ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಪನೆಯ ಪಾತ್ರಕ್ಕೆ ಜೀವ ತುಂಬಿ...

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಸಂದರ್ಶನ: ಮಣಿ ಕಂದನ್
ಅಭಿಮಾನಿಗಳು ಹಾಗೂ ಸಾಮಾನ್ಯ ಜನರ ಪಾಲಿಗೆ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಒಬ್ಬ ಸರಳ, ಉತ್ತಮ ನಡತೆಯ ವ್ಯಕ್ತಿ. ಅವರ ನಗುವಿನ ಹಿಂದೆ ಅದೃಷ್ಟದ ರೇಖೆ ಇದೆ ಎಂದಷ್ಟೇ ಗೊತ್ತು.
 
ರಾಜಮೌಳಿಯ ಒಡನಾಡಿಗಳಿಗೆ ಅವರೊಳಗಿನ ಚಿಂತಕ, ಅಗಾಧ ಮಾಹಿತಿಯನ್ನು ಕ್ಷಣಾರ್ಧದಲ್ಲೇ ವಿಶ್ಲೇಷಿಸಬಲ್ಲ ಬುದ್ಧಿವಂತನ ಪರಿಚಯವೂ ಇರುತ್ತದೆ. ಅವರೊಳಗಿರುವ ಇಂಥ ಗುಣಗಳಿಂದಲೇ ಅವರ ಚಿತ್ರಗಳು ಯಶಸ್ಸಿನ ಮೇಲೆ ಯಶಸ್ಸು ಗಳಿಸುತ್ತಿವೆ. 
 
ಅವರ ‘ಬಾಹುಬಲಿ 2: ಕನ್‌ಕ್ಲೂಷನ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ ಈ ಸಂದರ್ಭದಲ್ಲಿ  ಚತುರ ನಿರ್ದೇಶಕ ಮನದಾಳ ತೆಗೆದಿಟ್ಟ ಬಗೆ ಇದು...
 
lಬಾಹುಬಲಿಯನ್ನು ಕಟ್ಟಪ್ಪ ಏಕೆ ಕೊಂದ?
ನನಗೆ ಎದುರು ಸಿಕ್ಕವರು ಕೇಳುವ ಮೊದಲ ಪ್ರಶ್ನೆ ಇದು. ನಾನು ಉತ್ತರ ಹೇಳಬೇಕು ಎಂಬ ನಿರೀಕ್ಷೆಯೇನೂ ಅವರಿಗೆ ಇರುವುದಿಲ್ಲ. ಆದರೆ ‘ನಾವು ಸಿನಿಮಾ ನೋಡಿದ್ದೇವೆ, ಮೆಚ್ಚಿಕೊಂಡಿದ್ದೇವೆ’ ಎಂಬ ಅರ್ಥ ರವಾನಿಸುವುದಷ್ಟೇ ಅವರ ಉದ್ದೇಶ.
 
l‘ಬಾಹುಬಲಿ’ಯಂಥ ಸಿನಿಮಾ ಮಾಡಲು ಸ್ಫೂರ್ತಿ ಏನು?
ಸಾಕಷ್ಟು ಕಾರಣಗಳಿವೆ. ಮೊದಲ ಕಾರಣ ನನ್ನ ತಂದೆ. ನನ್ನಪ್ಪ ಒಬ್ಬ ಶ್ರೇಷ್ಠ ಕಥೆಗಾರ. ಚಿತ್ರದ ಪಾತ್ರಗಳನ್ನು ಕೊಟ್ಟದ್ದು ಅವರೇ. ಅದು ಶಿವಗಾಮಿ ಆಗಿರಲಿ, ಬಲ್ಲಾಳದೇವ, ಕಟ್ಟಪ್ಪ, ದೇವಸೇನಾ ಅಥವಾ ಅವಂತಿಕಾ... ಹೀಗೆ ಎಲ್ಲ ಪಾತ್ರಗಳನ್ನು ಅವರೇ ಹುಡುಕಿಕೊಟ್ಟದ್ದು. ಅವರು ಪ್ರತಿ ಬಾರಿ ಹೊಸ ಪಾತ್ರಗಳನ್ನು ಹುಡುಕಿಕೊಟ್ಟಾಗಲೂ ನಾನು ಆಶ್ಚರ್ಯಚಕಿತನಾಗುತ್ತೇನೆ. ಪಾತ್ರ ಮತ್ತು ಸನ್ನಿವೇಶಗಳನ್ನು ಅವರೇ ನಿರೂಪಿಸುತ್ತಾರೆ. ಚಿತ್ರಕಥೆಗೆ ಸಂಬಂಧಪಟ್ಟಂತೆ ನನ್ನ ಚಿಂತನೆಗಳ ಮೇಲೂ ಅವರ ಪ್ರಭಾವ ಇರುತ್ತದೆ. ನನ್ನ ಶಕ್ತಿ ಅವರೇ.
 
l‘ಬಾಹುಬಲಿ 2: ದಿ ಕನ್‌ಕ್ಲೂಷನ್‌’ ಚಿತ್ರದಿಂದ ಜನ ಏನು ನಿರೀಕ್ಷಿಸಬಹುದು?
‘ನಾವು ಏಕೆ ಈ ಸಿನಿಮಾ ನೋಡಬೇಕು?’ ಎಂಬ ಪ್ರಶ್ನೆಯನ್ನು ಜನ ಕೇಳುತ್ತಿಲ್ಲ. ಈಗಾಗಲೇ ಅವರು ಸಿನಿಮಾ ನೋಡಲು ನಿರ್ಧರಿಸಿದ್ದಾರೆ. ಮೊದಲ ಭಾಗ ನೋಡಿದವರಿಗೆ ಕಥೆಯ ಮುಂದುವರಿದ ಭಾಗ ತಿಳಿದುಕೊಳ್ಳುವ ಕುತೂಹಲ. ಬಾಲ್ಯದಲ್ಲಿ ತಂದೆ, ತಾಯಿ ಅಥವಾ ಅಜ್ಜಿ, ತಾತ ನಾವು ಮಲಗುವವರೆಗೂ ಕಥೆ ಹೇಳುತ್ತಿದ್ದರು. ಮುಂದಿನ ಭಾಗವನ್ನು ಮರುದಿನ ಹೇಳುತ್ತಿದ್ದರು ಅಲ್ಲವೇ? ಇದೂ ಹಾಗೆಯೇ. ಚಿತ್ರದ ಎರಡನೇ ಭಾಗದಲ್ಲಿ ಅಮರೇಂದ್ರ ಬಾಹುಬಲಿ ಮತ್ತು ಬಲ್ಲಾಳದೇವ, ಶಿವಗಾಮಿ ಮತ್ತು ಬಾಹುಬಲಿ ನಡುವಿನ ಸಂಬಂಧಗಳ ಕಥಾನಕವನ್ನು ವಿವರಿಸಲಾಗಿದೆ.  
 
lಚಿತ್ರದಲ್ಲಿನ ಸಿಜಿ (ಕಂಪ್ಯೂಟರ್‌ ಗ್ರಾಫಿಕ್‌) ಕೆಲಸದ ಬಗ್ಗೆ ತಿಳಿಸಿ
ನೈಜ ಚಿತ್ರಣಗಳಿಗೂ ಕಂಪ್ಯೂಟರ್‌ ಗ್ರಾಫಿಕ್ಸ್‌ನಿಂದ ಸೃಷ್ಟಿಸಿದ  ಚಿತ್ರಣಗಳ ನಡುವಿನ ವ್ಯತ್ಯಾಸವನ್ನು ಪ್ರೇಕ್ಷಕರು ಗುರುತಿಸಿದರೆ ನಾವು ಸೋತಂತೆಯೇ ಸರಿ. ಚಿತ್ರದ ವೈಭವ ಕಂಡು ಪ್ರೇಕ್ಷಕರು ತಮ್ಮನ್ನು ತಾವೇ ಮರೆಯುವಂತೆ ಮಾಡುವುದು ನಮ್ಮ ಗುರಿ.
 
lಚಿತ್ರರಂಗದಿಂದ ನಿವೃತ್ತಿ ಘೊಷಿಸಿದ್ದ ನಿಮ್ಮ ಸೋದರ ಸಂಬಂಧಿ ಎಂ.ಎಂ. ಕೀರವಾಣಿ ಅವರನ್ನು ಬಾಹುಬಲಿಗೆ ಸಂಗೀತ ಸಂಯೋಜಿಸುವಂತೆ ಹೇಗೆ ಒಪ್ಪಿಸಿದಿರಿ?
ಚಿತ್ರರಂಗಕ್ಕೆ ಬಂದಾಗಲೇ ಅವರು ತಾವು ಯಾವಾಗ ನಿವೃತ್ತಿ ಪಡೆಯಬೇಕು ಎಂಬುದನ್ನು ನಿರ್ಧರಿಸಿಕೊಂಡಿದ್ದರು.  27 ವರ್ಷ ದುಡಿದಿದ್ದಾರೆ. ವಿರಾಮ ಪಡೆಯುವುದು ಅವರ ನಿರ್ಧಾರವಾಗಿತ್ತು. ಎರಡು ವರ್ಷಗಳ ಹಿಂದೆ ಅವರು ಈ ನಿರ್ಧಾರ ಪ್ರಕಟಿಸಿದಾಗ ಕುಟುಂಬದಲ್ಲಿ ಯಾರಿಗೂ ಅದು ಇಷ್ಟವಾಗಲಿಲ್ಲ.
 
‘ನಿಮ್ಮ ನಿರ್ಧಾರ ಏನಾದರೂ ಇರಲಿ, ನೀವು ನನ್ನ ಚಿತ್ರಕ್ಕೆ ಸಂಗೀತ ಸಂಯೋಜಿಸಲೇಬೇಕು’ ಎಂದು ನಾನು ಒತ್ತಾಯಿಸಿದೆ. ಹಾಗಾಗಿ ಆವರು ತಮ್ಮ ನಿರ್ಧಾರ ಬದಲಾಯಿಸಿ ಚಿತ್ರತಂಡದ ಭಾಗವಾದರು. ಇನ್ನುಮುಂದೆ ಅವರು ತಮಗೆ ಆಸಕ್ತಿಕರ ಎನಿಸಿದ ಚಿತ್ರಗಳಿಗಷ್ಟೆ ಸಂಗೀತ ನೀಡಲಿದ್ದಾರೆ. ಗುಣಮಟ್ಟದಲ್ಲಿ ರಾಜಿಯಾಗುವುದೇ ಇಲ್ಲ ಎನ್ನುವುದು ಅವರ ನಿಬಂಧನೆ. ನಾನು ಇದನ್ನು ಒಪ್ಪಿಕೊಂಡಿದ್ದೇನೆ.
 
lಚಿತ್ರದ ಸರಣಿಯಲ್ಲಿ ಭಾಗ 3 ಇರುತ್ತದೆಯೇ?
ಇಲ್ಲ,  ಆ ಬಗ್ಗೆ ನಾನು ಯೋಚಿಸಿಲ್ಲ. ಕಥೆ ಬರೆಯಲು ಆರಂಭಿಸಿದಾಗ ಒಂದು ಭಾಗ ಮಾತ್ರವಿತ್ತು. ಪಾತ್ರಗಳ ಬಗ್ಗೆ ಬರೆಯುವಾಗ, ಒಳಕಥೆಗಳನ್ನು  ಬರೆಯಲು ಮುಂದಾದೆ. ಶಿವಗಾಮಿ ಪ್ರಭಾವಿ ಮಹಿಳೆ ಹೇಗೆ ಆದಳು? ಕಟ್ಟಪ್ಪನ ನಿಷ್ಠೆಗೆ ಕಾರಣವೇನು? ಎಂಬ ಪ್ರಶ್ನೆಗಳನ್ನು ಕೇಳಿಕೊಂಡೆ.

ಬಾಹುಬಲಿಯ ಮುಂದುವರಿಕೆ ಬಗ್ಗೆ ಮಾತನಾಡುವಾಗ ಈ ಒಳಕಥೆಗಳ ಬಗ್ಗೆಯೂ ಮಾತನಾಡಬೇಕಾಗುತ್ತದೆ. ಭಾಗ ಮೂರು ಇರುವುದಿಲ್ಲ. ಆದರೆ ಆ್ಯನಿಮೇಷನ್‌ ಸರಣಿ ಇರುತ್ತದೆ. ಕಥೆಯ ಬಗ್ಗೆ ಹೇಳುವುದು ತುಂಬಾ ಇದೆ, ಅದನ್ನು ಕಾಮಿಕ್‌ ಪುಸ್ತಕಗಳು ಹಾಗೂ ವರ್ಚುವಲ್‌ ರಿಯಾಲಿಟಿ ಸಿನಿಮಾಗಳ ಮೂಲಕ ತಿಳಿಸುತ್ತೇನೆ. ಹೆಚ್ಚು ಬಂಡವಾಳ ಹೂಡುವ ಚಿತ್ರಗಳಾದ್ದರಿಂದ ದೊಡ್ಡ ಮಟ್ಟದಲ್ಲೇ  ವಿಭಿನ್ನ ಚಿತ್ರ ಮಾಡಬೇಕಾಗುತ್ತದೆ. 
 
lಚಿತ್ರದಲ್ಲಿರುವ ಯುದ್ಧದ ಸನ್ನಿವೇಶಗಳ ಬಗ್ಗೆ ತಿಳಿಸಿ?
ಯುದ್ಧ ಇಲ್ಲವೆ ಹಾಡಿನ ಸನ್ನಿವೇಶ ಯಾವಾಗಲೂ ದೃಶ್ಯ ಶ್ರೀಮಂತಿಕೆ ಹೊಂದಿರಬೇಕು ಎಂದು ನಾನು ಬಯಸುತ್ತೇನೆ. ಭಾಗ 1ರಲ್ಲಿ ಯುದ್ಧದ ಬೀಜ ಬಿತ್ತಿದ್ದೇವೆ. ಅದು ಭಾಗ ಎರಡರಲ್ಲಿ ಬೆಳೆಯಲಿದೆ. 
 
ಬಾಹುಬಲಿಯಲ್ಲಿ ತಾಯಿ ಮತ್ತು ಮಗನ ಪ್ರೀತಿಯ ಭಾವನಾತ್ಮಕ ಸನ್ನಿವೇಶಗಳಿವೆ. ನಾಯಕ (ಪ್ರಭಾಸ್) ಶಿವಲಿಂಗವನ್ನು ಭುಜದ ಮೇಲೆ ಎತ್ತಿ ಜಲಪಾತದ ಅಡಿಯಲ್ಲಿ ಪ್ರತಿಷ್ಠಾಪಿಸುವ ದೃಶ್ಯ ಜನರನ್ನು ಸೆಳೆದಿತ್ತು.
 
ಬಾಹುಬಲಿಗೆ ಎದುರಾಳಿಯಾಗಿರುವ ಬಲ್ಲಾಳದೇವ (ರಾಣಾ ದಗ್ಗುಬಾಟಿ) ಕಾಡೆಮ್ಮೆಯಂಥ ಪ್ರಾಣಿಯನ್ನು ಬರಿಗೈಲಿ ಕೊಲ್ಲುವ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ಇಬ್ಬರು ಶಕ್ತಿಶಾಲಿಗಳ ತಾಕಲಾಟ ಹೇಗಿರುತ್ತದೆ ಎಂಬ ಕುತೂಹಲವನ್ನು ಪ್ರೇಕ್ಷಕರಲ್ಲಿ ಬಿತ್ತುವುದು, ಅದನ್ನು ಉಳಿಸಿಕೊಳ್ಳುವುದು ನಮ್ಮ ಉದ್ದೇಶ. ಭಾಗ 2ರಲ್ಲಿ ಖಳನಟನನ್ನು ವಿಜೃಂಭಿಸುವ ಸನ್ನಿವೇಶಗಳನ್ನು ಸೃಷ್ಟಿಸಿದ್ದೇವೆ. ಪ್ರೇಕ್ಷಕರು ಕಾದುನೋಡಬೇಕು. v
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT