ಇಥೊ ಅವರಿಗೆ ಓಕಿನೋವಾ ಎಂಬುದು ಸದಾ ಕಾಡುವ ದುಸ್ವಪ್ನ.
 
ಈ ಹೋರಾಟದಲ್ಲಿ ಭಾಗಿಯಾಗಿದ್ದ ಕೆಲ ಅಮೆರಿಕನ್ ಮತ್ತು ಜಪಾನಿ ಸೈನಿಕರನ್ನು ಜಪಾನ್‌ನ ‘ಎನ್‌ಎಚ್‌ಕೆ ವರ್ಲ್ಡ್‌’ ಟೀವಿ ಚಾನೆಲ್ ಈಚೆಗೆ ಸಂದರ್ಶಿಸಿತ್ತು. ಈ ಸಂದರ್ಶನದಲ್ಲಿ ಮಾತನಾಡಿದ ಅನೇಕರು ಯುದ್ಧದಲ್ಲಿ ನಡೆದ ನಿರರ್ಥಕ ಮಾನವ ಹತ್ಯೆಯ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು. ಇಂಥವರ ಪೈಕಿ ಜೆಸ್ಸಿ ಡ್ರ್ಯಾಗೋ ಎಂಬ ಅಮೆರಿಕನ್ ಸೈನಿಕರೊಬ್ಬರು ಇದ್ದರು. 
 
‘ನಮಗೆ ಯಾರು ಸೈನಿಕರು, ಯಾರು ಸಾಮಾನ್ಯ ಜನರು ಎಂಬುದೆ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ಎದುರಿಗೆ ಕಾಣಿಸಿದ ಎಲ್ಲರಿಗೂ ಗುಂಡಿಕ್ಕಿದೆವು’ ಎಂದ ಜೆಸ್ಸಿಯ ಕಣ್ಣಲ್ಲಿ ಪಾಪಪ್ರಜ್ಞೆಯೇ ಹನಿ ನೀರಾಗಿ ಜಿನುಗಿತ್ತು.
 
ಎರಡನೇ ಮಹಾಯುದ್ಧದ ಆರಂಭದಲ್ಲಿ ಪೆಸಿಫಿಕ್ ಸಾಗರದ ಮೇಲೆ ಜಪಾನ್‌ನದ್ದೇ ಪಾರಮ್ಯ. ಆದರೆ ಚಕ್ರವರ್ತಿ ಮಿಕಿನೋಮಿಯಾ ಹಿರೋಹಿತೋ ತೆಗೆದುಕೊಂಡ ಕೆಲ ತಪ್ಪು ನಿರ್ಧಾರಗಳು ಮತ್ತು ಮಿತ್ರರಾಷ್ಟ್ರಗಳ (ಅಮೆರಿಕ, ಬ್ರಿಟನ್ ಇತ್ಯಾದಿ) ಸಂಘಟಿತ ದಾಳಿಯಿಂದ ಜಪಾನ್ ಅನೇಕ ಯುದ್ಧನೌಕೆಗಳನ್ನು ಕಳೆದುಕೊಂಡಿತು. 
 
ಜಪಾನ್ ನೌಕಾಪಡೆ ಮತ್ತು ವಾಯುಪಡೆಯ ಮಗ್ಗಲು ಮುರಿದ ಮಿತ್ರಪಡೆಗಳು ಈಗ ಭೂ ಆಕ್ರಮಣಕ್ಕೆ ವ್ಯೂಹ ಸಿದ್ಧಪಡಿಸಿದವು. ಆಗ ಅವುಗಳ ಕಣ್ಣಿಗೆ ಬಿದ್ದಿದ್ದು ಓಕಿನೋವಾ ದ್ವೀಪ. ಜಪಾನ್‌ ಮೇನ್‌ಲ್ಯಾಂಡ್‌ನಿಂದ ಕೇವಲ 640 ಕಿ.ಮೀ. ದೂರವಿರುವ ಈ ದ್ವೀಪ ಗೆದ್ದುಕೊಳ್ಳುವುದು ಅಂತಿಮ ವಿಜಯದ ದೃಷ್ಟಿಯಿಂದ ಅನಿವಾರ್ಯವಾಗಿತ್ತು. ಮಿತ್ರರಾಷ್ಟ್ರಗಳು ದಾಂಗುಡಿಯಿಟ್ಟ ನಂತರ 112 ಕಿ.ಮೀ. ಉದ್ದ, 11 ಕಿ.ಮೀ. ಅಗಲದ ದ್ವೀಪ ಅಕ್ಷರಶಃ ಬೆಂಕಿಯುಂಡೆಯಾಯಿತು.
 
ಯುದ್ಧ ಆರಂಭವಾಗುವ ಮೊದಲು ರೇಡಿಯೋದಲ್ಲಿ ಮಾತನಾಡಿದ ಜಪಾನ್‌ ಸೇನಾಧಿಕಾರಿ ಇಸಾಮು ಚೋ, ‘ಓಕಿನೋವಾದ ಎಲ್ಲ ನಾಗರಿಕರು ತಕ್ಷಣ ಸೇನೆಗೆ ಸೇರಬೇಕು. ದೇಶಕ್ಕಾಗಿ ಜೀವ ಕೊಡಬೇಕು’ ಎಂಬ ಸಂದೇಶ ರವಾನಿಸಿದ. ಹೈಸ್ಕೂಲ್ ಓದುತ್ತಿದ್ದ ಮಕ್ಕಳ ಕೈಗೂ ಬಂದೂಕು ಕೊಟ್ಟ ಜಪಾನ್ ಸೇನೆ ಯುದ್ಧಭೂಮಿಗೆ ತಳ್ಳಿತು.
 
ಓಕಿನೋವಾ ಹೇಳಿಕೇಳಿ ಕಾಡು, ಗುಡ್ಡಗಳು ತುಂಬಿದ್ದ ಪ್ರದೇಶ. ಅಲ್ಲಲ್ಲಿ ಬಿಲಗಳನ್ನು ಕೊರೆದ ಜನರು ಅಮೆರಿಕನ್ ಬಾಂಬುಗಳಿಂದ ಪಾರಾಗಲು ಅಡಗಿ ಕುಳಿತರು. ಇಂಥ ಬಿಲಗಳ ಬಾಯಿಯ ಸಮೀಪ ಜನರಿದ್ದರೆ, ಅವರ ಹಿಂದೆ ಜಪಾನ್ ಸೈನಿಕರು ಇರುತ್ತಿದ್ದರು. ಕೆಲದಿನಗಳಲ್ಲಿ ಈ ಸತ್ಯ ಅರಿತುಕೊಂಡ ಅಮೆರಿಕನ್ ಸೇನೆ 100 ಮೀಟರ್‌ನಷ್ಟು ಉದ್ದಕ್ಕೆ ಬೆಂಕಿ ಕಾರುವ ಗ್ಯಾಸ್‌ ಗನ್‌ಗಳ ಪ್ರಯೋಗ ಆರಂಭಿಸಿತು.

ಬಿಲಗಳಲ್ಲಿ ಜೀವಂತ ಸುಟ್ಟುಹೋಗುತ್ತಿದ್ದ ದೇಹಗಳಿಗೆ ಸೈನಿಕರು– ನಾಗರಿಕರು ಎಂಬ ವ್ಯತ್ಯಾಸ ಇರಲಿಲ್ಲ. ಓಕಿನೋವಾ ವಶಪಡಿಸಿಕೊಳ್ಳಲು ಮಿತ್ರ ರಾಷ್ಟ್ರಗಳಿಗೆ 82 ದಿನ (1945ರ ಏಪ್ರಿಲ್ 1ರಿಂದ ಜೂನ್ 22) ಹಿಡಿಯಿತು.
 
‘ಇಂಗ್ಲಿಷ್ ಮಾತನಾಡದ ಯಾವುದೇ ಜೀವಿಯನ್ನು ಉಳಿಸಬೇಡಿ’ ಎಂದು ಅಮೆರಿಕನ್ ಕಮಾಂಡರ್ ಸಿಮಾನ್ ಬೋಲಿವರ್ ಬಕ್ನರ್‌ ಆದೇಶ ನೀಡಿದ್ದ. ಈ ಅದೇಶದ ಫಲಶ್ರುತಿ ಎಂಬಂತೆ ಓಕಿನೋವಾದಲ್ಲಿ 1.5 ಲಕ್ಷ ಜನಸಾಮಾನ್ಯರನ್ನು ಅಮೆರಿಕನ್ ಸೇನೆ ಕೊಂದು ಹಾಕಿತು. ಓಕಿನೋವಾ ಸುಲಭದ ತುತ್ತು ಎಂದು ಭಾವಿಸಿದ್ದ ಅಮೆರಿಕನ್ನರಿಗೆ ಅಲ್ಲಿನ ನಾಗರಿಕರೆಲ್ಲರೂ ಸೈನಿಕರಾದ ಬೆಳವಣಿಗೆ ಅಚ್ಚರಿ ತಂದಿತ್ತು.
 
‘ಕೊನೆಯ ಪ್ರಜೆ ಬದುಕಿರುವವರೆಗೆ ಜಪಾನೀಯರು ಹೋರಾಡುತ್ತಾರೆ. ಜಪಾನ್‌ನ ಬೆನ್ನುಮೂಳೆ ಮುರಿಯವಂಥ ಅತಿಬಲ ಪ್ರದರ್ಶಿಸುವುದೇ ಅದನ್ನು ಬಗ್ಗಿಸಲು ಇರುವ ಏಕೈಕ ದಾರಿ’ ಎಂದು ವಾಷಿಂಗ್ಟನ್‌ ವಾರ್‌ ರೂಂನಲ್ಲಿ ರಣಪಂಡಿತರು ರೂಸ್‌ವೆಲ್ಟ್‌ಗೆ ಸಲಹೆ ಕೊಟ್ಟರು. ಜಪಾನ್ ಮೇಲೆ ಅಣುಬಾಂಬ್ ಹಾಕುವ ಆಲೋಚನೆ ರೂಸ್‌ವೆಲ್ಟ್‌ ತಲೆಯಲ್ಲಿ ಗಟ್ಟಿಯಾದ ಕ್ಷಣವೂ ಅದೇ ಆಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT