ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆಗೆ ನೈಟ್‌ರೈಡರ್ಸ್‌ ಸವಾಲು

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಸತತ ಮೂರು ಜಯಗಳೊಂದಿಗೆ ಆತ್ಮವಿಶ್ವಾಸ ತುಂಬಿಕೊಂಡಿರುವ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವು ಬುಧವಾರ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಸವಾಲು ಎದುರಿಸಲಿದೆ.

ಸೋಮವಾರ ರಾತ್ರಿ ರೈಸಿಂಗ್ ಪುಣೆ ತಂಡವು 3 ರನ್‌ಗಳಿಂದ ಮುಂಬೈ ಇಂಡಿಯನ್ಸ್‌ ವಿರುದ್ಧ ಗೆದ್ದಿತ್ತು. ಬೆನ್ ಸ್ಟೋಕ್ಸ್ ಮತ್ತು ಜಯದೇವ್ ಉನದ್ಕತ್ ಅವರ ಅಮೋಘ ಬೌಲಿಂಗ್‌ನಿಂದ ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿತ್ತು.

ಅದಕ್ಕೂ ಹಿಂದಿನ ಪಂದ್ಯದಲ್ಲಿ ಮಹೇಂದ್ರಸಿಂಗ್ ದೋನಿ ಅವರ ಮಿಂಚಿನ ಬ್ಯಾಟಿಂಗ್‌ನಿಂದಾಗಿ ಹಾಲಿ ಚಾಂಪಿಯನ್ ಸನ್‌ರೈಸರ್ಸ್ ತಂಡಕ್ಕೂ ಪುಣೆ ಸೋಲಿನ ರುಚಿ ತೋರಿಸಿತ್ತು. ಈ ಎರಡೂ ಪಂದ್ಯಗಳಲ್ಲಿಯೂ ಯುವಪ್ರತಿಭೆ, ಆರಂಭಿಕ ಬ್ಯಾಟ್ಸ್‌ಮನ್ ರಾಹುಲ್ ತ್ರಿಪಾಠಿ (59 ಮತ್ತು 45 ರನ್) ಅವರ ಆಕರ್ಷಕ ಬ್ಯಾಟಿಂಗ್ ಜಯದ ಮಹಲು ಕಟ್ಟಲು ನೆರವಾಗಿತ್ತು.

ಇದರಿಂದಾಗಿ ಸದ್ಯ ಬೇರೆ ತಂಡಗಳಿಗೆ ಸವಾಲೊಡ್ಡಬಲ್ಲ ತಂಡವಾಗಿ ಬೆಳೆಯುತ್ತಿದೆ. ಏಳು ಪಂದ್ಯಗಳನ್ನು ಆಡಿರುವ ತಂಡವು ನಾಲ್ಕರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಒಟ್ಟು ಎಂಟು ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಅನುಭವಿಗಳು ಮತ್ತು ಯುವ ಆಟಗಾರರ ಹದವಾದ ಮಿಶ್ರಣವಿರುವ ತಂಡವು ಇದುವರೆಗೆ ಬಲಿಷ್ಠ ತಂಡಗಳನ್ನೇ ಸೋಲಿಸಿರುವುದು ಗಮನಾರ್ಹ.  ತಂಡವು ಸಂಘಟಿತವಾಗಿ ಹೋರಾಟ ಮಾಡುತ್ತಿರುವುದು ಅದಕ್ಕೆ ಕಾರಣ.

ಅಜಿಂಕ್ಯ ರಹಾನೆ ಮತ್ತು ನಾಯಕ ಸ್ಟೀವನ್ ಸ್ಮಿತ್ ಅವರು ಕೂಡ ತಮ್ಮ ಕಾಣಿಕೆ ನೀಡುವಲ್ಲಿ ಹಿಂದೆ ಬಿದ್ದಿಲ್ಲ. 

ಸ್ಪಿನ್ ಬೌಲರ್ ಇಮ್ರಾನ್ ತಾಹೀರ್ ಅವರು ಈ ಟೂರ್ನಿಯಲ್ಲಿ ಒಟ್ಟು ಹತ್ತು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅದರೊಂದಿಗೆ ತಮ್ಮ ತಂಡದಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರೆಲ್ಲರ ಸಾಮರ್ಥ್ಯ ಪರೀಕ್ಷೆಯು ಈಗ ಗೌತಮ್ ಗಂಭೀರ್ ಬಳಗದ ಎದುರು ಆಗಲಿದೆ. ಆಡಿರುವ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಎರಡರಲ್ಲಿ ಕೆಕೆಆರ್  ಸೋತಿದೆ. ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ. ನಾಯಕ ಗೌತಮ್ ಗಂಭೀರ್, ಕರ್ನಾಟಕದ ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ಯೂಸುಫ್ ಪಠಾಣ್ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ.  ನಾಲ್ಕು ದಿನಗಳ ಹಿಂದೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಕೇವಲ 49 ರನ್‌ಗಳಿಗೆ ಕಟ್ಟಿಹಾಕಿ 82 ರನ್‌ಗಳ ದೊಡ್ಡ ಜಯ ಸಾಧಿಸಿತ್ತು.

ಬಲಗೈ ವೇಗಿ ನೇಥನ್ ಕೌಲ್ಟರ್ ನೈಲ್, ಕ್ರಿಸ್ ವೋಕ್ಸ್, ಉಮೇಶ್ ಯಾದವ್ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಸ್ಪಿನ್‌ ವಿಭಾಗದಲ್ಲಿ ಚೈನಾಮನ್ ಕುಲದೀಪ್ ಯಾದವ್, ಪಿಯೂಷ್ ಚಾವ್ಲಾ ಮತ್ತು ಆಲ್‌ರೌಂಡರ್ ಸುನಿಲ್ ನಾರಾಯಣ್ ಅವರು ಪಂದ್ಯದ ಫಲಿತಾಂಶವನ್ನು ತಮ್ಮ ತಂಡದ ಪರ ಒಲಿಸಿಕೊಳ್ಳುವ ಸಮರ್ಥರು.

ಪುಣೆ ತಂಡವು ಗೆದ್ದಿರುವ ಕಳೆದ ಎರಡೂ ಪಂದ್ಯಗಳ ಫಲಿತಾಂಶಗಳೂ ಕೊನೆಯ ಎಸೆತದಲ್ಲಿಯೇ ನಿರ್ಧಾರವಾಗಿದ್ದವು. ಕೆಕೆಆರ್. ವಿರುದ್ಧ ಪಂದ್ಯವು ಮತ್ತೊಂದು ರೋಚಕ ಹಣಾಹಣಿಯನ್ನು ಕಾಣುವ ನಿರೀಕ್ಸೆ ಇದೆ.

ಪಂದ್ಯ ಆರಂಭ: ರಾತ್ರಿ 8ರಿಂದ
ನೇರಪ್ರಸಾರ: ಸೋನಿ ಸಿಕ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT