ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯವಾಗಲಿ ಸುಖ, ಸಂಪತ್ತು

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಅಕ್ಷಯ ಎಂದರೆ ಕ್ಷಯವಿಲ್ಲದ್ದು, ಕಡಿಮೆಯಿಲ್ಲದ್ದು, ಕೊನೆಯಿಲ್ಲದ್ದು... 
ಅಂಥದ್ದೊಂದು ಭಾವ ನಮ್ಮ ಕುಟುಂಬದ ಸುಖ, ಸಂಪತ್ತನ್ನಾವರಿಸಿ, ದ್ವಿಗುಣಗೊಳ್ಳಲಿ ಎಂಬುದೇ ಅಕ್ಷಯ ತೃತೀಯದ ಆಶಯ.
 
ಶುಭಾರಂಭ, ನಿರಂತರ ವೃದ್ಧಿಯ ಪ್ರತೀಕವಾಗಿರುವ ಈ ದಿನದಂದು ಮದುವೆ, ಉಪನಯನ, ದಾನ, ಪೂಜೆಗಳ ಜತೆಗೆ ಚಿನ್ನ ಖರೀದಿಯೂ ನಡೆಯುತ್ತದೆ. ಅಂದು ಚಿನ್ನ ಖರೀದಿಸಿದರೆ ಅದು ವೃದ್ಧಿಯಾಗಿ ಮನೆಯಲ್ಲಿ  ಲಕ್ಷ್ಮೀ ನೆಲೆಸುತ್ತಾಳೆ  ಎಂಬುದು ನಂಬಿಕೆ.
 
ಈ ನಂಬಿಕೆಗೆ ಇಂಬುಗೊಡುವಂತೆ ಇತ್ತೀಚಿನ ವರ್ಷಗಳಲ್ಲಿ ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿ ಭರಾಟೆಯಿಂದ ನಡೆಯುತ್ತಿದೆ.  ಈ ಬಾರಿ ಅಕ್ಷಯ ತೃತೀಯ ವಾರಾಂತ್ಯದ ದಿನಗಳಾದ ಶುಕ್ರವಾರ (ಏ.28) ಮತ್ತು ಶನಿವಾರ (ಏ.29) ಬಂದಿರುವುದರಿಂದ ಚಿನ್ನದಂಗಡಿಯ ಮಾಲೀಕರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ.
 
 
‘ವಾರದ ಮಧ್ಯೆ ಬರುವ ಅಕ್ಷಯ  ತೃತೀಯಕ್ಕೂ ವಾರಾಂತ್ಯದಲ್ಲಿ ಬರುವ ಅಕ್ಷಯ ತೃತೀಯದ ವಹಿವಾಟಿಗೂ ವ್ಯತ್ಯಾಸವಿದೆ. ವಾರಾಂತ್ಯದಲ್ಲಿ ಖರೀದಿ ಜೋರು ಇರುತ್ತದೆ. ಹಾಗಾಗಿ, ವರ್ತಕರಿಗೆ ಇದು ಸಂತಸದ ಸುದ್ದಿ’ ಎನ್ನುತ್ತಾರೆ ಸಂಪಂಗಿರಾಮ ನಗರದ ಚಿನ್ನಾಭರಣ ವರ್ತಕ ವೆಂಕಟರಾಮಾಚಾರಿ.
 
ನೋಟುಗಳ  ಅಮಾನ್ಯೀಕರಣ, ವಾರದ ಗೊಂದಲ, ಡೆಬಿಟ್, ಕ್ರೆಡಿಟ್ ಕಾರ್ಡ್‌, ಕ್ಯಾಶ್ ಇತ್ಯಾದಿ ಗೊಂದಲಗಳ ನಡುವೆಯೂ ಹೆಂಗಳೆಯರು ಚಿನ್ನದ ಖರೀದಿಯಲ್ಲಿ ಹಿಂದೆ ಬಿದ್ದಿಲ್ಲ ಎನ್ನುತ್ತವೆ ಚಿನ್ನದಂಗಡಿಯ  ಚಿತ್ರಣಗಳು.
 
ಕೆಲವರು ಹತ್ತು ದಿನ ಮುಂಗಡವಾಗಿಯೇ ಬುಕ್ ಮಾಡಿ ಚಿನ್ನದ ದರವನ್ನು ಬ್ಲಾಕ್‌ ಮಾಡಿಸಿದ್ದರೆ, ಮತ್ತೆ ಕೆಲವರು ಅಂದಿನ ದರದಲ್ಲೇ ಚಿನ್ನ ಖರೀದಿಯ ಸಂಭ್ರಮದಲ್ಲಿದ್ದಾರೆ. 
 
‘ಮುಂಗಡ ಖರೀದಿ, ಬುಕಿಂಗ್ ಇವೆಲ್ಲಾ ಆಯಾ ಚಿನ್ನದಂಗಡಿಗಳಿಗೆ ಬಿಟ್ಟಿದ್ದು. ಅದು ಅವರವರ ಲೆಕ್ಕಾಚಾರ. ಹಾಗಾಗಿ, ಎಷ್ಟು ಬುಕಿಂಗ್ ಆಗಿದೆ ಎನ್ನುವ ನಿಖರ ಮಾಹಿತಿ ನೀಡಲಾಗದು. ಅಂತೆಯೇ ಇಂತಿಷ್ಟೇ ಖರೀದಿ ನಡೆಯಬಹುದು ಎಂದು ನಿಖರವಾಗಿ ಹೇಳಲಾಗದು’ ಎನ್ನುತ್ತಾರೆ ಬೆಂಗಳೂರು ಜ್ಯುವೆಲೆರ್ಸ್ ಅಸೋಸಿಯೇಷನ್ ಅಧ್ಯಕ್ಷ ವೈ.ಎಸ್‌. ರವಿಕುಮಾರ್.
 
 
‘ಸರ್ಕಾರ, ಹೆಚ್ಚು ನಗದು ನೀಡಿ ಚಿನ್ನ ಖರೀದಿಗೆ ಕಡಿವಾಣ ಹಾಕಿದೆಯೇ ವಿನಾ  ಕ್ರೆಡಿಟ್,  ಡೆಬಿಟ್ ಕಾರ್ಡ್‌, ಚೆಕ್‌ಗಳ ಮೇಲೆ ಕಡಿವಾಣ ಹಾಕಿಲ್ಲ. ಎರಡು ಲಕ್ಷಕ್ಕಿಂತ ಹೆಚ್ಚು ನಗದು ನೀಡಿ ಚಿನ್ನ ಖರೀದಿಸುವಂತಿಲ್ಲ. ಕಪ್ಪುಹಣ ತಡೆಯಲು ಮಾತ್ರ ಈ ಕ್ರಮ ಕೈಗೊಳ್ಳಲಾಗಿದೆಯೇ ವಿನಾ ಚಿನ್ನ ಖರೀದಿಗೆ ಅಲ್ಲ ಎಂಬುದನ್ನು ಗ್ರಾಹಕರು ಗಮನಿಸಬೇಕು’ ಎನ್ನುತ್ತಾರೆ ಪ್ರತಿಭಾ ಜ್ಯುವೆಲರ್ಸ್‌ ಮಾಲೀಕರಲ್ಲಿ ಒಬ್ಬರಾದ ಎಸ್‌.ಎನ್‌. ಶರತ್‌ಕುಮಾರ್.
 
 
‘ಈ ವರ್ಷ ಸಂಕ್ರಾಂತಿ ಪುರುಷ ಬಂಗಾರದ ಲೋಟ ಹಿಡಿದು ಮೊಸರನ್ನ ತಿನ್ನುತ್ತಿದ್ದಾನೆ. ಬೆಳ್ಳಿ ಆಭರಣಗಳನ್ನು ಧರಿಸಿದ್ದಾನೆ.  ಆತ ಏನು ಮುಟ್ಟಿದರೂ ಅದು ಅಭಿವೃದ್ಧಿಯಾಗುತ್ತದೆ. ಅಕ್ಷಯ ತೃತೀಯ  ಯಾವುದೇ ದಿನ ಬರಲಿ ಚಿನ್ನ ಖರೀದಿಸುವವರು ಖರೀದಿ ಮಾಡೇ ಮಾಡುತ್ತಾರೆ’ ಎಂಬುದು ಅವರ ಅಚಲ ನಂಬಿಕೆ.
 
ಕೆಲವು ಅಂಗಡಿಗಳಲ್ಲಿ ಮುಂಚಿತವಾಗಿ ಬುಕಿಂಗ್ ಆಗಿದೆ. ಕೆಲವರು ಇದನ್ನು ಮಾಡುವುದಿಲ್ಲ. ಅಕ್ಷಯ ತೃತೀಯ ದಿನದಂದು ಅಂಗಡಿಗೆ ಹೋಗಲಾಗದವರು ಮುಂಚಿತವಾಗಿಯೇ ಆಭರಣ ಖರೀದಿಸಿ ಮನೆಯಲ್ಲಿಟ್ಟುಕೊಳ್ಳುತ್ತಾರೆ. ಅಂದಿನ ದಿನ ದೇವರ ಮುಂದೆ ಚಿನ್ನ ಇಟ್ಟು ಪೂಜೆ ಮಾಡಿ ದೇವರಿಗೆ ಹಾಕುತ್ತಾರೆ ಇಲ್ಲವೇ ತಾವೇ  ಧರಿಸುತ್ತಾರೆ.
 
‘ಇದು ಒಳ್ಳೆಯ ವಾರ, ದಿನ, ಘಳಿಗೆ. ಅಕ್ಷಯ ತೃತೀಯ ದಿನದಂದು ಲಗ್ನವನ್ನೇ ನೋಡದೆ ಮದುವೆಯಾಗುವವರಿದ್ದಾರೆ, ಗೃಹಪ್ರವೇಶ ಮಾಡುವವರಿದ್ದಾರೆ. ನಿಮ್ಮ ಕೈಲಿ ಹಣ ಇದೆ, ಮನೆಯ ಯಜಮಾನರ ತಕರಾರು ಇಲ್ಲ ಅಂದ್ರೆ ಯಾಕೆ ಯೋಚನೆ ಮಾಡ್ತೀರಿ. ಸುಮ್ಮನೆ ಚಿನ್ನ ಕೊಂಡುಕೊಳ್ಳಿ’ ಎಂಬುದು ಶರತ್‌ಕುಮಾರ್ ಅವರ  ಹಿತನುಡಿ. 
 
‘ನಮ್ಮಲ್ಲಿ ಮುಂಗಡವಾಗಿ ಬುಕ್ ಮಾಡಿದರೆ ಆ ಬೆಲೆಯಲ್ಲೇ ಆಭರಣ ಖರೀದಿಸಬಹುದು. ಒಂದು ವೇಳೆ ಚಿನ್ನದ ದರದಲ್ಲಿ ಇಳಿಕೆಯಾದರೆ ಕಡಿಮೆ ದರದಲ್ಲೇ ಗ್ರಾಹಕರಿಗೆ ನೀಡುತ್ತೇವೆ. ಚಿನ್ನದ ದರ ಹೆಚ್ಚಾದರೂ ಮುಂಗಡ ದರದಲ್ಲಿಯೇ ನೀಡುತ್ತೇವೆ. ಇದು ಎಲ್ಲಾ ರೀತಿಯಿಂದಲೂ ಗ್ರಾಹಕರಿಗೆ ಲಾಭ.
 
ಮುಂಗಡವಾಗಿ ಹಣ ನೀಡಿದ್ದರಿಂದ ಅದೇ ದರದಲ್ಲಿ ಬ್ಲಾಕ್ ಮಾಡಿರುತ್ತೇವೆ. ಈ ಕೊಡುಗೆ ಏಪ್ರಿಲ್ 8ರಿಂದ 30ರವರೆಗೆ ಇರುತ್ತದೆ’ ಎನ್ನುತ್ತಾರೆ ಜೋಯ್‌ಅಲುಕ್ಕಾಸ್ ಕರ್ನಾಟಕದ ಮಾರ್ಕೆಟಿಂಗ್ ಮುಖ್ಯಸ್ಥ ಎಸ್. ಸುಧೀಶ್‌.
 
 
‘ಕಳೆದ ವರ್ಷ ಎಂ.ಜಿ. ರಸ್ತೆಯ ಜೋಯ್‌ಅಲುಕ್ಕಾಸ್ ಆಭರಣ ಮಳಿಗೆಯಲ್ಲಿ ಸುಮಾರು 16 ಕೆ.ಜಿ.ಯಷ್ಟು ಆಭರಣ ಖರೀದಿಯಾಗಿತ್ತು. ಈ ಬಾರಿ ಹಿಂದಿನದಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಖರೀದಿಯಾಗುವ ನಿರೀಕ್ಷೆ ಇದೆ.  ₹ 50 ಸಾವಿರಕ್ಕಿಂತ ಹೆಚ್ಚಿನ ಖರೀದಿಗೆ (ನಗದು) ಪಾನ್ ಕಾರ್ಡ್‌ ವಿವರ ಕಡ್ಡಾಯ. ನಮ್ಮಲ್ಲಿ ಸರ್ಕಾರದ ನಿಯಮಗಳಂತೆಯೇ ವಹಿವಾಟು ನಡೆಯುತ್ತದೆ’ ಎನ್ನುತ್ತಾರೆ ಅವರು. 
 
‘ನೋಡಿ ಇಂಥದ್ದೇ ದಿನ ಚಿನ್ನ ಖರೀದಿಸಬೇಕೆಂಬ ನಿಯಮವೇನೂ  ನಮ್ಮನೆಯಲ್ಲಿಲ್ಲ. ಆದರೆ, ಅಕ್ಷಯ ತೃತೀಯ ನೆಪದಲ್ಲಾದರೂ ತುಸು ಚಿನ್ನ ಖರೀದಿಸುತ್ತೇವೆ. ಮನೆಯ ಹೆಣ್ಮಕ್ಕಳಿಗೆ ಅದು ಸಂತಸ ನೀಡುವುದಲ್ಲದೇ,  ಆಪತ್ಕಾಲಕ್ಕೆ ಬಂಧುವೂ ಹೌದು’ ಎನ್ನುತ್ತಾ ಚಿನ್ನದ ಖರೀದಿಯ ಹಿಂದಿನ ನಿಜವಾದ ಕಾರಣ ಬಿಚ್ಚಿಡುತ್ತಾರೆ ಗೃಹಿಣಿ ಅನಸೂಯಮ್ಮ.
 
ಕಳೆದ ವರ್ಷ ಅಕ್ಷಯ ತೃತೀಯದಂದು ಸುಮಾರು ರಾಜ್ಯಾದ್ಯಂತ 2,236 ಕೆ.ಜಿ.ಯಷ್ಟು ಚಿನ್ನ ಖರೀದಿಯಾಗಿತ್ತು. ಈ ಬಾರಿ ಶೇ 30ರಿಂದ 40ರಷ್ಟು ಖರೀದಿ ಹೆಚ್ಚಾಗಬಹುದು ಎಂಬುದು ವರ್ತಕರ ಅಂದಾಜು.
 
‘ಪ್ರಸ್ತುತ ಚಿನ್ನದ ಬೆಲೆ ಒಂದು ಗ್ರಾಂಗೆ ₹2,793 (ಏ.25) ಇದ್ದು, ಅಕ್ಷಯ ತೃತೀಯ ದಿನದಂದು ದರ ಏರಿಕೆ, ಇಳಿಕೆ ಬಗ್ಗೆ ನಿಖರವಾಗಿ ಹೇಳಲಾಗದು. ದರ ಏರಿದರೂ ಗ್ರಾಂಗೆ ₹ 25ರಿಂದ 30  ಜಾಸ್ತಿಯಾಗಬಹುದು. ಅದು ಗ್ರಾಹಕರಿಗೆ ಅಷ್ಟಾಗಿ ಹೊರೆಯಾಗಲಾರದು’ ಎನ್ನುತ್ತವೆ ಚಿನಿವಾರಪೇಟೆಯ ಮೂಲಗಳು.
ಚಿತ್ರ: ರಂಜು ಪಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT