ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್ ಜಗತ್ತನ್ನು ಅಗಲಿದ ರಾಬರ್ಟ್‌ ಟೈಲರ್‌

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಕಂಪ್ಯೂಟರ್ ಮತ್ತು ಅಂತರ್ಜಾಲ ಆಧುನಿಕ ಜಗತ್ತಿನ ಸಂವಹನ ಶಕ್ತಿ. ಇವೆರಡೂ ಇರದ ಬದುಕನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ, ತ್ವರಿತ ಸಂವಹನ, ಹೊಸ ಬಗೆಯ ಜೀನವ ಶೈಲಿಗೆ ಆಧುನಿಕ ಕಂಪ್ಯೂಟರ್‌ (Modern Computer) ಕೊಡುಗೆ ಲೆಕ್ಕಕ್ಕೆ ಸಿಗದಷ್ಟು. 
 
ಸ್ಮಾರ್ಟ್‌ಫೋನ್‌ಗಳು, ಗ್ಯಾಜೆಟ್‌ಗಳು ಕಂಪ್ಯೂಟರ್ ಬಳಕೆ ಪ್ರಮಾಣ ತಗ್ಗಿಸಿವೆ ಎನ್ನುವುದು ವಾಸ್ತವವೇ ಆದರೂ ಇಂದಿಗೂ ಪರ್ಸನಲ್‌ ಕಂಪ್ಯೂಟರ್ ತನ್ನದೇ ಆದ ಸ್ಥಾನ ಉಳಿಸಿಕೊಂಡಿದೆ ಎನ್ನುವುದನ್ನು ಮರೆಯುವಂತಿಲ್ಲ. ಅದರಲ್ಲೂ ಅಂತರ್ಜಾಲ ಸಂಪರ್ಕಿತ ಕಂಪ್ಯೂಟರ್ ಜಗತ್ತನ್ನೇ ಅಂಗೈಗೆ ತಂದಿತ್ತಿದೆ. 
 
ಇಷ್ಟೆಲ್ಲಾ ಸಾಧ್ಯತೆಗಳ ಹಿಂದಿರುವ ಸೃಷ್ಟಿಕರ್ತ ಕಂಪ್ಯೂಟರ್ ವಿಜ್ಞಾನ ರಾಬರ್ಟ್‌ ಡಬ್ಲ್ಯೂ.  ಟೈಲರ್‌. ಹೊರಜಗತ್ತಿಗೆ ಅಪರಿಚಿತರಾಗಿದ್ದುಕೊಂಡೇ ಅವರು ಕಂಪ್ಯೂಟರ್ ಕ್ಷೇತ್ರದಲ್ಲಿ ಮಾಡಿರುವ ಸಂಶೋಧನೆ, ಆವಿಷ್ಕಾರಗಳು ಹಲವು.  ಅವರು ಏಪ್ರಿಲ್‌ 13 ರಂದು  ಕ್ಯಾಲಿಫೋರ್ನಿಯಾದಲ್ಲಿ ನಿಧನರಾಗಿದ್ದಾರೆ.  
 
ಅವರಿಗೆ 85 ವರ್ಷ ವಯಸ್ಸಾಗಿತ್ತು. ಪಾರ್ಕಿನ್ಸನ್‌ನಿಂದ ಬಳಲುತ್ತಿದ್ದರು ಎಂದು ಅವರ ಮಗ ಕುರ್ತ್ ಟೈಲರ್‌ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರ ಸಾಧನೆಯ ಹಾದಿಯ ಕಿರುಪರಿಚಯ ಇಲ್ಲಿದೆ.
 
ರಾಬರ್ಟ್‌ ಟೈಲರ್‌ ಅವರು ಸಾರ್ವಜನಿಕವಾಗಿ ಅಷ್ಟೇನೂ ಚಿರಪರಿಚಿತರಲ್ಲ. ಆದರೆ, ಕಂಪ್ಯೂಟರ್ ವಿಜ್ಞಾನ ಮತ್ತು ನೆಟ್‌ವರ್ಕಿಂಗ್‌ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವ ಮೂಲಕ ಅವರು ತಂತ್ರಜ್ಞಾನ ಜಗತ್ತಿನಲ್ಲಿ ಹೊಸ ಪರಿವರ್ತನೆಗೆ ಕಾರಣರಾದವರು. ಕಂಪ್ಯೂಟರ್ ಉದ್ಯಮಕ್ಕೆ ‘ಬಾಬ್‌ ಟೈಲರ್‌’ ಎಂದೇ ಖ್ಯಾತಿ. ಅಂತರ್ಜಾಲ, ಕಂಪ್ಯೂಟರ್‌ ನೆಟ್‌ವರ್ಕಿಂಗ್‌ ಮತ್ತು ಸಂವಹನ ವ್ಯವಸ್ಥೆ ಹಾಗೂ ಆಧುನಿಕ ವೈಯಕ್ತಿಕ ಕಂಪ್ಯೂಟಿಂಗ್‌ ಇವರ ಪ್ರಮುಖ ಆವಿಷ್ಕಾರಗಳು.  
 
1961 ರಲ್ಲಿ ವಾಷಿಂಗ್ಟನ್‌ ಡಿ.ಸಿ.ಯಲ್ಲಿ ನಾಸಾದಲ್ಲಿ ಪ್ರಾಜೆಕ್ಟ್‌ ಮ್ಯಾನೇಜರ್‌ ಆಗಿದ್ದ ಟೈಲರ್‌, ಕಂಪ್ಯೂಟರ್‌ ಮೌಸ್‌ ಸೃಷ್ಟಿಸುವ ಸಲುವಾಗಿ ಕಂಪ್ಯೂಟ್ ವಿಜ್ಞಾನಿ ಡಗ್ಲಸ್‌ ಏಂಜಲ್ಬರ್ಟ್‌ ಅವರಿಗೆ ಹಣಕಾಸಿನ ನೆರವು ನೀಡಿದರು.ನಂತರ ಆರ್ಪಾದಲ್ಲಿ (ಈಗ ಡಾರ್ಪಾ) ಅಂತರ್ಜಾಲ ಸೃಷ್ಟಿಗೆ ಮುಂದಾದರು. 
 
ಪೆಂಟಗನ್‌ನಲ್ಲಿ ಸಂಶೋಧಕರಾಗಿದ್ದಾಗ ಇಂಟರ್‌ನೆಟ್‌ ಎಂದು ಕರೆಯುವುದರ ಮೊದಲ ರೂಪ ಆರ್ಪಾನೆಟ್‌ (Arpanet) ಪರಿಚಯಿಸಿದರು. ನಂತರ ಅವರು ಜರಾಕ್ಸ್‌ ದಂತಕತೆ, ಪಾಲ್‌ ಆಲ್ಟೊ ಸಂಶೋಧನಾ ಕೇಂದ್ರದಲ್ಲಿ ಎಂಜಿನಿಯರಿಂಗ್‌ ತಂಡದ ಮೇಲ್ವಿಚಾರಣೆಯ ಜವಾಬ್ದಾರಿ ವಹಿಸಿಕೊಂಡರು. ಆ ಸಂದರ್ಭದಲ್ಲಿ ಪರ್ಸನಲ್ ಕಂಪ್ಯೂಟರ್, ಎಥರ್ನೆಟ್‌ ಮತ್ತು ವಿಶ್ಯುವಲ್ ಕಂಪ್ಯೂಟರ್ ಡಿಸ್‌ಪ್ಲೇ ಆವಿಷ್ಕರಿಸಿದರು.
 
ಪರಸ್ಪರ ಕಂಪ್ಯೂಟರ್‌ಗಳ ಮಧ್ಯೆ ಸಂಪರ್ಕ ಸಾಧಿಸುವುದಷ್ಟೇ ಅಲ್ಲದೆ, ದೇಶಗಳ ಮಧ್ಯೆ ಇರುವ ಅಂದರೆ ವ್ಯಾಪ್ತಿ ಮೀರಿ ಕಂಪ್ಯೂಟರ್‌ಗಳ ಮಧ್ಯೆ ಸಂವಹನ ಏರ್ಪಡಿಸುವ ಪ್ರಯತ್ನ ನಡೆಸಿದರು. ಮುಂದೊಂದು ದಿನ ಇದು ಆಡಳಿತಾತ್ಮಕ ಸಾಧನವಾಗಷ್ಟೇ ಅಲ್ಲದೆ ಸಾರ್ವಜನಿಕ ಬಳಕೆಗೂ ಉಪಯೋಗವಾಗಲಿದೆ ಎನ್ನುವ ದೂರದೃಷ್ಟಿಯನ್ನು ಹೊಂದಿದ್ದರು.
 
1968ರಲ್ಲಿ ಅವರು ಬರೆದಿದ್ದ ಪತ್ರ ಅದನ್ನೇ ಸೂಚಿಸುತ್ತದೆ. ‘ಕೆಲವೇ ವರ್ಷಗಳಲ್ಲಿ ಮನುಷ್ಯರು ಮುಖತಃ  ಭೇಟಿಯಾಗಿ ನಡೆಸುವ ಸಂವಹನಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಒಂದು ಮಷಿನ್‌ ಮೂಲಕ ಸಂವಹನ ನಡೆಸುವುದು ಸಾಧ್ಯವಾಗಲಿದೆ’ ಎಂದಿದ್ದರು.
 
ಆರ್ಪಾದಲ್ಲಿ ಕಂಪ್ಯೂರ್ ವಿನ್ಯಾಸಕರ ಒಂದು ತಂಡವನ್ನು ರಚಿಸಿದರು. ಆ ಕಾಲದಲ್ಲಿ ಕಂಪ್ಯೂಟರ್ ಗಾತ್ರದಲ್ಲಿ ಒಂದು ಕೊಠಡಿಯಷ್ಟಿತ್ತು. ಟೈಲರ್ ಮತ್ತು ಅವರ ತಂಡ ಈ ಕಂಪ್ಯೂಟರ್‌ ಅನ್ನು ವೈಯಕ್ತಿಕ ಬಳಕೆ ಸಾಧನವನ್ನಾಗಿಸುವ ಮತ್ತು ಗರಿಷ್ಠ ಗುಣಮಟ್ಟದ ಪರದೆ ತಯಾರಿಸುವ ಕಾರ್ಯದಲ್ಲಿ ತೊಡಗಿಕೊಂಡರು.
 
ಟೈಲರ್ ಮಾರ್ಗದರ್ಶನದಲ್ಲಿ ಕಂಪ್ಯೂಟರ್‌ ವಿಜ್ಞಾನಿಗಳಾದ ಅಲನ್‌ ಕೇ, ಬಟ್ಲರ್‌ ಲಾಂಪ್ಸನ್‌ ಮತ್ತು ಚಕ್‌ ಥಾಕರ್‌ ಅವರುಗಳು ‘ಆಲ್ಟೊ’ ಎಂಬ ಮೊದಲ ವೈಯಕ್ತಿಕ ಕಂಪ್ಯೂಟರ್‌ ವಿನ್ಯಾಸಗೊಳಿಸಿದರು. ಪೇಪರ್‌ ಪೇಜ್‌ನ ಗಾತ್ರ ಮತ್ತು ಆಕಾರದಲ್ಲಿ ಇದರ ಪರದೆ ಇತ್ತು. 
 
1996ರಲ್ಲಿ ನಿವೃತ್ತಿಗೂ ಮುನ್ನ ಟೈಲರ್‌ ಅವರು ಅಮೆರಿಕದ ಡಿಜಿಟಲ್‌ ಈಕ್ವಿಪ್‌ಮೆಂಟ್‌ ಕಾರ್ಪೊರೇಷನ್‌ ಕಂಪೆನಿಯಲ್ಲಿ ಸೇವೆ ಸಲ್ಲಿಸಿದ್ದರು.
ಕಳೆದ ಕೆಲವು ವರ್ಷಗಳಿಂದ ಸಿಲಿಕಾನ್‌ ವ್ಯಾಲಿಯಲ್ಲಿ ಬೆಟ್ಟ ಗುಡ್ಡಗಳ ಮಧ್ಯೆ ಇರುವ ತಮ್ಮ ಮನೆಯಲ್ಲಿದ್ದುಕೊಂಡು ಟೊಮಾಟೊ ಬೆಳೆಯುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
 
ಪ್ರಶಸ್ತಿಗಳು
ಆಧುನಿಕ ಕಂಪ್ಯೂಟರ್‌ ತಂತ್ರಜ್ಞಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ನ್ಯಾಷನಲ್‌ ಮೆಡಲ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಇನ್ನೋವೇಷನ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೊಸ ಮತ್ತು ಪ್ರಮುಖ ತಂತ್ರಜ್ಞಾನಗಳ ಅಭಿವೃದ್ಧಿಗೆ ಅಮೆರಿಕ ಈ ಪ್ರಶಸ್ತಿ ನೀಡುತ್ತದೆ.
 
ಮೊಲದ ಪ್ರಾಯೋಗಿಕ ಸಂಪರ್ಕ ಹೊಂದಿರುವ ವೈಯಕ್ತಿಕ ಕಂಪ್ಯೂಟರ್‌ ಅಭಿವೃದ್ಧಿಪಡಿಸಿದ್ದಕ್ಕೆ ಟೈಲರ್‌, ಲ್ಯಾಮ್ಸನ್‌ ಮತ್ತು ಅಲನ್‌ ಕೇ ಅವರಿಗೆ 2004ರಲ್ಲಿ ನ್ಯಾಷನಲ್‌ ಅಕಾಡೆಮಿ ಆಫ್‌ ಎಂಜಿನಿಯರಿಂಗ್‌ ಪ್ರಶಸ್ತಿ ನೀಡಲಾಯಿತು.
 
ಆಧುನಿಕ ಕಂಪ್ಯೂಟರ್‌, ಕಂಪ್ಯೂಟರ್ ನೆಟ್‌ವರ್ಕಿಂಗ್‌, ಆನ್‌ಲೈನ್‌ ಇನ್ಫಾರ್ಮೇಷನ್ ಆ್ಯಂಡ್‌ ಕಮ್ಯುನಿಕೇಷನ್‌ ಕ್ಷೇತ್ರದಲ್ಲಿ  ನಾಯಕತ್ವ ಗುಣವನ್ನು ಪರಿಗಣಿಸಿ 2013ರಲ್ಲಿ ಕಂಪ್ಯೂಟರ್ ಹಿಸ್ಟರಿ ಮ್ಯೂಸಿಯಂ ಟೈಲರ್ ಅವರನ್ನು ’ಮ್ಯೂಸಿಯಂ ಫೆಲ್ಲೊ’ ಬಿರುದು ನೀಡಿ ಗೌರವಿಸಿದೆ.
****
ಬಹಳಷ್ಟು ಆವಿಷ್ಕಾರಗಳ ಹಿಂದೆ ಒಂದು ತಂಡದ ಸೃಜನಶೀಲತೆ, ಕ್ರಿಯಾತ್ಮಕತೆ ಇರುತ್ತದೆ ಎಂದು ಅವರು ಬಲವಾಗಿ ನಂಬಿದ್ದರು. ಆ ಕಾರಣಕ್ಕಾಗಿಯೇ ಅವರು ‘ನಮ್ಮಲ್ಲಿ ಯಾರೊಬ್ಬರೂ ನಮ್ಮಷ್ಟು ಜಾಣರಲ್ಲ’ (None of us is as smart as all of us.”) ಎನ್ನುವ ಗಾದೆಯನ್ನು ಸದಾ ಹೇಳುತ್ತಿದ್ದರು.

ಇಂಟರ್‌ನೆಟ್‌ ಕೇವಲ ಒಂದು ತಂತ್ರಜ್ಞಾನವಲ್ಲ. ಇದು ಸಂವಹನಕ್ಕೆ ಸಂಬಂಧಿಸಿದ್ದು. ಸಮಾನ ಆಸಕ್ತಿ, ಯೋಜನೆ ಮತ್ತು ಅಗತ್ಯಗಳಿರುವ ಜನರನ್ನು ಪರಸ್ಪರ ಸಂಪರ್ಕದಲ್ಲಿರುವಂತೆ ಮಾಡುತ್ತದೆ ಎನ್ನುವುದು ಟೈಲರ್‌ ಮಾತು.

ನಾವು ಇಂದು ಕಚೇರಿ ಮತ್ತು ಮನೆಯಲ್ಲಿ ಬಳಸುವ ಬಹುತೇಕ ಎಲ್ಲಾ ಸಾಧನಗಳ ಒಂದಲ್ಲಾ ಒಂದು ರೀತಿ ಸೃಷ್ಟಿಸಿದ್ದು ಬಾಬ್‌ ಟೈಲರ್‌ ಎನ್ನುತ್ತಾರೆ ಟೈಲರ್‌ ಅವರ ಸಿಲಿಕಾನ್‌ ವ್ಯಾಲಿ ಕಂಪ್ಯೂಟರ್ ಸೈನ್ಸ್‌ ಲ್ಯಾಬ್‌ನಲ್ಲಿ ಪದವಿ ವಿದ್ಯಾರ್ಥಿಯಾಗಿದ್ದ ಮತ್ತು ಸದ್ಯ ಅಲ್ಫಾಬೆಟ್‌ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ಎರಿಕ್‌ ಶಿಮೆಡಿಟ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT