ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ ಪಾವತಿಗೆ ಒಂದಲ್ಲ, 20 ಸಮಸ್ಯೆ

15 ದಿನಗಳಲ್ಲಿ ಪರಿಹಾರ: ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರ ಹೇಳಿಕೆ
Last Updated 25 ಏಪ್ರಿಲ್ 2017, 20:29 IST
ಅಕ್ಷರ ಗಾತ್ರ

ಬೆಂಗಳೂರು:  ‘ನಗರದಲ್ಲಿ ಆಸ್ತಿ ತೆರಿಗೆ ಪಾವತಿಸುವ ವೇಳೆ ತೆರಿಗೆದಾರರು 20 ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.  ಇವುಗಳನ್ನು 15 ದಿನಗಳಲ್ಲಿ ಬಗೆಹರಿಸುತ್ತೇವೆ’ ಎಂದು ಬಿಬಿಎಂಪಿ  ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ ತಿಳಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಮಸ್ಯೆಗಳನ್ನು ಬಗೆಹರಿಸಲು ಜಂಟಿ ಆಯುಕ್ತರು ಹಾಗೂ ಎನ್‌ಐಸಿ ಪ್ರತಿನಿಧಿಗಳ ಜತೆ ಸಭೆ ನಡೆಸಿದ್ದೇನೆ. ಕೆಲವು ಸಮಸ್ಯೆಗಳನ್ನು ಈಗಾಗಲೇ ಇತ್ಯರ್ಥ ಮಾಡಲಾಗಿದೆ’ ಎಂದರು.

‘ಕಳೆದ ಆರ್ಥಿಕ ವರ್ಷದಲ್ಲಿ ಹೆಚ್ಚುವರಿಯಾಗಿ ಪಾವತಿಸಿದ್ದ ಮೊತ್ತ ಹೊಂದಾಣಿಕೆ ಆಗುತ್ತಿರಲಿಲ್ಲ. ಇದಕ್ಕೆ ಈಗ ಸಾಫ್ಟ್‌ವೇರ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಚಲನ್‌ ಸಮಸ್ಯೆಯಿಂದಾಗಿ ನಿವೃತ್ತ ಸೈನಿಕರಿಗೆ ತೆರಿಗೆ ಕಟ್ಟಲು ಕಷ್ಟವಾಗುತ್ತಿತ್ತು. ಇದನ್ನೂ ಬಗೆಹರಿಸಲಾಗಿದೆ’ ಎಂದರು.

‘ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆ ಪಾವತಿಸಿದವರಿಗೆ ಶೇ 5ರಷ್ಟು ವಿನಾಯಿತಿ ನೀಡಲಾಗುತ್ತಿದೆ. ಅದನ್ನು ಇನ್ನೊಂದು ತಿಂಗಳು ಮುಂದುವರಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಬುಧವಾರದ ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

‘ಹಿರಿಯ ನಾಗರಿಕರು ಆಸ್ತಿ ತೆರಿಗೆ ಪಾವತಿಸಲು ಸರದಿಯಲ್ಲಿ ನಿಂತು ಕಷ್ಟಪಡುತ್ತಿದ್ದಾರೆ. ತೆರಿಗೆದಾರರಿಗೆ ಅನುಕೂಲ ಮಾಡಿಕೊಡಲು ಕೆನರಾ ಬ್ಯಾಂಕ್‌ ಜತೆ ಮಾತುಕತೆ ನಡೆಸಿದ್ದೇವೆ. ಬಿಬಿಎಂಪಿಯ 10 ಕಚೇರಿಗಳಲ್ಲಿ ಕೌಂಟರ್‌ ತೆರೆಯಲು, ಸಿಬ್ಬಂದಿ ನಿಯೋಜಿಸಲು ಬ್ಯಾಂಕ್‌ ಒಪ್ಪಿದೆ. ವಾರದಲ್ಲಿ ಈ ವ್ಯವಸ್ಥೆ ಆರಂಭವಾಗಲಿದೆ. ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಜತೆಗೂ ಮಾತುಕತೆ ನಡೆಸಲಾಗಿದೆ.  ಈ ಬ್ಯಾಂಕ್‌ಗಳ ಶಾಖೆಗಳಲ್ಲಿ ಆಸ್ತಿ ತೆರಿಗೆ ಕಟ್ಟಲು ಅವಕಾಶ ನೀಡುವಂತೆ ಕೋರಿದ್ದೇವೆ’ ಎಂದರು.

ತಿಂಗಳಲ್ಲಿ ತಿದ್ದುಪಡಿ
‘ಮಾರುಕಟ್ಟೆ ಉಪನಿಯಮಕ್ಕೆ (ಬೈಲಾ) ಒಂದು ತಿಂಗಳಲ್ಲಿ ತಿದ್ದುಪಡಿ ತರುತ್ತೇವೆ’ ಎಂದು ಗುಣಶೇಖರ ತಿಳಿಸಿದರು.

‘ಬೆಂಗಳೂರು ಸಿಟಿ ಮುನಿಸಿಪಲ್‌ ಕಾಯ್ದೆ 1949ರ ಅನುಸಾರ 1954ರಲ್ಲಿ ಬೈಲಾ ರೂಪಿಸಲಾಗಿತ್ತು. ಈಗ ಕೆಎಂಸಿ ಕಾಯ್ದೆ 1976ರ ಅನುಸಾರ ಪಾಲಿಕೆ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ತಿದ್ದುಪಡಿ ತರಬೇಕಿದೆ’ ಎಂದರು.

ಎಲ್ಲೆಲ್ಲಿ ಇರಲಿದ್ದಾರೆ ಬ್ಯಾಂಕ್‌ ಸಿಬ್ಬಂದಿ

* ದಾಸರಹಳ್ಳಿ ಜಂಟಿ ಆಯುಕ್ತರ ಕಚೇರಿ
* ಬೊಮ್ಮನಹಳ್ಳಿ ಜಂಟಿ ಆಯುಕ್ತರ ಕಚೇರಿ
* ಪಶ್ಚಿಮ ವಲಯದ ಜಂಟಿ ಆಯುಕ್ತರ ಕಚೇರಿ
* ಹೂಡಿ ಸಹಾಯಕ ಕಂದಾಯ ಅಧಿಕಾರಿ ಕಚೇರಿ
* ಮಾರತ್ತಹಳ್ಳಿ ಸಹಾಯಕ ಕಂದಾಯ ಅಧಿಕಾರಿ ಕಚೇರಿ
* ರಾಜರಾಜೇಶ್ವರಿ ನಗರ ಜಂಟಿ ಆಯುಕ್ತರ ಕಚೇರಿ
* ವೈಟ್‌ಫೀಲ್ಡ್‌ ಸಹಾಯಕ ಕಂದಾಯ ಅಧಿಕಾರಿ ಕಚೇರಿ
* ಮೇಯೊ ಹಾಲ್‌
* ಯಲಹಂಕ ಜಂಟಿ ಆಯುಕ್ತರ ಕಚೇರಿ
* ದಕ್ಷಿಣ ವಲಯ ಜಂಟಿ ಆಯುಕ್ತರ ಕಚೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT