ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗರ್ಭದಲ್ಲಿದ್ದಾಗಲೇ ನಾನು ಕಿರಿಕ್‌...

Last Updated 26 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
lಚಿಕ್ಕವರಾಗಿದ್ದಾಗಿನಿಂದಲೂ ನೀವು ‘ಕಿರಿಕ್‌ ಪಾರ್ಟಿ’ನೇ ಆಗಿದ್ರಂತೆ?
ನಾನು ಹುಟ್ತಾನೇ ಹಿಂಗೆ. ಹುಟ್ಟುವ ಮೊದಲು ಅಮ್ಮನ ಹೊಟ್ಟೆಯಲ್ಲಿದ್ದಾಗಲೇ ‘ಕಿರಿಕ್‌ ಪಾರ್ಟಿ’ ಆಗಿದ್ದವಳು. ಡಾಕ್ಟರು ಅಮ್ಮನಿಗೆ ‘ನಿಮ್ಮ ಹೊಟ್ಟೆಯಲ್ಲಿ ಅವಳಿ ಮಕ್ಕಳು ಇರಬೇಕು’ ಎಂದು ಹೇಳಿದ್ದರಂತೆ.

ಹುಟ್ಟಿದಾಗಲೂ ನಾನು ತುಂಬ ದಪ್ಪಗಿದ್ದೆ. ಡಾಕ್ಟರು ನನ್ನ ನೋಡಿ ‘ಇವಳು ಇನ್ನೊಂದು ಮಗುವನ್ನು ಹೊಟ್ಟೆಯಲ್ಲಿಯೇ ತಿಂದು ಇಷ್ಟು ದಪ್ಪಗಾಗಿದಾಳೆ’ ಅಂತ ತಮಾಷೆ ಮಾಡಿದ್ರಂತೆ. ಹುಟ್ಟಿದ ತಕ್ಷಣ ನಾನು ಅಳಲೇ ಇಲ್ವಂತೆ. ಆಮೇಲೆ ನನ್ನ ಅತ್ತೆ ಬಂದು ಬಾಯಿಯಲ್ಲಿ ಕೈಯಿಟ್ಟಾಗಲೇ ನಾನು ಅತ್ತಿರುವುದಂತೆ. 
 
lಚಿಕ್ಕವರಾಗಿದ್ದಾಗ ಅಪ್ಪ–ಅಮ್ಮನಿಗೆ ತುಂಬ ಕಾಟ ಕೊಟ್ಟಿರಬೇಕಲ್ವಾ?
ನಿಜ. ನನ್ನನ್ನು ನೋಡಿಕೊಳ್ಳುವುದು ಅವರಿಗೆ ಸಿಕ್ಕಾಪಟ್ಟೆ ಕಷ್ಟ ಆಗಿತ್ತು. ನಂದು ಡಿಮ್ಯಾಂಡ್ಸ್‌ ಅಂದ್ರೆ ಡಿಮ್ಯಾಂಡ್ಸ್‌... ಎಲ್ಲದಕ್ಕೂ ಹಟ ಮಾಡ್ತಿದ್ದೆ. ಏನಾದ್ರೂ ಜಗಳ ಮಾಡಿ ಕೊನೆಗೆ ‘ನಾನು ನಿಮ್ಮ ಜತೆ ಇರಲ್ಲ. ನೀವು ನನ್ನ ಚೆನ್ನಾಗಿ ನೋಡ್ಕೊಳಲ್ಲ. ನಾನು ಮನೆ ಬಿಟ್ಟು ಹೋಗ್ಬಿಡ್ತೀನಿ’ ಅಂತ ಹೆದರಿಸುತ್ತಿದ್ದೆ. ­

lಕಾಲೇಜು ದಿನಗಳಲ್ಲಿ ರ್‍‍ಯಾಗಿಂಗ್‌ ಮಾಡಿಸಿಕೊಂಡಿದ್ದೀರಾ?
ರ್‍ಯಾಗ್‌ ಮಾಡಿಸಿಕೊಂಡಿದ್ದೆಲ್ಲ ನಮ್ಮ ಹಿಸ್ಟರಿಯಲ್ಲಿಯೇ ಇಲ್ಲ. ಬದಲಿಗೆ ನಾವೇ ರ್‍ಯಾಗ್‌ ಮಾಡಿದ್ದಿದೆ. ನನ್ನ ಜತೆಯಲ್ಲಿ ಒಳ್ಳೆಯವರಾಗಿರುವವರಿಗೆ ನಾನೂ ಒಳ್ಳೆಯವಳು. ನನ್ನ ಜತೆ ಕೆಟ್ಟವರಾದವರಿಗೆ ಹೇಗೆ ಕೆಟ್ಟವಳಾಗಬೇಕು ಎನ್ನುವುದೂ ನನಗೆ ಚೆನ್ನಾಗಿ ಗೊತ್ತಿದೆ.
ಕಾಲೇಜು ದಿನಗಳಲ್ಲಿಯಂತೂ ನಾನು ಮಹಾನ್‌ ತುಂಟಿಯಾಗಿದ್ದೆ. ಆ ತುಂಟತನ ಇನ್ನೂ ಇದೆ. ಆದರೆ ‘ಕಿರಿಕ್‌ ಪಾರ್ಟಿ’ ಚಿತ್ರೀಕರಣದ ಸಮಯದಲ್ಲಿ ಬೈಸಿಕೊಂಡು ಬೈಸಿಕೊಂಡು ಸ್ವಲ್ಪ ಸುಧಾರಿಸಿದ್ದೀನಿ.

lಯಾರ ಬಳಿ ಬೈಸ್ಕೊಂಡ್ರಿ?
ಯಾರ ಹತ್ರ ಬೈಸ್ಕೊಂಡಿಲ್ಲ ಕೇಳಿ. ಚಿತ್ರೀಕರಣ ನಡೆಯುತ್ತಿದ್ದಾಗ ನಾನು  ಒಳ್ಳೆಯ ಹುಡುಗಿ. ತಣ್ಣಗೆ ಇರುತ್ತಿದ್ದೆ. ಆದರೆ ಚಿತ್ರೀಕರಣ ಇಲ್ಲದಿದ್ದಾಗ ಸೆಟ್‌ನಲ್ಲಿ ಎಲ್ಲರಿಗೂ ಕಾಟ ಕೊಡ್ತಾ ಬೈಸ್ಕೋತಿದ್ದೆ.

lಬೈಕ್‌ ಗೀಳು ಅಂಟಿಕೊಂಡಿದ್ದು ಯಾವಾಗ?
ಪಿಯೂಸಿಯಲ್ಲಿ. ಬೈಕ್‌ ಅಂದ್ರೆ ಹುಚ್ಚು ನಂಗೆ. ಹುಡುಗಿಯರಿಗೆ ಬೈಕ್‌ ಓಡಿಸೋಕ್ಕಾಗಲ್ಲ ಎಂದು ಎಲ್ಲರೂ ಹೇಳ್ತಿದ್ರು. ಯಾಕೆ ಹುಡುಗೀರು ಬೈಕ್‌ ಓಡಿಸಬಾರದು? ಯಾಕೆ ಓಡಿಸೋಕೆ ಬರಲ್ಲ ಎಂದು ಅವರ ಮಾತನ್ನು ಸವಾಲಾಗಿ ಸ್ವೀಕರಿಸಿ ಬೈಕ್‌ ಓಡಿಸೋಕೆ ಶುರುಮಾಡಿದ್ದು. ಅಪ್ಪ ಬೈಕ್‌ ಓಡಿಸೋದು ಹೇಳಿಕೊಟ್ರು. ಇದುವರೆಗೆ ಒಮ್ಮೆಯೂ ಬೈಕ್‌ನಿಂದ ಬಿದ್ದಿಲ್ಲ ನಾನು.

lಸ್ಪೀಡ್‌ ಲಿಮಿಟ್‌ ಎಷ್ಟು?
ಅದು ಬೈಕ್‌ ಎಲ್ಲಿ ಓಡಿಸ್ತಿದೀನಿ ಅನ್ನೋದರ ಮೇಲೆ ಅವಲಂಬಿಸಿರುತ್ತದೆ. ಟ್ರಾಫಿಕ್‌ನಲ್ಲಾದ್ರೆ ನಾರ್ಮಲ್‌ ಸ್ಪೀಡ್‌ನಲ್ಲಿಯೇ ಇರ್ತೀನಿ. ಹೆದ್ದಾರಿಯಲ್ಲಾದ್ರೆ ನನಗೆ ಭಯ ಆಗುವವರೆಗೂ ವೇಗ ಹೆಚ್ಚಿಸುತ್ತಲೇ ಇರ್ತೀನಿ.

ನಾನು ಪ್ರತಿದಿನವೂ ಬೈಕ್‌ ಓಡಿಸಲ್ಲ. ಯಾವಾಗಲಾದರೂ ಒಮ್ಮೆ ಓಡಿಸುವುದು. ಹಾಗಂತ ತುಂಬ ವೇಗವಾಗಿಯೇನೂ ಓಡಿಸಲ್ಲ. ಯಾಕೆಂದರೆ ತುಂಬ ವೇಗವಾಗಿ ಓಡಿಸಿದ್ರೆ ಕಂಟ್ರೋಲ್‌ ಮಾಡೋಕೆ ಬರಬೇಕಲ್ಲ. ನಲ್ವತ್ತು–ಐವತ್ತು ಕಿಲೋಮೀಟರ್‌ ವೇಗದಲ್ಲಿದ್ದಾಗ ಏನಾದ್ರೂ ಆದ್ರೆ ಗಾಡಿಯಿಂದ ಜಂಪ್‌ ಮಾಡಿ ಬಚಾವಾಗಬಹುದು. ನೂರು–ನೂರಿಪ್ಪತ್ತು ಕಿಲೋಮೀಟರ್‌ ವೇಗದಲ್ಲಿಯೂ ಏನಾದ್ರೂ ಸರ್ಕಸ್‌ ಮಾಡಲಿಕ್ಕೆ ಪ್ರಯತ್ನ ಮಾಡಬಹುದು. ಆದರೆ ಅದಕ್ಕಿಂತ ಹೆಚ್ಚು ಸ್ಪೀಡ್‌ನಲ್ಲಿದ್ದಾಗ ಜೀವ ನಮ್ಮ ಕೈಲಿರಲ್ಲ, ಬೇರೆ ಎಲ್ಲೋ ಇರತ್ತೆ...

lಸ್ನೇಹಿತರು ಹಿಂಬದಿ ಸೀಟಲ್ಲಿ ಕುಳಿತುಕೊಳ್ಳೋಕೆ ಹೆದರ್ತಾರಾ?
ತುಂಬ ಜನ ನಾನು ಬೈಕ್‌ ಓಡಿಸುವಾಗ ಕುಳಿತುಕೊಳ್ಳಲಿಕ್ಕೆ ಹೆದರುತ್ತಾರೆ. ಹಾಗಂತ ನಾನೇನೂ ರ್‍‍ಯಾಶ್‌ ಆಗಿ ಓಡಿಸಲ್ಲ. ರಸ್ತೆ ನಿಯಮಗಳನ್ನೂ ಉಲ್ಲಂಘಿಸುವುದಿಲ್ಲ. ಹಾಗೆ ನೋಡಿದರೆ ಸುರಕ್ಷಿತ ಚಾಲಕಿ ನಾನು. ಒಂದೊಂದು ಸಲ ಬೈಕ್‌ನಲ್ಲಿ ಮ್ಯೂಸಿಕ್‌ ಹಾಕಿಕೊಂಡು ಓಡಿಸ್ತಿರ್ತೀನಿ. ಸ್ಕೂಟಿಯಲ್ಲಿ ಮ್ಯೂಸಿಕ್‌ ಹಾಕಿಕೊಂಡ್ರೆ ರಸ್ತೆಯಲ್ಲಿರೋರೆಲ್ಲ ಗುರಾಯಿಸ್ತಾರೆ.

lಕಾಲೇಜು ದಿನಗಳಲ್ಲಿ ಲೆಕ್ಚರರ್‌ಗಳಿಗೆ ಕಾಟ ಕೊಟ್ಟಿದೀರಾ?
ಕ್ಲಾಸಿಗೇ ಕೂತ್ಕೋತಿರ್ಲಿಲ್ಲ. ಆ ರೀತಿ ತುಂಬಾ ಕಾಡಿದ್ದೇನೆ. ಅವರು ಬಂದು ‘ಯಾವಾಗ್ಲೂ ಆಚೆನೇ ಇರ್ತೀಯಲ್ಲ, ಬಾರಮ್ಮಾ ಕ್ಲಾಸಿಗೆ’ ಎಂದು ಕರೀತಿದ್ರು. ನಾನು ‘ಸರಿ ಬರ್ತೀನಿ... ಬರ್ತೀನಿ’ ಎಂದು ಹೇಳಿ ಕಾಗೆ ಹಾರಿಸ್ತಿದ್ದೆ.

lಕಾಲೇಜಿಗೆ ಬಂಕ್‌ ಮಾಡಿ ಏನು ಮಾಡ್ತಿದ್ರಿ?
ಕಾಲೇಜಿಗೆ ಹೋಗ್ತಿದ್ದೆ, ಕ್ಲಾಸ್‌ಗೆ ಹೋಗ್ತಿರಲಿಲ್ಲ. ಕೆಲವು ಸಲ ಡಾನ್ಸ್‌ ಮಾಡ್ತಿದ್ದೆ. ಮತ್ತೆ ಕೆಲವು ಸಲ ಏನೂ ಮಾಡದೇ ಸುಮ್ಮನೇ ಜಗುಲಿ ಮೇಲೆ ಕೂತ್ಕೊಂಡು ಪೂರ್ತಿ ದಿನ ಹರಟೆ ಹೊಡ್ಕೊಂಡು ಮನೆಗೆ ವಾಪಸ್‌ ಬರ್ತಿದ್ದೆ.

lಅಟೆಂಡೆನ್ಸ್‌ ಕೊಡ್ತಿದ್ರಾ?
ಪಠ್ಯೇತರ ಚಟುವಟಿಕೆಗಳಲ್ಲಿ ನಾನು ತುಂಬ ಮುಂದಿದ್ದೆ. ನಮ್ಮ ಕಾಲೇಜನ್ನು ಎಲ್ಲೆಲ್ಲಿ ಪ್ರತಿನಿಧಿಸಿದ್ದೆನೋ ಅಲ್ಲೆಲ್ಲ ಬಹುಮಾನ ಗೆದ್ದುಕೊಂಡೇ ಬರುತ್ತಿದ್ದೆ. ಆ ಕಾರಣಕ್ಕಾಗಿ ಅಟೆಂಡೆನ್ಸ್‌ ಕೊಡ್ತಿದ್ರು. ಅಲ್ಲದೇ ನಾನು ಓದಿನಲ್ಲೇನೂ ಹಿಂದಿರಲಿಲ್ಲ. ಫೇಲಾಗಿದ್ದು ಇಲ್ವೇ ಇಲ್ಲ. ಕಾಲೇಜು ಅಟೆಂಡ್‌ ಮಾಡದೆನೇ ಎಪ್ಪತ್ತು ಪರ್ಸೆಂಟ್‌ ಆಸುಪಾಸು ಅಂಕ ಗಳಿಸ್ತಿದ್ದೆ. ಆದ್ದರಿಂದ ಲೆಕ್ಚರ್‌ ನನ್ನ ವಿಷಯದಲ್ಲಿ ತುಂಬ ಸ್ಟ್ರಿಕ್ಟ್‌ ಆಗಿರಲಿಲ್ಲ.

lಕಾಲೇಜು ದಿನಗಳ ಲವ್‌ ಸ್ಟೋರಿಗಳಿದ್ವಾ?
ಲವ್ ಸ್ಟೋರಿನೇ ಇಲ್ಲ ನನ್ನ ಬದುಕಲ್ಲಿ. ಲೆಕ್ಚರ್‌ ಮೇಲೆ, ಡಾನ್ಸ್‌ ಟೀಚರ್‌ ಮೇಲೆಲ್ಲ ತಾತ್ಕಾಲಿಕ ಲವ್‌ ಆಗಿದ್ದಿದೆ. ಇನ್ನು ರಸ್ತೆಯಲ್ಲೊಬ್ಬ ಸುಂದರ ಹುಡುಗ ಕಂಡ್ರೆ ಕ್ರಶ್‌ ಆಗ್ತಿರತ್ತೆ. ಅವನು ಆ ಕಡೆ ಹೋದ ಮೇಲೆ ಅದೂ ಹೋಗತ್ತೆ ಅಷ್ಟೆ.

lನಿಮ್ಮ ಹಿಂದೆ ಯಾರೂ ಬಿದ್ದಿಲ್ವಾ? ಹೆದರುತ್ತಿದ್ದರೇನೋ ಅಲ್ವಾ?
ಹೆದರಿಕೆಯೇನೂ ಇರ್ಲಿಲ್ಲ. ನಾನು ನಾರ್ಮಲ್‌ ಹುಡುಗಿ ಆಗಿರಲಿಲ್ಲ. ಗಂಡುಬೀರಿ, ಟಾಮ್‌ ಬಾಯ್‌ ಕ್ಯಾರೆಕ್ಟರ್‌ ಆಗಿತ್ತು. ಆದ್ದರಿಂದಲೇ ನನ್ನ ಹಿಂದೆ ಸಾಕಷ್ಟು ಹುಡುಗರು ಬೀಳ್ತಿದ್ರು. ಅಲ್ದೇ ನಾನು ತುಂಬ ಚೆನ್ನಾಗಿ ಡಾನ್ಸ್ ಮಾಡ್ತಿದ್ದೆ. ಅದೊಂದು ಪ್ಲಸ್‌ ಪಾಯಿಂಟ್‌ ಆಗಿತ್ತು.

l‘ರೋಡೀಸ್‌’ ರಿಯಾಲಿಟಿ ಷೋಗೂ ಹೋಗಿ ಬಂದ್ರಿ. ಅಲ್ಲಿನ ಅನುಭವ ಹೇಗಿತ್ತು?
ಅದೊಂದು ಅದ್ಭುತ ಅನುಭವ. ಇಲ್ಲಿ ಹೇಗಿದ್ದೆನೋ ಅಲ್ಲಿಯೂ ಹಾಗೇ ಇದ್ದೆ. ನನಗಿರುವುದು ಒಂದೇ ಮುಖ. ಷೋ ನಲ್ಲಿ ಒಂದು ಮುಖ, ಬದುಕಿನಲ್ಲಿ ಒಂದು ಮುಖ ಇಟ್ಕೊಂಡು ವರ್ತಿಸೋಕೆಲ್ಲ ಬರಲ್ಲ ನಂಗೆ.

l‘ಕಿರಿಕ್‌ ಪಾರ್ಟಿ’ ಮತ್ತು ‘ರೋಡೀಸ್‌’ ಷೋ ನಂತರ ನಿಮಗೆ ಸೆಲಿಬ್ರಿಟಿ ಪಟ್ಟ ಸಿಕ್ಕಿದೆ. ಬದುಕು ಯಾವ ರೀತಿ ಬದಲಾಗಿದೆ?
ಕೆಲವರು ಚೆಕ್‌ ಬುಕ್‌ನಲ್ಲಿ ಹಾಕಿದ ಆಟೋಗ್ರಾಫ್‌ಗೆ ಮಾತ್ರ ಬೆಲೆ ಇರುತ್ತದೆ. ಆದ್ರೆ ನಾನು ಸಾಮಾನ್ಯ ಖಾಲಿ ಹಾಳೆಯಲ್ಲಿ ಆಟೋಗ್ರಾಫ್‌ ಹಾಕಿದರೂ ಬೆಲೆ ಇದೆ. ಅದೇ ಬದಲಾವಣೆ. ನಾನೀಗ ಏನಾಗಿದ್ದೇನೋ ಅದರ ಬಗ್ಗೆ ತುಂಬ ಖುಷಿಯಿದೆ.

ಆದರೆ ನಾನು ಯಾವಾಗಲೂ ನಂಬಿಕೊಂಡಿರುವ ತತ್ವವೊಂದಿದೆ. ನಾವು ಎಷ್ಟೋ ಬೆಳೆಯಬಹುದು. ಪ್ರಸಿದ್ಧರಾಗಬಹುದು. ಆದರೆ ನಾವು ಎಲ್ಲಿಂದ ಬಂದಿದ್ದೇವೆ ಎನ್ನುವುದನ್ನು ಮರೆಯಬಾರದು.

ಈ ಸಾಧನೆ ಮಾಡಲು ನಾವು ಪಟ್ಟಿರುವ ಶ್ರಮವನ್ನು ಮರೆಯಬಾರದು. ಯಶಸ್ಸು ನಮ್ಮ ನೆತ್ತಿಗೇರಲು ಬಿಡಬಾರದು ಎಂಬುದು ನನ್ನ ನಂಬಿಕೆ. ನನಗೆ ಸಿಕ್ಕ ಯಶಸ್ಸಿನ ಬಗ್ಗೆ ಖುಷಿಯಿದೆ. ಆದರೆ ಇದರಲ್ಲಿಯೇ ಮುಳುಗಿ ಹೋಗಿಲ್ಲ. ಬದುಕಿನಲ್ಲಿ ಏನಾದರೂ ಮಾಡುತ್ತಲೇ ಇರಬೇಕು.

lಸೆಲಿಬ್ರಿಟಿ ಆದಮೇಲೆ ನಿಮ್ಮ ತುಂಟಾಟಗಳಿಗೆ ಕಡಿವಾಣ ಬಿದ್ದಿರಬೇಕಲ್ವಾ?
ಸ್ವಲ್ಪ ಬೀಗ ಬಿದ್ದಂತಾಗಿದೆ. ಯಾಕೆಂದರೆ ಈಗ ಸಾರ್ವಜನಿಕವಾಗಿ ಹೇಗ್ಹೇಗೋ ಆಡಕ್ಕಾಗಲ್ಲ. ಆದರೆ ನನ್ನ ಆ ತುಂಟಾಟದ ಮುಖ ನನ್ನ ಆಪ್ತರಿಗೆ ಮಾತ್ರ ನೋಡಲು ಸಿಗುತ್ತದೆ. ಮನೆಯಲ್ಲಿ, ಸ್ನೇಹಿತರ ಜತೆಯಲ್ಲಿ ನಾನು ಹಿಂದಿನ ಸಂಯುಕ್ತಾ ಆಗಿಯೇ ಇರುತ್ತೇನೆ.

lಬಿಡುವಿನಲ್ಲಿ ಏನು ಮಾಡ್ತೀರಿ?
ಡಾನ್ಸ್‌ ಮಾಡ್ತೀನಿ. ಇತ್ತೀಚೆಗೆ ಓದು–ಬರವಣಿಗೆ ಆರಂಭಿಸಿದ್ದೇನೆ. ನನಗೆ ಥ್ರಿಲ್ಲರ್‌ ಮರ್ಡರ್‌ ಕಥೆಗಳು ಅಂದ್ರೆ ತುಂಬ ಇಷ್ಟ. ಹುಚ್ಚು ಹಿಡಿಸುವಂಥ, ತಲೆಕೆಡಿಸುವಂಥ ಪುಸ್ತಕಗಳನ್ನು ಓದ್ತೀನಿ.

lಅಂಥ ಪಾತ್ರಗಳಲ್ಲಿ ನಟಿಸುವ ಆಸೆ ಇದ್ಯಾ?
ಖಂಡಿತ ಇದೆ. ನನ್ನ ಡ್ರೀಂ ಕ್ಯಾರೆಕ್ಟರ್‌ ಲಿಸ್ಟ್‌ನಲ್ಲಿ ಸೈಕೋ ಕಿಲ್ಲರ್‌ ಪಾತ್ರವೂ ಇದೆ. ಅಂಥ ಪಾತ್ರದಲ್ಲಿ ನಟಿಸುವುದು ನಂಗೆ ತುಂಬ ಇಷ್ಟ.

lಇಂದಿನ ಯುವಜನತೆಗೆ ಒಂದು ಸಾಲಿನ ಸಂದೇಶ ನೀಡುವ ಅವಕಾಶ ಸಿಕ್ರೆ ಏನು ಹೇಳ್ತೀರಾ?
ಫಾಲೋ ಯುವರ್‌ ಹಾರ್ಟ್‌. ಹೃದಯದ ಮಾತು ಕೇಳಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT