ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರ ತಿರುಗಿದ ದಾರಿ

Last Updated 26 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಭೂಮಿಯಲ್ಲಿ ಆಗಿರುವ ‘ಕ್ರಾಂತಿಕಾರಕ’ ಆವಿಷ್ಕಾರಗಳಲ್ಲಿ ಚಕ್ರ ಅಥವಾ ಗಾಲಿ (ವೀಲ್‌) ಅತ್ಯಂತ ಪ್ರಮುಖವಾದುದು. ಚಕ್ರ ಇಲ್ಲದಿರುವ ಜಗತ್ತನ್ನು ಊಹಿಸಿ ನೋಡಿ! ಒಂದು ವೇಳೆ ಗಾಲಿಯ ಆವಿಷ್ಕಾರ ಆಗಿರದಿರುತ್ತಿದ್ದರೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಮಾನವನಿಗೆ ಅರಿವು ಇಲ್ಲದಿರುತ್ತಿದ್ದರೆ ಈ ಜೀವಜಗತ್ತಿನ ಸ್ಥಿತಿ ಹೇಗಿರುತ್ತಿತ್ತು? ಕಲ್ಪಿಸಲೂ ಸಾಧ್ಯವಿಲ್ಲ. ಚಕ್ರ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ.

ದಿನನಿತ್ಯದ ಬದುಕಿನಲ್ಲಿ ನಮ್ಮ ಅರಿವಿಗೆ ಬರದಂತೆ ಗಾಲಿಗಳನ್ನು ಬಳಸುತ್ತೇವೆ. ಅದು ಇಲ್ಲದಿದ್ದರೆ ನಮ್ಮ ಜೀವನ ‘ಚಕ್ರ’ವೇ ಸಾಗದು!
ಸಣ್ಣ ಉದಾಹರಣೆ: ಕೈಗೆ ಕಟ್ಟಿರುವ ಗಡಿಯಾರದಲ್ಲಿ ಸಮಯ ಎಷ್ಟಾಯಿತು ಎಂದು ನೋಡುತ್ತೇವೆ. ಗಡಿಯಾರದ ಮುಳ್ಳುಗಳು ತಿರುಗುವ ಪ್ರಕ್ರಿಯೆಯಲ್ಲಿ ಹಿಂದೆ ಸಣ್ಣ ಸಣ್ಣ ಗಾಲಿಗಳ ಶ್ರಮವಿದೆ ಎಂಬುದು ನಮ್ಮ ಅರಿವಿನಲ್ಲಿ ಇರುವುದಿಲ್ಲ.

ವಾಹನಗಳಿಂದ ಹಿಡಿದು ನಾವು ಉಪಯೋಗಿಸುವ ಬಹುತೇಕ ವಸ್ತುಗಳಲ್ಲಿ ಅದರಲ್ಲೂ ಯಂತ್ರಗಳಲ್ಲಿ ಚಕ್ರಗಳು ಇದ್ದೇ ಇವೆ. ಅವುಗಳ ಗಾತ್ರ ಸಣ್ಣದಿರಬಹುದು ಅಥವಾ ವಿನ್ಯಾಸ ಬೇರೆ ಇರಬಹುದು. ಅವುಗಳ ಕೆಲಸ ಒಂದೇ –ತಿರುಗುತ್ತಾ ಇರುವುದು.
 
ಮನುಕುಲದ ಅಭ್ಯುದಯಕ್ಕೆ ಕಾರಣವಾಗಿರುವ ನೂರಾರು ಉಪಕರಣಗಳ ಆವಿಷ್ಕಾರಕ್ಕೆ ಪ್ರೇರಣೆಯಾಗಿರುವ ಶ್ರೇಯ ಚಕ್ರಕ್ಕೆ ಸಲ್ಲುತ್ತದೆ. ಚಕ್ರಗಳನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾದ ವಸ್ತುಗಳನ್ನು ಪಟ್ಟಿ ಮಾಡುತ್ತಾ ಹೋದರೆ ಕೆಲವು ಹಾಳೆಗಳು ಸಾಕಾಗದು. ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಗಾಲಿಯ ಮೂಲ ಹಾಗೂ ಅದು ಅಭಿವೃದ್ಧಿ ಹೊಂದಿದ ಬಗ್ಗೆ ತಿಳಿದವರು ಕಡಿಮೆ.
 
ಚಕ್ರ ತಿರುಗಿ ಬಂದ ಹಾದಿಯ ಮೇಲೆ ಬೆಳಕು ಚೆಲ್ಲುವ ಸಣ್ಣ ಪ್ರಯತ್ನ ಇದು. ಚಕ್ರ ಒಂದು ದಿನದಲ್ಲಿ ಸೃಷ್ಟಿಯಾದ ವಸ್ತು ಅಲ್ಲ. ದುಂಡಗಿನ ಕಲ್ಲಿನಿಂದ ಹಿಡಿದು ಇಂದಿನ ಆಧುನಿಕ ಗಾಲಿವರೆಗೆ... ಅದು ಹಂತ ಹಂತವಾಗಿ ಬೆಳೆದು ಬಂದ ದಾರಿಯನ್ನು ಅಗೆದಷ್ಟೂ ಅಚ್ಚರಿಗಳು ಕಂತೆ ಕಂತೆಯಾಗಿ ತೆರೆದುಕೊಳ್ಳುತ್ತವೆ.
 
ಚಕ್ರದ ಅರಿವು ಬಂದಿದ್ದು ಹಳೆ ಶಿಲಾಯುಗದ (15,000-7,50,000 ವರ್ಷಗಳ ಹಿಂದೆ) ಮಾನವನಿಗೆ. ದುಂಡಾಗಿರುವ  ಭಾರದ ವಸ್ತುಗಳನ್ನು ಒಂದು ಸ್ಥಳದಿಂದ ಇನ್ನೊಂದು ಕಡೆಗೆ ಉರುಳಿಸುತ್ತಾ ಸುಲಭವಾಗಿ ಸಾಗಿಸಬಹುದು ಎಂಬುದನ್ನು ಕಂಡುಕೊಂಡ. ಉರುಟಾಗಿಲ್ಲದ ವಸ್ತುಗಳನ್ನು ಈ ರೀತಿ ಸಾಗಿಸಲು ಸಾಧ್ಯವಿಲ್ಲ ಎಂಬುದು ಅವನ ‘ಎಳೆ’ ಮಿದುಳಿಗೆ ಅರ್ಥವಾಯಿತು.
 
ಆದರೆ, ಭಿನ್ನ ಆಕಾರಗಳಲ್ಲಿರುವ ಭಾರವಾದ ವಸ್ತುಗಳ ಅಡಿಯಲ್ಲಿ ಉರುಳೆಯಾಕಾರದ (ಉದಾಹರಣೆಗೆ ಸಣ್ಣ ಸಣ್ಣ ಮರದ ದಿಮ್ಮಿಗಳು) ವಸ್ತುಗಳನ್ನು ಇಟ್ಟು ಅವುಗಳನ್ನು ಉರುಳಿಸುವುದರ ಮೂಲಕ ಎಷ್ಟೇ ಭಾರವಾದ ವಸ್ತುಗಳನ್ನು ಸಾಗಣೆ ಮಾಡಬಹುದು ಎಂಬುದರ ಅರಿವೂ ಆತನಿಗೆ ಆಯಿತು. (ಈ ವಿಧಾನ ಈಗಲೂ ನಮ್ಮ ನಡುವೆ ಚಾಲ್ತಿಯಲ್ಲಿರುವುದನ್ನು ಗಮನಿಸಬಹುದು).
 
ಚಕ್ರದ ಆವಿಷ್ಕಾರಕ್ಕೆ ಮೂಲ ಪ್ರೇರಣೆಯಾಗಿದ್ದು ಇದೇ ಯೋಚನೆ. ಒಂದು ಅರ್ಥದಲ್ಲಿ, ನೈಸರ್ಗಿಕವಾಗಿ ಲಭ್ಯವಿದ್ದ ದುಂಡನೆಯ ವಸ್ತುಗಳೇ (ಉದಾ: ದುಂಡನೆಯ ಕಲ್ಲು, ಚಕ್ರಾಕಾರದ ಮರದ ತುಂಡುಗಳು ಇತ್ಯಾದಿ) ಕಾಲಾಂತರದಲ್ಲಿ ರೂಪಗಳನ್ನು ಸುಧಾರಿಸಿಕೊಳ್ಳುತ್ತಾ ಚಕ್ರವಾಗಿ ರೂಪುಗೊಂಡವು. ಚಕ್ರವು ಸುಧಾರಿತ ರೂಪ ತಾಳ ಬೇಕಾದರೆ, ಸಾವಿರಾರು ವರ್ಷಗಳೇ ಬೇಕಾದವು. ನಾಗರಿಕತೆಗಳೇ ಸೃಷ್ಟಿಯಾಗಬೇಕಾಯಿತು.
 
ತಾಮ್ರಯುಗದಲ್ಲಿ (ಕ್ರಿ.ಪೂ 4500-3300) ಗಾಲಿಗೆ ಹೊಸ ರೂಪ ಸಿಕ್ಕಿತು. ಇದಕ್ಕಿಂತಲೂ ಮೊದಲು ಈಗಿನ ಸಿರಿಯಾದಲ್ಲಿದ್ದ ಹಲಾಫ್‌ ಸಂಸ್ಕೃತಿಯಲ್ಲಿ (ಕ್ರಿ.ಪೂ 6500-5100) ಚಕ್ರದ ಬಳಕೆ ಇತ್ತು ಎಂದು ಹೇಳಲಾಗುತ್ತಿದೆಯಾದರೂ, ಅದಕ್ಕೆ ಪೂರಕವಾದ ಸಾಕ್ಷ್ಯಗಳು ಸಿಕ್ಕಿಲ್ಲ.

ಆದರೆ, ಕ್ರಿ. ಪೂ 5000ದ ಅವಧಿಯಲ್ಲಿ ಈಗಿನ ಇರಾನ್‌ನಲ್ಲಿ ಚಕ್ರವನ್ನೇ ಹೋಲುವ ವಸ್ತುವೊಂದು ಬಳಕೆಯಲ್ಲಿತ್ತು. ಮಣ್ಣು ಅಥವಾ 
ಕಲ್ಲಿನಿಂದ ಮಾಡಿದ್ದ ಈ ವೃತ್ತಾಕಾರದ ವಸ್ತುವಿಗೆ ಮಧ್ಯದಲ್ಲಿ ಗೂಟ ಹಾಕಿ ನೆಲಕ್ಕೆ ಅಳವಡಿಸಲಾಗುತ್ತಿತ್ತು. ಮಣ್ಣಿನ ಪಾತ್ರೆಗಳನ್ನು ತಯಾರಿಸಲು ಇದನ್ನು ಬಳಸುತ್ತಿದ್ದರಂತೆ. ಆದರೆ, ಇದನ್ನು ತಿರುಗಿಸಲು ಜನರು ಪ್ರಯಾಸ ಪಡಬೇಕಾಗಿತ್ತು. ತುಂಬಾ ನಿಧಾನವಾಗಿ ತಿರುತ್ತಿತ್ತು. ಇದನ್ನು ಜಗತ್ತಿನ ಕಚ್ಚಾ ಚಕ್ರ ಎಂದು ಕರೆಯಬಹುದೇನೋ.
(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT