ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕು ಪ್ರಾಣಿಗಳ ಆರೈಕೆಗೂ ತಂತ್ರಜ್ಞಾನ!

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಸ್ಮಾರ್ಟ್‌ಫೋನ್‌ ಬಂದ ಮೇಲೆ ಏನೆಲ್ಲ ಬದಲಾಗಿಲ್ಲ ಹೇಳಿ? ವಾಹನಗಳನ್ನು ಬಾಡಿಗೆಗೆ ಪಡೆಯುವುದು, ಆಹಾರ ಪದಾರ್ಥಗಳನ್ನು ಖರೀದಿ ಮಾಡುವುದು, ಬಟ್ಟೆ, ಎಲೆಕ್ಟ್ರಾನಿಕ್‌ ಸಾಧನಗಳು ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಖರೀದಿಸುವುದು... ಹೀಗೆ ಎಲ್ಲವೂ ಬದಲಾಗಿದೆ.
 
ಬಹುತೇಕ ನಮ್ಮ ಕೆಲಸಗಳು ಈಗ ಸ್ಮಾರ್ಟ್‌ಫೋನ್‌ ಮೂಲಕವೇ ಆಗುತ್ತದೆ. ಹಾಗಿದ್ದರೆ, ನಮ್ಮ ಅಚ್ಚುನೆಚ್ಚಿನ ಸಾಕು ಪ್ರಾಣಿಗಳ ಆರೈಕೆಯೂ ಸ್ಮಾರ್ಟ್‌ಪೋನ್‌ನಿಂದ ಸಾಧ್ಯವೇ? ಹೌದು ಸಾಧ್ಯವಿದೆ. ಅಮೆರಿಕದಲ್ಲಿ ಈಗಾಗಲೇ ಈ ವ್ಯವಸ್ಥೆ ಚಿಗುರೊಡೆದಿದೆ.
 
ಅಮೆರಿಕದ ಹಲವು ನವೋದ್ಯಮಗಳು (ಸ್ಟಾರ್ಟ್‌ಅಪ್‌), ಸಾಕುಪ್ರಾಣಿಗಳ ಕಾಳಜಿ ಮಾಡುವಂತಹ ಹೊಸ ಆ್ಯಪ್‌ಗಳನ್ನು, ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿವೆ. 
 
ಶ್ವಾನಗಳನ್ನು ಸುತ್ತಾಟಕ್ಕೆ ಕರೆದುಕೊಂಡು ಹೋಗುವವರನ್ನು (ಡಾಗ್‌ ವಾಕರ್ಸ್‌) ಹುಡುಕಿ ಕೊಡುವ ಆ್ಯಪ್‌, ಪ್ರಾಣಿಗಳಿಗೆ ಹೊತ್ತಿಗೆ ಸರಿಯಾಗಿ ಆಹಾರ ನೀಡುವ ಸ್ವಯಂ ಚಾಲಿತ ಸಲಕರಣೆಗಳು, ಪ್ರಾಣಿಗಳ ಮೇಲೆ ನಿಗಾ ಇಡುವ ಮತ್ತು ದೂರದಿಂದಲೇ ಪ್ರಾಣಿಗಳೊಂದಿಗೆ ಆಟವಾಡಲು ಅವಕಾಶ ಕೊಡುವ ಕ್ಯಾಮೆರಾಗಳು, ಸಾಕು ಪ್ರಾಣಿಗಳನ್ನು ನೋಡಿಕೊಳ್ಳುವ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಸೂಚಿಸುವ (ಪೆಟ್‌ ಸಿಟ್ಟರ್‌) ಆ್ಯಪ್‌ಗಳು....
 
ಹೀಗೆ ಸ್ಮಾರ್ಟ್‌ಫೋನ್‌ ಹಾಗೂ ಇತರೆ ತಂತ್ರಜ್ಞಾನ ಆಧಾರಿತ ಹಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಕೇವಲ ಒಂದು ಬಟನ್‌ ಒತ್ತುವುದರ ಮೂಲಕ ಇವುಗಳ ಸೇವೆಯನ್ನು ಬಳಸಬಹುದು.
 
ಈ ಉತ್ಪನ್ನಗಳು ಕೊಂಚ ದುಬಾರಿ. ಜೊತೆಗೆ, ಕಂಪೆನಿಗಳು ಕೂಡ ಉತ್ಪನ್ನಗಳ ಮಾರಾಟಕ್ಕಾಗಿ ಗಿಮಿಕ್‌ಗಳನ್ನು ಮಾಡುತ್ತವೆ. ಹಾಗಾಗಿ, ಪಾವತಿಸುವ ಹಣಕ್ಕೆ ಸರಿಯಾದ ಸೇವೆ ನೀಡುವ ಆ್ಯಪ್‌ ಅಥವಾ ಸಲಕರಣೆಗಳನ್ನು ಜಾಗರೂಕವಾಗಿ ಗ್ರಾಹಕರು ಆಯ್ಕೆ ಮಾಡಿಕೊಳ್ಳಬೇಕು. ಅಂತಹ ಕೆಲವು ಆ್ಯಪ್‌ ಹಾಗೂ ಸಾಧನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ
 
ವಾಗ್: ಶ್ವಾನಗಳನ್ನು ಸುತ್ತಾಡಿಸುವ ಜನರನ್ನು (ವಾಕರ್ಸ್) ಬಾಡಿಗೆಗೆ ಪಡೆಯುವ ಆ್ಯಪ್‌ ಇದು. ಬಳಕೆ ಸ್ನೇಹಿ ಮತ್ತು ಪರಿಣಾಮಕಾರಿಯಾದ ಆ್ಯಪ್‌.  ವಾಯುವಿಹಾರಕ್ಕಾಗಿ ಶ್ವಾನಗಳನ್ನು ಕರೆದೊಯ್ಯಲು ಮನೆಯಲ್ಲಿ ಯಾರೂ ಇಲ್ಲದಿದ್ದರೆ ಇದನ್ನು ಬಳಸಬಹುದು.

ಮೊಬೈಲ್‌ನಲ್ಲಿ ಆ್ಯಪ್‌ ಹಾಕಿಸಿಕೊಂಡ ನಂತರ ಬಾಡಿಗೆ ವಾಕರ್‌ಗಾಗಿ ಹುಡಕಾಟ ನಡೆಸಬಹುದು. ಮುಂಚಿತವಾಗಿಯೇ ವಾಕರ್‌ನನ್ನು ಆಯ್ಕೆ ಮಾಡಿ ದಿನಾಂಕ ಮತ್ತು ಸಮಯವನ್ನು ನಮೂದಿಸಿದರೆ, ಆ ದಿನದಂದು ಬಾಡಿಗೆ ವಾಕರ್‌ ಬಂದು ಶ್ವಾನವನ್ನು ಸುತ್ತಾಡಿಸುತ್ತಾನೆ. ಬಾಡಿಗೆ ವಾಕರ್‌ಗಳನ್ನು ತಕ್ಷಣವೇ ಬರ ಹೇಳುವುದಕ್ಕೂ ಇದರಲ್ಲಿ ಅವಕಾಶ ಇದೆ. 
 
ಶ್ವಾನವನ್ನು ವಾಕರ್‌ ಕರೆದುಕೊಂಡು ಹೋಗುವ ಮಾರ್ಗದ ಮೇಲೆ ಈ ಆ್ಯಪ್‌ ಮೂಲಕ ನಿಗಾ ಇಡಬಹುದು. ಬಾಡಿಗೆ ವಾಕರ್‌, ವಿಡಿಯೊವನ್ನು ಚಿತ್ರೀಕರಿಸಿ ಮಾಲೀಕನಿಗೆ ಕಳುಹಿಸುವುದಕ್ಕೂ ಇದರಲ್ಲಿ ಅವಕಾಶ ಇದೆ. ಸುತ್ತಾಟ ಮುಗಿದ ನಂತರ ಅದರ ವಿವರಗಳು (ಸಮಯ, ಸುತ್ತಾಡಿದ ದೂರ) ಮಾಲೀಕನ ಮೊಬೈಲ್‌ಗೆ ಬರುತ್ತವೆ.
 
ರೋವರ್‌: ವಾಗ್‌ ಅನ್ನು ಹೋಲುವ ಇನ್ನೊಂದು ಆ್ಯಪ್‌ ರೋವರ್‌. ಆದರೆ, ಇದು ಅಷ್ಟೊಂದು ಬಳಕೆ ಸ್ನೇಹಿ ಅಲ್ಲ. ಇದರಲ್ಲಿ ಬಾಡಿಗೆ ವಾಕರ್‌ ತಕ್ಷಣಕ್ಕೆ ಸಿಗುವುದಿಲ್ಲ. ಮಾಲೀಕ ಮೊದಲು ವಾಕರ್‌ಗಳ ಲಭ್ಯತೆಯನ್ನು ಖಾತ್ರಿ ಪಡಿಸಿಕೊಂಡು ನಂತರವಷ್ಟೇ ಅವರನ್ನು ಕಾಯ್ದಿರಿಸಬೇಕು.
 
ಡಾಗ್‌ವೆಕೇ: ಸಾಕು ನಾಯಿಗಳನ್ನು ಆರೈಕೆ/ನೋಡಿಕೊಳ್ಳುವ ಮನೆಗಳನ್ನು ಹುಡುಕುವ ಆ್ಯಪ್‌ ಇದು. ಇಂತಹ ಸೇವೆ ಒದಗಿಸುವ ಮನೆ/ವ್ಯಕ್ತಿ, ಸ್ಥಳ, ಶುಲ್ಕದ ವಿವರಗಳು ಆ್ಯಪ್‌ನಲ್ಲಿ ಇರುತ್ತವೆ. ಗ್ರಾಹಕರು ತಾವಿರುವ ಸ್ಥಳ ಮತ್ತು ಶ್ವಾನವನ್ನು ನೋಡಿಕೊಳ್ಳಬೇಕಾದ ದಿನಾಂಕವನ್ನು ಆಧರಿಸಿ ಮನೆಗಳಿಗೆ ಹುಡುಕಾಟ ನಡೆಸಬಹುದು. ನಿಗದಿ ಪಡಿಸಿದ ದಿನದಂದು ಮಾಲೀಕರು ತಮ್ಮ ಶ್ವಾನಗಳನ್ನು ಆ ಮನೆಯಲ್ಲಿ ಬಿಟ್ಟರಾಯಿತು. ನೋಡಿಕೊಳ್ಳುವುದಕ್ಕೆ ನಿಗದಿತ ಶುಲ್ಕ ಪಾವತಿಸಿದರೆ ಸಾಕು.
 
ಪೆಟ್‌ಕ್ಯೂಬ್‌: ಇದು ಸಾಕುಪ್ರಾಣಿಗಳ ಮೇಲೆ ನಿಗಾ ಇಡುವಂತಹ ವೆಬ್‌ಕ್ಯಾಮ್‌. ಇದಕ್ಕೆ ವೈ-ಫೈ ಸಂಪರ್ಕಿಸಬಹುದು ಅಲ್ಲದೇ, ಲೇಸರ್‌ ಬೆಳಕು ಬಿಡುವ ತೋರುಗಡ್ಡಿಯನ್ನೂ (ಪಾಯಿಂಟರ್‌) ಇದು ಹೊಂದಿರುತ್ತದೆ. ಈ ಕ್ಯಾಮೆರಾದಲ್ಲಿ ಚಿತ್ರೀಕರಿಸುವ ವಿಡಿಯೊವನ್ನು ಆ್ಯಪ್‌ ಮೂಲಕ ದೂರದಿಂದಲೇ ನೋಡಬಹುದು.
 
ಆಟವೂ ಸಾಧ್ಯ: ಪೆಟ್‌ಕ್ಯೂಬ್‌ ಕ್ಯಾಮೆರಾದಲ್ಲಿರುವ ಲೇಸರ್‌ ಪಾಯಿಂಟರ್‌ ಬಳಸಿಕೊಂಡು ಮಾಲೀಕ ದೂರದಲ್ಲಿದ್ದುಕೊಂಡೇ ಶ್ವಾನದ ಜೊತೆ ಆಟವಾಡಬಹುದು! (ಪಾಯಿಂಟರ್‌ನ ಸಹಾಯದಿಂದ ಮಾಲೀಕ ತಾನಿರುವಲ್ಲಿಂದಲೇ ಬೇಕಾದ ಸ್ಥಳಕ್ಕೆ ಬೆಳಕನ್ನು ಹಾಯಿಸಬಹುದು. ಶ್ವಾನವು ಆ ಬೆಳಕನ್ನು ಹಿಡಿಯಲು ಓಡುತ್ತದೆ. ನಂತರ ಬೆಳಕಿನ ದಿಕ್ಕನ್ನು ಬದಲಾಯಿಸಬಹುದು. ಮತ್ತೆ ಆ ಬೆಳಕಿನತ್ತ ಶ್ವಾನ ಓಡುತ್ತದೆ... ಮತ್ತೆ ಬೆಳಕಿನ ದಿಕ್ಕನ್ನು ಬದಲಾಯಿಸಿದರೆ, ಶ್ವಾನ ಕೂಡ ಅತ್ತ ಓಡುತ್ತದೆ). 
 
​ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಹೊತ್ತಿಗೆ ಸರಿಯಾಗಿ ಸಾಕುಪ್ರಾಣಿಗಳಿಗೆ ಆಹಾರ ನೀಡುವ ಸ್ವಯಂಚಾಲಿತ ಸಾಧನಗಳು ಬಂದಿವೆಯಾದರೂ, ಅವುಗಳು ಹೆಚ್ಚು ಯಶಸ್ವಿಯಾಗಿಲ್ಲ. ಮನುಷ್ಯನ ಒಡನಾಟ ಬಯಸುವ ಸಾಕು ಪ್ರಾಣಿಗಳು, ತಮ್ಮ ಮಾಲೀಕರೇ ಆಹಾರ ನೀಡುವುದನ್ನು ಬಯಸುತ್ತವೆ. ಹಾಗಾಗಿ ಈ ಸಾಧನಗಳು ಹೆಚ್ಚು ಜನಪ್ರಿಯವಾಗಿಲ್ಲ.
ಬ್ರಿಯಾನ್‌ ಎಕ್ಸ್‌. ಚೆನ್‌,  ನ್ಯೂಯಾರ್ಕ್‌ ಟೈಮ್ಸ್‌
****
ಸಣ್ಣ ಮಾರುಕಟ್ಟೆ ಏನಲ್ಲ...
ಸಾಕು ಪ್ರಾಣಿಗಳ ಆರೈಕೆ ತಂತ್ರಜ್ಞಾನ ಮಾರುಕಟ್ಟೆ ಅಮೆರಿಕದಲ್ಲಿ ಈಗ ಪ್ರವರ್ಧಮಾನಕ್ಕೆ ಬರುತ್ತಿದೆ. ಅಮೆರಿಕದ ಸಾಕುಪ್ರಾಣಿಗಳ ಉತ್ಪನ್ನಗಳ ಒಕ್ಕೂಟದ ಪ್ರಕಾರ, 2016ರಲ್ಲಿ ಅಮೆರಿಕನ್ನರು ಸಾಕು ಪ್ರಾಣಿಗಳಿಗೆ ಮೀಸಲಾದ ಉತ್ಪನ್ನಗಳನ್ನು ಖರೀದಿಸಲು 6,675 ಕೋಟಿ ಡಾಲರ್‌ (ಸುಮಾರು ₹4.4 ಲಕ್ಷ ಕೋಟಿ) ವ್ಯಯಿಸಿದ್ದಾರೆ. ಇದರಲ್ಲಿ ಬಹುಪಾಲು ಮೊತ್ತವನ್ನು ತಮ್ಮ ಪ್ರೀತಿ ಪಾತ್ರದ ಪ್ರಾಣಿಗಳಿಗೆ ಆಹಾರ ಖರೀದಿಸಲು ವೆಚ್ಚ ಮಾಡಿದ್ದಾರೆ.

ಪ್ರಾಣಿಗಳ ಹಾಸಿಗೆ, ಕಾಲರ್‌, ಆಹಾರ ಹಾಕುವ ಪಾತ್ರೆಗಳು, ತಂತ್ರಜ್ಞಾನ ಆಧರಿತ ಸಲಕರಣೆಗಳು ಹಾಗೂ ಇತರ ಉತ್ಪನ್ನಗಳನ್ನು ಕೊಂಡುಕೊಳ್ಳಲು ಅಮೆರಿಕದ ಜನರು 1,475 ಕೋಟಿ  ಡಾಲರ್‌ (₹97 ಸಾವಿರ ಕೋಟಿ) ಖರ್ಚು ಮಾಡಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT