ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳದಿಂಗಳ ನೋಡಾ...

Last Updated 26 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಹುಣ್ಣಿಮೆ ರಾತ್ರಿಯಲಿ, ಹೊಲದ ಹಬ್ಬದಲಿ...
ವಿದ್ಯಾರ್ಥಿಯಾಗಿದ್ದಾಗ ಏಪ್ರಿಲ್ ಎಂದರೆ ಖುಷಿಯೋ ಖುಷಿ ನನಗೆ. ಯಾಕೆಂದರೆ ಬೇಸಿಗೆಯ ಆರಂಭದಲ್ಲೇ ರಜೆ ಕಳೆಯಲು ನಮ್ಮೂರಾದ ಹೊಳಲ್ಕೆರೆಯ ತೇಕಲವಟ್ಟಿಗೆ ಹೋಗುತ್ತಿದ್ದೆವು. ಅದು ರೈತರು ಹೊಲಗಳನ್ನು ಮಾಗಿಮಾಡುವ ಸಮಯ. ಆಗಿನ್ನೂ ಟ್ರ್ಯಾಕ್ಟರ್ ಬಂದಿರಲಿಲ್ಲ.

ಮಾಗಿಮಾಡಲು ನಾಲ್ಕೈದು ಜೊತೆ ಎತ್ತುಗಳನ್ನು ‘ವರ್ಜಿ’ ಹೂಡಿ ಕಬ್ಬಿಣದಿಂದ ಮಾಡಿದ ದೊಡ್ಡ ಗಾತ್ರದ ನೇಗಿಲಿನಿಂದ ‘ಮಡಿಕೆ’ ಹೊಡೆಯುತ್ತಿದ್ದರು. ಆಗ ಕೆಲಸದವರ ಅವಶ್ಯಕತೆ ಹೆಚ್ಚಿದ್ದುದರಿಂದ ಎಮ್ಮೆ, ದನ ಕಾಯುವ ಆಳುಗಳನ್ನು ಈ ಕೆಲಸಕ್ಕೆ ಬಳಸಿಕೊಂಡು ನಮ್ಮನ್ನು ಎಮ್ಮೆ ಕಾಯಲು ಕಳಿಸುತ್ತಿದ್ದರು.

ನಾವು ಎಂಟು ಹತ್ತು ಸ್ನೇಹಿತರು ಒಟ್ಟುಗೂಡಿ ಎಲ್ಲರ ಎಮ್ಮೆ ದನಗಳನ್ನು ಹೊಡೆದುಕೊಂಡು ಗುಡ್ಡದ ತಪ್ಪಲಿನಲ್ಲಿ ಮೇಯಲು ಬಿಡುತ್ತಿದ್ದೆವು. ಕೆರೆಯ ಅಂಗಳದಲ್ಲಿ ಬೇಸಿಗೆಯ ಬಿಸಿಲಿನ ಝಳವನ್ನು ಲೆಕ್ಕಿಸದೆ ಬುಗುರಿ, ಚಿನ್ನಿದಾಂಡು, ಮರಕೋತಿ, ಗೋಲಿ, ಲಗೋರಿ ಆಟಗಳನ್ನು ಆಡಿ ಬಾವಿಗಳಲ್ಲಿ ಈಜುವುದು, ಗುಡ್ಡದ ಕುರುಚಲು ಗಿಡಗಳಲ್ಲಿ ಸಿಗುವ ಜೀರುದುಂಬೆಗಳನ್ನು ಹಿಡಿದು ದಾರಕಟ್ಟಿ ಆಡಿಸುವುದು ಎಂದರೆ ನಮಗೆ ಎಲ್ಲಿಲ್ಲದ ಖುಷಿ. 
 
ಇದರ ಜೊತೆಗೆ ನೀರಿನ ಆಸರೆಯಿದ್ದ ಹೊಲಗಳಲ್ಲಿ ಬೆಳೆಯುತ್ತಿದ್ದ ಶೇಂಗಾ, ಮೆಕ್ಕೆಜೋಳಗಳನ್ನು ಕದ್ದು ತಂದು ಸುಟ್ಟು ತಿನ್ನುವುದು, ನಮ್ಮದೇ ತೋಟಗಳ ತೆಂಗಿನಮರಗಳಿಂದ ಎಳನೀರು ಕದ್ದು ಕುಡಿಯುವ ಆಟಗಳಲ್ಲಿ ಎಷ್ಟು ಮಗ್ನರಾಗಿ ಇರುತ್ತಿದ್ದೆವೆಂದರೆ, ಎಮ್ಮೆ ದನಗಳು ಗುಡ್ಡದ ಪಕ್ಕದ ತೋಟಗಳಲ್ಲಿ ನುಗ್ಗಿ ಅಲ್ಲಿನ ಬೆಳೆಗಳನ್ನು ಹಾಳುಮಾಡಿದಾಗ, ಆ ತೋಟದವರ ಕೈಯಲ್ಲಿ ಬಾಯಿಗೆ ಬಂದ ಹಾಗೆ ಬೈಸಿಕೊಳ್ಳುತ್ತಿದ್ದೆವು.
 
ಇನ್ನು ಕೆಲವು ಬಾರಿ ಹೊತ್ತುಮುಳುಗಿ ದನಕರುಗಳು ಮನೆ ಸೇರಿದರೂ ನಮ್ಮ ಆಟಗಳು ಮುಗಿಯದೆ ಮನೆಯವರು ಎರಡು ಏಟು ಬಿಡುವವರೆಗೂ ಮನೆ ನೆನಪಾಗುತ್ತಿರಲಿಲ್ಲ. ರಾತ್ರಿ ಹೊತ್ತು ಶೇಂಗಾ, ಸೂರ್ಯಕಾಂತಿ, ಜೋಳದ ಹೊಲಗಳಿಗೆ ಕಾಡುಹಂದಿಗಳು ನುಗ್ಗುತ್ತಿದ್ದುದರಿಂದ ಹೊಲಕಾಯಲು ಹೋಗುತ್ತಿದ್ದುದುಂಟು.

ಹುಣ್ಣಿಮೆ ರಾತ್ರಿಗಳಲ್ಲಂತೂ ಹೊಲದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತಿತ್ತು. ರೊಟ್ಟಿ, ಬುತ್ತಿಗಳನ್ನು ಕಟ್ಟಿಕೊಂಡು ಹೋಗಿ ಆ ಬೆಳದಿಂಗಳಲ್ಲಿ ಎಲ್ಲರೂ ಕೂತು ಊಟ ಮಾಡುವುದು, ಅಜ್ಜನಿಂದ ರೋಚಕ ಕಥೆಗಳನ್ನು ಕೇಳುವುದೆಂದರೆ ಸ್ವರ್ಗಕ್ಕೆ ಮೂರೇ ಗೇಣು.  ನಮ್ಮ ಹಳ್ಳಿಗಳ ಕಡೆ ಅತೀ ದೊಡ್ಡ ಹಬ್ಬವೆಂದರೆ ಯುಗಾದಿ. ಬೇಸಿಗೆಯಲ್ಲಿ ಬರುವ ಈ ಹಬ್ಬ  ರಜೆಗೆ ಇನ್ನಷ್ಟು ಮೆರುಗು ತಂದುಕೊಡುತ್ತಿತ್ತು. 
 
ವಾರದ ಮೊದಲೇ ಹಬ್ಬದ ಸಡಗರ ಪ್ರಾರಂಭವಾಗುತ್ತದೆ. ಮೊದಲ ದಿನ ಮೈಗೆ ಹರಳೆಣ್ಣೆ ಹಚ್ಚಿಕೊಂಡು, ಬಿಸಿಲಲ್ಲಿ ಚೆನ್ನಾಗಿ ಒಣಗಿಸಿಕೊಂಡು, ಸೀಗೆಕಾಯಿ ಸ್ನಾನಮಾಡಿ ಸೊಂಟದ ಉಡುದಾರ ಬದಲಿಸಿಕೊಂಡು, ಹೊಸ ಬಟ್ಟೆ ತೊಟ್ಟು ತೋರಣಕ್ಕೆ ಮಾವಿನ ಎಲೆ, ಹೂ ಹಾಗೂ ಬೇವಿನಸೊಪ್ಪು ತಂದು ಮನೆಯ ಬಾಗಿಲನ್ನು ಸಿಂಗರಿಸುವುದು, ಬೇವು-ಬೆಲ್ಲ ತಿಂದು ಭರ್ಜರಿಯಾಗಿ ಬಾಳೆಎಲೆಯಲ್ಲಿ ಹೋಳಿಗೆ ಊಟ ಮಾಡುವುದು, ಜೋಕಾಲಿ ಆಡುತ್ತಿದ್ದೆವು ಹೀಗೆ ಕೈ ತುಂಬ ಕೆಲಸ. 
 
ರಾತ್ರಿಯೆಲ್ಲ ಚೌಕಾಬಾರ, ಹುಣಸೆಪಿಕ್ಕ, ಕೋಲಾಟ, ನಾಟಕ, ಮೋಡಿ ಆಟಗಳು. ಎರಡನೆಯ ದಿನ ಸಾಯಂಕಾಲ, ಅಂದರೆ ಅಮಾವಾಸ್ಯೆಯ ಮಾರನೆ ದಿನ ಆಗಸದ ಮೋಡಗಳ ನಡುವೆ ಒಂದು ಸಣ್ಣ ಚುಕ್ಕಿಯಂತೆ ಮೂಡಿ ಮರೆಯಾಗುವ ಚಂದಿರನನ್ನು ಹುಡುಕಿ, ಕಣ್ಣು ಸ್ವಲ್ಪ ಮಬ್ಬಾದ ಹಿರಿಯರಿಗೆ ತೋರಿಸುವುದೇ ಒಂದು ವಿಶೇಷ.

ಮೂರನೆಯ ದಿನವಂತೂ ನೀರು ಎರಚಾಡುವುದು ಹಾಗೂ ಮೊಲ, ಕಾಡುಹಂದಿ ಬೇಟೆಗೆ ಹೋಗುವುದು ರೋಚಕ ಅನುಭವ. ಈಗ ಕಾರಣಾಂತರಗಳಿಂದ ಹಳ್ಳಿ ತೊರೆದು ಪಟ್ಟಣ ಸೇರಿ ಕೆಲಸದ ಜಂಜಾಟಗಳ ನಡುವೆ ಹಬ್ಬಕ್ಕೆ ಸಿಗುವ ಒಂದು ದಿನದ ರಜೆಯನ್ನು ಮನೆಯ ಸಣ್ಣಪುಟ್ಟ ಕೆಲಸಗಳಿಗೋ ವಿಶ್ರಾಂತಿಗೋ ಬಳಸುವಂತಾಗಿದೆ.

ಇನ್ನು ಪಟ್ಟಣದ ಮಕ್ಕಳು ಬೇಸಿಗೆ ರಜೆಯಲ್ಲಿ ಒಂದು ಸಣ್ಣ ಕೊಳದಲ್ಲಿ ನೀರೇ ಕಾಣದವರಂತೆ ನೂರಾರು ಸಂಖ್ಯೆಯಲ್ಲಿ ಈಜುವುದು, ಮೈದಾನವೇ ಕಾಣದಂತೆ ತುಂಬಿಕೊಂಡು ಆಡುವುದು, ರಸ್ತೆಗಳಲ್ಲಿ ವಾಹನಗಳ ಮಧ್ಯೆಯೇ ಆಟವಾಡುವುದನ್ನು ನೋಡಿದರೆ ಮತ್ತೆ ನಮ್ಮ ಬಾಲ್ಯದ ಬೇಸಿಗೆ ನೆನಪಾಗುತ್ತದೆ.  
-ಸ್ವ್ಯಾನ್ ಕೃಷ್ಣಮೂರ್ತಿಬೆಂಗಳೂರು 
 
ಮೊಗ್ಗಿನ ಜಡೆಯಲಿ ಮನಸ್ಸೂ ಅರಳಿತು
ಬೇಸಿಗೆ ಎಂದರೆ ದೊಡ್ಡವರಿಗಿಂತ ಮಕ್ಕಳಿಗೇ ಹೆಚ್ಚು ಖುಷಿ. ಜೊತೆಗೆ ತಾಯಂದಿರಿಗೂ ಒಂದಿಷ್ಟು ಬಿಡುವು ಸಿಗುವ ಸಮಯ ಬೇಸಿಗೆ ಕಾಲವೇ. ದಿನಾ ಬೆಳಿಗ್ಗೆ ಏಳುತ್ತಿದ್ದಂತೆ ಪುರಸೊತ್ತಿಲ್ಲದೇ, ತುರ್ತಾಗಿ ಮಾಡುತ್ತಿದ್ದ ಊಟೋಪಚಾರಗಳಿಗೆ ಈ ತಿಂಗಳು ವಿರಾಮ. ಆದರೆ ಪೂರ್ತಿ ವಿರಾಮ ಎನ್ನುವಂತಿಲ್ಲ. ಮಧ್ಯಾಹ್ನ ಮಕ್ಕಳಿಗೆ ರುಚಿ ಎನ್ನಿಸುವ ಹಪ್ಪಳ, ಸಂಡಿಗೆ, ಪೇಣಿ, ಹುರಿಗಾಳು ಇತ್ಯಾದಿಗಳನ್ನು ಮಾಡಲು ಈ ತಿಂಗಳಿಗಿಂತ ಪ್ರಶಸ್ತ ಇನ್ನಾವುದಿದೆ? 
 
ನದಿ, ಕೆರೆ, ಹಳ್ಳ ಅಂತೆಲ್ಲ ಸ್ವತಂತ್ರವಾಗಿ ಜೊತೆ ಹುಡುಗರೊಂದಿಗೆ ಸಂಚಾರ ಮಾಡಿದ ನಮ್ಮ ಬಾಲ್ಯವನ್ನೂ ಮರೆಯುವಂತಿಲ್ಲ. ಅಲ್ಲಲ್ಲಿ ಸುತ್ತಾಟ, ಮಾವಿನ ಮರಕ್ಕೆ ಕಲ್ಲು ಹೊಡೆಯುವ ದೃಶ್ಯಗಳು ನಮ್ಮೂರುಗಳಲ್ಲಿ ತಿಂಗಳುದ್ದಕ್ಕೂ ಇರುವುದೇ.
 
ಇವಿಷ್ಟು ದಿನದ ವ್ಯವಹಾರಗಳಾದರೆ, ರಾತ್ರಿಯಲ್ಲಿ ಬೆಳದಿಂಗಳ ಚೆಲವು. ಆ ಚೆಲುವಿಗೆ ಜೊತೆಯಾಗಲು ಕೋಲಾಟ, ಕಂಬದಾಟ, ತಿಳಿದಂತಹ ಆಟಗಳು. ಜೊತೆಗೆ ಬೆಳದಿಂಗಳ ಕೈತುತ್ತಿನ ಊಟ.

ಬೆಳದಿಂಗಳ ಬೆಳಕಲ್ಲಿ ಸಾಮೂಹಿಕವಾಗಿ ಊಟ ಮಾಡುತ್ತಿದ್ದ ಆನಂದಕ್ಕೆ ಎಣೆಯುಂಟೆ?. ಮರೆಯಲಾಗದ ಕ್ಷಣಗಳವು. ನೆಂಟರಿಷ್ಟರು, ಸ್ನೇಹಿತರ ಮನೆಗಳಿಗೆ ಓಡಾಟ, ಜಾತ್ರೆಗಳ ಸಂಭ್ರಮ ಕೂಡ ಆ ತಿಂಗಳ ವಿಶೇಷಗಳಲ್ಲಿ ಒಂದು. ಹಳ್ಳಿಯ ಹೆಣ್ಣು ಮಕ್ಕಳಿಗೆ ಕೈಕಸುಬು ಕಲಿಯಲು ಸಹ ರಜೆಯೇ ಉಪಯೋಗ. 
 
ಈ ಬೇಸಿಗೆಯ ಮತ್ತೂ ಒಂದು ವಿಶೇಷ ಇರುವುದು ಮಲ್ಲಿಗೆ ಮೊಗ್ಗಿನ ಜಡೆಯಲ್ಲಿ.  ಹಗಲೆಲ್ಲಾ ಹೆಣೆದು ಸಂಜೆಯಿಂದ ಬೆಳದಿಂಗಳಲ್ಲಿ ಮನೆ ಮನೆಗಳಿಗೂ ಓಡಾಟ. ಕೈ ತುಂಬ ಬೊಗಸೆ ಮಣ್ಣಿನಲ್ಲಿ ಕಡ್ಡಿಚೂರು ಸಿಕ್ಕಿಸಿ ಕಣ್ಣುಮುಚ್ಚಿ ದೂರದಲ್ಲಿ ಹಾಕಿಸಿ ಹುಡುಕಿಸುವುದು ಸೊಗಸು.

ತಾಪ ಹೆಚ್ಚಾಗಿ, ಮಳೆ ಸುರಿದರೆ, ಅದರಲ್ಲಿ ದೋಣಿ ಮಾಡಿಬಿಟ್ಟು, ಆಲಿಕಲ್ಲು  ಆರಿಸಿ ತಿನ್ನುತ್ತಿದ್ದೆವು. ಆಲಿಕಲ್ಲನ್ನ ಆರಿಸಿ ಪಾತ್ರೆಯಲ್ಲಿ ಹಾಕಿಟ್ಟು ಕಣ್ಣುಬೇನೆ ಬಂದಾಗ ಔಷಧವಾಗಿ ಉಪಯೋಗಿಸುತ್ತಿದ್ದೆವು. ಆದರೆ ಈಗಿನ ಮಕ್ಕಳ ಮತ್ತು ದೊಡ್ಡವರ ವ್ಯವಹಾರವೇ ಬೇರೆ. ಬೇಸಿಗೆ ಸುಖ ಅಂದಿಗೇ ಮುಗಿಯಿತೇನೋ?
–ಎಂ.ವಿ. ರಾಜಮ್ಮ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT