ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು: ಪ್ರವಾಸಿಗರ ಸಂಖ್ಯೆ ಇಳಿಮುಖ

Last Updated 26 ಏಪ್ರಿಲ್ 2017, 6:06 IST
ಅಕ್ಷರ ಗಾತ್ರ

ಹಳೇಬೀಡು: ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಹೊಯ್ಸಳೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ.
ಬೇಸಿಗೆ ರಜೆಯಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತಿತ್ತು. ಈ ವರ್ಷ ಮಳೆ ಇಲ್ಲದೆ ಉಷ್ಣಾಂಶ ಹೆಚ್ಚಾಗಿರುವುದರಿಂದ ಪ್ರವಾಸಿಗರು ಹಳೇಬೀಡಿನತ್ತ ಸುಳಿಯುತ್ತಿಲ್ಲ.

ಹೊಯ್ಸಳೇಶ್ವರ ದೇವಾಲಯದ ಗೋಡೆಗಳಲ್ಲಿ ನವಿರಾದ ಕೆತ್ತನೆ ಯೊಂದಿಗೆ ಮೂಡಿರುವ ಪುರಾಣ ಪುಣ್ಯ ಕಥೆಗಳ ಶಿಲ್ಪಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.  ನಕ್ಷತ್ರಾಕಾರದ ಜಗುಲಿಯ ಮೇಲೆ ನಡೆದುಕೊಂಡು ದೇವಾಲಯದ ಶಿಲ್ಪಗಳನ್ನು ವೀಕ್ಷಣೆ ಮಾಡಬೇಕು. ದೇವಾಲಯದ ಸುತ್ತಲಿನ ಶಿಲ್ಪಕಲೆ ವೀಕ್ಷಿಸಲು ಅಧಿಕವಾದ ತಾಪಮಾನ ಅಡ್ಡಿಯಾಗಿದೆ. ಹೀಗಾಗಿ ಪ್ರವಾಸಿಗರು ಹೊಯ್ಸಳ ದೇವಾಲಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಪ್ರವಾಸಿ ಮಾರ್ಗದರ್ಶಿಗಳಿಂದ ಕೇಳಿ ಬರುತ್ತಿದೆ.

ಜೀವನಕ್ಕೆ ಪ್ರವಾಸಿಗರನ್ನೇ ಅವಲಂಬಿಸಿರುವ ದೇಗುಲದ ಸುತ್ತಮುತ್ತ ಇರುವ ವ್ಯಾಪಾರಿಗಳು ಈಗ ಗಿರಾಕಿಗಾಗಿ ಕಾದು ಕುಳಿತುಕೊಳ್ಳುವಂತಾಗಿದೆ. ಪ್ರವಾಸಿ ಚಿತ್ರ, ಎಳನೀರು, ಚಹಾ, ಕಾಫಿ ಮಾರಾಟ ಮಾಡುವವರಿಗೆ ವ್ಯಾಪಾರ ಇಲ್ಲವಾಗಿದೆ. ಬೆರಳೆಣಿಕೆ ಪ್ರವಾಸಿಗರು ಬಂದು ಹೋಗುತ್ತಿರುವುದರಿಂದ ವ್ಯಾಪಾರಿಗಳು ಚಿಂತಾಕ್ರಾಂತರಾಗಿದ್ದಾರೆ.

‘ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪ್ರವಾಸಿಗರನ್ನು ಅವಲಂಬಿಸಿರುವ ಸಾವಿರಾರು ಮಂದಿಯ ಜೀವನ ಕಷ್ಟವಾಗುತ್ತದೆ. ಮಳೆ ಬಿದ್ದು ಭೂಮಿ ತಂಪಾದರೆ ಪ್ರವಾಸಿಗರಿಗೆ ಹಳೇಬೀಡಿನತ್ತ ಪ್ರಯಾಣ ಬೆಳೆಸುವ ಆಸಕ್ತಿ ಬರುತ್ತದೆ’ ಎನ್ನುತ್ತಾರೆ ಪ್ರವಾಸಿ ಚಿತ್ರ ಮಾರಾಟಗಾರ ಮಂಜು.

‘ಮಳೆ ಇಲ್ಲದೆ ರೈತರ ಬಳಿ ಬಿಡಿಗಾಸು ಇಲ್ಲದಂತಾಗಿದೆ. ಹೀಗಾಗಿ ಬೇರೆ ವ್ಯವಹಾರಗಳು ಸ್ಥಗಿತವಾಗಿವೆ. ಬಿಸಿಲಿನ ತಾಪದೊಂದಿಗೆ ಜನರಿಗೆ  ಹಣದ ಕೊರತೆ ಸಹ ಕಾಡುತ್ತಿದೆ. ಹೀಗಾಗಿ ಮಕ್ಕಳೊಂದಿಗೆ ಬೇಸಿಗೆ ರಜೆಯನ್ನು ಪ್ರವಾಸಿ ತಾಣದಲ್ಲಿ ಕಳೆಯಲು ಸಾಧ್ಯವಾಗದೆ ಮನೆಯಲ್ಲಿಯೇ ಉಳಿ ಯುತ್ತಿದ್ದಾರೆ’ ಎನ್ನುತ್ತಾರೆ ಪ್ರವಾಸಿ ಚಿತ್ರ ಮಾರಾಟಗಾರ ಸ್ವಾಮಿ.ಸಾಮಾನ್ಯವಾಗಿ ಏಪ್ರಿಲ್‌, ಮೇ ತಿಂಗಳಲ್ಲಿ ಹೊಯ್ಸಳ ದೇವಾಲಯ ಪ್ರವಾಸಿಗರಿಂದ ಗಿಜು ಗುಡುತ್ತಿತ್ತು. ಈ ವರ್ಷ ದೇಗುಲದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿದೆ.

‘ಹಸಿರಿನಿಂದ ನಳನಳಿಸುತ್ತಿದ್ದ ದೇವಾಲಯದ ಉದ್ಯಾನದಲ್ಲಿ ಪ್ರವಾಸಿ ಗರು ದಿನವಿಡಿ ಕಳೆಯುತ್ತಿದ್ದರು. ಕೊಳವೆ ಬಾವಿಗಳು ಬತ್ತಿರುವುದರಿಂದ ಉದ್ಯಾನ ದಲ್ಲಿ ಹುಲ್ಲುಕಡ್ಡಿಯೂ ಬೆಳೆದಿಲ್ಲ. ಹೀಗಾಗಿ ಪ್ರವಾಸಿಗರು ಕುಳಿತು ಕೊಳ್ಳು ವುದಕ್ಕೂ ಸ್ಥಳಾವಕಾಶ ಇಲ್ಲವಾಗಿದೆ. ಮಳೆ ಬಿದ್ದು ಉಷ್ಣಾಂಶ ತಗ್ಗಿದರೆ ಮಾತ್ರ ಹೆಚ್ಚಿನ ಪ್ರವಾಸಿಗರು ದೇವಾಲಯಕ್ಕೆ ಬರುತ್ತಾರೆ’ ಎಂದು ಮಕ್ಕಳ ಆಟಿಕೆ ವರ್ತಕ ಬಾಬಣ್ಣ ತಿಳಿಸಿದರು.

-ಎಚ್‌.ಎಸ್‌.ಅನಿಲ್‌ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT