ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೇವಾ ಶುಲ್ಕ ವಿಧಿಸುವುದಿಲ್ಲ’ ಫಲಕ ಕಡ್ಡಾಯ

ಹೋಟೆಲ್‌ ಮತ್ತು ರೆಸ್ಟೊರೆಂಟ್‌ಗಳಿಗೆ ಆಹಾರ ಸಚಿವ ಯು.ಟಿ. ಖಾದರ್‌ ಸೂಚನೆ
Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಇನ್ನು ಮುಂದೆ  ಹೋಟೆಲ್‌ ಮತ್ತು ರೆಸ್ಟೊರೆಂಟ್‌ಗಳಲ್ಲಿ  ಸೇವಾ ಶುಲ್ಕ ವಿಧಿಸುವುದಿಲ್ಲ ಎಂಬ ಫಲಕ ಹಾಕುವುದನ್ನು  ಕಡ್ಡಾಯಗೊಳಿಸಲಾಗಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದರು.

‘ಈ ಸಂಬಂಧ ಕೇಂದ್ರ ಸರ್ಕಾರ ಇದೇ 21ರಂದು ಹೊರಡಿಸಿರುವ  ಸುತ್ತೋಲೆ ಬಗ್ಗೆ  ಗ್ರಾಹಕರು ಮತ್ತು ಹೋಟೆಲ್‌ ಮಾಲೀಕರಿಗೆ ಅರಿವು ಮೂಡಿಸಲು ತಮ್ಮ ಇಲಾಖೆ ಕ್ರಮ ಕೈಗೊಳ್ಳಲಿದೆ’ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

‘ರಾಜ್ಯದ ಕೆಲವು ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲಿ ಶೇ6 ರಿಂದ ಶೇ10ವರೆಗೆ ಸೇವಾಶುಲ್ಕ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. 
‘ಸೇವಾಶುಲ್ಕ ನೀಡದೇ ಇದ್ದರೆ  ಪ್ರವೇಶವಿಲ್ಲ ಎಂದು ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲಿ ಫಲಕ ಹಾಕಲು ಅವಕಾಶ ಇಲ್ಲ. ಈ ರೀತಿ ಪ್ರವೇಶ ನಿರ್ಬಂಧಿಸಿದವರ  ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು  ಎಚ್ಚರಿಸಿದರು.

ಈ ರೀತಿಯ ಫಲಕಗಳನ್ನು ತೆರವುಗೊಳಿಸಲು ತೂಕ ಮತ್ತು ಮಾಪನ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದೂ ಖಾದರ್‌ ಹೇಳಿದರು.

ಆಹಾರ ಪೋಲು ಮಾಡುವುದಕ್ಕೆ ನಿಯಂತ್ರಣ:  ‘ಹೋಟೆಲ್‌, ಕಲ್ಯಾಣ ಮಂಟಪಗಳಲ್ಲಿ ಆಹಾರ ಪದಾರ್ಥವನ್ನು ಎಸೆಯುವ ಚಾಳಿ ಇದೆ. ಇದನ್ನು ನಿಯಂತ್ರಿಸಲು ನಿಯಮ ರೂಪಿಸಲಾಗುವುದು’ ಎಂದು ಅವರು ತಿಳಿಸಿದರು.

‘ಆಹಾರ ಸಿಗದೆ ಸಾಯುವವರ ಸಂಖ್ಯೆ ಹೆಚ್ಚಿದೆ. ಹಾಗಿದ್ದರೂ ಆಹಾರವನ್ನು  ತ್ಯಾಜ್ಯ ರೂಪದಲ್ಲಿ ಬಿಸಾಡಲಾಗುತ್ತಿದೆ. ಹಾಳಾಗದೇ ಇರುವ ಆಹಾರವನ್ನು ಸುತ್ತಮುತ್ತ ಇರುವ ಹಸಿದವರಿಗೆ ವಿತರಿಸಲು  ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬರುತ್ತಿವೆ. ಆದರೆ, ಹೋಟೆಲ್‌, ಕಲ್ಯಾಣ ಮಂಟಪಗಳ ಮಾಲೀಕರು ಇದಕ್ಕೆ ಅವಕಾಶ ನೀಡುತ್ತಿಲ್ಲ. ಈ ಕಾರಣದಿಂದ ಆಹಾರ ಎಸೆಯುವುದನ್ನು ನಿರ್ಬಂಧಿಸಲು ನಿಯಮ ರೂಪಿಸಲಾಗುವುದು’ ಎಂದು ಖಾದರ್‌ ಅವರು
ವಿವರಿಸಿದರು.

ಸ್ವಯಂ ಘೋಷಣಾ ಪತ್ರ ಬೇಡ: ‘ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಕುಟುಂಬದವರು ಪಡಿತರ ಚೀಟಿ ಪಡೆಯಲು ಸ್ವಯಂ ಘೋಷಣಾ ಪತ್ರ ನೀಡುವ  ಅಗತ್ಯವಿಲ್ಲ. ವಾರ್ಷಿಕ ₹1.20 ಲಕ್ಷ ಆದಾಯದ ಒಳಗಿರುವ ಎಲ್ಲರಿಗೂ ಅವರ ಆಧಾರ್‌ ಸಂಖ್ಯೆ ಆಧರಿಸಿ ಪಡಿತರ ಚೀಟಿ ವಿತರಿಸಲಾಗುವುದು’ ಎಂದು ಖಾದರ್‌ ಅವರು ತಿಳಿಸಿದರು.

‘ಚೀಟಿ ವಿತರಿಸಿದ ಬಳಿಕ ಬಿಪಿಎಲ್‌ ಕುಟುಂಬಕ್ಕೆ ಸೇರಿದ್ದಾರೆಯೇ ಇಲ್ಲವೇ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ತಪ್ಪು ಮಾಹಿತಿ ನೀಡಿದ್ದರೆ ಚೀಟಿ ರದ್ದುಪಡಿಸಿ, ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು’ ಎಂದರು.

ಬರಲಿದೆ ಹೊಸ ಮಾದರಿ ಬಿಲ್‌

ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ನೀಡುವ ಬಿಲ್‌ಗಳಲ್ಲಿ ‘ಸೇವಾ ಶುಲ್ಕ’ ಎಂದು ನಮೂದಿಸಿರುವ ಹೊಸ  ಬಿಲ್‌ ಮಾದರಿಯನ್ನು ಇಲಾಖೆ ನೀಡಲಿದೆ. ಬಿಲ್‌ನಲ್ಲಿ ಸೇವಾ ಶುಲ್ಕದ ಮುಂದಿನ  ಭಾಗ ಖಾಲಿ ಇದ್ದು, ಅದನ್ನು ಭರ್ತಿ ಮಾಡುವ ವಿವೇಚನೆಯನ್ನು ಗ್ರಾಹಕರಿಗೆ ಬಿಡಬೇಕು. ಅವರು ಕೊಟ್ಟರೆ ಮಾತ್ರ ಸ್ವೀಕರಿಸಬೇಕು. ಬಲವಂತವಾಗಿ ವಸೂಲಿ ಮಾಡಬಾರದು’ ಎಂದೂ ಖಾದರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT