ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೀಪನ ಮದ್ದು ಜಾಲದಲ್ಲಿ ‘ಇಂಡಿಯನ್ ಸ್ಪೈಡರ್‌ಮ್ಯಾನ್’

ಗೋಲ್‌ಕೀಪರ್ ಸುಬ್ರತಾ ಮೇಲೆ ನಿಷೇಧದ ತೂಗುಗತ್ತಿ
Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ:  ಭಾರತ ಫುಟ್‌ ಬಾಲ್ ತಂಡದ ಗೋಲ್‌ಕೀಪರ್, ‘ಇಂಡಿಯನ್ ಸ್ಪೈಡರ್‌ಮ್ಯಾನ್’ ಸುಬ್ರತಾ ಪಾಲ್ ಅವರು ಉದ್ದೀಪನ ಮದ್ದು ಸೇವನೆ ಮಾಡಿರುವುದು ಸಾಬೀತಾಗಿದ್ದು ನಾಲ್ಕು ವರ್ಷಗಳ ನಿಷೇಧ ಶಿಕ್ಷೆಗೊಳ ಗಾಗುವ ಸಾಧ್ಯತೆ ಇದೆ.

‘ಅರ್ಜುನ ಪ್ರಶಸ್ತಿ ಪುರಸ್ಕೃತ ಸುಬ್ರತಾ  ಅವರು ಹೋದ ತಿಂಗಳು ನಡೆದಿದ್ದ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಆದರೂ ಬಿ ಮಾದರಿ ಪರೀಕ್ಷೆಯ ನಂತರವೇ ಕ್ರಮದ ಬಗ್ಗೆ ನಿರ್ಧರಿಸಲಾಗುವುದು’ ಎಂದು ಅಖಿಲ ಭಾರತ ಫುಟ್‌ ಬಾಲ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಹೇಳಿದ್ದಾರೆ.

‘ಅವರಿಂದ ಮಾರ್ಚ್ 18ರಂದು ನಾಡಾ (ರಾಷ್ಟ್ರೀಯ ಮದ್ದು ಪರೀಕ್ಷೆ ಘಟಕ) ಮೂತ್ರದ ಮಾದರಿ ಪಡೆದಿತ್ತು.  ಅವರ ಎ ಮಾದರಿ ಮೂತ್ರ ಪರೀಕ್ಷೆಯಲ್ಲಿ ನಿಷೇಧಿತ ಮದ್ದು ಸೇವಿಸಿರುವುದು ಸಾಬೀತಾಗಿದೆ. ಆದ್ದರಿಂದ ಅವರನ್ನು ನಾಲ್ಕು ವರ್ಷಗಳ ಕಾಲ ಫುಟ್‌ಬಾಲ್‌ ಆಡದಂತೆ ನಿಷೇಧಿಸಬಹುದು. ಆದರೆ, ಬಿ ಸ್ಯಾಂಪಲ್ ಪರೀಕ್ಷೆಯವರೆಗೆ ಕಾಯ ಲಾಗುವುದು’ ಎಂದು ದಾಸ್ ತಿಳಿಸಿದ್ದಾರೆ.

ವಾಡಾ ರೂಪಿಸಿರುವ ನೂತನ ನಿಯಮಗಳ ಪ್ರಕಾರ ಮೊದಲ ಬಾರಿಗೆ ತಪ್ಪಿತಸ್ಥರಾದವರು ಗರಿಷ್ಠ ನಾಲ್ಕು ವರ್ಷಗಳ ಶಿಕ್ಷೆಯನ್ನು ಅನುಭವಿಸಬೇಕು.

‘ಈ ಫಲಿತಾಂಶದಿಂದ ನಾನು ಆಘಾತಕ್ಕೊಳಗಾಗಿದ್ದೇನೆ.  ಇದು ಅನಿ ರೀಕ್ಷಿತ. ನಾಡಾ ಅಥವಾ ಎಐಎಫ್‌ಎಫ್‌ ದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಮಾಧ್ಯಮಗಳ ವರದಿಯಿಂದ ನನಗೆ ತಿಳಿದುಬಂದಿದೆ. ಯಾವಾಗಲೂ ಪ್ರಾಮಾಣಿಕತೆಯಿಂದ ಆಡಿದ್ದೇನೆ. ಯಾವತ್ತೂ ಮದ್ದು ಸೇವಿಸಿಲ್ಲ.  ಮುಂಬೈ ನಲ್ಲಿ ನಡೆದಿದ್ದ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಎಲ್ಲ ಆಟಗಾರರ ಮಾದರಿಗಳನ್ನೂ ಪರೀಕ್ಷೆ ಮಾಡಲಾಗಿತ್ತು.  ನಾನೂ ಕೂಡ ನೀಡಿದ್ದೆ. ಆದರೆ ಈ ರೀತಿಯ ಫಲಿತಾಂಶ ವನ್ನು ನಿರೀಕ್ಷಿಸಿರಲಿಲ್ಲ. ಬಿ ಸ್ಯಾಂಪಲ್ ಪರೀಕ್ಷೆಯಲ್ಲಿ ನಿರಪರಾಧಿ ಎಂದು ಸಾಬೀತಾಗುವುದು ಖಚಿತ’ ಎಂದು 30 ವರ್ಷದ ಸುಬ್ರತಾ ಭರವಸೆ ವ್ಯಕ್ತಪಡಿಸಿದ್ದಾರೆ.

‘ನನ್ನ ಭವಿಷ್ಯದ ಮೇಲೆ ಇದು ಕೆಟ್ಟ ಪರಿಣಾಮ ಬೀರಲಿದೆ. ಅಲ್ಲದೇ ಇಷ್ಟು ವರ್ಷ ಗಳಿಸಿದ ಗೌರವಕ್ಕೂ ಕುಂದುಂಟಾ ಗಲಿದೆ. ಆದ್ದರಿಂದ ಬಿ ಮಾದರಿ ಪರೀಕ್ಷೆಗೆ ನಾನು ಒತ್ತಾಯಿಸುತ್ತೇನೆ’ ಎಂದು ಹೇಳಿದರು.

ಪಶ್ಚಿಮ ಬಂಗಾಳದ ಸುಬ್ರತಾ ಅವರು ಭಾರತ ಫುಟ್‌ಬಾಲ್ ಕ್ಷೇತ್ರದ ಶ್ರೇಷ್ಠ ಗೋಲ್‌ಕೀಪರ್‌ಗಳಲ್ಲಿ ಒಬ್ಬರು.  ಇಂಗ್ಲೆಂಡ್‌ನ ಬಾಬ್ ಹಾಟನ್ ಅವರು ತಂಡದ ಕೋಚ್ ಆಗಿದ್ದ ಸಂದರ್ಭದಲ್ಲಿ  ಅವರು ಅಗ್ರಶ್ರೇಯಾಂಕದ ಗೋಲ್‌ ಕೀಪರ್ ಆಗಿದ್ದರು. ಆ ಸಂದರ್ಭದಲ್ಲಿ ಬೈಚುಂಗ್ ಭುಟಿಯಾ ಅವರು ತಂಡದ ನಾಯಕರಾಗಿದ್ದರು.

2007 ಮತ್ತು 2009ರಲ್ಲಿ ಭಾರತ ತಂಡವು ನೆಹರು ಕಪ್ ಅಂತರ ರಾಷ್ಟ್ರೀಯ ಟೂರ್ನಿಯಲ್ಲಿ ಗೆಲ್ಲಲು ಸುಬ್ರತಾ ಮಹತ್ವದ ಪಾತ್ರ ವಹಿಸಿದ್ದರು. 2008ರಲ್ಲಿ ಹೈದರಾಬಾದ್‌ನಲ್ಲಿ ಎಎಫ್‌ಸಿ ಚಾಲೆಂಜ್ ಕಪ್ ಗೆದ್ದಾಗಲೂ ಸುಬ್ರತಾ ಮಿಂಚಿದ್ದರು.

2011ರಲ್ಲಿ ದೋಹಾದಲ್ಲಿ ನಡೆಸಿದ್ದ ಏಷ್ಯನ್ ಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಎದುರು ಅವರು ಅಮೋಘ ವಾದ ಗೋಲ್‌ಕೀಪಿಂಗ್ ಮೂಲಕ ಗಮನ ಸೆಳೆದಿದ್ದರು. ಅವರನ್ನು ಆಗ ಮಾಧ್ಯಮಗಳು ‘ಇಂಡಿಯನ್ ಸ್ಪೈಡರ್‌ ಮ್ಯಾನ್’ ಎಂದು ಬಣ್ಣಿಸಿದ್ದವು.

ಆದರೆ ಕಳೆದ ಎರಡು ವರ್ಷಗಳಿಂದ ಅವರು ಫಾರ್ಮ್‌ನಲ್ಲಿಲ್ಲ. ಗುರುಪ್ರೀತ್ ಸಿಂಗ್  ಸಂಧು ಅವರು ಅಗ್ರಸ್ಥಾನದಲ್ಲಿ ದ್ದಾರೆ. ಸುಬ್ರತಾ ಅವರು ಐ ಲೀಗ್ ಟೂರ್ನಿಯಲ್ಲಿ ಡಿಎಸ್‌ಕೆ ಶಿವಾಜಿಯನ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. 

ಭಾರತದ ಫುಟ್‌ಬಾಲ್ ಕ್ರೀಡೆಯಲ್ಲಿ  ಉದ್ದೀಪನ ಮದ್ದು ಸೇವನೆ ಪ್ರಕರಣಗಳು ವಿರಳ. 2002ರಲ್ಲಿ ಮಹೀಂದ್ರಾ ಯುನೈ ಟೆಡ್ ತಂಡದ ಡಿಫೆಂಡರ್ ಅರುಣ್ ಮಲ್ಹೋತ್ರಾ ಅವರು ಸಿಕ್ಕಿಬಿದ್ದಿದ್ದರು. 2011ರಲ್ಲಿ ನಿಶಾಂತ್ ಮೆಹ್ರಾ, 2015 ರಲ್ಲಿ  ಮುಂಬೈ ಎಫ್‌ಸಿಯ ಡೇನ್ ಪೆರೇರಾ ಅವರು ಸಿಕ್ಕಿಬಿದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT