ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಸಾವಿರ ಟನ್‌ ರಸಗೊಬ್ಬರ ದಾಸ್ತಾನು

Last Updated 26 ಏಪ್ರಿಲ್ 2017, 6:09 IST
ಅಕ್ಷರ ಗಾತ್ರ

ಹಾಸನ: ಮುಂಗಾರಿನ ಕೃಷಿ ಚಟುವಟಿಕೆಗೆ ಅಗತ್ಯವಿರುವ 24 ಸಾವಿರ ಟನ್‌ ರಸ ಗೊಬ್ಬರ ಪೈಕಿ ಈಗಾಗಲೇ 20 ಸಾವಿರ ಟನ್‌ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ಅಧಿಕಾರಿ ಭಾನುಪ್ರಕಾಶ್‌ ಹೇಳಿದರು.

ತಾಲ್ಲೂಕು ಪಂಚಾಯಿತಿ ಕಚೇರಿ ಸಂಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮುಂಗಾರು ಹಂಗಾಮಿಗೆ ಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಣೆಗೆ ಸಂಬಂಧಿಸಿದಂತೆ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ತಾಲ್ಲೂಕಿನಲ್ಲೂ ಶೇ 80ರಷ್ಟು ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯೇ ವಿತರಿಸಲಿದೆ. ಸರ್ಕಾರದ ಆದೇಶದಂತೆ ರಿಯಾಯಿತಿ ದರದಲ್ಲಿ ನ್ಯಾಯಬೆಲೆ ಅಂಗಡಿ ಮೂಲಕ ಬಿತ್ತನೆ ಬೀಜ ಪೂರೈಸಲಾಗುವುದು. ಆದರೆ, ಅವುಗಳು ರೈತ ಸಂಪರ್ಕ ಕೇಂದ್ರಗಳಿಂದ 5 ಕಿ.ಮೀ  ದೂರ ಇರಬೇಕು ಎಂದು ವಿವರಿಸಿದರು.

ಸದಸ್ಯ ನಿಂಗೇಗೌಡ ಮಾತನಾಡಿ, ರೈತರು ಪರಿಹಾರಕ್ಕೆ ಪ್ರತಿನಿತ್ಯ ಬ್ಯಾಂಕ್‌ಗಳಿಗೆ ಅಲೆಯುತ್ತಿದ್ದಾರೆ. ಅರ್ಹ ಫಲಾನುಭವಿಗಳು ಯಾರೆಂದು ಗೊಂದಲವಾಗುತ್ತಿದೆ. ಆದ್ದರಿಂದ ಎಕರೆಗೆ ಎಷ್ಟು ಬೆಳೆ ಪರಿಹಾರ ನೀಡಲಾಗುತ್ತಿದೆ. ಹೋಬಳಿ ಕೇಂದ್ರಗಳಲ್ಲಿ ಅರ್ಹ ಫಲಾನುಭವಿಗಳ ಪಟ್ಟಿ ಹಾಕುವಂತೆ ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಶಿವಶಂಕರಪ್ಪ, ಬೆಳೆ ಪರಿಹಾರ ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತಿದೆ. ಎಕರೆಗೆ ₹ 6,500 ಪರಿಹಾರ ನಿಗದಿ ಪಡಿಸಲಾಗಿದೆ. ಜಿಲ್ಲೆಯಲ್ಲಿ ಇನ್ನೂ 4 ಸಾವಿರ ರೈತರು ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡಿಸಬೇಕಿದೆ. ಶೀಘ್ರದಲ್ಲೇ ಆಧಾರ್‌ ಜೋಡಣೆ ಮಾಡಿ ಹಂತ, ಹಂತವಾಗಿ ಪರಿಹಾರ ನೀಡಲಾಗುವುದು. ಅಲ್ಲದೇ ಹೋಬಳಿ ಕೇಂದ್ರಗಳಲ್ಲೂ ಫಲಾನುಭವಿಗಳ ಹೆಸರು ಹಾಕುವಂತೆ ಸೂಚಿಸಲಾಗುವುದು ಎಂದರು.

ಬೆಳೆವಿಮೆ ಪಾವತಿಗೆ ಹೆಚ್ಚಿನ ಸಮಯ ನೀಡಲಿಲ್ಲ. ಮತ್ತೆ 15 ದಿನ ಮುಂದೂಡಿದರು. ಇದರಿಂದ ರೈತರು ಗೊಂದಲಕ್ಕೆ ಸಿಲುಕಿದರು. ಹೆಚ್ಚಿನ ರೈತರು ಬೆಳೆ ಪರಿಹಾರದಿಂದ ವಂಚಿತರಾಗಿದ್ದಾರೆ ಎಂದು  ಸದಸ್ಯ ಜಗದೀಶ್‌ ಸಭೆ ಗಮನಕ್ಕೆ ತಂದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ಬಿ.ಟಿ.ಸತೀಶ್‌, ಬೆಳೆವಿಮೆ ಪಾವತಿಸುವ ಸಂಬಂಧ ಕೃಷಿ ಇಲಾಖೆಯಿಂದ ತರಬೇತಿ ನೀಡಲಾಗಿತ್ತು. ಗ್ರಾಮಸಭೆ ಮೂಲಕ ಅರಿವು, ಜಾಹೀರಾತು ಹಾಗೂ ಕರಪತ್ರಗಳನ್ನು ಹಂಚಲಾಗಿತ್ತು ಎಂದರು.

ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಸರ್ವೆ ಅಧಿಕಾರಿಗಳು ರೈತರಿಂದ ಹಣ ಕೇಳುತ್ತಿದ್ದಾರೆ. ಪಿತ್ರಾರ್ಜಿತ ಆಸ್ತಿ ಸಮಸ್ಯೆ ಬಗೆಹರಿಸುತ್ತಿಲ್ಲ. ತಾಲ್ಲೂಕಿನ ಡೊಡ್ಡಬಾಗನಹಳ್ಳಿ ಹಾಗೂ ಅಗಿಲೆ ಗ್ರಾಮಗಳಲ್ಲಿ ಪೋಡಿಮುಕ್ತ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಸದಸ್ಯ ನಿಂಗೇಗೌಡ ದೂರಿದರು.

ಅಧಿಕಾರಿಗಳ ವಿರುದ್ಧ ಕೇವಲ ಮೌಖಿಕವಾಗಿ ಆರೋಪ ಮಾಡುವುದು ಸರಿಯಲ್ಲ. ಈ ಬಗ್ಗೆ ಸ್ಪಷ್ಟ ದಾಖಲೆ ನೀಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ತಹಶೀಲ್ದಾರ್‌ ಭರವಸೆ ನೀಡಿದರು.

ಮಡೇನೂರು ಕ್ಷೇತ್ರದ ಸದಸ್ಯ ಸುರೇಂದ್ರ ಮಾತನಾಡಿ, ಶಾಂತಿಗ್ರಾಮ ನಾಡ ಕಚೇರಿಯಲ್ಲಿಕಂದಾಯ  ಮತ್ತು ಗ್ರಾಮಲೆಕ್ಕಿಗ ಅಧಿಕಾರಿಗಳು ಸಿಗುವುದಿಲ್ಲ. ಗ್ರಾಮಸಭೆಗಳಲ್ಲೂ ಕಾಣಿಸು ವುದಿಲ್ಲ. ಮತ್ತೊಂದೆಡೆ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರತ್ನಮ್ಮ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದೇವರಾಜೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವನಂಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT