ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾಲಿನ್‌ ಸೇರಿ ಹಲವರ ಬಂಧನ, ಬಿಡುಗಡೆ

ರೈತರಿಗೆ ಬೆಂಬಲ
Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ಕೃಷಿ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ರೈತರಿಗೆ ಬೆಂಬಲ ಸೂಚಿಸಲು ಮಂಗಳವಾರ ತಮಿಳುನಾಡು ಬಂದ್‌ ನಡೆಸಲಾಯಿತು.

ಡಿಎಂಕೆ ನೇತೃತ್ವದಲ್ಲಿ ಪ್ರತಿಪಕ್ಷಗಳು ಕರೆ ನೀಡಿದ್ದ ಬಂದ್‌ಗೆ ಕಾಂಗ್ರೆಸ್‌, ಎಡಪಕ್ಷಗಳು, ವಿಸಿಕೆ, ಐಯುಎಂಎಲ್‌ ಪಕ್ಷಗಳು, ವಾಣಿಜ್ಯ ಒಕ್ಕೂಟಗಳು ಮತ್ತು ಕೆಲವು ಖಾಸಗಿ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದ್ದವು.

ವಿರೋಧ ಪಕ್ಷಗಳ ನಾಯಕರು ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಮುಂದಾದರು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್‌ ಸೇರಿದಂತೆ ಅನೇಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಅಂಗಡಿ ಮುಂಗಟ್ಟುಗಳು, ಸ್ಥಳೀಯ ತರಕಾರಿ ಮಾರುಕಟ್ಟೆಗಳು ಮತ್ತು ಕೆಲವು ಖಾಸಗಿ ಕಂಪೆನಿಗಳು ಮುಚ್ಚಿದ್ದವು. ಇದರಿಂದ ಸಹಜ ಜೀವನಕ್ಕೆ ಕೆಲವೆಡೆ ಅಡಚಣೆ ಉಂಟಾಯಿತು. ಆಟೊ ಮತ್ತು ಕೆಲವು ಖಾಸಗಿ ಟ್ಯಾಕ್ಸಿಗಳು ರಸ್ತೆಗಿಳಿಯಲಿಲ್ಲ. ರಾಜ್ಯ ಸರ್ಕಾರಿ ಸಾರಿಗೆ ಬಸ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಹಲವೆಡೆ ರೈಲು ಮತ್ತು ರಸ್ತೆ ತಡೆದು ಪ್ರತಿಭಟನೆಗೆ ಮುಂದಾದ ಡಿಎಂಕೆ ಮತ್ತು ಕಾಂಗ್ರೆಸ್‌ ಕಾರ್ಯಕರ್ತರನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಯಿತು.

ತಿರುಚಿಪಳ್ಳಿ, ಕೊಯಮತ್ತೂರು, ಮದುರೆ ಮತ್ತು ಕಾಂಚಿಪುರಂ ಸೇರಿದಂತೆ ರಾಜ್ಯದ ಹಲವೆಡೆ ರೈಲು ತಡೆದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಎಐಎಡಿಎಂಕೆ, ಬಿಜೆಪಿ, ಎಂಡಿಎಂಕೆ ಮತ್ತು ತೃಣಮೂಲ ಕಾಂಗ್ರೆಸ್‌ ಪಕ್ಷಗಳು ಬಂದ್‌ನಲ್ಲಿ ಭಾಗವಹಿಸಿರಲಿಲ್ಲ.

ಕೂಡಲೇ ಕಾವೇರಿ ನಿರ್ವಹಣಾ ಮಂಡಳಿ, ಕಾವೇರಿ ನಿಯಂತ್ರಣ ಪ್ರಾಧಿಕಾರಗಳನ್ನು ರಚಿಸಬೇಕು. ಕಾವೇರಿ ಮುಖಜಭೂಮಿ ಪ್ರದೇಶವನ್ನು ವಿಶೇಷ ಕೃಷಿ ವಲಯ ಎಂದು ಘೋಷಿಸಬೇಕು ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT