ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಂಗೀತ ಸೌಭಾಗ್ಯದಲ್ಲಿ..!

Last Updated 26 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಪ್ಪನ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಅಪ್ಪನ ಪ್ರಪಂಚಕ್ಕೆ ಬಲು ತಡವಾಗಿ ಹತ್ತಿರವಾಗತೊಡಗಿದೆ. ಈ ಎಂ.ವೆಂಕಟೇಶಕುಮಾರನಿಗೆ ಅಪ್ಪ ಕೊಟ್ಟಿದ್ದೇನು ಎಂಬ ಸಂಗತಿ ಈಗೀಗ ಅಂತರಾಳಕ್ಕೆ ಇಳಿಯತೊಡಗಿದೆ. 
 
ನಾನು ಸಣ್ಣವನಿದ್ದಾಗ ಅಪ್ಪನ ಬಳಿ ಎಲ್ಲವೂ ಇದ್ದವು. ಹೊಲ, ಮನೆ, ಎತ್ತು, ಚಕ್ಕಡಿ... ಎಲ್ಲವೂ. ಮತ್ತಿನ್ನೇನು ಬೇಕಿತ್ತು? ಆದರೆ ಅಪ್ಪನ ಬದುಕಲ್ಲಿ ಇನ್ನೂ ಇದ್ದವು. ವಚನ ರಾಮಾಯಣ, ಜೈಮಿನಿ ಭಾರತ ಅಪ್ಪನ ನಾಲಿಗೆ ಮೇಲೆ ನಲಿದಾಡುತ್ತಿದ್ದವು. ಬಯಲಾಟ, ತೊಗಲು ಬೊಂಬೆಯಾಟ ಅವರ ಬದುಕಿನ ಭಾಗವಾಗಿದ್ದವು. ಕರ್ನಾಟಕ ಸಂಗೀತವೂ ಅಪ್ಪನೊಳಗಿತ್ತು.
 
ಅಪ್ಪನಲ್ಲಿ ಇಷ್ಟೆಲ್ಲಾ ಇದ್ದರೂ ಅವ್ವ ಮಾತ್ರ ಹೈರಾಣಾಗಿ ಹೋಗಿದ್ದಳು. ಕಾರಣ; ಕಿತ್ತುತಿನ್ನುವ ಬಡತನ. ಅಪ್ಪನ ಕಲಾ ಜೀವನ ಹಣ ತಂದುಕೊಡುವ ವೃತ್ತಿ ಆಗಿರಲಿಲ್ಲ. ಅಪ್ಪನ ‘ಆಟ’ಗಳು ಅಮಾವಾಸ್ಯೆ, ಹುಣ್ಣಿಮೆಯ ಅತಿಥಿಯಾಗಿದ್ದವು. ಹೀಗಾಗಿ ಮನೆ, ಮಕ್ಕಳನ್ನು ಮುನ್ನಡೆಸಿಕೊಂಡು ಹೋಗುವುದು ಅವ್ವನಿಗೆ ‘ಹಬ್ಬ’ವಾಗಿ ಹೋಗಿತ್ತು.
 
ನನಗೆ ಆಶ್ಚರ್ಯ, ಬಡತನದ ಜೊತೆಗಿನ ಗುದ್ದಾಟದಲ್ಲಿ ಅಪ್ಪ, ತನ್ನ ಕಲೆಯನ್ನು ಕಾಪಿಟ್ಟುಕೊಂಡು ಬಂದ ಬಗೆಯನ್ನು ಶ್ರುತಿಸಿಕೊಂಡರೆ ನನ್ನ ಕಣ್ಣುಗಳು ಅರಳುತ್ತವೆ. ಹೀಗಾಗಿ ಅಪ್ಪನ ಸತ್ಯ ಈಗೀಗ ನನ್ನಲ್ಲಿ ಗಟ್ಟಿಯಾಗತೊಡಗಿದೆ.
 
ಹೂಲೆಪ್ಪ ನನ್ನಪ್ಪ, ಪಾರ್ವತವ್ವ ನನ್ನವ್ವ. ಬಳ್ಳಾರಿ ಸಮೀಪದ ಲಕ್ಷ್ಮೀಪುರ (ಈಗ ಆಂಧ್ರದ ರಾಯದುರ್ಗ ತಾಲ್ಲೂಕು, ಅನಂತಪುರ ಜಿಲ್ಲೆ) ನನ್ನೂರು. ಅಪ್ಪ ಜನಪದ ಬಯಲಾಟದ ಮೇಸ್ಟ್ರು. ಅವರು ಶುದ್ಧ ಶಾರೀರದಿಂದ ಲಕ್ಷಾಂತರ ಮನಸ್ಸುಗಳನ್ನು ಗೆದ್ದಿದ್ದರು. ಅವ್ವ ಬದುಕಿನ ಜಂಜಾಟಕ್ಕೆ ಬೇಸತ್ತಿದ್ದರಷ್ಟೇ, ಅವರಿಗೂ ದೊಡ್ಡ ಸಂಸ್ಕಾರವಿತ್ತು. ನನ್ನ ತಾಯಿಯ ತಂದೆ ಬೆಳಗಲ್ಲು ಹನುಮಂತಪ್ಪನವರು ಪ್ರಖ್ಯಾತ ಪಿಟೀಲು ವಾದಕರಾಗಿದ್ದರು. 
 
ಮಾವನ ಪ್ರಭಾವ: ಸದ್ಯ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿರುವ ಬೆಳಗಲ್ಲು ವೀರಣ್ಣ ನನ್ನ ಮಾವ. ಸೋದರ ಮಾವನೂ ಹೌದು, ಹೆಣ್ಣು ಕೊಟ್ಟ ಮಾವನೂ ಹೌದು. ಬಯಲಾಟ, ಜಾನಪದ ರಂಗಭೂಮಿಯಲ್ಲಿ ಮಾವನದು ಅತಿ ದೊಡ್ಡ ಹೆಸರು. ನಾನು ಹತ್ತು ಹನ್ನೆರಡು ವಯಸ್ಸಿನ ಹುಡುಗನಾಗಿದ್ದಾಗ ಅಪ್ಪನ ಹೆಜ್ಜೆಗಳಲ್ಲಿ ಹೆಜ್ಜೆ ಇಡುತ್ತಿದ್ದೆ. ಹಾಡಿಗೆ ಧ್ವನಿಗೂಡಿಸಿದ್ದೆ. ನನ್ನ ಧ್ವನಿ ಅಪ್ಪನಿಗೆ ಇಷ್ಟವಾಗಿತ್ತು.

ನನ್ನ ಹಾಡು ಕೇಳಿದವರೆಲ್ಲ ‘ಈ ಹುಡುಗನಿಗೆ ಸಂಗೀತ ಕಲಿಸಿ’ ಎಂಬ ಮಾತುಗಳನ್ನು ತಪ್ಪದೇ ಹೇಳುತ್ತಿದ್ದರು. ನನ್ನ ಮಾವನೂ ತನ್ನಕ್ಕನನ್ನು ನೋಡಲು ಬಂದಾಗ ವೆಂಕಟೇಶನಿಗೆ ಸಂಗೀತ ಕಲಿಸಬೇಕು ಎನ್ನುತ್ತಿದ್ದರು. ನನಗೆ ಮಾವನ ಮಾತು ವೇದವಾಕ್ಯದಂತಿತ್ತು. ಅವರು ಹೇಳಿದಂತೆ ನಡೆಯುತ್ತಿದ್ದೆ.
 
ಆಗ ಬಳ್ಳಾರಿ ಭಾಗದಲ್ಲಿ ಸಂಗೀತ ಹೇಳುವವರು ಯಾರೂ ಇರಲಿಲ್ಲ. ಇದ್ದರೂ ಅವರು ಕೇಳಿದ ಶುಲ್ಕ ಕಟ್ಟಲು ಅಪ್ಪನ ಬಳಿ ಹಣ ಇರಲಿಲ್ಲ. ಮಾವನ ಪರಿಚಯಸ್ಥರ ಕಡೆಯಿಂದ ಗದುಗಿನ ಪುಣ್ಯಾಶ್ರಮ ಪರಿಚಯವಾಯಿತು. ಆಶ್ರಮ ಸೇರಲೂ ಹಣವಿರಲಿಲ್ಲ. ಅಪ್ಪ ಐದು ಎಕರೆ ಹೊಲವನ್ನು ₹500ಕ್ಕೆ ಒತ್ತೆ ಇಟ್ಟು ಗದುಗಿನ ಹಾದಿ ತೋರಿಸಿದರು.
 
ಏಟು ಮತ್ತು ಅಳು: ಗದುಗಿನ ಪುಣ್ಯಾಶ್ರಮದಲ್ಲಿ ನಾನು ದೇವರನ್ನು ಕಂಡೆ. 11 ವರ್ಷದ ಪುಣ್ಯಾಶ್ರಮ ಜೀವನ ನನ್ನ ಪುಣ್ಯದ ಪರ್ವ ಕಾಲ. ಆದರೆ ಆರಂಭದಲ್ಲಿ ಪುಣ್ಯಾಶ್ರಮ ನನಗೆ ಕಡು ಕಷ್ಟ ಎನಿಸಿತ್ತು. ಹೇಳದೇ, ಕೇಳದೇ ಊರಿಗೆ ಓಡಿಹೋಗಿ ­ಬಿಡುತ್ತಿದ್ದೆ. ಮುಂಜಾನೆ ನಾಲ್ಕಕ್ಕೇ ಏಳಬೇಕು, ಕಣ್ಣ ತುಂಬ ನಿದ್ದೆ ಇಲ್ಲ, ಏಳೆಂಟು ಗಂಟೆ ಅಭ್ಯಾಸ ಮಾಡಬೇಕು, ಹಸುಗಳ ಸೆಗಣಿ ಬಳಿಯಬೇಕು, ಕಸ ಗುಡಿಸಬೇಕು. ಈ ಕೆಲಸಗಳಿಂದ ನನಗೂ ಸಾಕಾಗಿತ್ತು. ಆದರೆ ಕ್ರಮೇಣ ಇವೆಲ್ಲ ನನ್ನ ಸಂಗೀತ ಕಲಿಕೆಯ ಭಾಗವಾದವು.
 
ಆರಂಭದಲ್ಲಿ ನನಗೆ ಸಂಗೀತ ಶಿಕ್ಷಕರೊಬ್ಬರು ಪಾಠ ಹೇಳಿ­ಕೊಡುತ್ತಿದ್ದರು. ನಾನಿನ್ನೂ ಪುಟ್ಟರಾಜ ಗವಾಯಿಗಳ ಪಾದದ ಅಂಗಳಕ್ಕೆ ಬಂದಿರಲಿಲ್ಲ. ಆದರೆ ನಾನು ಹಾಡುವುದನ್ನು ಪುಟ್ಟರಾಜರು ಕೇಳಿದ್ದರು. ಒಮ್ಮೆ ಹಾಡುವಾಗ ನನ್ನ ಶಿಕ್ಷಕರು ನನಗೆ ಹೊಡೆದರು, ಜೋರಾಗಿ ಅತ್ತುಬಿಟ್ಟೆ. ಅಳುವನ್ನು ಕೇಳಿಸಿಕೊಂಡ ಪುಟ್ಟರಾಜರು ಇಬ್ಬರನ್ನು ಕರೆಸಿಕೊಂಡರು. ‘ಇನ್ನುಮುಂದೆ ನೀನು ಮಕ್ಕಳಿಗೆ ಹೊಡೆಯಕೂಡದು.

ವೆಂಕಟೇಶನಿಗೆ ನೀನಿನ್ನು ಪಾಠ ಹೇಳಬೇಡ. ಅವನು ನಮ್ಮ ಸಂಗಡ ಹಾಡುತ್ತಾನೆ’ ಎಂದು ಶಿಕ್ಷಕರಿಗೆ ತಾಕೀತು ಮಾಡಿದರು. ಅಲ್ಲಿಂದ ನಾನು ನನ್ನ ಗುರು ಪುಟ್ಟರಾಜರ ಮನಸ್ಸಿಗೆ ಬಂದೆ. ಗುರುವಿನ ಸೇವಕನಾಗಿ, ಶಿಷ್ಯನಾಗಿ 11 ವರ್ಷ ಗುರುವಿನ ಪುಟ್ಟ ಮಗುವಿನಂತಿದ್ದೆ.

ಪುಟ್ಟರಾಜರು ಪಾಠ ಹೇಳಿಕೊಡುವುದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಪ್ರೇಮಿಸಿದರು. ಬರಿ ಪಾಠ ಹೇಳುತ್ತಿರಲಿಲ್ಲ, ರಾಗ, ಲಯ, ತಾಳವನ್ನು ಮನಸ್ಸಿಗೆ ಬಿತ್ತುತ್ತಿದ್ದರು. ಗ್ವಾಲಿಯರ್‌, ಕಿರಾಣಾ ಘರಾಣೆಗಳ ರಸಾಸ್ವಾದ ಮಾಡಿಸಿದರು. ನಂತರ ಗುರುವಿನ ಜೊತೆ ಪ್ರವಾಸ ಮಾಡಿದೆ. ಅವರ ಪುರಾಣ ಪ್ರವಚನ, ಕೀರ್ತನಾ ಕಾರ್ಯಕ್ರಮಗಳಿಗೆ ಜೊತೆಯಾದೆ.
 
ಆ ದಿನಗಳು: ನಾನು 24ನೇ ವರ್ಷದಲ್ಲಿ ಮದುವೆಯಾದೆ. ಚತುರ್ಭುಜನಾದ ನಂತರ ಪುಣ್ಯಾಶ್ರಮದಲ್ಲಿ ಇರುವಂತಿಲ್ಲ. ಅದರಂತೆ ಗುರುವಿನ ಆಶೀರ್ವಾದ ಪಡೆದು ಆಶ್ರಮದಿಂದ ಹೊರಬಂದೆ. ಹಾಡುವುದಕ್ಕೆ ನನಗೆ ಆಹ್ವಾನ ಸಿಗುತ್ತಿರಲಿಲ್ಲ. ಸಂಗೀತದಿಂದ ಬದುಕು ಕಾಣುವ ದಿನಗಳೂ ಅವಾಗಿರಲಿಲ್ಲ. ಕಷ್ಟದ ದಿನಗಳು ಆರಂಭವಾದವು. ಕೈಯಲ್ಲಿ ದುಡಿಮೆ ಇಲ್ಲ. ಪುರಾಣ, ಕೀರ್ತನೆಗಳಲ್ಲಿ ಹಾಡುತ್ತಿದ್ದೆನಷ್ಟೆ. 
 
ಒಂದೂವರೆ ವರ್ಷ ಗದುಗಿನ ವಿಜಯ ಮಹಾಂತೇಶ ಕಲಾ ಕಾಲೇಜಿನಲ್ಲಿ ಸಂಗೀತ ಶಿಕ್ಷಕನಾಗಿದ್ದೆ. ಕೆಲ ಕಾಲ ಉಡುಪಿಯ ಟಿಎಂಎ ಪೈ ಅವರ ‘ಮುಕುಂದ ಕೃಪಾ’ದಲ್ಲಿ ಸಂಗೀತ ಪಾಠ ಮಾಡಿದೆ. ನಾನು ಸಣ್ಣವನಿದ್ದಾಗ ಅಪ್ಪ ಅನುಭವಿಸಿದ್ದ ಬಡತನದ ದಿನಗಳು ನನಗೂ ಬಂದವು. ಇತಿಹಾಸ ಪುನರಾವರ್ತನೆಯಾಯಿತು.

ಆದರೆ ಕಾಲ ಹಾಗೆಯೇ ಉಳಿಯಲಿಲ್ಲ. 1984ರಲ್ಲಿ ಧಾರವಾಡದ ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಕೆಲಸ ಸಿಕ್ಕಿತು. ಅಲ್ಲಿ 9 ವರ್ಷ ನೌಕರಿ ಮಾಡಿದೆ. ನಂತರ ಕೆ.ಸಿ.ಡಿ. ಅಂಗಳ ಸೇರಿದೆ. ಅಲ್ಲಿಂದ ನನ್ನಲ್ಲಿ ಹಲವು ಬದಲಾವಣೆಗಳಾದವು. ಕೆ.ಸಿ.ಡಿಯಲ್ಲಿ ಸಂಗೀತ ಬಲುದೊಡ್ಡ ಅಧ್ಯಯನವಾಗಿತ್ತು. ಸಂಗೀತ ಪಾಠ ಮಾಡುತ್ತಲೇ ರಾಗಗಳ ಆಳ ಅರ್ಥಮಾಡಿಕೊಂಡೆ. ಗಾಯನ, ಚಿಂತನ, ಮನನ ಆರಂಭವಾದವು. ಸಾಲು ಸಾಲು ಕಛೇರಿ ಬಂದವು. ವಚನ, ದಾಸರ ಪದಗಳಲ್ಲಿ ಮಿಂದೆದ್ದೆ.
 
ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವದಲ್ಲಿ ಹಾಡಲು ಭಾರತರತ್ನ ಭೀಮಸೇನ ಜೋಶಿ ಅವರು ಟೆಲಿಗ್ರಾಂ ಕಳುಹಿಸಿದ್ದರು. ಅಂದು ನಾನು ಹಾಡಿದ ಯಮನ್‌, ಶಂಕರ ರಾಗಗಳನ್ನು ರಸಿಕರು ಒಪ್ಪಿ ಆಶೀರ್ವದಿಸಿದ್ದರು. ಮುಂಜಾನೆ ಪತ್ರಿಕೆಗಳ ಮುಖಪುಟದಲ್ಲೇ ನನ್ನ ಚಿತ್ರ ಬಂದಿತ್ತು.

ಕೋಲ್ಕತ್ತದ ಐಟಿಸಿ ಮ್ಯೂಸಿಕ್‌ ಕಾನ್ಫರೆನ್ಸ್‌ನಲ್ಲಿ ಹಾಡಿದ್ದು, ಉತ್ತರ ಭಾರತದ ಹಲವು ರಾಜ್ಯಗಳ ಜನರಿಗೆ ಆಪ್ತನಾದದ್ದು, ಅಮೆರಿಕ, ಇಂಗ್ಲೆಂಡ್‌, ಸಿಂಗಪುರಗಳಿಗೆ ಹೋಗಿಬಂದದ್ದು ಎಲ್ಲವೂ ನನ್ನ ಗುರುವಿನ ಆಶೀರ್ವಾದ. ಈ ಸಂಗೀತ ಸೌಭಾಗ್ಯದಿಂದ ಹಲವು ಹೆಮ್ಮೆಯ ಕ್ಷಣಗಳಿಗೆ ಸಾಕ್ಷಿಯಾದೆ. ಪದ್ಮಶ್ರೀ ಗೌರವಕ್ಕೂ ಕೊರಳೊಡ್ಡಿದೆ.
 
ನನಗೆ ಮೂವರು ಮಕ್ಕಳು, ನಾಲ್ವರು ಮೊಮ್ಮಕ್ಕಳು. ಮಕ್ಕಳೆಲ್ಲರೂ ಶಿಕ್ಷಕರು. ಪತ್ನಿ ಲಕ್ಷ್ಮಿದೇವಿ, ನನ್ನ ಮಕ್ಕಳನ್ನು ಸಾಕಿ ಸಲಹಲು ನನ್ನ ಅಮ್ಮನಂತೆಯೇ ಕಷ್ಟಪಟ್ಟಿದ್ದಾರೆ. 33 ವರ್ಷ ಸಂಗೀತ ಪಾಠ ಹೇಳಿ ಕೆ.ಸಿ.ಡಿಯಿಂದ 2015ರಲ್ಲಿ ನಿವೃತ್ತನಾಗಿದ್ದೇನೆ. ಪಾಠ ಹೇಳುವುದನ್ನು ಈಗ ಕಡಿಮೆ ಮಾಡಿದ್ದೇನೆ.

ಕಲಿಯುವುದಿನ್ನೂ ಬೆಟ್ಟದಷ್ಟಿದೆ. ಮತ್ತೆ ವಿದ್ಯಾರ್ಥಿಯಾಗಿದ್ದೇನೆ. ಸ್ವರ ಸಂಗತಿಯನ್ನು ಮತ್ತೆ ಮತ್ತೆ ಅಭ್ಯಾಸ ಮಾಡುತ್ತಿದ್ದೇನೆ. 
ನಿರೂಪಣೆ: ಯೋಗೇಶ್‌ ಮಾರೇನಹಳ್ಳಿ
****
ಪೊಲೀಸ್‌ ಕೆಲಸಕ್ಕೆ ಹೊರಟು ನಿಂತಿದ್ದೆ
ಪುಣ್ಯಾಶ್ರಮದಿಂದ ಹೊರ ಬಂದಾಗ ನಾನು ಪೊಲೀಸ್‌ ಪೇದೆ ಆಗಲು ಅರ್ಜಿ ಹಾಕಿದ್ದೆ. ಉದ್ಯೋಗ ಇಲಾಖೆಯಲ್ಲಿ ಹೆಸರು ನೋಂದಣಿಯನ್ನೂ ಮಾಡಿಸಿದ್ದೆ. ಪೊಲೀಸ್‌ ಕೆಲಸದ ಸಂದರ್ಶನಕ್ಕೆ ಹಾಜರಾಗುವಂತೆ ಪತ್ರ ಬಂದಿತ್ತು. ಆಗ ನಾನು ಗದುಗಿನ ವಿಜಯ ಮಹಾಂತೇಶ ವಿದ್ಯಾಲಯದಲ್ಲಿ ಸಂಗೀತ ಪಾಠ ಹೇಳುತ್ತಿದ್ದೆ.

ಕೆಲಸದ ವಿಷಯವನ್ನು ಗದುಗಿನ ಅಕ್ಕಿ ಅವರ ಬಳಿ ತಿಳಿಸಿದಾಗ ಅವರು ಗೊಳ್ಳನೆ ನಕ್ಕರು. ‘ಈ ಕೆಲಸ ನಿನಗೆ ಆಗಿ ಬರುವುದಿಲ್ಲ. ಸ್ವಲ್ಪ ದಿನ ಕಾಯಿ. ಸಂಗೀತದಲ್ಲಿ ನಿನಗೆ ಒಳ್ಳೆಯ ದಿನ ಬರುತ್ತದೆ’ ಎಂದರು. ಅಲ್ಲಿಗೆ ಪೊಲೀಸ್‌ ಪೇದೆಯಾಗುವ ನನ್ನ ನಿರ್ಧಾರಕ್ಕೆ ತೆರೆ ಬಿದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT