ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನವಭಾರತ’ ನಿರ್ಮಾಣ ಸುಧಾರಣೆಯ ಹೊಸ ಭರವಸೆ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ನವಭಾರತ’ ನಿರ್ಮಾಣಕ್ಕಾಗಿ 15 ವರ್ಷಗಳ ಸುದೀರ್ಘ ಮುನ್ನೋಟವನ್ನು ನೀತಿ ಆಯೋಗ ಮಂಡಿಸಿದೆ. 2032ರ ಒಳಗೆ ಸಂಪದ್ಭರಿತ, ಸುಶಿಕ್ಷಿತ, ಆರೋಗ್ಯವಂತ, ಸುರಕ್ಷಿತ, ಭ್ರಷ್ಟಾಚಾರಮುಕ್ತ, ಇಂಧನ ಸಮೃದ್ಧ, ಸ್ವಚ್ಛ ಪರಿಸರವಿರುವ ಹಾಗೂ ಜಾಗತಿಕವಾಗಿ ಪ್ರಭಾವಿಯಾಗಿರುವ ರಾಷ್ಟ್ರವಾಗಿ ಭಾರತವನ್ನು ಪರಿವರ್ತಿಸುವ ಗುರಿ ಈ ಮುನ್ನೋಟದಲ್ಲಿದೆ. ಆದರೆ ಇದನ್ನು ಸಾಧ್ಯವಾಗಿಸುವುದು ಹೇಗೆ ಎಂಬುದು ಪ್ರಶ್ನೆ. ಭಾನುವಾರ ನಡೆದ  ನೀತಿ ಆಯೋಗದ ನಿರ್ವಹಣಾ ಮಂಡಳಿಯ ಮೂರನೇ ಸಭೆಯಲ್ಲಿ ಯೋಜನೆಗಳು ಹಾಗೂ ಮುನ್ನೋಟದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯಗಳ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿದ್ದಾರೆ. 15 ವರ್ಷಗಳ ಸುದೀರ್ಘ ಮುನ್ನೋಟ, ಏಳು ವರ್ಷಗಳ ಮಧ್ಯಮಾವಧಿ ಕಾರ್ಯತಂತ್ರ ಮತ್ತು ಮೂರು ವರ್ಷಗಳ ಅನುಷ್ಠಾನ ಕಾರ್ಯಸೂಚಿಯನ್ನು ನೀತಿ ಆಯೋಗ ಸಿದ್ಧಪಡಿಸುತ್ತಿದೆ. 15 ವರ್ಷಗಳ ಮುನ್ನೋಟ ದೊಡ್ಡದು. ಹಾಗೆಯೇ 2032ರ ಒಳಗೆ ರಾಷ್ಟ್ರವನ್ನು ಸಂಪದ್ಭರಿತ ಅರ್ಥವ್ಯವಸ್ಥೆಯಾಗಿಸುವುದೂ ಕ್ಲಿಷ್ಟಕರ ಗುರಿ.

ನೀತಿ ಆಯೋಗದ ಈ ಸಭೆಯಲ್ಲಿ ವಿಭಿನ್ನ ವಿಚಾರಧಾರೆಗಳು ಹೊರಹೊಮ್ಮಿವೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)  ಕುರಿತಂತೆ ಮೂಡಿದ ಒಮ್ಮತವು ಒಂದು ರಾಷ್ಟ್ರ, ಒಂದು ಆಶಯ, ಒಂದು ದೃಢನಿರ್ಧಾರದ ತತ್ವವನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾ   ಇದನ್ನು ಸಾಧ್ಯವಾಗಿಸಿದ ಮುಖ್ಯಮಂತ್ರಿಗಳನ್ನು ಪ್ರಧಾನಿ ಶ್ಲಾಘಿಸಿದ್ದಾರೆ.  ಏಕಕಾಲಕ್ಕೆ ವಿಧಾನಸಭೆ, ಲೋಕಸಭೆ ಚುನಾವಣೆ ನಡೆಸುವ ಸಲಹೆಯ ಜೊತೆಗೆ ಹಣಕಾಸು ವರ್ಷವನ್ನು ಜನವರಿಯಿಂದ ಡಿಸೆಂಬರ್‌ಗೆ ಮರು ನಿಯೋಜಿಸಬೇಕೆಂಬ ಪ್ರಸ್ತಾವವನ್ನು ಪ್ರಧಾನಿ ಮುಂದಿಟ್ಟಿದ್ದಾರೆ. ಆದರೆ ಹಣಕಾಸು ವರ್ಷವನ್ನು ಜನವರಿಯಿಂದ  ಡಿಸೆಂಬರ್‌ವರೆಗೆ ಬದಲಿಸಿಕೊಳ್ಳುವುದರಿಂದ ಹೆಚ್ಚೇನೂ ಪ್ರಯೋಜನವಾಗದು ಎಂಬಂಥ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ನೆಹರೂ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಯೋಜನಾ ಆಯೋಗದ  ಬದಲಿಗೆ  ಭಾರತದ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗೆ ದೀರ್ಘಾವಧಿ ಯೋಜನೆಗಳನ್ನು ರೂಪಿಸಲು 2015ರಲ್ಲಿ ನೀತಿ ಆಯೋಗವನ್ನು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚಿಸಿತು. ಹೀಗಾಗಿ ಯೋಜನಾ ಆಯೋಗದ ಪಂಚವಾರ್ಷಿಕ ಯೋಜನೆಗಳ ಕಾಲ ಈಗ  ಮುಕ್ತಾಯ ಕಂಡಿದೆ. ಅದರ ಬದಲಿಗೆ 15 ವರ್ಷಗಳ ದೀರ್ಘಾವಧಿ ಗುರಿ ಇರಿಸಿಕೊಳ್ಳಲಾಗುತ್ತದೆ. ಆದರೆ ಇದು ಹೊಸ ಬಾಟಲಿಯಲ್ಲಿ ಹಳೆ ಮದ್ಯ ಎಂದಾಗಬಾರದು. ನೀತಿ ಆಯೋಗದ ನಿರ್ವಹಣಾ ಮಂಡಳಿ ಸಭೆ ಸೇರಿದಾಗ ಹೊಸ ಯೋಜನೆ ಕುರಿತಾದ ವಿಸ್ತೃತ ಮಾಹಿತಿ ಲಭ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ  2019–20ರವರೆಗೆ 300 ಅಂಶಗಳ  ಕ್ರಿಯಾ ಯೋಜನೆಯನ್ನಷ್ಟೇ ಮಂಡಿಸಲಾಗಿದೆ. ಇದು  ಮುಂದಿನ 15 ವರ್ಷಗಳ ಸುದೀರ್ಘ ಮುನ್ನೋಟದ ಮೊದಲ ಹೆಜ್ಜೆ ಎನ್ನಲಾಗಿದೆ. ಆದರೆ ಕ್ರಿಯಾಯೋಜನೆಗಳ ವಿವರಗಳು ಲಭ್ಯವಾಗಿಲ್ಲ. ಇದೇ ಸಂದರ್ಭದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕೆಂದು ರಾಜ್ಯಗಳಿಗೆ ಪ್ರಧಾನಿ ನೀಡಿರುವ ಸಂದೇಶ ಮುಖ್ಯವಾದದ್ದು. 

ರಾಜ್ಯಗಳ ಕುರಿತಾಗಿ ಈ ಹಿಂದಿನ ಯೋಜನಾ ಆಯೋಗದ ನಿಯಂತ್ರಣ, ಹಿಡಿತದ ಬಗ್ಗೆ ಮೋದಿಯವರು ಅನೇಕ ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಈಗ ಬಹು ಹಂತಗಳಲ್ಲಿ ಸಮಾಲೋಚನೆಗಳಿಗೆ ಅವಕಾಶ ಇರುವುದು ಅವಶ್ಯ. ಹಾಗಾದಾಗ ಮಾತ್ರ ‘ಟೀಮ್‌ ಇಂಡಿಯಾ’ದ ಮೌಲ್ಯಯುತ ಸದಸ್ಯರು ತಾವೆಂಬ ಭಾವನೆ ರಾಜ್ಯ ಸರ್ಕಾರಗಳಲ್ಲಿ ಮೂಡುವುದು ಸಾಧ್ಯ. ಮೋದಿಯವರು ಸಹಕಾರ ಒಕ್ಕೂಟ ಪರಿಕಲ್ಪನೆಗೆ ಹೆಚ್ಚಿನ ಒತ್ತು ನೀಡುತ್ತಲೇ ಬಂದಿದ್ದಾರೆ. ಆದರೆ ಸಹಕಾರ ಒಕ್ಕೂಟ ತತ್ವವನ್ನು ಹೆಚ್ಚು ದಕ್ಷವಾಗಿಸಲು ಮಂಡಳಿ ಪದೇ ಪದೇ ಸಭೆ ಸೇರಬೇಕು.  ಎರಡು ವರ್ಷಗಳ ನಂತರ ಸಭೆ ಸೇರುವುದು ಸಂವಹನ ಅಂತರವನ್ನು ಹೆಚ್ಚಿಸುತ್ತದೆ. ನೀತಿ ಆಯೋಗವು ಅಭಿವೃದ್ಧಿ ಹಾಗೂ ಸಾಮಾಜಿಕ ವಿಚಾರಗಳ ಕುರಿತಂತಹ ಚಿಂತಕರ ಚಾವಡಿಯಾಗಬೇಕು ಎಂದು ರಾಜಸ್ತಾನ ಮುಖ್ಯಮಂತ್ರಿ ಅಭಿಪ್ರಾಯಪಟ್ಟಿರುವುದೂ ಸರಿಯಾದುದು. ಸಹಕಾರ ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರಗಳ ಕಾಳಜಿಗಳನ್ನೂ ನೀತಿ ಆಯೋಗ ಪರಿಗಣನೆಗೆ ತೆಗೆದುಕೊಳ್ಳಬೇಕು. ರಾಷ್ಟ್ರಕ್ಕೆ  ಸದ್ಯದ ಅಗತ್ಯ ಅಭಿವೃದ್ಧಿ, ವಸತಿ ಹಾಗೂ ಉದ್ಯೋಗ. ಆದರೆ ಈ ಗುರಿಗಳನ್ನು ನೀತಿ ಆಯೋಗ ಹೇಗೆ ಮುಂದಕ್ಕೆ ಒಯ್ಯುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.  ಪ್ರತಿವರ್ಷ ಲಕ್ಷಾಂತರ ಉದ್ಯೋಗಗಳ ಸೃಷ್ಟಿಯ ಭರವಸೆಯನ್ನು ನೀಡಿದ್ದರು ಮೋದಿ. ಆದರೆ ವಾಸ್ತವ ಬೇರೆ ರೀತಿಯೇ  ಇದೆ. ಇದನ್ನು ಗಮನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT