ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಿಯಲ್ಲಿ ಮುಳುಗಿ ತಾಯಿ, ಮಗ ಸಾವು

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಉಡುಪಿ: ಕಲ್ಲು ಕ್ವಾರಿಯಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ತಾಯಿ– ಮಗು ಮೃತಪಟ್ಟ ಘಟನೆ ಪಡು ಅಲೆವೂರಿನ ಪೆರುಪಾದೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ದುರ್ಗಾನಗರದ ನಿವಾಸಿಯಾಗಿದ್ದ ದ್ಯಾವಮ್ಮ (28) ಮತ್ತು ಅವರ ಮಗ ಹನುಮಂತ (5) ಮೃತರು. ಕೂಲಿ ಕಾರ್ಮಿಕರಾಗಿರುವ ದ್ಯಾವಮ್ಮ ಮತ್ತು ಅವರ ಪತಿ ಯಮನಪ್ಪ ಬಾಗಲಕೋಟೆಯ ಐಹೊಳೆಯವರು. ಹಲವು ವರ್ಷಗಳ ಹಿಂದೆ ಅಲೆವೂರಿಗೆ ಬಂದಿದ್ದ ಅವರು ದುರ್ಗಾನಗರದಲ್ಲಿ ನೆಲೆಸಿದ್ದರು.

ಮಧ್ಯಾಹ್ನ 12 ಗಂಟೆ ಸುಮಾರಿಗೆ ದ್ಯಾವಮ್ಮ ಅವರು ಮಗನೊಂದಿಗೆ ಬಟ್ಟೆ ಒಗೆಯಲು ನೀರು ತುಂಬಿದ್ದ ಕ್ವಾರಿಗೆ ಹೋಗಿದ್ದಾರೆ. ಅಲ್ಲಿಯೇ ಆಟವಾಡುತ್ತಿದ್ದ ಹನುಮಂತ ಆಕಸ್ಮಿಕವಾಗಿ ನೀರಿಗೆ ಬಿದ್ದಿ ದ್ದಾನೆ.  ಮಗನನ್ನು ರಕ್ಷಿಸಲುಹೋದ ತಾಯಿ, ಆತನನ್ನು ಎತ್ತಿಕೊಳ್ಳುವಲ್ಲಿ ಯಶಸ್ವಿಯಾದರೂ ಮೇಲೆ ಬರಲಾಗದೆ ಮುಳುಗಿ ಇಬ್ಬರೂ ಮೃತಪಟ್ಟಿದ್ದಾರೆ.

‘ದ್ಯಾವಮ್ಮ ಅವರು ಒಂಬತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರ ಪತಿಗೆ ಮಾತು ಬರುವುದಿಲ್ಲ’ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದರು. ಮುಳುಗು ತಜ್ಞರಿಲ್ಲದ ಕಾರಣ ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ಮುಳುಗಿ ಶವ ಹುಡುಕುವ ಪ್ರಯತ್ನ ಮಾಡಲಿಲ್ಲ. ಸ್ಥಳೀಯರೇ ಆದ ಈಜು ಪರಿಣತರಾದ ಅಶೋಕ್, ಪ್ರಭಾಕರ್‌ ಮತ್ತು ನಿತಿನ್ ಅವರು ಶವವನ್ನು ಹುಡುಕಿ ಮೇಲಕ್ಕೆ ಎತ್ತಿದರು.

‘ಕ್ವಾರಿ ನಿಂತು ಹಲವು ವರ್ಷಗಳೇ ಕಳೆದಿದ್ದು ಸುಮಾರು 15 ಅಡಿ ಆಳವಿರುವ ಇದರಲ್ಲಿ ನೀರು ತುಂಬಿದೆ. ಉತ್ತರ ಕರ್ನಾಟಕ ಜಿಲ್ಲೆಯ ನೂರಾರು ಕಾರ್ಮಿಕರು ದುರ್ಗಾನಗರದಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡು ನೆಲೆಸಿದ್ದಾರೆ. ಅವರು ಬಟ್ಟೆ ಒಗೆಯಲು ಕ್ವಾರಿಗೆ ಬರುವುದು ಸಾಮಾನ್ಯ’ ಎಂದು ಸ್ಥಳೀಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT