ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಸವಿತಾ ಸಾಗರ, ಶಿವಮೊಗ್ಗ ಜಿಲ್ಲೆ
lಈ ಅಂಕಣ ಓದಿ ನಾನು ಉಳಿತಾಯ ಮಾಡಲು ಪ್ರಾರಂಭಿಸಿದೆ. ಇನ್ನು 3–4 ವರ್ಷಗಳಲ್ಲಿ ನನ್ನ ಉಳಿತಾಯ ₹ 40 ಲಕ್ಷಕ್ಕೆ ತಲುಪಬಹುದು ಎಂದು ಹೆಮ್ಮೆಯಿಂದ ಹೇಳುತ್ತೇನೆ.  ನನ್ನ ಪ್ರಶ್ನೆ 1: ಗೃಹಸಾಲದ ಬಡ್ಡಿದರ ಕಡಿಮೆ ಮಾಡಿದರೂ, ಬ್ಯಾಂಕುಗಳು ಗ್ರಾಹಕರಿಗೆ ಇದನ್ನು ವರ್ಗಾಯಿಸುವುದಿಲ್ಲ ಏಕೆ? ಈ ವಿಚಾರದಲ್ಲಿ ಆರ್‌.ಬಿ.ಐ. ಬ್ಯಾಂಕುಗಳಿಗೆ ಸುತ್ತೊಲೆ–ನಿರ್ದೇಶನ ನೀಡಲಿಲ್ಲವೇ? ದಯಮಾಡಿ ತಿಳಿಸಿರಿ. ಪ್ರಶ್ನೆ 2: ನನ್ನ ವಾರ್ಷಿಕ ಸಂಬಳ ₹ 16 ಲಕ್ಷ. ನನ್ನ ಗೃಹಸಾಲಕ್ಕೆ ಹೆಚ್ಚಿನ ಇ.ಎಂ.ಐ. ಕಟ್ಟಬೇಕೆಂದಿದ್ದೇನೆ. ಅವಧಿಗೆ ಮುನ್ನ ಸಾಲ ತೀರಿಸುವುದು ಸೂಕ್ತವೇ ತಿಳಿಸಿರಿ.
 
ಉತ್ತರ: ಆರ್‌.ಬಿ.ಐ. ತ್ರೈಮಾಸಿಕ ಆರ್ಥಿಕ ಸಮೀಕ್ಷೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ, ಜಿ.ಡಿ.ಪಿ., ಹಣ ದುಬ್ಬರ ಹಾಗೂ ಉದ್ಯೋಗಾವಕಾಶ ಇವುಗಳನ್ನು ಗಂಭೀರವಾಗಿ ಗಮನಿಸಿ, ತಾವು ಬ್ಯಾಂಕುಗಳಿಗೆ ನೀಡುವ ಸಾಲದ ಬಡ್ಡಿ ದರದಲ್ಲಿ ಕಡಿತ ಅಥವಾ ಯಥಾಸ್ಥಿತಿ ಕಾಪಾಡಿಕೊಂಡು ಬರುತ್ತದೆ. 
 
ಆರ್‌.ಬಿ.ಐ. ಬ್ಯಾಂಕುಗಳಿಗೆ ನೀಡುವ ಸಾಲದ ಬಡ್ಡಿ ದರವನ್ನು ರೇಪೋರೇಟ್‌ (Reporate) ಎಂಬುದಾಗಿ ಕರೆಯುತ್ತಾರೆ. ಇದೇ ವೇಳೆ ಆರ್‌.ಬಿ.ಐ. ರೇಪೋರೇಟ್‌ ಕಡಿತ ಮಾಡಿದಾಗ, ಬ್ಯಾಂಕುಗಳಿಗೆ ಆದ್ಯತಾರಂಗದ ಸಾಲಗಳಿಗೂ ಬಡ್ಡಿದರ ಕಡಿಮೆ ಮಾಡಲು ಸಲಹೆ ನೀಡುತ್ತವೆ. ಆದರೆ ಆದೇಶ (Mandate) ನೀಡುವುದಿಲ್ಲ. ಬ್ಯಾಂಕುಗಳು ಆರ್‌.ಬಿ.ಐ.ನಿಂದ ಸಾಲ ಪಡೆಯದಿರಲೂಬಹುದು. 
 
ಕೇಂದ್ರ ಸರ್ಕಾರ ವಿತ್ತಸಚಿವಾಲಯ, ಎಲ್ಲಾ ಬ್ಯಾಂಕುಗಳ ಮುಖ್ಯ ಕಾರ್ಯ ನಿರ್ವಾಹಕರ  (C.E.Os.)  ಸಭೆ ನಡೆಸಿ ಕೂಡಾ ಈ ವಿಚಾರದಲ್ಲಿ ಸಲಹೆ ನೀಡುತ್ತದೆ. ಒಟ್ಟಿನಲ್ಲಿ, ಗೃಹ ಸಾಲದ ಮೇಲಿನ ಬಡ್ಡಿ ದರ, ಬದಲಾಗುವ ಬಡ್ಡಿದರ (Floating Rate) ದಲ್ಲಿ ಪಡೆದಿರುವಲ್ಲಿ, ಸಾಮಾನ್ಯವಾಗಿ, ರೇಪೋರೇಟ್‌ ಕಡಿಮೆ ಆದಾಗ ಗೃಹಸಾಲದ ಬಡ್ಡಿದರ ಬ್ಯಾಂಕುಗಳಲ್ಲಿ ಕಡಿಮೆ ಆಗುವುದು ಸಹಜ. 
 
ಕೆಲವೊಂದು ಬ್ಯಾಂಕುಗಳು ಇದರ ಸಂಪೂರ್ಣ ಪ್ರತಿಫಲ ಗ್ರಾಹಕರಿಗೆ ವರ್ಗಾಯಿಸದಿರುವುದು ಸಹಜ. ನಿಮ್ಮ 2ನೇ ಪ್ರಶ್ನೆ: ಯಾವುದೇ ವ್ಯಕ್ತಿ ಆದಾಯ ತೆರಿಗೆಗೆ ಒಳಗಾದಲ್ಲಿ, ತಾನು ಪಡೆದ ಗೃಹಸಾಲದ ಕಂತಿಗಿಂತ ಹೆಚ್ಚಿನ ಹಣ ತುಂಬುವುದಾಗಲಿ, ಅಥವಾ ಅವಧಿಗೆ ಮುನ್ನ ಸಾಲ ತೀರಿಸುವುದಾಗಲೀ ಇವೆರಡೂ ಜಾಣತನವಲ್ಲ. ನೀವು ಹೆಚ್ಚಿನ ಆದಾಯ ತೆರಿಗೆ (ಶೇ. 30) ಕೊಡುವವರಾದ್ದರಿಂದ, ಸಾಲ ಅವಧಿಗೆ ಮುನ್ನ ತೀರಿಸುವ ಪ್ರಯತ್ನ ಮಾಡಬೇಡಿ.
 
 ಹಿಂದೆ ನೀವು ಪಡೆದ ಸಾಲ ಮುಂದಿನ ಹಣದುಬ್ಬರದ ಅವಧಿಯಲ್ಲಿ ತೀರಿಸುವುದು. ತುಂಬಾ ಲಾಭದಾಯಕ. ನೀವು ಹಣ ಉಳಿಸಿ, ಜೀವನ ಸಂಜೆಯಲ್ಲಿ ಸುಖವಾಗಿ ಬಾಳಿರಿ, ನನ್ನ ಸಲಹೆ ಕಾರ್ಯ ರೂಪಕ್ಕೆ ತಂದು ಹೆಚ್ಚಿನ ಉಳಿತಾಯ ಮಾಡಿದ ನಿಮಗೆ ನನ್ನ ಅಭಿನಂದನೆಗಳು.
 
ಸಂದ್ಯಾ, ಬೆಂಗಳೂರು
lನಾನು ಸದ್ಯ ಕೆಲಸಕ್ಕೆ ಸೇರಿದ್ದೇನೆ. ನನ್ನ ತಿಂಗಳ ಸಂಬಳ ₹ 20,000. ಅದರಲ್ಲಿ ₹ 10000 ನನ್ನ ಖರ್ಚಿಗೆ ಬಳಸುತ್ತೇನೆ. ಉಳಿದ ₹ 10000 ನಾನು ಉಳಿಸಬಹುದು. ಹೇಗೆ ಉಳಿತಾಯ ಮಾಡಲಿ ನನಗೆ ಉಳಿಸಲು ಸಾಧ್ಯವೇ? 
 
ಉತ್ತರ: ನಿಮಗೆ ₹ 10000 ತಿಂಗಳಿಗೆ ಉಳಿಸಬೇಕು ಎನ್ನುವ ಮನಸ್ಸು ಇದ್ದರೂ, ಇದು ನಿಮ್ಮಿಂದ ಸಾಧ್ಯವೇ ಎನ್ನುವ ಸಂಶಯ ಕೂಡಾ ಪ್ರಶ್ನಾರ್ತಕವಾಗಿ ಉಳಿದಂತಿದೆ. ಯಾವುದೇ ವ್ಯಕ್ತಿ ಅಗತ್ಯತೆಗಿಂತ ಹೆಚ್ಚಿನ ಖರ್ಚು ಮಾಡುವುದರಿಂದ ತನ್ನ ಭವಿಷ್ಯವನ್ನೂ ಕುಂಠಿತಗೊಳಿಸಿದಂತಾಗುತ್ತದೆ.  ಬಲಾಬಲಗಳಲ್ಲಿ ಹಣ ಬಲಕ್ಕಿಂತ ಬೇರೆ ಬಲ ಇನ್ನೊಂದಿಲ್ಲ. ಉಳಿಸಿದ ಹಣ ಕಷ್ಟಕಾಲಕ್ಕೆ ನೆರವಾಗುತ್ತದೆ. 
 
ಅನಗತ್ಯ ಖರ್ಚಿನಿಂದ ಆರೋಗ್ಯ ಕೂಡಾ ಕೆಡುವ ಸಂಭವವಿದೆ. ನೀವು ಅವಿವಾಹಿತರೆಂದು ತಿಳಿಯುತ್ತೇನೆ. ಸದ್ಯಕ್ಕೆ ₹ 7000 ಎರಡು ವರ್ಷಗಳ ಆರ್‌.ಡಿ. ಹಾಗೂ ₹ 3000 ಒಂದು ವರ್ಷದ ಆರ್‌.ಡಿ. ಮಾಡಿರಿ. 
 
₹ 7000 ಆರ್‌.ಡಿ. ನಿಮ್ಮ ಮದುವೆಗೆ ನೆರವಾಗುತ್ತದೆ ಹಾಗೂ ತಂದೆ ತಾಯಿಗಳ ಹೊರೆ ಇದರಿಂದ ಕಡಿಮೆ ಆಗುತ್ತದೆ. ಒಂದು ವರ್ಷದ ₹ 3000 ಆರ್‌.ಡಿ.ಯಿಂದ ವರ್ಷಾಂತ್ಯಕ್ಕೆ ಕನಿಷ್ಠ 10 ಗ್ರಾಮ್‌ ಬಂಗಾರದ ನಾಣ್ಯ ಕೊಳ್ಳಿರಿ. ಈ ಪ್ರಕ್ರಿಯೆ ಮದುವೆತನಕ ಮುಂದುವರಿಸಿರಿ, ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.
 
ಗಂಗಾಧರ್‌ ಪೂಜಾರ್‌, ಧಾರವಾಡ
lನಾನು ಶಿಕ್ಷಕ. ನಾನು ಆನ್‌ ಲೈನ್‌ನಲ್ಲಿ ಫಾರಂ ನಂ. 16 ಆದಾಯ ತೆರಿಗೆ ಕಚೇರಿಗೆ ಸಲ್ಲಿಸಬಹುದೇ? ನಮ್ಮ ಡಿಡಿಒ ನಮ್ಮಿಂದ ವಾರ್ಷಿಕವಾಗಿ ₹ 4500 ವಸೂಲು ಮಾಡುತ್ತಾರೆ.
 
ಉತ್ತರ: ನೌಕರಿಯಲ್ಲಿರುವ ಯಾವುದೇ ವ್ಯಕ್ತಿಗೆ,  ಉದ್ಯೋಗದಾತರು ಫಾರಂ ನಂ. 16, ಏಪ್ರಿಲ್‌ನಲ್ಲಿ ಕೊಡತಕ್ಕದ್ದಾಗಿದ್ದು, ನೀವು ಕೂಡಾ ಡಿಡಿಒ ದಿಂದ ಕೇಳಿ ಪಡೆಯಿರಿ. ಆದಾಯ ತೆರಿಗೆ ರಿಟರ್ನ್‌, ಫಾರಂ ನಂ. 16 ಆಧಾರದ ಮೇಲೆ, ನಿಮಗೆ ಬೇರಾವ ಆದಾಯವಿರುವಲ್ಲಿ (ಬಾಡಿಗೆ–ಠೇವಣಿ ಬಡ್ಡಿ) ಅದನ್ನು ಒಟ್ಟು ಆದಾಯಕ್ಕೆ ಸೇರಿಸಿ, ತೆರಿಗೆ ರಿಟರ್ನ್‌ ಆನ್‌ ಲೈನ್‌ನಲ್ಲಿ ನೀವೇ ಸಲ್ಲಿಸಿರಿ. ಇದರಿಂದ ನಿಮಗೂ ನಿಮ್ಮ ಸಹೋದ್ಯೋಗಿಗಳಿಗೂ ₹ 4500 ತಲಾ ಉಳಿದಂತಾಗುತ್ತದೆ.  
 
ಗುರುಬಸವನ ಗೌಡ ಪಾಟೀಲ್‌, ವಿಜಯಪುರ
lನಾನು ₹ 25 ಲಕ್ಷ ಹಾಗೂ ₹ 30 ಲಕ್ಷ ಹೀಗೆ ಎರಡು ನಿವೇಶನ ಮಾರಾಟ ಮಾಡಬೇಕೆಂದಿದ್ದೇನೆ. ನಿವೇಶನ ಕ್ರಯಕ್ಕೆ ಪಡೆದವರಿಂದ ಈ ಮೊತ್ತ ಕಪ್ಪು ಹಣ (Black Mony) ಆಗದಂತೆ ಹೇಗೆ ಪಡೆಯಲಿ  
 
ಉತ್ತರ: ಸ್ಥಿರ ಆಸ್ತಿ ಮಾರಾಟ ಮಾಡುವಾಗ, ಸ್ಟ್ಯಾಂಪ್‌ಶುಲ್ಕ (Stamp Duty) ಉಳಿಸಲು ಹಾಗೂ ಕಪ್ಪುಹಣ–ಬಿಳಿಹಣ (White Mony) ಮಾಡುವ ದೃಷ್ಟಿಯಿಂದ, ಕೊಂಡುಕೊಳ್ಳುವವರು ಸ್ಥಿರ ಆಸ್ತಿ ಬೆಲೆ ನಿರ್ಧರಿಸಿ, ನಿರ್ಧರಿಸಿದ ಹಣಕ್ಕಿಂತ ಕಡಿಮೆ ಮೊತ್ತಕ್ಕೆ ಆಸ್ತಿ ನೋಂದಾಯಿಸಲು ಪ್ರಯತ್ನಿಸುತ್ತಾರೆ. ಕ್ರಯಪತ್ರದಲ್ಲಿ ನಮೂದಿಸಿದ ಹಣ ಹಾಗೂ ಈಗಾಗಲೇ ನಿರ್ಧರಿಸಿದ ಹಣ ಇವೆರಡರ ವ್ಯತ್ಯಾಸ ನಗದಾಗಿ ಕೊಡುತ್ತಾರೆ. ಇದರಿಂದ ಮಾರಾಟ ಮಾಡಿದ ವ್ಯಕ್ತಿಗೆ ನಷ್ಟವಾಗದಿದ್ದರೂ, ವ್ಯತ್ಯಾಸದ ಹಣ ಕಪ್ಪುಹಣವಾಗಿ ಉಳಿಯುತ್ತದೆ. 
 
ಈ ವಿವರಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನಿಮಗೆ ಬರತಕ್ಕ ಸಂಪೂರ್ಣ ಹಣ, ಡಿ.ಡಿ. ಅಥವಾ ಫೇ ಆರ್ಡ್‌ರ್‌ ಮುಖಾಂತರವೇ ಸ್ವೀಕರಿಸಿ. ಇದೇ ವೇಳೆ ಚೆಕ್‌ ಮುಖಾಂತರ ಎಂದಿಗೂ ಸ್ವೀಕರಿಸಬೇಡಿ, ಖಾತೆಯಲ್ಲಿ ಹಣವಿಲ್ಲದೆ, ಚೆಕ್‌ ಕೊಡುವವರ ಸಂಖ್ಯೆ ಬಹಳವಿರುತ್ತದೆ. 
 
ಇದರಿಂದ ಮೋಸಹೋಗುವ ಸಂದರ್ಭ ಕೂಡಾ ಇದೆ. ಎರಡೂ ನಿವೇಶನಗಳಿಂದ ಬರುವ ಒಟ್ಟು ಮೊತ್ತ ₹ 50 ಲಕ್ಷವನ್ನು ಎನ್‌ಎಚ್‌ಎಐ ಅಥವಾ ಆರ್ಇಸಿ ಬಾಂಡುಗಳಲ್ಲಿ 3 ವರ್ಷಗಳ ಅವಧಿಗೆ ಇರಿಸಿ ಇದರಿಂದ ಸೆಕ್ಷನ್‌ 54ಇಸಿ ಅನ್ವಯ ನೀವು ಬಂಡವಾಳ ವೃದ್ಧಿ ತೆರಿಗೆ (Capital Gain Tax) ಯಿಂದ ವಿನಾಯತಿ ಪಡೆಯಬಹುದು. 
ಇಲ್ಲಿ ವಾರ್ಷಿಕ ಠೇವಣಿ ಬಡ್ಡಿ ದರ ಶೇ 5.25 ಇದೆ. ಈ ಎರಡೂ ಸಂಸ್ಥೆಗಳು ಕೇಂದ್ರ ಸರ್ಕಾರದ ಅಧೀನವಿದ್ದು, ನಿಮ್ಮ ಹಣ ಅಥವಾ ಹೂಡಿಕೆಯಲ್ಲಿ ಭಯಪಡುವ ಅವಶ್ಯವಿಲ್ಲ.
 
ಉಮಾವತಿ, ಬೆಂಗಳೂರು
lನನ್ನ ವಯಸ್ಸು 65. ನನ್ನೊಡನಿರುವ ₹ 1 ಲಕ್ಷ, ₹ 50000 ದಂತೆ 9 ವರ್ಷದ ಮೊಮ್ಮಗಳು, 13 ವರ್ಷದ ಮೊಮ್ಮಗ ಇವರ ಹೆಸರಿನಲ್ಲಿ ಇರಿಸಲು ದಯಮಾಡಿ ತಿಳಿಸಿರಿ.
 
ಉತ್ತರ: ನಿಮ್ಮ ಮೊಮ್ಮಕ್ಕಳ ಹೆಸರಿನಲ್ಲಿ ₹ 50000 ದಂತೆ ವಿಂಗಡಿಸಿ ₹ 1 ಲಕ್ಷ ಹಣವನ್ನು ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ 10 ವರ್ಷಗಳ ಅವಧಿಗೆ, ಒಮ್ಮೆಲೇ ಬಡ್ಡಿಬರುವ, ಅಂದರೆ ಅವಧಿಗೆ ಸರಿಯಾಗಿ ಅಸಲು ಬಡ್ಡಿ ಬರುವ ರಿ ಇನ್‌ವೆಸ್‌್ಟಮೆಂಟ್‌ ಡಿಪಾಸಿಟ್ಟಿನಲ್ಲಿ ತೊಡಗಿಸಿರಿ. ಬ್ಯಾಂಕುಗಳಲ್ಲಿ 10 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಠೇವಣಿ ಇರಿಸಲು ಬರುವುದಿಲ್ಲ.
 
ಹೆಚ್ಚಿನ ಬಡ್ಡಿ ಆಸೆಯಿಂದ ಬೇರೆಯಾದ ಯೋಜನೆಗೆ ಕೈ ಹಾಕಬೇಡಿ. ಬ್ಯಾಂಕುಗಳಲ್ಲಿ ನಿಮ್ಮ ಹಣ ಸುರಕ್ಷಿತವಾಗಿ ಬೆಳೆಯುತ್ತಿರುತ್ತದೆ, ಜೊತೆಗೆ ಈ ಎರಡೂ ಠೇವಣಿಗೆ ವಿಮೆ ಕೂಡಾ ಇರುತ್ತದೆ.
 
ವಾಸಪ್ಪ, ಬೆಂಗಳೂರು
lನನಗೆ ಯುಜಿಸಿಯಿಂದ ರಿಸರ್ಚ್‌ ವರ್ಕ್‌ ಮಾಡಲು ತಿಂಗಳಿಗೆ ₹ 25000+20% ಮನೆ ಬಾಡಿಗೆ ದೊರೆಯುತ್ತದೆ. ಇದರಲ್ಲಿ  ₹ 6000 ಖರ್ಚು ಮಾಡುತ್ತೇನೆ. ನಾನು ಉಳಿತಾಯ ಹೇಗೆ ಮಾಡಲಿ. ನನಗೆ ಆದಾಯ ತೆರಿಗೆ ಅನ್ವಯವಾಗುತ್ತಿದೆಯೇ, ತಿಳಿಸಿರಿ.
 
ಉತ್ತರ: ನಿಮಗೆ ಸಂಶೋಧನೆ ಮಾಡಲು ಹಣ ಹಾಗೂ ಮನೆ ಬಾಡಿಗೆ ಯು.ಜಿ.ಸಿ.ಯಿಂದ ಬರುತ್ತಿದ್ದು, ಈ ಹಣಕ್ಕೆ ತೆರಿಗೆ ಇರುತ್ತದೆ.  ₹ 2.50 ಲಕ್ಷ ವಾರ್ಷಿಕ ಆದಾಯಕ್ಕೆ ತೆರಿಗೆ ಇರುವುದಿಲ್ಲ. ನಿಮಗೆ ಬರುವ ಮನೆ ಬಾಡಿಗೆಯಲ್ಲಿ ಸೆಕ್ಷನ್‌ 10(ಬಿ.ಎ.) ಆಧಾರದ ಮೇಲೆ, ನಿಜವಾಗಿ ನೀವು ಪಡೆಯುತ್ತಿರುವ ಬಾಡಿಗೆ ಅಲೋವೆನ್‌, ಸಂಬಳಕ್ಕಿಂತ ಶೇ. 10 ರಷ್ಟು ಕೊಟ್ಟ ಮನೆ ಬಾಡಿಗೆ ಅಥವಾ  ಸಂಬಳದ ಶೇ. 40 ಈ ಮೂರರಲ್ಲಿ ಅತೀ ಕಡಿಮೆ ಹಣ ವಿನಾಯತಿಗೆ ಒಳಗಾಗುತ್ತದೆ. 
 
ನಿಮ್ಮ ಸಂಶೋಧನಾ ಅವಧಿಗನುಗಣವಾಗಿ ಕನಿಷ್ಠ ₹ 15000 ಆರ್‌.ಡಿ. ಮಾಡಿರಿ. ಇದರಿಂದ ಕಡ್ಡಾಯ ಉಳಿತಾಯವಾಗುತ್ತದೆ. ಜೊತೆಗೆ ದೊಡ್ಡ ಮೊತ್ತ ಕೂಡಾ ಕೈಸೇರುತ್ತದೆ.  ನಿಮಗೆ ಶುಭವಾಗಲಿ.
 
ಮುಕಂದರೆಡ್ಡಿ, ಊರು ಬೇಡ
lನನ್ನ ಹೆಂಡತಿಗೆ 10 ವರ್ಷಗಳ ಹಿಂದೆ, ಅವಳ ತಾತ ಕೊಟ್ಟ ₹ 25 ಲಕ್ಷದಲ್ಲಿ 130X9ರ ನಿವೇಶನ ಕೊಂಡಿದ್ದೆ. ಈಗ ಒಂದು ಚದರ ಅಡಿಗೆ ₹ 4000 ಆಗಿದೆ. ಈ ನಿವೇಶನ ಮಾರಾಟ ಮಾಡಬೇಕೆಂದಿದ್ದೇನೆ. ಹೀಗೆ ಬಂದ ಹನದಲ್ಲಿ ಒಂದು ಮೊತ್ತ ನನ್ನ ಮಗನ ವೈದ್ಯಕೀಯ ಶಿಕ್ಷಣಕ್ಕೆ ಮೀಸಲಾಗಿಡಬೇಕೆಂದಿದ್ದೇನೆ. ಅವನಿಗೆ 11 ವರ್ಷ. ನಾನು ಸ್ವಲ್ಪ ಹಣ ಕೃಷಿ ಜಮೀನು ಕೊಳ್ಳಲು ಬಳಸಬೇಕೆಂದಿರುವೆ. ಉಳಿದ ಹಣ ನನ್ನ ಹೆಂಡತಿ ಹೆಸರಿನಲ್ಲಿ ಬ್ಯಾಂಕ್‌ ಠೇವಣಿ ಮಾಡಬೇಕೆಂದಿದ್ದೇನೆ. ತೆರಿಗೆ ಹಾಗೂ ಮಾರಾಟ ಮಾಡಿದಾಗ ಬರುವ ಹಣ ಪಡೆಯುವ ರೀತಿ ವಿವರವಾಗಿ ತಿಳಿಸಿರಿ.
 
ಉತ್ತರ: ನೀವು ನಿವೇಶನ ಪಡೆಯುವಾಗ ಕೊಟ್ಟ ಮೊತ್ತ ಹಾಗೂ ಈಗ ಮಾರಾಟ ಮಾಡುವಾಗ ಬರುವ ಮೊತ್ತ, ಇವೆರಡರ ವ್ಯತ್ಯಾಸದಲ್ಲಿ 10 ವರ್ಷಗಳ (Cost of Inflation Index), ಲೆಕ್ಕ ಹಾಕಿ ಕಳೆದು, ಉಳಿದ ಹಣಕ್ಕೆ ಸರಾಸರಿ ಶೇ. 20 (Flat 20%) ತೆರಿಗೆ ಕೊಡಬೇಕಾಗುತ್ತದೆ. 
 
ಹೀಗೆ ಬಂದಿರುವ ಲಾಭದಲ್ಲಿ ಗರಿಷ್ಠ ₹ 50 ಲಕ್ಷ  ಎನ್‌ಎಚ್‌ಎಐ – ಆರ್ಇಸಿ ಬಾಂಡುಗಳಲ್ಲಿ ಮೂರು ವರ್ಷಗಳ ಅವಧಿಗೆ ಇರಿಸಿ, ₹ 50 ಲಕ್ಷ ಒಟ್ಟು ಲಾಭದಲ್ಲಿ ಕಳೆದು ಕೂಡಾ ತೆರಿಗೆ ಸಲ್ಲಿಸಬಹುದು. 
 
ನಿಮ್ಮ ಮಗ ಅಪ್ತಾಪ್ತ ವಯಸ್ಕನಾದ್ದರಿಂದ, ಅವನ ಹೆಸರಿನಲ್ಲಿ ಠೇವಣಿ ಇರಿಸಿದರೂ, ಹಾಗೆ ಇರಿಸಿದ ಠೇವಣಿ ಮೇಲಿನ ಬಡ್ಡಿ ನಿಮ್ಮ ಹೆಂಡತಿ ಆದಾಯಕ್ಕೆ ಸೇರಿಸಿ ಆದಾಯ ತೆರಿಗೆ ಕೊಡಬೇಕಾಗುತ್ತದೆ. ತೆರಿಗೆಗೆ ಭಯಪಟ್ಟು ಉಳಿತಾಯ ಮಾಡದಿರುವುದು ಜಾಣತನವಲ್ಲ. 
 
ಮಗುವಿನ ಹೆಸರಿನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಹಣ ತೆರೆದಿಡುವ ನಿಮ್ಮ ಕ್ರಮಕ್ಕೆ ನಾನು ಖುಷಿ ಪಡುತ್ತೇನೆ. ಇನ್ನು ಮುಂದೆ  DONATION SEAT ಇರಲಾರದು. 
ಭಾರತ ಸರ್ಕಾರ ನಡೆಸುವ NEET ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು. ಏನೇ ಇರಲಿ ನಿಮ್ಮ ಉದ್ದೇಶ ತುಂಬಾ ಚೆನ್ನಾಗಿದೆ ಹಾಗೂ ವೈದ್ಯಕೀಯ ಶಿಕ್ಷಣ ತುಂಬಾ ದುಬಾರಿಯಾಗಿರುವುದರಿಂದ ಈಗಿನಿಂದಲೇ ಸರಿಯಾದ ಪ್ಲಾನ್ ಮಾಡುವ ಅವಶ್ಯವಿದೆ. 
 
ಬಹಳ ದೊಡ್ಡ ಮೊತ್ತ ಬರುವುದರಿಂದ ಅಷ್ಟೂ ಹಣ ಠೇವಣಿ ರೂಪದಲ್ಲಿ ಇರಿಸುವುದಕ್ಕಿಂತ ಕನಿಷ್ಠ 30X40 ನಿವೇಶನವನ್ನಾದರೂ ಖರೀದಿಸುವುದು ಉತ್ತಮ. ನಗದು ರೂಪದಲ್ಲಿ (Liquid) ಸಂಪತ್ತನ್ನು ದೀರ್ಘಕಾಲ  (Wealth) ಕಾಪಾಡಿಕೊಂಡು ಬರುವುದು ಸ್ವಲ್ಪ ಕಷ್ಟದ ಕೆಲಸ, ಜೊತೆಗೆ ಸ್ಥಿರ ಆಸ್ತಿಗೆ ಮಿಗಿಲಾದ ಹೂಡಿಕೆ ಬೇರೊಂದಿಲ್ಲ. 
ಪರ್ಯಾಯವಾಗಿ ಕೃಷಿ ಜಮೀನು ಕೂಡಾ ಕೊಂಡು ಕೊಳ್ಳಬಹುದು. ಆದರೆ ಹೀಗೆ ಕೃಷಿ ಜಮೀನು ಕೊಂಡು ಕೊಳ್ಳುವ ಬಳಸಲು ಹಣದಿಂದ ಕ್ಯಾಫಿಟಲ್ ಗೇನ್ ಟ್ಯಾಕ್ಸ್ ವಿನಾಯಿತಿ ಪಡೆಯುವಂತಿಲ್ಲ.
 
ಆನಂದ, ಬೆಂಗಳೂರು
lಗೃಹ ಸಾಲ ಪಡೆದಾಗ, ಬದಲಾಗುವ ಬಡ್ಡಿಯಾದಲ್ಲಿ, ಬಡ್ಡಿದರ ಕಡಿಮೆ ಆಗುವಾಗ, ಬ್ಯಾಂಕಿನಲ್ಲಿ ದಂಡದ ಫೀಸು ವಸೂಲಿ ಮಾಡುತ್ತಾರೆ. ನಿಮ್ಮ ಪ್ರಕಾರ ಮಾಡಲಿಕ್ಕಿಲ್ಲ. ದಯಮಾಡಿ ವಿಚಾರ ತಿಳಿಸಿರಿ.
 
ಉತ್ತರ: ರೇಪೋರೇಟ್ (Repo Rate)  ಭಾರತೀಯ ರಿಸರ್ವ್ ಬ್ಯಾಂಕ್ ಕಡಿಮೆ ಮಾಡಿದಾಗ, ಗೃಹಸಾಲ, ಬದಲಾಗುವ ಬಡ್ಡಿಯಲ್ಲಿ ಇರುವಲ್ಲಿ ಬ್ಯಾಂಕುಗಳು, ಬಡ್ಡಿದರದಲ್ಲಿ ಕಡಿತ ಮಾಡುವುದು ಸಹಜ. 
 
ಬ್ಯಾಂಕುಗಳು ಇಂತಹ ತೀರ್ಮಾನ ತೆಗೆದು ಕೊಂಡಾಗ, ಸಾಮೂಹಿಕವಾಗಿ ತಾವು ಕೊಟ್ಟಿರುವ ಎಲ್ಲಾ ಗೃಹಸಾಲಗಳಿಗೆ ಅನ್ವಹಿಸುವಂತೆ   ಅಳವಡಿಸಿರುವ ಸಾಫ್ಟ್‌ವೇರ್‌ನಲ್ಲಿ ಮಾರ್ಪಾಡು ಮಾಡುತ್ತಾರೆ. ಇದರಿಂದಾಗಿ ಪ್ರತೀ ಗೃಹಸಾಲ ಪಡೆದ ವ್ಯಕ್ತಿಯ ಸಾಲದ ಖಾತೆ ಪ್ರತ್ಯೇಕವಾಗಿ ಬ್ಯಾಂಕಿನವರು ಲೆಕ್ಕ ಹಾಕುವ ಅವಶ್ಯವಿಲ್ಲ. 
 
ದಂಡ ಎನ್ನುವ ಪದದ ಅರ್ಥ, ತಪ್ಪು ಮಾಡಿದಾಗ ವಿಧಿಸುವ ಶಿಕ್ಷೆ. ಇಲ್ಲಿ ಗ್ರಾಹಕನ ತಪ್ಪೇನು ಇರುವುದಿಲ್ಲ. ಸಾಮಾಜಿಕ ಪ್ರಜ್ಞೆಯಿಂದ, ಆದ್ಯತಾರಂಗದ ಸಾಲಗಳಿಗೆ ಆದಷ್ಟು ಹೊರೆ ಆಗದಂತೆ, ಭಾರತ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್, ಕಾಲಕಾಲಕ್ಕೆ ತೆಗೆದುಕೊಳ್ಳುವ ನಿರ್ಣಯ, ನಿರ್ಧಾರಗಳಿಗೆ ಬ್ಯಾಂಕ್ ಹಾಗೂ ಗ್ರಾಹಕರು ಬದ್ದರಾಗಲೇಬೇಕು, ಈ ಎಲ್ಲ ಕಾರಣಗಳಿಂದ ಬಡ್ಡಿ ದರ ಕಡಿಮೆ ಆದಾಗ ದಂಡದ ಫೀಝ್ ಗ್ರಾಹಕರಿಂದ ವಸೂಲು ಮಾಡುವುದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ.
 
ಆರ್. ಪ್ರಸಾದ್, ಬೆಂಗಳೂರು
lನಾನು ನಿವೃತ್ತ ಸರ್ಕಾರಿ ನೌಕರ. ನಿವೃತ್ತಿಯಿಂದ ₹ 17 ಲಕ್ಷ ಬಂದಿದೆ. ಮಾಸಿಕ ಪಿಂಚಣಿ ₹ 18000–00. ಮನೆ, ನಿವೇಶನ ಅಥವಾ ಇನ್ನಿತರ ಯಾವುದೇ ವರಮಾನ ಇರುವುದಿಲ್ಲ. ಬಾಡಿಗೆ ಮನೆಯಲ್ಲಿ ವಾಸ. ಮನೆ ಬಾಡಿಗೆ ₹ 8000–00. ನನಗೆ ಒಬ್ಬ ಮಗಳು ಹಾಗೂ ಒಬ್ಬ ಮಗ. ಮಗಳಿಗೆ ಮದುವೆಯಾಗಿ, 10 ವರ್ಷದ ಹೆಣ್ಣು, 5 ವರ್ಷದ ಗಂಡು ಮಕ್ಕಳಿದ್ದಾರೆ. ಮೊಮ್ಮಕ್ಕಳಿಗೆ ತಲಾ ₹ 25000 ನೀಡಲು ನಿಮ್ಮ ಸಲಹೆ ಬೇಕಾಗಿದೆ. ಮಗ ಸಾಫ್ಟ್‌ವೇರ್ ಇಂಜಿನಿಯರ್, ವಯಸ್ಸು 27. ಅವಿವಾಹಿತ. ನಿಮ್ಮ ಸಲಹೆಯಂತೆ ಸೆಕ್ಷನ್ 80ಸಿ ಅಡಿಯಲ್ಲಿ ₹ 1.50 ಲಕ್ಷ  ಉಳಿತಾಯ ಮಾಡುತ್ತೇನೆ. ನನ್ನ ನಿವೃತ್ತ ಜೀವನಕ್ಕೆ ಹೂಡಿಕೆ ಮಾಡಲು ಕೂಡಾ ಸಲಹೆ ನೀಡಿರಿ.
 
ಉತ್ತರ: ನೀವು ನಿಮ್ಮ ಇಬ್ಬರು ಮೊಮ್ಮಕ್ಕಳಿಗೂ ಚೆಕ್ ಮುಖಾಂತರ ತಲಾ ₹ 25000 ಕೊಡಿರಿ. ಈ ಚೆಕ್ ಆಧಾರದ ಮೇಲೆ, ಈ ಮೊತ್ತ ಬ್ಯಾಂಕಿನಲ್ಲಿ 10 ವರ್ಷಗಳ ಅವಧಿಗೆ, ಒಮ್ಮೆಲೇ ಬಡ್ಡಿ ಅಸಲು ಪಡೆಯುವ ರಿ ಇನ್ವೆಸ್ಟ್‌ಮೆಂಟ್ ಠೇವಣಿಯಲ್ಲಿ ಇರಿಸಿರಿ. ಠೇವಣಿಗೆ ತಂದೆ, ಗಾರ್ಡಿಯನ್ ಆಗಿ ಸಹಿ ಮಾಡಲಿ. ಈ ರೀತಿ ಮಾಡುವುದರಿಂದ, ಭದ್ರತೆ,ಉತ್ತಮ ವರಮಾನ ಹಾಗೂ ನಿಮ್ಮ ಉತ್ತಮ ಧ್ಯೇಯ ಸಫಲವಾಗುತ್ತದೆ. ಮಕ್ಕಳ ವಿದ್ಯಾಭ್ಯಾಸ, ಮದುವೆಗೆ ನೆರವಾಗುತ್ತದೆ.

ನಿಮಗೆ ಪಿಂಚಣಿ ಬಹಳ ಬಾರದಿರುವುದರಿಂದ, ನೀವು ನಿವೃತ್ತಿಯಿಂದ ಪಡೆದ ಹಣವನ್ನು ನಿಮಗೆ ಸಮೀಪದ ಬ್ಯಾಂಕಿನಲ್ಲಿ ಎಫ್.ಡಿ. ಮಾಡಿ, ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಿರಿ. ತಿಂಗಳು ತಿಂಗಳು ಬಡ್ಡಿ ಪಡೆಯಲು ಸಾಧ್ಯವಾದರೂ, ಇದರಿಂದ ಸ್ವಲ್ಪ ಬಡ್ಡಿ ಕಡಿಮೆ ಬರುತ್ತದೆ. ನನ್ನ ಸಲಹೆ ಸ್ವೀಕರಿಸಿ, ಸೆಕ್ಷನ್ 80ಸಿ ಲಾಭ ಪಡೆದ ನಿಮ್ಮ ಮಗನಿಗೆ ಧನ್ಯವಾದಗಳು.
 
ಗೋಪಿನಾಥ್, ಬಳ್ಳಾರಿ
ಪ್ರಶ್ನೆ: ವಯಸ್ಸು 72. ಸರ್ಕಾರಿ ನಿವೃತ್ತಾಧಿಕಾರಿ. ನನ್ನ ವಾರ್ಷಿಕ ಆದಾಯ ₹ 3.61 ಲಕ್ಷ. ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಲು ಮಾರ್ಗದರ್ಶನ ಮಾಡಿರಿ. ನಾನು ವಾರ್ಷಿಕ ರೂ. 78000 ಮನೆ ಬಾಡಿಗೆ ಕೊಡುತ್ತೇನೆ. ಈ ಮೊತ್ತಕ್ಕೆ ತೆರಿಗೆಯಲ್ಲಿ ವಿನಾಯಿತಿ ಪಡೆಯಬಹುದೇ? 15ಎಚ್. ಫಾರಂ ತುಂಬಿದರೆ, ಕಟ್ಟಿದ ತೆರಿಗೆ ವಾಪಸು ಪಡೆಯಬಹುದೇ? ದಯಮಾಡಿ ತಿಳಿಸಿರಿ.
 
ಉತ್ತರ: ನೀವು ಹಿರಿಯ ನಾಗರಿಕರಾದ್ದರಿಂದ ₹ 3 ಲಕ್ಷಗಳ ತನಕ ಆದಾಯದಲ್ಲಿ ವಿನಾಯಿತಿ ಇದ್ದು, ಮಿಕ್ಕಿದ ಆದಾಯ ಅಂದರೆ ₹ 61000 ವನ್ನು 5 ವರ್ಷಗಳ ಬ್ಯಾಂಕ್ ಠೇವಣಿ ಇರಿಸಿದಲ್ಲಿ, ಸಂಪೂರ್ಣ ತೆರಿಗೆ ವಿನಾಯತಿ ಪಡೆಯಬಹುದು.

ಆದರೆ, 31–7–2017 ರೊಳಗೆ ತೆರಿಗೆ ರಿಟರ್ನ್ ಸಲ್ಲಿಸಬೇಕು. ನೀವು ಕೊಡುವ ಮನೆ ಬಾಡಿಗೆ ಅಥವಾ ಔಷಧೋಪಚಾರಗಳ ಖರ್ಚು ತೆರಿಗೆ ವಿನಾಯಿತಿ ಪಡೆಯಲು ಬರುವುದಿಲ್ಲ. 15ಎಚ್ ಫಾರಂ, ಬ್ಯಾಂಕಿಗೆ ಸಲ್ಲಿಸಿದರೆ ಟಿ.ಡಿ.ಎಸ್. ಠೇವಣಿಯಿಂದ ಬರುವ ಬಡ್ಡಿಯಲ್ಲಿ ಮಾಡುವುದಿಲ್ಲ. ಒಂದು ವೇಳೆ ಹೆಚ್ಚಿನ ತೆರಿಗೆ ಸಲ್ಲಿಸಿ, ವಾಪಾಸು ಪಡೆಯಲು ತೆರಿಗೆ ರಿಟರ್ನ್ ತುಂಬಬೇಕೇ ವಿನಹ 15ಎಚ್ ನಿಂದ ಇದು ಸಾಧ್ಯವಿಲ್ಲ.
 
ಯು.ಪಿ.ಪುರಾಣಿಕ್‌, ಬ್ಯಾಂಕಿಂಗ್ ಹಣಕಾಸು ತಜ್ಞ, uppuranik@gmail.com
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT