ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ವಿರುದ್ಧ  ಕ್ರಮಕ್ಕೆ ಸಿ.ಎಂ ಆದೇಶ

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ
Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ವಿರುದ್ಧ  ಕಾನೂನು ಕ್ರಮ ಜರುಗಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣಕ್ಕಾಗಿ ಇರುವ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದಿರುವ ಸಂಬಂಧ 482 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ’ ಎಂದು ಅಧಿಕಾರಿಗಳು ಸಭೆಗೆ ವಿವರ ನೀಡಿದರು.

‘ದೂರುಗಳು ಬಂದ ಕೂಡಲೇ ವಿಚಾರಣೆ ನಡೆಸಿ ಸುಳ್ಳು ಜಾತಿ ಪ್ರಮಾಣ ಪತ್ರ ರದ್ದು ಮಾಡಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಪರಿಶಿಷ್ಟ ಸಮುದಾಯದವರ ಹೆಸರಿನಲ್ಲಿ ಉದ್ಯೋಗ ಪಡೆದು ವಂಚಿಸುತ್ತಿರುವ ಪ್ರಕರಣಗಳು ಕೊನೆಯಾಗಬೇಕು. ಅವರು ನಿವೃತ್ತಿಯ ಅಂಚಿನಲ್ಲಿದ್ದಾಗ ಪ್ರಮಾಣ ಪತ್ರ ರದ್ದುಪಡಿಸಿದರೆ ಏನು ಪ್ರಯೋಜನ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಪ್ರಮಾಣ ಪತ್ರ ಪಡೆದವರನ್ನು ಮಾತ್ರ ಶಿಕ್ಷಿಸಿದರೆ ಸಾಲದು. ಪರಿಶೀಲಿಸದೆ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳನ್ನೂ ಶಿಕ್ಷೆಗೆ ಗುರಿಪಡಿಸಿದರೆ ಇದು ನಿಯಂತ್ರಣಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿಶೇಷ ನ್ಯಾಯಾಲಯ: ಹಾವೇರಿ, ಕೊಪ್ಪಳ, ದಾವಣಗೆರೆ, ಧಾರವಾಡ, ಉಡುಪಿ, ಚಿತ್ರದುರ್ಗ, ಚಾಮರಾಜನಗರ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ಅತಿ ಹೆಚ್ಚು   ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ.  ಈ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಲು  ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಜತೆ ಚರ್ಚೆ ನಡೆಸುವಂತೆ ಸಭೆಯಲ್ಲಿದ್ದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರಿಗೆ ಸಿದ್ದರಾಮಯ್ಯ ಸೂಚಿಸಿದರು.

ವಿಶೇಷ ನ್ಯಾಯಾಲಯಗಳಿರುವ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಶಿಕ್ಷೆಯ ಪ್ರಮಾಣ ಶೇ 6ರಷ್ಟಿದೆ. ಉಳಿದ 22 ಜಿಲ್ಲೆಗಳಲ್ಲಿ ಶೇ 5ರಷ್ಟಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

‘ವಿವಿಧ ನ್ಯಾಯಾಲಯಗಳಲ್ಲಿ ವಜಾಗೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸುವುದು ವಿಳಂಬವಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೂ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು. 

ಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್‌,  ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಗೋವಿಂದ ಕಾರಜೋಳ, ಚಿಕ್ಕಮಾದು, ಶಿವಮೂರ್ತಿ ನಾಯ್ಕ್, ತುಕಾರಾಂ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಖುಂಟಿಆ ಪಾಲ್ಗೊಂಡಿದ್ದರು.

ದೇವಸ್ಥಾನಗಳಲ್ಲಿ ಪ್ರಕಟಣಾ ಫಲಕ ಕಡ್ಡಾಯ
‘ಮುಜರಾಯಿ ಇಲಾಖೆಗೆ ಸೇರಿದ ಎಲ್ಲ ದೇವಸ್ಥಾನಗಳ ಎದುರು ಜಾತಿ–ಲಿಂಗ  ಭೇದ ಇಲ್ಲದೆ ಎಲ್ಲರಿಗೂ ಮುಕ್ತ ಪ್ರವೇಶ ಇದೆ ಎಂದು ಪ್ರಕಟಣಾ ಫಲಕ ವನ್ನು ಕಡ್ಡಾಯವಾಗಿ ಹಾಕಬೇಕು’ ಎಂದು ಸಿದ್ದರಾಮಯ್ಯ ಆದೇಶಿಸಿದರು.

‘ಪರಿಶಿಷ್ಟ ಸಮುದಾಯಕ್ಕೆ ಸೇರಿದವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಪ್ರಕರಣಗಳ ಕುರಿತು ಮಾಧ್ಯಮಗಳಲ್ಲಿ ವರದಿ ಬರುತ್ತಿವೆ. ಇದನ್ನು ತಪ್ಪಿಸಲು ಪ್ರಕಟಣಾ ಫಲಕ ಅಳವಡಿಸಿ’ ಎಂದು ಸೂಚಿಸಿದರು.

ಮಣಿವಣ್ಣನ್‌ ವಿರುದ್ಧ ಸಿಟ್ಟು

ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್‌ ವಿರುದ್ಧ ಸಿದ್ದರಾಮಯ್ಯ ಸಿಟ್ಟಾದ ಘಟನೆ ಸಭೆಯಲ್ಲಿ ನಡೆಯಿತು.

‘ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಯಾಗಿದ್ದರೂ ಮ್ಯಾನ್‌ಹೋಲ್‌ಗೆ ಪೌರಕಾರ್ಮಿಕರನ್ನು ಇಳಿಸುತ್ತಿರುವುದು ಅಮಾನವೀಯ ಸಂಗತಿ. ಇದಕ್ಕೆ ತಡೆಹಾಕಬೇಕು’ ಎಂದು ಸಂಸದ ಕೆ.ಎಚ್‌. ಮುನಿಯಪ್ಪ  ಸಭೆಯಲ್ಲಿ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಏನ್ರೀ ಮಣಿವಣ್ಣನ್‌, ಈ ಬಗ್ಗೆ ಇಲಾಖೆ ಏನೂ ಕ್ರಮ ಕೈಗೊಳ್ಳುವುದಿಲ್ಲವೇ.  ಮ್ಯಾನ್‌ಹೋಲ್‌ಗೆ ಇಳಿದ ಕಾರ್ಮಿಕರು ಸಾವಿಗೀಡಾಗುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇನ್ರೀ.   ಇದರಿಂದ  ಸರ್ಕಾರಕ್ಕೆ ಗೌರವ ಬರುತ್ತಾ... ಇಂತಹ ಘಟನೆಗಳು ಮರುಕಳಿಸಿದರೆ ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT