ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿ ಹೋಯ್ತು ಕಾಲ? ಬಾಲ್ಯವೆಂಬೋ ಹಸಿರ ತಂಪು ಚಪ್ಪರ!

Last Updated 26 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಬಹುಶಃ ಎಲ್ಲರ ಬಾಲ್ಯವೂ ಹೀಗೇಯೇನೋ... ಬದುಕಿನ ಜಾತ್ರೆಯಲ್ಲಿ ಗೊತ್ತೇ ಆಗದೆ ಕಳೆದುಕೊಂಡ ಆಟಿಕೆ ಮುಂದೊಂದು ದಿನ ಧುತ್ತನೆ ನೆನಪಾಗಿ ಮನಸ್ಸು ರಚ್ಚೆ ಹಿಡಿದು ಕುಂತುಬಿಡುತ್ತದೆ. ವಯಸ್ಸು ಪುನಃ ಒಂದಷ್ಟು ವರ್ಷ ಹಿಂದೆ ಹೋಗುವಂತಿದ್ದರೆ ಬದುಕಲಾರದ ಬಗೆಯನ್ನು ಪುನಃ ಅಂದುಕೊಂಡಂತೇ ಬದುಕಿಬರಬಹುದಿತ್ತು ಅನ್ನಿಸತೊಡಗುತ್ತದೆ.
 
ಬಾಲ್ಯ! ಎಂಥೆಂಥ ಬೆರಗಿತ್ತು ಅಲ್ಲಿ... ಬಿಟ್ಟು ಬಂದ ಹುಣ್ಣಿಮೆಯ ಅಂಗಳದಲ್ಲಿ... ದಿನಾ ಕಂಡ ಪ್ರತೀ ಹೊಸತೂ ಬೆರಗೇ... ನೆಟ್ಟ ಸಸಿ ದಿನವೂ ಹಂಗೇ ಇದ್ದಂಗೇ ಅನ್ನಿಸಿ ಒಂದು ಬೆಳಿಗ್ಗೆ ಕಾಣಿಸೇ ಇರದ ಮೊಗ್ಗಲ್ಲಿ ದೊಡ್ಡ ಹೂವೊಂದರಳಿದ ಪರಿ... ಬಸ್ಸು ರೈಲುಗಳ ಹಾಗೆ ನೆಲದ ಆಧಾರವಿರದ ವಿಮಾನವೊಂದು ದೂರದಾಕಾಶದಲ್ಲಿ ಹಾರಿಹೋದ ದಿಕ್ಕು... ಮೂರುದಿನದ ಹಿಂದಷ್ಟೇ ಹುಟ್ಟಿದ ಬೆಣ್ಣೆಗರುವು ಸಂಜೆಯ ಬೀಸುಗಾಳಿಗೆ ಕಿವಿನಿಮಿರಸಿ ಬಾಲವೆತ್ತಿ ಚಂಗನೇ ಜಿಗಿದು ಓಡಿಬಿಡುವ ವೇಗ... ನಾಲ್ಕು ಜನ ಹೊರುವಷ್ಟು ಡಬ್ಬಿಯ ನೀರನ್ನು ಬಾಳೆತೋಟದಲ್ಲಿದ್ದ ಏತ ಒಂದೇ ಉಸುರಿಗೆ ಹಾಯಿಸುತ್ತಿದ್ದ ರೀತಿ... ತಣ್ಣನೆಯ ನೆಲದಲ್ಲಿ ಇರುವೆಗಳೆಲ್ಲ ಬೆಳಗಾಗುವ ಹೊತ್ತಿಗೆ ಹುತ್ತದ ಅಡಿಪಾಯ ನಿರ್ಮಿಸಿದ ಕಲೆ... ಹಿಂಗೆ ಬಂದ ಹಾವು ಹಂಗೆ ಹೋಗುವಾಗ ಕಳಚಿಕೊಳ್ಳುತ್ತಿದ್ದ ಪೊರೆ... ಬೆರಗುಗಳಿದ್ದದ್ದು ಒಂದಾ ಎರಡಾ.!
 
ಹಸಿ ತೆಂಗಿನ ಗರಿಯ ಕಡ್ಡಿಗಳೆಲ್ಲಾ ಪೊರಕೆಯಾಗಿ, ಬಾಳೆನಾರೆಲ್ಲಾ ಬತ್ತಿಯಾಗಿ, ಬಿಸಾಕಿದ ಬೀಜಗಳೆಲ್ಲಾ ಗಿಡಗಳಾಗಿ, ಬಿದಿರ ಸಿಬಿರೆಲ್ಲಾ ಬುಟ್ಟಿಗಳಂತಾಗಿದ್ದು ಆಗ ನಮಗೆ ಎಂದಿಗೂ ಬೆರಗೆನಿಸಿರಲಿಲ್ಲ. ಕರೆದ ಹಸುವಿನ ಹಾಲು ಗಿಣ್ಣು ಬೆಣ್ಣೆಯಾಯ್ತು, ಸಾಲುಗಿಡಗಳ ಹೂವು ತುಳಸಿಗೆ ವಿಶೇಷ ಅಲಂಕಾರವಾಯ್ತು, ಹಬ್ಬಗಳಂದು ತಾಮ್ರ ಕಂಚೆಲ್ಲಾ ಫಳಫಳಿಸಿಹೋಯ್ತು, ಕಲ್ಲುಮುಳ್ಳು ತುಂಬಿದ್ದ ದಾರಿ ಚೊಕ್ಕವಾಯ್ತು. ಅವನ್ನೆಲ್ಲಾ ಅಲ್ಲಲ್ಲೇ ಬಿಟ್ಟು ನಾವು ದೊಡ್ಡವರಾಗುತ್ತಾ ಹೋದೆವು. ನೋಡ ನೋಡುತ್ತಲೇ ಬದುಕ  ಬಣ್ಣವದೆಲ್ಲಾ ಯಾವ ಗಾಳಿಗೆ ಎತ್ತ ಹಾರಿಹೋಯ್ತು ಗೊತ್ತೇ ಆಗದೆ!
 
ಅಲ್ಲಿ ಮಾನವ ಸಂಬಂಧಗಳೂ ಅಷ್ಟೇ ಆಪ್ಯಾಯಮಾನವಾಗಿದ್ದವು. ಕಮ್ಮಿ ಸುಖ ಸ್ವೀಕರಿಸಿ ಜಾಸ್ತಿ ನೋವ ಭರಿಸಿ ಹಣೆಯಲ್ಲೊಂದು ಮುದುರು, ತುಟಿಯಲ್ಲೊಂದು ನಿರ್ಲಿಪ್ತ ನಗು, ಕೈಕಾಲ್ಬೆರಳುಗಳ ಉಗುರುಗಳ ಸಂಧಿಯಲ್ಲಿ ಮಣ್ಣು ಸೆಗಣಿಯ ಛಾಪನ್ನು ದಿನಗಟ್ಟಲೇ ಇರಿಸಿಕೊಂಡರೂ ಉಣಬಡಿಸಿದ್ದು ಮಾತ್ರ ಶುದ್ಧ ಕೆನೆಮೊಸರ ತುತ್ತು. 
 
ಹಟ್ಟಿಗೋದರೆ ದನ, ಅಂಗಳದಾಚೆಗೆ ಕೋಳಿಗೂಡು, ಮನೆ ಮೆಟ್ಟಿಲ ಮೇಲಿನ ನಾಯಿ, ಒಳಗೆ ಬೆಚ್ಚನೆಯ ಒಲೆದಂಡೆಯ ಮೇಲೆ ಪವಡಿಸಿದ ಬಿಲ್ಲಿ ಇದೆಲ್ಲವಕ್ಕೂ ಅನ್ನದಾತರಾಗಿದ್ದು... ಬೆಳೆಯುವ ಚಿಗುರಿಗೆ ದೃಢವಾದ ಬೇಲಿಯಾದದ್ದು. ಎಲ್ಲವೂ ಈಗ ಗೋಡೆಯ ಮೇಲಿನ ಚೌಕಟ್ಟಿನೊಳಗಿನ ಸ್ತಬ್ಧ ಚಿತ್ರ... ಊಹೂಂ.. ಆಗ ಅದೆಲ್ಲಾ ಏನೂ ವಿಶೇಷವೆಂದು ಅನ್ನಿಸಿರಲಿಲ್ಲ. ಬದುಕನ್ನರಸಿ ಮಹಾನಗರಿಗೆ ಬಂದ ಮೇಲೆ ನಿನ್ನೆಗಳ ನೆನಪು ಅಟ್ಟಾಡಿಸಲು ಶುರುವಾಯ್ತು ನೋಡಿ. ಅಲ್ಲಿಗೂ ಇಲ್ಲಿಗೂ ಹೋಲಿಕೆ ಇದ್ದದ್ದು ಆಕಾಶ ಮಾತ್ರವೇನೋ. 
 
ಬೇರೇನೂ ತೋಚದೆ ಅದೇ ಆಕಾಶದ ಚುಕ್ಕಿಗಳ ನೋಡುತ್ತಾ ನಮ್ಮ ಪಾಡಿಗೆ ನಮ್ಮ ಪ್ರಪಂಚದಲ್ಲಿ ನಾವಿದ್ದಾಗ ಅಲ್ಲಿ ಅನಿರೀಕ್ಷಿತವಾಗಿ ಬದುಕಿಗೆ ಯಾರದ್ದೋ ಪ್ರವೇಶವಾಗುತ್ತದೆ. ಖುಷಿಕೊಟ್ಟು ಇದ್ದೋರೂ, ನೋವಿಟ್ಟು ಹೋದೋರೂ ನೆನಪುಗಳಲ್ಲಿ ಮಾತ್ರ ತಾಳೆಯಾಗುತ್ತಾರೆ!
ನಮ್ಮತನ ಬಿಟ್ಟುಕೊಟ್ಟ ಕ್ಷಣಗಳು ಅಸಹ್ಯ ಹುಟ್ಟಿಸುತ್ತವೆ. ನಿನ್ನೆ ಅನ್ನೋದು ಸತ್ತಾಯ್ತು, ನಾಳೆ ಅನ್ನೋದು ಯಾವನಿಗ್ಗೊತ್ತು, ಇರುವ ಇವತ್ತನ್ನು ಮುಗಿಸಿಬಿಡಲು ನಶೆಯ ಮೊರೆಹೊಕ್ಕಿ ದಿಗ್ಗನೆ ಕಣ್ಬಿಟ್ಟರೆ,,,, ಅದೇ ಮಂದಬೆಳಕು... ನಡುವೆ ಅದೆಷ್ಟೋ ಸತ್ತ ದಿನ ಮತ್ತು ವಾರಗಳು!
 
ಇಲ್ಲಿ ಸಮಯವನ್ನೋದು ನಿಯತ್ತಿಗೇ ಕಂಠಮಟ್ಟ ಕುಡಿಸಿ ಸದ್ಯಕ್ಕೆ ಎದ್ದೇಳದಂತೆ ಮಲಗಿಸಿಬಿಡುತ್ತಾದರೂ ಕಲಿತು ಬಂದ ಸಂಸ್ಕಾರ ಇನ್ನೊಂದೇ ಒಂದು ಮರುಮಾತಾಡದಂತೆ ಕಪಾಳಕ್ಕೆ ಬಾರಿಸಿಬಿಡುತ್ತೆ. ಆದರೆ ವಯಸ್ಸು ಪುನಃ ಮರ್ಕಟ…ತಾನೇ ಬಯಸಿ ಬಯಸಿ ಬಂದ ಬಣ್ಣದ ಬೆಂಕಿಯ ಕುಲುಮೆಯೊಳಕ್ಕೆ ಸಂಪೂರ್ಣವಾಗಿ ಇಳಿಯೋ ಮುನ್ನ..
 
ಒಮ್ಮೆ ಹಿಂತಿರುಗಿ ನೋಡಿದೆ. ಅಲ್ಲಿ...ಹಬ್ಬವಿತ್ತು, ಹುಣ್ಣಿಮೆಯಿತ್ತು, ತಂಗಾಳಿಯಿತ್ತು, ನಿರುಪದ್ರವಿ ಕನಸಿತ್ತು, ನಾಚಿಕೆಯಿತ್ತು, ನವಿರಾದ ತಲ್ಲಣವಿತ್ತು, ಚಿಗುರೆಲೆಗೆ ಗಟ್ಟಿ ಬುಡದ ಸುರಕ್ಷತೆ ಇತ್ತು, ತೇಲಿಬಿಟ್ಟ ದೋಣಿಗೂ, ಹಾರಿಬಿಟ್ಟ ಚಿಟ್ಟೆಗೂ, ಮುತ್ತುಕೊಟ್ಟ ಬೆಣ್ಣೆಗರುವಿಗೂ ಹೆಸರಿತ್ತು... ಅಲ್ಲಿ ಮುಗ್ಧತೆ ಮತ್ತು ಭಯವಿತ್ತು! ಎಲ್ಲಿ ಹೋಯ್ತು ಕಾಲ! ಬಾಲ್ಯವೆಂಬೋ ಹಸಿರ ತಂಪು ಚಪ್ಪರ!
–ವಾಣಿ ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT