ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಟಿಲೇಟರ್‌

ಪಿಚ್ಚರ್ ನೋಡಿ
Last Updated 26 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಪ್ರಸಕ್ತ ಸಾಲಿನಲ್ಲಿ ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದುಕೊಂಡಿರುವ ಮರಾಠಿ ಭಾಷೆಯ ಸಿನಿಮಾ ‘ವೆಂಟಿಲೇಟರ್‌’. ರಾಜೇಶ್‌ ಮಾಪುಸ್ಕರ್‌ ನಿರ್ದೇಶನದ ಈ ಚಿತ್ರ 2016ರ ನವೆಂಬರ್‌ನಲ್ಲಿ ಬಿಡುಗಡೆಯಾಗಿತ್ತು. 
 
‘ವೆಂಟಿಲೇಟರ್‌’ ಸಿನಿಮಾದ ಕಥೆಯೇ ವಿಚಿತ್ರವಾದದ್ದು. ಚರ್ವಿತ ಚರ್ವಣ ಅರ್ಥದಲ್ಲಿ ನೋಡಿದರೆ ಈ ಸಿನಿಮಾದಲ್ಲಿ ಅಂಥ ಟ್ವಿಸ್ಟ್‌ಗಳುಳ್ಳ ಕಥೆಯೇ ಇಲ್ಲ. ಆದರೆ ಬದುಕಿನ ಹಲವು ಹರಿವುಗಳು ಸೇರಿ ಒಂದು ಭಾವತೀವ್ರ ಕಥನಕೇಂದ್ರವನ್ನು ನಿರ್ಮಿತಗೊಳಿಸುವ ಶಕ್ತಿ ಇದರ ಚಿತ್ರಕಥೆಗಿದೆ.
 
ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಈ ಸಿನಿಮಾವನ್ನು ನಿರ್ಮಿಸಿರುವುದಲ್ಲದೇ, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಕೂಡ. ಜೋಧಾ ಅಕ್ಬರ್‌, ಸ್ವದೇಶ್‌, ಲಗಾನ್‌ನಂಥ ಸಿನಿಮಾ ನಿರ್ದೇಶಿಸಿರುವ ಆಶುತೋಷ್‌ ಗೋವಾರಿಕರ್‌ ಅವರು ಒಂದು ಪ್ರಮುಖ ಪಾತ್ರದಲ್ಲಿ ನಟಿಸಿರುವುದೂ ಇದರ ವಿಶೇಷತೆಗಳಲ್ಲೊಂದು.
 
ಒಂದು ಬಹುದೊಡ್ಡ ಕೂಡು ಕುಟುಂಬದ ಹಿರಿಯ ಮತ್ತು ಗೌರವಾನ್ವಿತ ವ್ಯಕ್ತಿ ಗಜು ಕಾಕ, ಗಣೇಶ ಚತುರ್ಥಿಗೆ ಕೆಲವೇ ದಿನಗಳ ಮುಂಚೆ ಕೋಮಾ ಸ್ಥಿತಿಗೆ ಹೋಗಿದ್ದಾರೆ. ವೆಂಟಿಲೇಟರ್‌ ಮೂಲಕ ಅವರಿಗೆ ಆಮ್ಲಜನಕ ಸರಬರಾಜು ಮಾಡಲಾಗುತ್ತಿದೆ.
 
ಬೇರೆ ಬೇರೆ ಪ್ರದೇಶ, ವೃತ್ತಿಗಳಲ್ಲಿ ಹಂಚಿಹೋಗಿದ್ದ ಆ ಕುಟುಂಬದ ಸದಸ್ಯರೆಲ್ಲರೂ ಗಜುಕಾಕನ ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆಯಲ್ಲಿ ಸೇರುತ್ತಾರೆ. ಬಹುತೇಕ ಸಿನಿಮಾ ನಡೆಯುವುದೂ ಆಸ್ಪತ್ರೆಯಲ್ಲಿಯೇ. 
 
ಕುಟುಂಬದ ಹಿರಿಯನ ಸಾವಿನ ಎದುರಲ್ಲಿ ಮನುಷ್ಯನ ಗುಣಸ್ವಭಾವಗಳು, ಸಣ್ಣತನಗಳು, ಆತ್ಮವಂಚನೆಯ ಸಾಧ್ಯತೆಗಳು, ಸಂಬಂಧಗಳ ಗೋಜಲು, ಹುಸಿತನಗಳು, ಅದೆಲ್ಲವನ್ನೂ ಮೀರಿ ಎಲ್ಲರ ಎದೆಯೊಳಗೆ ಅದೃಶ್ಯವಾಗಿ ಹರಿಯುತ್ತಲೇ ಇರುವ ಮಾನವೀಯತೆಯ ಒರತೆ ಈ ಎಲ್ಲ ಅಂಶಗಳನ್ನೂ ಇಟ್ಟುಕೊಂಡು ಸಿನಿಮಾ ಕಟ್ಟಿದ್ದಾರೆ ನಿರ್ದೇಶಕ ರಾಜೇಶ್‌.
 
ಸಾವಿನ ಎದುರು ಬದಲಾಗುತ್ತ ಹೋಗುವ ಸಂಬಂಧಗಳ ಬಣ್ಣಗಳನ್ನು ಬಹುಸೂಕ್ಷ್ಮವಾಗಿ ತೋರಿಸಿರುವ ಈ ಸಿನಿಮಾ, ತೀರಾ ಗಂಭೀರವಾಗಿಯೇನೂ ಸಾಗುವುದಿಲ್ಲ. ಹಾಸ್ಯಕ್ಕಾಗಿ ಹಾಸ್ಯ ಎಂಬ ಸಿದ್ಧ ಸೂತ್ರದಾಚೆ ಸಾಂದರ್ಭಿಕವಾಗಿ ಉಕ್ಕುವ ಸಹಜ ಹಾಸ್ಯದಲ್ಲಿಯೇ ನಗಿಸುತ್ತದೆ. ಹಾಗೆಯೇ ಬದುಕಿಗೆ ಅಂಟಿಕೊಂಡಿರುವ ಭ್ರಮೆಗಳ ಪೊರೆಯನ್ನು ಒಂದೊಂದಾಗಿ ಒಡೆಯುತ್ತ ಕಣ್ಣಲ್ಲಿ ನೀರನ್ನೂ ಹನಿಸುತ್ತದೆ. 
 
ಒಂದೇ ಕುಟುಂಬವಾದರೂ ಎಲ್ಲರಿಗೂ ಅವರವರದೇ ಆದ ಪ್ರಪಂಚವಿದೆ. ಆ ಪ್ರಪಂಚದಲ್ಲಿ ಅರ್ಧ ಹುಸಿಯಾಗಿ, ಇನ್ನರ್ಧ ಪೊಳ್ಳಾಗಿ ಬದುಕನ್ನು ಕಟ್ಟಿಕೊಂಡಿರುವ ಅವರೆಲ್ಲರನ್ನೂ ಬಂಧಿಸುವ ಒಂದೇ ಎಳೆಯೆಂದರೆ ಗಜು ಕಾಕ.
 
ಅವನ ಮೇಲೆ ಅವರೆಲ್ಲರಿಗೂ ಅಗಾಧ ಗೌರವ. ಜತೆಗೆ ಅವನು ಗಣೇಶ ಚತುರ್ಥಿಯೊಳಗೇ ಸತ್ತುಹೋದರೆ ಆ ಸಂಭ್ರಮಕ್ಕೆಲ್ಲಿ ಅಡ್ಡಿಯಾಗುತ್ತದೋ ಎಂಬ ಆತಂಕ ಅವರೆಲ್ಲರಿಗೂ ಇದೆ. ಹಾಗೆಯೇ ವೆಂಟಿಲೇಟರ್‌ನಲ್ಲಿರಿಸಿಕೊಳ್ಳೋಣ ಎಂದರೆ ಖರ್ಚಾಗುವ ಹಣದ ಬಗ್ಗೆ ಚಿಂತೆ.
 
ಈ ಎಲ್ಲ ತಲ್ಲಣ–ತುಯ್ತಗಳನ್ನು ಒಂದು ನಿರ್ದಿಷ್ಟ ಅಂತರದಲ್ಲಿದ್ದುಕೊಂಡೇ ತೋರಿಸುವ ಕಾರಣಕ್ಕೆ ‘ವೆಂಟಿಲೇಟರ್‌’ ಇಷ್ಟವಾಗುತ್ತದೆ. ಇಲ್ಲಿ ‘ವೆಂಟಿಲೇಟರ್‌’ ಕೃತಕ ಉಸಿರಾಟದ ಸಾಧನವಷ್ಟೇ ಆಗದೇ ಬದುಕಿನ ಹಲವು ಸತ್ಯಗಳನ್ನು ದರ್ಶಿಸುವ ಸಾಂಕೇತಿಕ ಸೂಚಿಯಾಗಿಯೂ ಕಾಣುತ್ತದೆ.
 
ಪಕ್ವ ಅಭಿನಯ, ಬಿಗಿಯಾದ ಚಿತ್ರಕಥೆ, ಒಟ್ಟಾರೆ ವಾತಾವರಣ ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಛಾಯಾಗ್ರಹಣ ಎಲ್ಲವೂ ಈ ಚಿತ್ರದ ಧನಾತ್ಮಕ ಅಂಶಗಳೇ. ಭಾವುಕ ಜಗತ್ತನ್ನು ತಟ್ಟುವ ಕಾರಣಕ್ಕಷ್ಟೇ ಅಲ್ಲ, ಸಿನಿಮಾದ ತಾಂತ್ರಿಕ ಮತ್ತು ತಾತ್ವಿಕ ಭಾಗಗಳೆರಡನ್ನೂ ಎಷ್ಟು ಸಶಕ್ತವಾಗಿ ಬೆಸೆಯಬಹುದು ಎಂಬುದನ್ನು ಅರಿಯುವುದಕ್ಕೂ ‘ವೆಂಟಿಲೇಟರ್‌’ ನೋಡಬಹುದು. ಯೂಟ್ಯೂಬ್‌ನಲ್ಲಿ goo.gl/ITTmfm ಕೊಂಡಿ ಬಳಸಿ ಈ ಸಿನಿಮಾ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT