ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಮರಳುವ ನಿರೀಕ್ಷೆಯಲ್ಲಿ ಅಗ್ರಿಗೋಲ್ಡ್ ಠೇವಣಿದಾರ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಕಂಪನಿ ಕಾಯ್ದೆ ಅನ್ವಯ, 1995ರಲ್ಲಿ ಆಂಧ್ರಪ್ರದೇಶದಲ್ಲಿ ಕಾರ್ಯಾರಂಭಗೊಂಡಿದ್ದ ಅಗ್ರಿಗೋಲ್ಡ್‌  ಸಂಸ್ಥೆಯು 20 ವರ್ಷಗಳಲ್ಲಿ  ತನ್ನ ವಹಿವಾಟನ್ನು ವ್ಯಾಪಕವಾಗಿ ವಿಸ್ತರಿಸಿ ಗಮನ ಸೆಳೆದಿತ್ತು. ಜನಸಾಮಾನ್ಯರ (ಠೇವಣಿದಾರರ) ಅಪಾರ ವಿಶ್ವಾಸಕ್ಕೂ ಪಾತ್ರವಾಗಿತ್ತು.
 
ಅಲ್ಪಾವಧಿಯಲ್ಲಿ ಕಣ್ಣುಕುಕ್ಕುವ ರೀತಿಯಲ್ಲಿ ಬೆಳೆದಿದ್ದ ಅಗ್ರಿಗೋಲ್ಡ್‌ ಸಮೂಹದ ವಹಿವಾಟು, ಅಷ್ಟೇ ವೇಗವಾಗಿ ಪ್ರಪಾತಕ್ಕೆ ಕುಸಿದು ಠೇವಣಿದಾರರ, ಏಜೆಂಟರ ಕನಸುಗಳನ್ನು  ಹಾಳು ಮಾಡಿದೆ. ಕೈಮೀರಿದ ಬೆಳವಣಿಗೆಗಳ ಜತೆಗೆ, ಪ್ರವರ್ತಕರ ದುರಾಸೆಯೂ ಸೇರಿಕೊಂಡಿದ್ದರಿಂದ ಠೇವಣಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
 
ಆರಂಭಗೊಂಡ ಎರಡೇ ವರ್ಷಗಳಲ್ಲಿ ಸಂಸ್ಥೆ 1997ರಲ್ಲಿ ಕರ್ನಾಟಕದಲ್ಲಿ ತನ್ನ ವಹಿವಾಟು ವಿಸ್ತರಿಸಿತ್ತು. ಹೂಡಿಕೆ ಹೆಸರಿನಲ್ಲಿ ಠೇವಣಿ ಸಂಗ್ರಹಿಸುವ ಯೋಜನೆಗಳನ್ನು (Collective Investment Schemes) ಕೇಂದ್ರ ಸರ್ಕಾರವು 1999ರಲ್ಲಿ ನಿಷೇಧಿಸಿತ್ತು.

ಆದರೂ, ಗರಿಷ್ಠ ಬಡ್ಡಿದರ ಆಮಿಷ ಒಡ್ಡಿ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವುದನ್ನು ಸಂಸ್ಥೆ ಕೈಬಿಟ್ಟಿರಲಿಲ್ಲ. ಬಡವರು, ಮಧ್ಯಮ ವರ್ಗದವರು ಸಹಜವಾಗಿಯೇ ಹೆಚ್ಚಿನ ಲಾಭದ ಆಸೆಗೆ ಹಣ ತೊಡಗಿಸಿದ್ದರು. ಎರಡು ದಶಕಗಳ ಕಾಲ ಅಗ್ರಿಗೋಲ್ಡ್‌ನ ವಹಿವಾಟು ಚೆನ್ನಾಗಿಯೇ ನಡೆದಿತ್ತು. ಸಂಸ್ಥೆಯ ಪ್ರವರ್ತಕರು ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು.
 
2004ರಲ್ಲಿ ಸಂಸ್ಥೆಯ ಠೇವಣಿ ಸಂಗ್ರಹದ ವಿಧಾನದ ಬಗ್ಗೆ ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಕೆಂಗಣ್ಣು ಬೀರಿತು. ನಿಮ್ಮ ವಹಿವಾಟು ನಮ್ಮ ನಿಬಂಧನೆ ಅನ್ವಯ ನಡೆಯುತ್ತಿಲ್ಲ. ಇದುವರೆಗೆ ಸಂಗ್ರಹಿಸಿದ ಹಣವನ್ನು ಠೇವಣಿದಾರರಿಗೆ ಹಿಂದಿರುಗಿಸಿ ಎಂದು ‘ಸೆಬಿ’ ಸೂಚಿಸಿತ್ತು.
 
‘ಸೆಬಿ’ಯ ಎಚ್ಚರಿಕೆಯ ಹೊರತಾಗಿಯೂ ಸಂಸ್ಥೆಯು ತನ್ನ ವಹಿವಾಟನ್ನು ಮುಂದುವರೆಸಿಕೊಂಡು ಹೋಯಿತು. ಠೇವಣಿದಾರರೂ ‘ಸೆಬಿ’ಯ ಎಚ್ಚರಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು. ಗರಿಷ್ಠ ಮಟ್ಟದ ಲಾಭದಾಸೆಗೆ ಹಣ ಠೇವಣಿ ಮಾಡುತ್ತಲೇ ಹೋದರು.
 
ತಮ್ಮ ಜೀವನೋಪಾಯಕ್ಕೆ ಈ ಸಂಸ್ಥೆಯನ್ನೇ ನೆಚ್ಚಿಕೊಂಡಿದ್ದ, ಸಾವಿರಾರು ಜನರಿಗೆ ಉದ್ಯೋಗ ಅವಕಾಶ ನೀಡಿದ್ದ ಸಂಸ್ಥೆಯ ಬಗ್ಗೆ ಏಜೆಂಟರೂ ಒಳ್ಳೆಯ ಮಾತನಾಡು ಆಡುತ್ತ, ಭರವಸೆ ನೀಡುತ್ತ ಠೇವಣಿದಾರರನ್ನು ಹುರಿದುಂಬಿಸುತ್ತಲೇ ಹೋದರು. 
 
ಪಿಗ್ಮಿ ರೂಪದಲ್ಲಿ ದಿನಕ್ಕೆ ಕನಿಷ್ಠ ₹ 10 ರಿಂದ ₹ 100 ಸಂಗ್ರಹ ಅಥವಾ ಕನಿಷ್ಠ ₹ 1,000 ಠೇವಣಿ ಸಂಗ್ರಹ ಕಾರ್ಯ ಅಬಾಧಿತವಾಗಿ ಮುನ್ನಡೆದಿತ್ತು. ಏಜೆಂಟರಿಗೆ ಶೇ 10ರಷ್ಟು ಆಕರ್ಷಕ ಕಮಿಷನ್‌ ಇತ್ತು. ಹೀಗಾಗಿ ಅವರು ಕೂಡ  ಮಾತಿನ ಮಂಟಪ ಕಟ್ಟಿ ಠೇವಣಿದಾರರನ್ನು ಮರಳು ಮಾಡಿದರು.
 
ಆರಂಭದಲ್ಲಿ ಸಂಸ್ಥೆಯು ಠೇವಣಿದಾರರಿಗೆ ಶೇ 24ರಿಂದ ಶೇ 22ಕ್ಕೆ ಪ್ರತಿಫಲ (ಲಾಭಾಂಶ) ವಿತರಿಸುತ್ತಿತ್ತು. ಆನಂತರ ಅದು ಶೇ 14ಕ್ಕೆ ಬಂದು ನಿಂತಿತ್ತು. 
ಈಗ, ಠೇವಣಿದಾರರು ತಾವು ತೊಡಗಿಸಿದ ಹಣ ಬಂದರೂ ಸಾಕು ಎನ್ನುವ ಹಂತಕ್ಕೆ ಬಂದು ನಿಂತಿದ್ದಾರೆ. ಅವರು ಬೆವರು ಸುರಿಸಿ ದುಡಿದು ಕಷ್ಟಪಟ್ಟು ಉಳಿಸಿದ ಹಣ ಅದಾಗಿದೆ. 
 
ಹಣದ ಹರಿವು ಹೆಚ್ಚುತ್ತಿದ್ದಂತೆ ಸಂಸ್ಥೆಯ ಪ್ರವರ್ತಕರು ವಹಿವಾಟನ್ನು ಆಹಾರ, ಆರೋಗ್ಯ, ಮನರಂಜನೆ ಮತ್ತು ರಿಯಲ್‌ ಎಸ್ಟೇಟ್‌ಗೆ ವಿಸ್ತರಿಸಿದರು. ಮನರಂಜನಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಿದರು. ಪ್ರವಾಸೋದ್ಯಮಕ್ಕೂ ಕಾಲಿಟ್ಟರು. ಭೂಮಿ ಖರೀದಿಸಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡತೊಡಗಿದರು. ಅಗ್ರಿಗೋಲ್ಡ್ ಇನ್‌ಫ್ರಾಸ್ಟಕ್ಟರ್‌, ಡ್ರೀಮ್‌ಲ್ಯಾಂಡ್‌ ವೆಂಚರ್ಸ್‌ಗಳು ಠೇವಣಿದಾರರಲ್ಲಿ ಇನ್ನಿಲ್ಲದ ಭರವಸೆ ಮೂಡಿಸಿದವು. 
 
ಸಂಸ್ಥೆಯ ವಹಿವಾಟಿನ ಬೆಳವಣಿಗೆಯು ಎಂತಹವರಿಗೂ ನಂಬಿಕೆ ಬರುವಂತೆ ಮಾಡಿತ್ತು. ಹಾಕಿದ ಹಣಕ್ಕೆ ಮೋಸ ಇಲ್ಲ ಎಂದು ಠೇವಣಿದಾರರು ನಂಬಿದ್ದರು. ವರ್ಷಗಳ ಕಾಲ ಸಂಸ್ಥೆಯು ಠೇವಣಿದಾರರ ವಿಶ್ವಾಸ ಕಾಯ್ದುಕೊಂಡು ಬಂದಿತ್ತು. ಬದುಕಿಗೆ ದಾರಿಯಾಗಿದ್ದಕ್ಕೆ ಏಜೆಂಟರೂ ನೆಮ್ಮದಿಯಿಂದ ಇದ್ದರು.
 
ಆಂಧ್ರಪ್ರದೇಶದ ವಿಭಜನೆ ವಿವಾದ ಭುಗಿಲೇಳುತ್ತಿದ್ದಂತೆ, ಅಗ್ರಿಗೋಲ್ಡ್‌ನ ಅವಸಾನದ ಪ್ರಕ್ರಿಯೆ 2013ರಲ್ಲಿ ಸಣ್ಣಗೆ ಸಮಸ್ಯೆ ಆರಂಭವಾಯಿತು. ರಾಜ್ಯ ವಿಂಗಡಣೆಯ ಕಾರಣಕ್ಕೆ 84 ದಿನಗಳ ಕಾಲ ಆಂಧ್ರಪ್ರದೇಶದಲ್ಲಿನ ಆರ್ಥಿಕ ಚಟುವಟಿಕೆಗಳೆಲ್ಲ ಸ್ತಬ್ಧಗೊಂಡಿದ್ದವು.  ವಿಜಯವಾಡಾದಲ್ಲಿ ಶರವೇಗದಲ್ಲಿದ್ದ ವಹಿವಾಟು ದಿಢೀರನೆ ಸ್ಥಗಿತಗೊಂಡಿತು. ಆದರೆ, ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳಲ್ಲಿ ವಹಿವಾಟು ಮುಂದುವರೆದಿತ್ತು. 
 
ರಾಜ್ಯ ವಿಭಜನೆಯ ಗೊಂದಲ, ಚುನಾವಣೆ ಪ್ರಕ್ರಿಯೆ ಕಾರಣಕ್ಕೆ ಅಗ್ರಿಗೋಲ್ಡ್‌ ವಹಿವಾಟು ದಿಢೀರನೆ ಹೊಸ ತಿರುವು ಪಡೆಯಿತು. ಸಂಸ್ಥೆಯ ಬಳಿ ಸಾಕಷ್ಟು ಪ್ರಮಾಣದಲ್ಲಿ ನಗದು ಇದ್ದಿರಲಿಲ್ಲ. ಭೂಮಿ ಮೇಲೆಯೇ ಎಲ್ಲ ಬಂಡವಾಳ ಹೂಡಿಕೆ ಮಾಡಲಾಗಿತ್ತು. ಇಡೀ ವ್ಯವಸ್ಥೆ ಕುಲಗೆಟ್ಟು ಹೋಗಿತ್ತು.
 
ರಾಜ್ಯದಲ್ಲಿ ಬಿಡದಿ, ಶ್ರೀರಂಗಪಟ್ಟಣ, ಮಾಲೂರು, ಕೋಲಾರ, ಮಂಗಳೂರು, ಯಾದಗಿರಿ– ಇಲ್ಲೆಲ್ಲ ಭೂಮಿ ಖರೀದಿ ನಿವೇಶನ ಮಾಡಿ ಹಂಚಿಬಿಟ್ಟಿದ್ದಾರೆ. ಶೇ 60 ರಷ್ಟು ಮಾರಾಟ ಆಗಿದೆ. ಕೆಲವರ ನಿವೇಶನ ನೋಂದಣಿ ಆಗಿಲ್ಲ. ವಿವಾದ ಕೋರ್ಟ್‌ನಲ್ಲಿ ಇರುವುದರಿಂದ ಜನರು  ಹೂಡಿದ ಹಣವೂ ಇಲ್ಲ, ನಿವೇಶನವೂ ಇಲ್ಲದ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ.
 
ಹಿಂದಿನ ಹೂಡಿಕೆಗಳಿಗೆ ಪ್ರತಿಯಾಗಿ ಲಾಭಾಂಶ ನೀಡುವುದು ಸಂಸ್ಥೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಪ್ರತಿ ದಿನ ಠೇವಣಿ ರೂಪದಲ್ಲಿ ಸಂಗ್ರಹವಾಗುವ ಮೊತ್ತ ₹ 1 ಕೋಟಿ ಇದ್ದರೆ, ಹೊರ ಹೋಗುವ ಮೊತ್ತ ₹ 1.50 ಕೋಟಿಗಳಷ್ಟಿತ್ತು. ಠೇವಣಿದಾರರಿಗೆ ಲಾಭಾಂಶ ವಿತರಣೆಯು ಆರಂಭದಲ್ಲಿ ಒಂದು ವಾರ ತಡವಾಗುತ್ತಿತ್ತು. ಕ್ರಮೇಣ ಅದು ಒಂದು ತಿಂಗಳಿಗೆ ಬಂದು ನಿಂತಿತು. ಕೊನೆ ಕೊನೆಗೆ ಒಂದು ವರ್ಷ ವಿಳಂಬವಾಗುವ ಹಂತಕ್ಕೂ ಬಂದಿತು.
 
ಇದೆಲ್ಲ ಏಜೆಂಟರ ಕುತ್ತಿಗೆಗೆ ಬಂದು ನಿಂತಿತು. ಠೇವಣಿದಾರರು ಏಜೆಂಟರ ಮನೆಗೆ ಠಳಾಯಿಸತೊಡಗಿದರು. ಅವರಿಗೆ  ಭ್ರಮನಿರಸನ ಆಗತೊಡಗಿತ್ತು. ಹಣ ಕಳೆದುಕೊಂಡಿರುವುದು ಅರಿವಾಗಿ ಅವರೆಲ್ಲ ಕಂಗಾಲಾಗಿದ್ದರು. ಏಜೆಂಟರೂ ದಿಕ್ಕೆಟ್ಟಿದ್ದರು.  ಬದುಕು ಕೊಟ್ಟ ಸಂಸ್ಥೆ ಇಂದಲ್ಲ ನಾಳೆ ಸರಿ ಹೋಗಬಹುದು ಎನ್ನುವ ನಿರೀಕ್ಷೆ ತಲೆಕೆಳಗಾಗಿತ್ತು.
 
ಮಾರುಕಟ್ಟೆ ಸ್ಥಾನಿಕ ಸಮನ್ವಯ ಅಧಿಕಾರಿಯಾಗಿದ್ದ ಎ. ಎಸ್‌. ಕುಮಾರಸ್ವಾಮಿ ಅವರು ಸಂಸ್ಥೆಯ ಕೋರಿಕೆ ಮೇರೆಗೆ ತಮ್ಮ ಸ್ವಂತ ಹಣವನ್ನು ಕೆಲವರಿಗೆ ಮರಳಿಸಿದರು. ಸಂಸ್ಥೆ ಇವರಿಗೆ ಕೊಟ್ಟಿದ್ದ ₹ 24 ಲಕ್ಷ ಮೊತ್ತದ ಚೆಕ್ ಕೂಡ ಬೌನ್ಸ್‌ ಆಗಿತ್ತು. ಠೇವಣಿದಾರರ ಚೆಕ್ ಬೌನ್ಸ್‌ಗಳ ಮೊತ್ತವೇ ₹ 700 ಕೋಟಿಗೆ ತಲುಪಿತ್ತು.
 
ವೇದಿಕೆ ಸ್ಥಾಪನೆ
‘ಈ ಹಗರಣದ ಒಳಸುಳಿಯಿಂದ ಪಾರಾಗಿ ಬರಲು ಮಾರ್ಗೋಪಾಯ ಕಂಡುಕೊಳ್ಳಲು, ಕಳೆದುಕೊಂಡ ಹಣ ಮರಳಿ ಪಡೆಯಲು, ಠೇವಣಿದಾರರಲ್ಲಿ ಭರವಸೆ ಮೂಡಿಸಲು ಕಾನೂನು ಹೋರಾಟ ನಡೆಸುವ ಉದ್ದೇಶಕ್ಕೆ  2014ರ ಅಕ್ಟೋಬರ್‌ನಲ್ಲಿ ‘ಅಗ್ರಿಗೋಲ್ಡ್‌ ಹೂಡಿಕೆದಾರರ ವೇದಿಕೆ’ ಸ್ಥಾಪಿಸಲಾಯಿತು.
 
‘ಸಂಸ್ಥೆಯ ಪ್ರವರ್ತಕರು ಆರಂಭದಲ್ಲಿಯೇ ತಮ್ಮ ವಶದಲ್ಲಿದ್ದ ಭೂಮಿ ಮಾರಾಟ ಮಾಡಿ ಬಂದ ಹಣವನ್ನು ಠೇವಣಿದಾರರಿಗೆ ಹಂಚಿದ್ದರೆ   ಹಗರಣ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಆಂಧ್ರಪ್ರದೇಶ ವಿಭಜನೆ ಕಾರಣಕ್ಕೆ ತುಂಡು ಭೂಮಿಗೂ ಚಿನ್ನದ ಬೆಲೆ ಬಂದಿದ್ದರಿಂದ ಪ್ರವರ್ತಕರು ದುರಾಸೆಗೆ ಬಿದ್ದರು.

ಉದಾಹರಣೆಗೆ ಹೇಳುವುದಾದರೆ, 100 ಎಕರೆ ಭೂಮಿ ಮಾರಿ ಹಣ ಮರಳಿಸುವುದಕ್ಕಿಂತ ಇನ್ನಷ್ಟು ದಿನ ಕಳೆದರೆ, 1 ಎಕರೆಯನ್ನಷ್ಟೆ ಮಾರಿದರೂ ಸಾಕು ಎನ್ನುವ ದುರಾಸೆ ಸಂಸ್ಥೆಯ ಸ್ಥಾಪಕರಲ್ಲಿ ಚಿಗುರೊಡೆದಿತ್ತು. ಈ ಹೊತ್ತಿಗೆ ಆಂಧ್ರದ ಪ್ರಭಾವಿ ರಾಜಕಾರಣಿಗಳು ಕೂಡ ಇದೇ ಭೂಮಿಯ ಮೇಲೆ ಕಣ್ಣು ಹಾಕಿದರು.

ಹೇಗಾದರೂ ಮಾಡಿ ಸಂಸ್ಥೆಯ ವಶದಲ್ಲಿದ್ದ ಭೂಮಿಯನ್ನು ಕಡಿಮೆ ಬೆಲೆಗೆ ನುಂಗಬೇಕೆಂದು ಹುನ್ನಾರ ಮಾಡಿದರು. ಭೂಮಿ ಮೌಲ್ಯ ದಿಢೀರನೇ ಹೆಚ್ಚಿದ್ದರಿಂದ ಇಡೀ ಆಸ್ತಿ ಕಬಳಿಸುವ ಸಂಚು ದೊಡ್ಡ ಮಟ್ಟದಲ್ಲಿಯೇ ನಡೆದಿದೆ’ ಎಂದು ವೇದಿಕೆಯ ಅಧ್ಯಕ್ಷ ಎ. ಎಸ್‌. ಕುಮಾರಸ್ವಾಮಿ ಹೇಳುತ್ತಾರೆ. 
 
ಈ ಕಾರಣಕ್ಕೆ ಈ ಅಂತರರಾಜ್ಯ ಹಗರಣವು ಹಲವಾರು ಒಳಸುಳಿಗೆ ಸಿಲುಕಿದೆ. ಜನಸಾಮಾನ್ಯರ ಹಿತ ಕಾಯಬೇಕಾಗಿದ್ದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವು ರಾಜಕೀಯ ಪ್ರಭಾವ, ಹಣದ ಆಮಿಷದ ಕಾರಣಕ್ಕೆ ಠೇವಣಿದಾರರ ಹಿತವನ್ನು ಮರೆತಿವೆ.
 
ಆದರೂ ನಾವು ನಮ್ಮ ಹೋರಾಟ ಕೈಬಿಟ್ಟಿಲ್ಲ. ಸಂಸ್ಥೆಯ ವಶದಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿಯೂ ಸಾಕಷ್ಟು ಭೂಮಿ ಇದೆ. ಕೋರ್ಟ್‌ನ ಮಧ್ಯಪ್ರವೇಶದಿಂದ ಇಂದಲ್ಲ ನಾಳೆಯಾದರೂ ಈ ಬೆಲೆಬಾಳುವ ಭೂಮಿ ಮಾರಾಟವಾಗಿ ಠೇವಣಿದಾರರ ಹಣ ಮರಳಲಿದೆ ಎನ್ನುವ ಆಶಾಭಾವನೆಯಿಂದ ಇದ್ದೇವೆ’ ಅವರು ಭರವಸೆಯ ಮಾತು ಆಡುತ್ತಾರೆ.
 
ಹೈದರಾಬಾದ್‌ನಲ್ಲಿ ರಮೇಶ ಬಾಬು ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರಿಂದ ವಿವಾದ ಕೊನೆಗೂ  ಕೋರ್ಟ್‌ ಮೆಟ್ಟಿಲು ಏರಿದೆ. ಸದ್ಯಕ್ಕೆ ವಿಚಾರಣೆ ಪ್ರಗತಿಯಲ್ಲಿ ಇದೆ.
 
ಕುಮಾರಸ್ವಾಮಿ ಅವರು ತಮಗೆ ಜೀವ ಬೆದರಿಕೆ ಇದ್ದರೂ, ಠೇವಣಿದಾರರಿಗೆ ಹಣ ಮರಳಿಸಿ ಕೊಡುವ ಹೋರಾಟವನ್ನು ದಿಟ್ಟತನದಿಂದ ಮುಂದುವರೆಸಿದ್ದಾರೆ. ಈ ಹೋರಾಟ ಈಗ ಇನ್ನೊಂದು ಹಂತ ತಲುಪಿದೆ. ಸಂಸ್ಥೆ ಖರೀದಿಸಿದ್ದ ಭೂಮಿಯಲ್ಲಿ ವೇದಿಕೆಯು ಫಲಕಗಳನ್ನು ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಇದಕ್ಕೆ ರಾಜ್ಯ ಸಿಐಡಿಯೂ ಬೆಂಬಲಕ್ಕೆ ನಿಂತಿದೆ.
 
‘ಅಗ್ರಿಗೋಲ್ಡ್‌ಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿದ್ಯಮಾನಗಳು ಠೇವಣಿದಾರರ ಗಮನಕ್ಕೆ ಬರದಂತೆಯೂ ಕಾಣದ ಕೈಗಳು ಕೆಲಸ ಮಾಡುತ್ತಿವೆ’ ಎಂದು ವೇದಿಕೆಯ ಗೌರವ ಅಧ್ಯಕ್ಷರಾಗಿರುವ ಎನ್‌. ರಂಗನಾಥನ್‌ ಅವರು ದೂರುತ್ತಾರೆ. ‘ವೇದಿಕೆ ವತಿಯಿಂದ ಸುಪ್ರೀಂಕೋರ್ಟ್‌ಗೆ ಮೊರೆ ಹೋಗುವ ಅವಕಾಶ ಇದೆ. ಅದರ ಸಾಧಕ ಬಾಧಕಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಅವರು ಹೇಳುತ್ತಾರೆ.
 
‘ಸ್ಥಾಪಿತ ಹಿತಾಸಕ್ತಿಗಳ ಕಾರಣಕ್ಕೆ ವಿಚಾರಣೆ ವಿಳಂಬವಾಗುತ್ತಿರುವ ಕಾರಣಕ್ಕೆ ಪ್ರಕರಣವನ್ನು ಆಂಧ್ರಪ್ರದೇಶದ ಬದಲಿಗೆ ಬೇರೆ ರಾಜ್ಯಕ್ಕೆ ವರ್ಗಾಯಿಸುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇದೆ. ಈ ಬಗ್ಗೆ ಮನವಿ ಸಲ್ಲಿಸಲಾಗುವುದು. ಪ್ರಕರಣದ ವರ್ಗಾವಣೆ ಮಾಡುವ ಅಧಿಕಾರ ಸುಪ್ರೀಂಗೆ ಇದೆ. ಅಲ್ಲಿಯೇ ಮೊರೆ ಇಡಬೇಕಾಗಿದೆ’ ಎಂದು ಕುಮಾರಸ್ವಾಮಿ ಹೇಳುತ್ತಾರೆ.
 
‘ವೇದಿಕೆ ಆಶ್ರಯದಲ್ಲಿ ನಾನು ಯಾವುದೇ ಒಬ್ಬ ವ್ಯಕ್ತಿ ವಿರುದ್ಧ ಹೋರಾಟ ನಡೆಸುತ್ತಿಲ್ಲ. ಇಡೀ ವ್ಯವಸ್ಥೆ ವಿರುದ್ಧ ಹೋರಾಡುತ್ತಿರುವೆ. ವ್ಯವಸ್ಥೆ ನನ್ನ ಮೇಲೆ ಮುಗಿ ಬೀಳುವುದಿಲ್ಲ. ಠೇವಣಿದಾರರು ನಮ್ಮ ಮೇಲೆ ಈ ಹಿಂದಿನಂತೆಯೇ ವಿಶ್ವಾಸ ಇಡಬೇಕು. ಇಂದಲ್ಲ ನಾಳೆ ಖಂಡಿತವಾಗಿಯೂ ಅವರಿಗೆ ನ್ಯಾಯ ಸಿಗಲಿದೆ’ ಎಂದು ಕುಮಾರಸ್ವಾಮಿ ಭರವಸೆಯ ಮಾತು ಆಡುತ್ತಾರೆ.
 
‘ಇಷ್ಟು ದೂರ ಪ್ರಕರಣವನ್ನು ಜೀವಂತವಾಗಿರಿಸಿಕೊಂಡು ಬಂದಿರುವುದಕ್ಕೆ ವೇದಿಕೆಯ ಉದ್ದೇಶ ಮತ್ತು ಚಟುವಟಿಕೆಗಳ ಬಗ್ಗೆ ಠೇವಣಿದಾರರು ಇಟ್ಟಿರುವ ನಂಬಿಕೆಯೂ ಮುಖ್ಯವಾಗಿದೆ. 
 
‘ಠೇವಣಿದಾರರಿಗೆ ದುಡ್ಡು ವಾಪಸ್‌ ಮರಳಿ ಬರಬೇಕು ಎನ್ನುವುದೇ ವೇದಿಕೆಯ ಮುಖ್ಯ ಉದ್ದೇಶವಾಗಿದೆ. ರಾಜ್ಯದಲ್ಲಿನ ಎಲ್ಲ ಆಸ್ತಿಗಳ ಮೇಲೆ ಫಲಕ ಹಾಕುವ ಕಾರ್ಯ ಈಗ ಪ್ರಗತಿಯಲ್ಲಿ ಇದೆ. ಆಂಧ್ರಪ್ರದೇಶದ ಏಜೆಂಟರಿಗೂ ಇದು ಆದರ್ಶವಾಗಿದೆ’ ಎಂದೂ ಅವರು ಹೇಳುತ್ತಾರೆ.
 
‘ಠೇವಣಿದಾರರ ಪ್ರತಿಯೊಂದು ಪೈಸೆಯನ್ನೂ ಮರಳಿಸಲಾಗುವುದು ಎಂದು ಅಗ್ರಿಗೋಲ್ಡ್‌ ಅಧ್ಯಕ್ಷ ಎ. ವಿ. ರಾಮರಾವ್‌ ಭರವಸೆ ಕೊಟ್ಟಿದ್ದರು. ಸಂಸ್ಥೆಯ ಬಳಿ ಸದ್ಯಕ್ಕೆ ಅಷ್ಟು ದೊಡ್ಡ ಮೊತ್ತದ ದುಡ್ಡು ಇಲ್ಲ. ಆದರೆ, ಬೆಲೆಬಾಳುವ ಭೂಮಿ ಇದೆ. ಅದರ ಹರಾಜು ಪ್ರಕ್ರಿಯೆಯು ಕೋರ್ಟ್‌ ಉಸ್ತುವಾರಿಯಲ್ಲಿ ನ್ಯಾಯಯುತವಾಗಿ ನಡೆಯಬೇಕಾಗಿದೆ.
 
ದಿನಗಳೆದಂತೆ ಠೇವಣಿದಾರರ ಸಹನೆ ಕಟ್ಟೆ ಒಡೆಯುತ್ತಿದೆ. ಅವರು ಏಜೆಂಟರನ್ನು ಕಂಡಲ್ಲಿ ನಿಲ್ಲಿಸಿ ಹಣ ಕೇಳುತ್ತಿದ್ದಾರೆ. ಇದರಿಂದ ಏಜೆಂಟರೂ ಭಯದಿಂದ ಬದುಕುತ್ತಿದ್ದಾರೆ. ಠೇವಣಿದಾರರ ಹಣ ಮರಳಿಸುವ ದಿಸೆಯಲ್ಲಿ ವೇದಿಕೆ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸಿಗಬೇಕಾಗಿದೆ. ನ್ಯಾಯಾಂಗದಲ್ಲಿ ನಾವೆಲ್ಲ ವಿಶ್ವಾಸ ಇಡಬೇಕಾಗಿದೆ’ ಎಂದೂ ಕುಮಾರಸ್ವಾಮಿ ಹೇಳುತ್ತಾರೆ.
****
₹ 6,700 ಕೋಟಿಗಳಷ್ಟು ಮೊತ್ತದ ಅಂತರರಾಜ್ಯ ಬಹುಕೋಟಿ ವಂಚನೆ  ಪ್ರಕರಣವಾಗಿರುವ ಅಗ್ರಿಗೋಲ್ಡ್‌ ಹಗರಣದಿಂದ ಕರ್ನಾಟಕವೂ ಸೇರಿದಂತೆ ಎಂಟು ರಾಜ್ಯಗಳ ಅಂದಾಜು 32 ಲಕ್ಷಕ್ಕೂ ಹೆಚ್ಚು ಠೇವಣಿದಾರರು ವಂಚನೆಗೆ ಒಳಗಾಗಿದ್ದಾರೆ. ರಾಜ್ಯದಲ್ಲಿನ ಸಂಸ್ಥೆಯ ಏಜೆಂಟರು ವೇದಿಕೆ ರಚಿಸಿಕೊಂಡು ಠೇವಣಿದಾರರಿಗೆ ನ್ಯಾಯ ಒದಗಿಸಲು ಕಾನೂನು ಸಮರದಲ್ಲಿ ತೊಡಗಿರುವುದನ್ನು ಕೇಶವ ಜಿ. ಝಿಂಗಾಡೆ ವಿವರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT