ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಮತ್ತು ಪ್ರಾರ್ಥನೆ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಈ ಜೀವನ ಒಳಿತು ಕೆಡಕುಗಳ ಸಮ್ಮಿಶ್ರಣ. ಬದುಕಿನ ಪಯಣದಲ್ಲಿ  ದುಃಖವೂ ಇದೆ, ಸುಖವೂ ಇದೆ. ಇಲ್ಲಿ ನಡೆಯುವ ಕೆಲವು ಸಂಗತಿಗಳಷ್ಟೇ ನಮ್ಮ ನಿಯಂತ್ರಣದಲ್ಲಿರುತ್ತವೆ. ಇನ್ನು ಕೆಲವು ನಮ್ಮ ಹಿಡಿತಕ್ಕೆ ಸಿಗುವುದಿಲ್ಲ. ಒಳಿತಾದಾಗ ಹೃದಯ ಹಿಗ್ಗಿದರೆ, ಕೆಡುಕಾದಾಗ ಮನಸ್ಸು ಕುಗ್ಗುತ್ತದೆ. ಆದರೆ, ಕೆಡುಕುಗಳ ಬಗ್ಗೆಯೇ ಯೋಚಿಸುತ್ತಾ ಕೂರುವಂತೆಯೂ ಇಲ್ಲ. ಬದುಕು ಮುಂದೆ ಸಾಗಬೇಕು.
 
ಒಮ್ಮೊಮ್ಮೆಯಂತೂ ಕಷ್ಟಗಳ ಮಳೆಯೇ ಸುರಿದಂತೆ – ಒಂದರ ಮೇಲೊಂದು ಸಮಸ್ಯೆಗಳು ಎದುರಾಗುತ್ತವೆ. ನಮ್ಮ ಪ್ರಯತ್ನದಿಂದ ಸರಿಹೋಗುವಂಥವುಗಳನ್ನೇನೋ ಸರಿಪಡಿಸಿಕೊಂಡೇವು. ಆದರೆ, ನಮ್ಮ ಪ್ರಯತ್ನದ ಹಿಡಿತಕ್ಕೇ ನಿಲುಕದ ಸಂಗತಿಗಳಿಗೇನು ಮಾಡುವುದು? 
 
ಹತ್ತಿರದವರ ಗುಣಪಡಿಸಲಾಗದ ಕಾಯಿಲೆ, ಅಗಲಿಕೆ, ಅಪಘಾತ... ಇವುಗಳೆಲ್ಲ ನಮ್ಮ ಕೈಯಲ್ಲಿವೆಯೇ..? ಅಂತೆಯೇ ಹದಿಹರೆಯದ ಮಕ್ಕಳು ಭ್ರಮಾಲೋಕದಲ್ಲಿ ಮುಳುಗಿ ಹಾದಿ ತಪ್ಪುವುದು, ಅತ್ಯುನ್ನತ ವ್ಯಾಸಂಗ ಮಾಡಿಯೂ ಮಕ್ಕಳಿಗೆ ತಕ್ಕ ಉದ್ಯೋಗ ಸಿಗದಿರುವುದು, ಬಂಡವಾಳ ಹೂಡಿದ ಉದ್ಯಮ ಕೈ ಹತ್ತದಿರುವುದು...
 
ಇಂತಹ ಹತ್ತಾರು ಸಂಗತಿಗಳು ನಮ್ಮ ಶ್ರಮವನ್ನು ಮೀರಿದಂತವು. ನಮ್ಮ ಶ್ರದ್ಧಾ–ಭಕ್ತಿಯ ಪ್ರಯತ್ನದ ನಂತರವೂ ನಡೆದಂತವು. ಆದರೆ ಇವು ನಮ್ಮ ಬದುಕಿನ ಶಾಂತಿಯನ್ನು ಕದಡುವುದಂತೂ ನಿಜ.  ಭವಿಷ್ಯದ ಆತಂಕಕ್ಕೆ ಕಾರಣವಾಗುವುದೂ ನಿಶ್ಚಿತ.
 
ಕೆಲವರು ಇಂತಹ ಸಂದರ್ಭಗಳಲ್ಲಿ ತಮ್ಮ ಹಣೆಬರಹ ಅಥವಾ ಗ್ರಹಚಾರ ಎಂದು ಮರುಗುತ್ತಾರೆ. ಇನ್ನು ಕೆಲವರು ಇವೆಲ್ಲವೂ ತಮ್ಮ ಹಿಂದಿನ ಜನ್ಮದ ಕರ್ಮಫಲ ಎಂದು ಶಪಿಸುತ್ತಾರೆ. ತಮ್ಮನ್ನು ಹಾಗೂ ತಮ್ಮ ಸುತ್ತಲಿನ ಪರಿಸ್ಥಿತಿಗಳನ್ನು ಹಳಿಯುತ್ತಾ ಇನ್ನೂ ಕುಗ್ಗಿ ಹೋಗುತ್ತಾರೆ. ಆ ಖಿನ್ನತೆಯ ಮಾಯಾಜಾಲದಲ್ಲಿ ಸಿಲುಕಿ ಅಂರ್ತಮುಖರಾಗುತ್ತಾರೆ.
 
ತಮ್ಮ ಜೀವನದಲ್ಲಿ ನಡೆಯುತ್ತಿರುವ ಹಾಗೂ ನಡೆದುಹೋದ ಸಣ್ಣ ಪುಟ್ಟ ಒಳಿತನ್ನೂ ಗಮನಿಸದಂತಾಗುತ್ತಾರೆ. ತಮ್ಮ ಮನಸ್ಸನ್ನು ಬದುಕಿನಲ್ಲಿ ನಡೆದ  ಕೆಟ್ಟ ಘಟನೆಗಳ ಸುತ್ತಲೇ ಕೇಂದ್ರೀಕರಿಸುತ್ತಾರೆ. ಇದು ಉರಿಯುವ ಗಾಯದ ಮೇಲೆ ಉಪ್ಪು ಸುರಿದಂತೆ ಅವರನ್ನು ಇನ್ನಷ್ಟು ಘಾಸಿಗೊಳಿಸುತ್ತದೆ.
 
ಆದರೆ ಬದುಕು ಯಾವಾಗಲೂ ಒಂದೇ ರೀತಿ ಇರದು. ಬದಲಾಗುವ ಕಾಲಕ್ಕೆ ತಕ್ಕಂತೆ ಜೀವನವೂ ಬದಲಾಗುತ್ತಿರುತ್ತದೆ. ಪರಿಸ್ಥಿತಿ–ಸನ್ನಿವೇಶಗಳೂ ಬದಲಾಗುತ್ತವೆ.
ಪ್ರಾರ್ಥನೆ ನಮ್ಮ ಬದುಕಿಗೆ ನೆಮ್ಮದಿ ತಂದುಕೊಡಬಲ್ಲದು. ನಮ್ಮ ಬದುಕಿನ ಮುಂದಿನ ಹಾದಿಯಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂದು ಮನಃಪೂರ್ವಕವಾಗಿ ಪ್ರಾರ್ಥಿಸುವುದು ಸಕಾರಾತ್ಮಕ ಮನೋಭಾವವನ್ನು ಸೂಚಿಸುತ್ತದೆ.
 
ಅಂತೆಯೇ ಪ್ರಾರ್ಥನೆಗೆ ಸಕಾರಾತ್ಮಕ ಪ್ರತಿಫಲವೇ ಸಿಗುವುದೆಂದು ಬಲವಾಗಿ ನಂಬಬೇಕು. ನೆನಪಿಡಿ, ಈ ನಂಬಿಕೆ ಹಾಗೂ ಪ್ರಾರ್ಥನೆಗೆ ಅಗಾಧವಾದ ಶಕ್ತಿಯಿದೆ. ಇದು ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. ನಿಮ್ಮ ನೋವಿಗೆ ಒಂದು ಬಗೆಯ ಸಾಂತ್ವನವನ್ನು ಕೊಡುತ್ತದೆ. ನಿಮ್ಮಲ್ಲಿ ಸುರಕ್ಷಾಭಾವವನ್ನು ತರುತ್ತದೆ.
 
ದಿನವೂ ಒಂದೈದು ನಿಮಿಷಗಳ ಕಾಲ ಮೌನವಾಗಿ ಕುಳಿತುಕೊಳ್ಳಿರಿ. ನಿಮ್ಮ ಬದುಕಿನ ಸಮೃದ್ಧತೆಯೆಡೆಗೂ ನಿಮ್ಮ ದೃಷ್ಟಿಯನ್ನೊಮ್ಮೆ ಹಾಯಿಸಿ. ಜೀವನದಲ್ಲಿ ನಿಮಗೆ ಈವರೆಗೆ ವರದಾನವಾಗಿ ಬಂದಂತಹ ಅಂಶಗಳನ್ನು ನೆನಪಿಸಿಕೊಳ್ಳಿ. ಅದಕ್ಕಾಗಿ ಕೃತಜ್ಞತಾಭಾವವನ್ನು ತಾಳಿರಿ. ಇದರಿಂದ ನಿಮ್ಮ ಮನಸ್ಸು ಉಲ್ಲಸಿತವಾಗಿ, ಒಂದು ಬಗೆಯ ಸಂತೃಪ್ತಿ–ಸಂತಸದ ಅನುಭವ ನಿಮ್ಮದಾಗುತ್ತದೆ.
 
ನಿಮ್ಮ ಮುಂದಿನ ಜೀವನವು ಹೇಗಿರಬೇಕೆಂದು ಬಯಸುತ್ತೀರೋ, ಅಂತಹ ಘಟನಾವಳಿಗಳನ್ನು ನಿಮ್ಮ ಮನದಂಗಳದಲ್ಲಿ ಮುಂಚಿತವಾಗಿಯೇ ಕಲ್ಪಿಸಿಕೊಳ್ಳಿರಿ. ನೀವು ಮಾಡಲು ಹೊರಟ ಎಲ್ಲ ಕಾರ್ಯಗಳು ಯಶಸ್ವಿಯಾಗುವ ಭರವಸೆಯನ್ನು ಹೊಂದಿರಿ. ನಿಜ, ಈ ಬಗೆಯ ಸಕಾರಾತ್ಮಕ ಭರವಸೆ ನಿಮ್ಮಲ್ಲಿ ವಿಶೇಷಶಕ್ತಿಯನ್ನು ಮತ್ತು ಹುಮ್ಮಸ್ಸನ್ನು ತುಂಬುತ್ತದೆ. 
 
ನಿಮ್ಮ ಆಲೋಚನೆಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿರಿ. ಕೇವಲ ಒಳ್ಳೆಯ ಆಲೋಚನೆಗಳನ್ನು ಪೋಷಿಸಿ, ಬೆಳೆಸಿ.  ಕೆಟ್ಟ ಯೋಚನೆಗಳನ್ನು ಆರಂಭದಲ್ಲಿಯೇ ಚಿವುಟಿ ಹಾಕಿ, ಅವು ನಿಮ್ಮ ಮನಸ್ಸಿನೊಳಗೆ ನುಸುಳದಂತೆ ಎಚ್ಚರವಹಿಸಿ. ಸದಾ ಮನಸ್ಸಿಗೆ ಮುದ ನೀಡುವ ಧನಾತ್ಮಕ ಸಂಗತಿಗಳ ಬಗ್ಗೆಯೇ ವಿಚಾರ ಮಾಡಿ. ಇದು ನಿಮ್ಮ ಜೀವನ ಪ್ರೀತಿಯನ್ನು ಇಮ್ಮಡಿಗೊಳಿಸುತ್ತದೆ.
 
ನಿಮ್ಮ ಒಡನಾಟವೂ ಉತ್ತಮ ವಿಚಾರಗಳನ್ನು ಹೊಂದಿರುವವರೊಡನೆಯೇ ಇರಲಿ. ಯಾವಾಗಲೂ ಲವಲವಿಕೆಯಿಂದಿರುವ ಸ್ನೇಹಿತರೊಡನೆ ಬೆರೆಯಿರಿ. ನಿಮ್ಮಲ್ಲಿನ ಧನಾತ್ಮಕ ಅಂಶಗಳನ್ನು ಗುರುತಿಸಿ, ಪೋಷಿಸುವ ವ್ಯಕ್ತಿಗಳೊಡನೆ ಹೆಚ್ಚು ಸಮಯ ಕಳೆಯಿರಿ. ನಿಜ, ನಿಮ್ಮ ಬದುಕಿನ ಅನೇಕ ಸಮಸ್ಯೆಗಳನ್ನು ಈ ಬಗೆಯ ಸಕಾರಾತ್ಮಕ ಆಲೋಚನಾ ತಂತ್ರಗಳನ್ನು ಬಳಸಿ ಪರಿಹರಿಸಿಕೊಳ್ಳಬಹುದು. ಪ್ರಯತ್ನಿಸಿ ನೋಡಿ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT