ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘಾವಧಿ ಹೂಡಿಕೆಯ ಭವಿಷ್ಯ ಆಶಾದಾಯಕ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ದೇಶಿ ಮಾರುಕಟ್ಟೆ ಈಗ ಮತ್ತೆ  ಹೆಚ್ಚು ಚಲನಶೀಲವಾಗುತ್ತಿದೆ.   ಮೂರು ತಿಂಗಳಲ್ಲಿ ಆರ್ಥಿಕತೆ ಕುರಿತು ಮಹತ್ವದ ಘಟನೆಗಳು ನಡೆದಿವೆ. ದೊಡ್ಡ ಮೊತ್ತದ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ್ದರಿಂದ ಉಂಟಾದ ಪರಿಣಾಮಗಳು ನಿರೀಕ್ಷಿತ ಮಟ್ಟದಲ್ಲಿ ಪ್ರತಿಕೂಲ ಪರಿಣಾಮ ಬೀರಲಿಲ್ಲ.
 
ಅಮೆರಿಕದ ಕರೆನ್ಸಿ ಡಾಲರ್‌ ಬೆಲೆ ಸ್ಥಿರತೆ ಕೂಡ  ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಇತ್ತೀಚೆಗೆ ನಡೆದ  ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ನಡೆದ ಚುನಾವಣೆಯಿಂದ  ರಾಜಕೀಯ ಸ್ಥಿರತೆ ಮೂಡಿದೆ. ಹಣಕಾಸು ಸಂಸ್ಥೆಗಳ ಹೂಡಿಕೆ ಕುರಿತು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೊರಡಿಸಿರುವ ಸುತ್ತೋಲೆಯೂ ಮಾರುಕಟ್ಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.
 
ಕೇಂದ್ರದಲ್ಲಿ ಎನ್‌ಡಿಎ ಜಯಭೇರಿ ಬಾರಿಸಿದ ಬಳಿಕ  ಉತ್ತರ ಪ್ರದೇಶ ಚುನಾವಣೆ ಮಹತ್ವದ್ದಾಗಿತ್ತು. ಆರ್ಥಿಕ ಸುಧಾರಣೆಯ ಕ್ರಮಗಳನ್ನು ಮುಂದುವರಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೂ ಈ ಚುನಾವಣೆ ಮುಖ್ಯವಾಗಿತ್ತು. ಈ ರಾಜಕೀಯ ಬೆಳವಣಿಗೆ ಜತೆಯಲ್ಲೇ ತೆರಿಗೆ ಸುಧಾರಣೆಯಲ್ಲಿ ಮಹತ್ವದ ನೀತಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
 
ಸಂಸತ್ತಿನ ಅನುಮೋದನೆ ಪಡೆದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸಲು ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಜುಲೈ 1ರಿಂದ ಈ ತೆರಿಗೆ ವ್ಯವಸ್ಥೆ ಅನುಷ್ಠಾನವಾಗಲಿದೆ.  
 
ಹೊಸ ತೆರಿಗೆ ವ್ಯವಸ್ಥೆ ಕುರಿತು ಜಿಎಸ್‌ಟಿ ಮಂಡಳಿಯಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಭಿನ್ನಾಭಿಪ್ರಾಯಗಳಿಗೆಲ್ಲ  ಪರಿಹಾರ ಕಂಡುಕೊಳ್ಳಲಾಗಿದೆ. ಹೊಸ ತೆರಿಗೆ ವ್ಯವಸ್ಥೆಯಿಂದ ಉಂಟಾಗುವ ಸ್ಥಿತ್ಯಂತರದಿಂದ ಲಾಭದಲ್ಲಿ ಕುಸಿತವಾಗಬಹುದು ಎನ್ನುವ ಅಭಿಪ್ರಾಯವೂ ಮಾರುಕಟ್ಟೆ ವಲಯದಲ್ಲಿ ವ್ಯಕ್ತವಾಗಿತ್ತು. 
 
ಸರ್ಕಾರ ಇಂತಹ ಆತಂಕಗಳನ್ನು ದೂರ ಮಾಡಿದೆ. ಮುಂದಿನ ಕೆಲವು ವರ್ಷಗಳಲ್ಲಿ ಕಂಪೆನಿಗಳು ಇನ್ನೂ ಹೆಚ್ಚು ಆರ್ಥಿಕ ಸುಧಾರಣೆಯ ಮಾರ್ಗದಲ್ಲಿ ಸಾಗಲಿವೆ. ‘ಒಂದು ದೇಶ’ ಎನ್ನುವುದು ‘ಒಂದು ಮಾರುಕಟ್ಟೆ’ಯಾಗಿ ರೂಪಾಂತರಗೊಳ್ಳಲಿದೆ. ಹೊಸ ತೆರಿಗೆ ಸುಧಾರಣೆಯಿಂದ ತೆರಿಗೆ   ಸಂಗ್ರಹ ಪ್ರಮಾಣವೂ ಹೆಚ್ಚಲಿದೆ. ಅಸಂಘಟಿತ ವಲಯದಲ್ಲಿನ ಮಾರುಕಟ್ಟೆಯ ಪಾಲನ್ನು ಸಹ ಸಂಘಟಿತ ವಲಯ ಪಡೆದುಕೊಳ್ಳುವ ಅವಕಾಶವೂ ಇದೆ.
 
2016–17ನೇ ಹಣಕಾಸು ವರ್ಷದ ಬೆಳವಣಿಗೆ ದರ ಶೇಕಡ 2ರಿಂದ 3ರಷ್ಟು ಮಾತ್ರ ಹೆಚ್ಚಳ ಸಾಧಿಸಿತು. ಈ ಹಣಕಾಸು ವರ್ಷದಲ್ಲಿ ವಿದೇಶ ವಿನಿಮಯದಲ್ಲಿ ಕುಸಿತ ಸೇರಿದಂತೆ ವಿವಿಧ ಕಾರಣಗಳು ಬೆಳವಣಿಗೆ ದರದ ಮೇಲೆ ಪರಿಣಾಮ ಬೀರುವುದು ಸಹಜ. ಆದರೆ, ಇನ್ನೂ ಹೆಚ್ಚಿನ ಬೆಳವಣಿಗೆ ದರ ಸಾಧಿಸಲು ಪ್ರಸಕ್ತ ವರ್ಷದಲ್ಲಿ ಆರ್ಥಿಕತೆಗೆ ಸಂಬಂಧಿಸಿದ ಘಟನೆಗಳು ಹೊಸ ತಿರುವು ಪಡೆಯಬಹುದು.
 
ಜಾಗತಿಕವಾಗಿ ಮಾರುಕಟ್ಟೆಯ ಬೆಳವಣಿಗೆ ಬಗ್ಗೆ ಬಹುತೇಕ ಕಾರ್ಯತಂತ್ರ ರೂಪಿಸುವವರು ಕುತೂಹಲದಿಂದ ಕಾಯುತ್ತಿದ್ದಾರೆ.  ಹಣ ದುಬ್ಬರದಲ್ಲೂ ಏರಿಕೆ ಯಾಗಿದೆ. ಆದರೆ, ನಿರೀಕ್ಷಿತ ಮಿತಿ ದಾಟಿಲ್ಲ.  ಈ ರೀತಿಯ ವಿಭಿನ್ನ ಅಂಶಗಳು ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿವೆ.
 
ಜಾಗತಿಕವಾಗಿ  ಫ್ರಾನ್ಸ್‌ನಲ್ಲಿ ನಡೆಯುವ ಚುನಾವಣೆ ಮಹತ್ವದ್ದಾಗಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿನ ರಾಜಕೀಯ ಬೆಳವಣಿಗೆಗಳಿಂದ ಯುರೋಪ್‌ ಒಕ್ಕೂಟದ ಹಣಕಾಸು ವ್ಯವಸ್ಥೆಯಲ್ಲಿ ಬಿರುಕುಗಳು ಕಂಡು ಬರುವ  ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗಿದೆ.
 
ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಕರೆನ್ಸಿ ಮೌಲ್ಯದ ದೃಷ್ಟಿಕೋನದಿಂದ ಸಕಾರಾತ್ಮಕ ಬೆಳವಣಿಗೆಗಳು ನಡೆದಿವೆ. ಆದರೆ, ಜಾಗತಿಕ ಬೆಳವಣಿಗೆಗಳು ಕೆಲ ಕಾಲ ಸಂಕಷ್ಟಗಳನ್ನು ತಂದೊಡ್ಡಬಹುದು. ಹೀಗಾಗಿ ಹೂಡಿಕೆದಾರರು ದೀರ್ಘಾವಧಿ ದೃಷ್ಟಿಕೋನದಿಂದ ಹೂಡಿಕೆ ಮಾಡುವುದು ಉತ್ತಮ.
– ಮಹೇಶ ಪಾಟೀಲ
ಬಿರ್ಲಾ ಸನ್‌ ಲೈಫ್‌ ಮ್ಯೂಚುವಲ್‌ ಫಂಡ್‌ನ  ಹೂಡಿಕೆ ಅಧಿಕಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT