ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಂಜಪ್ಪ, ಮಂಟೆಸ್ವಾಮಿ ಹಾದಿಯಲ್ಲಿ...

Last Updated 26 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಹಾರಲೇಬೇಕೆಂದು ಸಿದ್ಧರಾದವರಿಗೆ ರೆಕ್ಕೆ ಬೇಕೆಂದೇನೂ ಇಲ್ಲ. ಅಂತಹ ಕನಸುಗಣ್ಣಿನವರಿಗೆ ಹುಲ್ಲುಕಡ್ಡಿಯೂ ರೆಕ್ಕೆಯಾಗಿ ಕಾಣುವುದಂತೆ. ಸೀಮೆಎಣ್ಣೆ ತರಲೆಂದು ದೂರದೂರಿಗೆ ನಡೆದು ಹೋಗುತ್ತಿದ್ದ ಒಬ್ಬ ಹುಡುಗನಿಗೆ ದಾರಿ ಸವೆಸಲು ಏನಾದರೂ ಮಾಡಬೇಕಿತ್ತು. ಎಣ್ಣೆಯ ಡಬ್ಬವನ್ನು ದಮ್ಮಡಿ, ಡ್ರಮ್ಮು ಎಂದುಕೊಂಡ.

ಎದೆಯೊಳಗಿದ್ದ ನಾದ ಚಿಮ್ಮತೊಡಗಿತು. ಬಾರಿಸುತ್ತ ಹೋದ. ಮನೆಗೆ ಬಂದಾಗಲೂ ಸಂಗೀತದ ಗುಂಗು ಬಿಡುತ್ತಿರಲಿಲ್ಲ. ಮುದ್ದೆ ಉಣ್ಣುತ್ತಿದ್ದ ತಟ್ಟೆಯನ್ನು ತಮಟೆ ಮಾಡಿಕೊಂಡ. ಬಾವಿಗೆ ನೀರು ತರಲು ಹೋದಾಗಲೂ ಅದೇ ಕತೆ, ಬಿಂದಿಗೆ ಘಟಂ ಆಗಿಬಿಡುತ್ತಿತ್ತು. 
 
ತಮಟೆಯ ತಕಧಿಮಿತ 
ಆಫ್ರಿಕಾದ ಚರ್ಮವಾದ್ಯ ‘ಜಂಬೆ’ಯೆಲ್ಲಿ? ಚಿಕ್ಕಬಳ್ಳಾಪುರ ಜಿಲ್ಲೆ ನಲ್ಲಕದಿರೇನಹಳ್ಳಿಯ ಬಾಲು ಜಂಬೆ ಅವರೆಲ್ಲಿ? ಇದಕ್ಕೆ ಉತ್ತರ ಹುಡುಕುವ ಹಾದಿಯಲ್ಲಿ ಹಲವು ಸ್ವಾರಸ್ಯಗಳು ಗೋಚರಿಸುತ್ತವೆ. ಕೆಲವರ ಜೀವನದಲ್ಲಿ ಒಳ್ಳೆಯ ಆಕಸ್ಮಿಕಗಳು ಘಟಿಸಿಬಿಡುತ್ತವೆ. ಹಳ್ಳಿಯಲ್ಲಿ ಕುರಿ ಕಾಯುತ್ತಿದ್ದ, ನಗರದಲ್ಲಿ ಕ್ಯಾಬ್‍ ಓಡಿಸುತ್ತಿದ್ದ ಎಂ. ಬಾಲಪ್ಪನವರ ಬದುಕಿನಲ್ಲಿ ಬಂದದ್ದು ಕೂಡ ಅಂತಹುದೇ ಒಂದು ಅನಿರೀಕ್ಷಿತ ಗಳಿಗೆ.

ಯಾವುದೋ ಕೆಲಸಕ್ಕೆಂದು ಬೆಂಗಳೂರಿಗೆ ಬಂದ ಬಾಲಪ್ಪ ಅಕಸ್ಮಾತ್ತಾಗಿ ಕಲಾನಿರ್ದೇಶಕ ಜಾನ್‍ ದೇವರಾಜ್‌ರ ಕಣ್ಣಿಗೆ ಬಿದ್ದರು. ಅಲ್ಲಿಯೇ ತಮ್ಮ ಪ್ರತಿಭೆಯನ್ನು ಪರೀಕ್ಷೆಗೆ ಹಚ್ಚಿದರು. ಪರೀಕ್ಷೆಯಲ್ಲಿ ಗೆದ್ದ ಬಾಲಪ್ಪ ಗುರುವಿಗೆ ತಕ್ಕ ಶಿಷ್ಯನಾಗುವ ಹಾದಿಯಲ್ಲಿ ಮುಂದಿನ ಹತ್ತು ಹನ್ನೆರಡು ವರ್ಷಗಳನ್ನು ಸವೆಸಿದರು. 
 
ಅದಾಗಲೇ ‘ಮಾಲ್ಗುಡಿ ಡೇಸ್‌’ನಂತಹ ಸಾರ್ವಕಾಲಿಕ ಕೃತಿಗಳಿಗೆ ಕಲಾ ನಿರ್ದೇಶನ ಮಾಡಿದ್ದ ಜಾನ್‍ ದೇವರಾಜ್‍, ತಮ್ಮ ‘ಬಾರ್ನ್‍ ಫ್ರೀ ಕಲಾಶಾಲೆ’ಗೆ ಬಾಲು ಅವರನ್ನು ಕರೆದೊಯ್ದರು. ಆ ಶಾಲೆಯೋ ದೇಶ ವಿದೇಶದ ನೂರಾರು ಕಲಾವಿದರು, ಕಲಾಗುರುಗಳಿಂದ ತುಂಬಿ ತುಳುಕುತ್ತಿತ್ತು. ಬಗೆಬಗೆಯ ವಾದ್ಯಗಳು ಬಗೆಬಗೆಯ ಸದ್ದುಗಳಿಗೆ ಬಾಲು ಕಿವಿಗೊಟ್ಟರು.

ಆದರೆ ವಿದೇಶಿ ವಾದ್ಯಗಳಿಗಿದ್ದ ಖದರು ನಮ್ಮ ದೇಸಿ ವಾದ್ಯಗಳಿಗೆ ಇಲ್ಲ ಎಂಬಂತೆ ಬಾಲು ಅವರಿಗೆ ಭಾಸವಾಯಿತು. ತಕ್ಷಣ ಇಂಥ ಸಣ್ಣ ಪುಟ್ಟ ವಾದ್ಯಗಳಿಂದಲೇ ವಿಶಿಷ್ಟವಾದುದನ್ನು ಸಾಧಿಸಬೇಕೆಂದು ಹೊರಟರು. ಅದರ ಫಲವಾಗಿ ಹುಟ್ಟಿದ್ದು ‘ಇಂಡಿಯನ್‍ ಫೋಕ್‍’ ಬ್ಯಾಂಡ್‍. 
 
 
2008ರಲ್ಲಿ ಜನ್ಮತಳೆದ ಈ ಬ್ಯಾಂಡ್‍ ಬೆಂಗಳೂರಿನ ಜನಪ್ರಿಯ ಸಂಗೀತ ತಂಡಗಳಲ್ಲಿ ಒಂದು. ತಮಟೆ, ಬುಡುಬುಡಿಕೆ, ದಮ್ಮಡಿ, ದುಡಿಯಂತಹ ವಾದ್ಯಗಳಿಂದ ಶಾಸ್ತ್ರೀಯ, ಆಧುನಿಕ ಸಂಗೀತ ನುಡಿಸಬಲ್ಲ ಬಾಲು ನೈಪುಣ್ಯ ಈ ಬ್ಯಾಂಡ್‍ ಯಶಸ್ಸಿನ ಗುಟ್ಟು. ಅಲ್ಲದೇ ಸಿನಿಮಾ ಹಾಡುಗಳಿಂದ ಮತ್ತು ವಿದ್ಯುತ್‍ಮಯ ವಾದ್ಯಗಳಿಂದ ಅವರು ಸದಾ ದೂರ. 
 
‘ಏಕತಾನತೆ ಮತ್ತು ನೆಲದ ಸಂಸ್ಕೃತಿಯಿಂದ ಬೇರೆಯಾಗಿದ್ದರಿಂದಲೇ ಆರ್ಕೆಸ್ಟ್ರಾಗಳು ಜನಮಾನಸದಿಂದ ದೂರವಾದವು. ಜನಕ್ಕೆ ಜೀವಂತ ಸಂಗೀತವೊಂದು ಅಗತ್ಯವಿತ್ತು. ಅದನ್ನು ನೀಡುವಲ್ಲಿ ನಮ್ಮ ಪ್ರಯತ್ನ ಸಾಗಿದೆ’ ಎನ್ನುತ್ತಾರೆ ಅವರು. ಜನಪದ ಅಥವಾ ಜನಪರವಾದ ಹಾಡುಗಳನ್ನು ಹಾಡುವುದು ಅವರ ವೈಶಿಷ್ಟ್ಯ. ನೀಲಗಾರರು, ಕಂಸಾಳೆಯವರು, ಜುಂಜಪ್ಪನ ಸಾಲುಗಳು ಮುನ್ನೆಲೆಗೆ ಬರಬೇಕು ಎಂಬ ಆಶಯದೊಡನೆ ಹೊರಟ ಅವರ ತಂಡ ಸಮಕಾಲೀನ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಹಾಡುಗಳನ್ನು ಬರೆದು ಹಾಡಿದೆ. 
 
ಜಂಬೆ ಝಲಕ್
ಹೀಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ ಸಂಗ್ರಹವಾದ ಅಲ್ಪಸ್ವಲ್ಪ ಹಣ ‘ಜಂಬೆ’ಯನ್ನು ಖರೀದಿಸಲು ಸಹಕಾರಿಯಾಯಿತು. ಆಫ್ರಿಕಾದ ಈ ದೇಸಿ ವಾದ್ಯ ಬಾಲು ಜನಪ್ರಿಯತೆಯನ್ನು ದಿನೇ ದಿನೇ ಹೆಚ್ಚಿಸಿತು. ಬಾಲಪ್ಪ ಎಂಬ ಹತ್ತನೇ ತರಗತಿ ಕೂಡ ದಾಟದ ಹುಡುಗ ದೇಶ–ವಿದೇಶಿಗರ ಬಾಯಲ್ಲಿ ನಲಿದಾಡತೊಡಗಿದರು. ‘ಬಾಲು ಜಂಬೆ’ ಎಂದೇ ಹೆಸರಾದರು. 
 
ಲೈವ್ ಸಂಗೀತ ಕಾರ್ಯಕ್ರಮಗಳು ನಡೆಯುವಲ್ಲೆಲ್ಲ ಬಾಲು ಇರಲೇಬೇಕು ಎಂಬಷ್ಟರ ಮಟ್ಟಿಗೆ ಜನಪ್ರಿಯತೆ ಹೆಚ್ಚಿತು. ಇವುಗಳಿಂದ ಪ್ರೇರಿತರಾದ ಬಾಲು 2015ರಲ್ಲಿ ‘ಜಂಬೆ ಝಲಕ್’ ಎಂಬ ಮತ್ತೊಂದು ಸಂಗೀತ ಬ್ಯಾಂಡ್ ಹುಟ್ಟುಹಾಕಿದರು.

ಎನ್‍.ಜಿ. ನಾಗೇಶ್, ಸೌಂದರ್ಯ, ಅಮರಾವತಿ, ಉಮಾ, ವಿನೋದ್‍, ಮುರುಗೇಶ್, ಪವನ್‍ಕುಮಾರ್‍, ರವಿಶಾಸ್ತ್ರಿ ಈ ತಂಡದ ಪ್ರಮುಖ ಕಲಾವಿದರು. ಬಾಲು ಅವರಂತೆಯೇ ಇವರು ಕೂಡ ಶಾಸ್ತ್ರೀಯವಾಗಿ ಸಂಗೀತವನ್ನು ಅಭ್ಯಾಸ ಮಾಡಿಲ್ಲ ಎನ್ನುವುದು ವಿಶೇಷ. ಸಿಂಗಪುರ, ಚೀನಾ, ಜಪಾನ್‍ ಇಲ್ಲೆಲ್ಲ ತಂಡದ ಸಂಗೀತ ಸುಧೆ ಹರಿದಿದೆ. 
 
ಕಲಿ–ಕಲಿಸು
ಈ ನಡುವೆ ಸಂಗೀತದ ಗುಟ್ಟುಗಳನ್ನು ಹೇಳಿಕೊಟ್ಟ ಗುರುಗಳಲ್ಲಿ ಕೆಲವರು, ಕಲಿತದ್ದನ್ನು ಇನ್ನಷ್ಟು ಜನರಿಗೆ ಹಂಚುವಂತೆ ಪ್ರೇರೇಪಿಸಿದರು. ಕಾರ್ಯಕ್ರಮ ಆಯೋಜಿಸುತ್ತಿದ್ದ ಸಂಘಟಕರು ಕೂಡ ಮಕ್ಕಳಿಗೆ ಸಂಗೀತ ಹೇಳಿಕೊಡುವಂತೆ ಕೋರುತ್ತಿದ್ದರು.

ಆಗ ಶಾಲೆ ತೊರೆದವರು, ಬಾಲಕಾರ್ಮಿಕರು, ಕೊಳೆಗೇರಿಯ ಹುಡುಗರಿಗೆ ತಮ್ಮ ವಿದ್ಯೆಯನ್ನು ಧಾರೆ ಎರೆಯತೊಡಗಿದರು ಬಾಲು. ಸಂಗೀತ ತರಬೇತಿ ಅಡೆತಡೆಯಿಲ್ಲದೆ ಸಾಗಬೇಕು ಎಂಬುದು ಅವರ ಆಶಯ. ಹೀಗಾಗಿ ಪ್ರತಿದಿನ ಒಂದೆರಡು ಗಂಟೆಗಳನ್ನು ಸಂಗೀತ ಶಿಕ್ಷಣಕ್ಕೆ ಮೀಸಲಿಡುತ್ತಾರೆ. ಅವರಿಂದ ಕಲಿತ ಅನೇಕರು ಪೂರ್ಣ ಪ್ರಮಾಣದ ಕಲಾವಿದರಾಗಿದ್ದಾರೆ. 
 
‘ಗಾರ್ಮೆಂಟ್‌ಗಳಲ್ಲಿ ಪುಡಿಗಾಸಿಗೆ ದುಡಿಯುತ್ತಿದ್ದ ಸಂಗೀತಾಸಕ್ತರನ್ನು ಕಲೆಹಾಕಿ ತರಬೇತಿ ನೀಡಿದೆವು. ಅಲ್ಲಿ ಸಿಗುತ್ತಿದ್ದ ಸಂಬಳಕ್ಕಿಂತ ಹೆಚ್ಚಿನ ನೆಮ್ಮದಿಯನ್ನು ಈಗ ಅವರು ಕಂಡುಕೊಂಡಿದ್ದಾರೆ. ಸಂಗೀತದಿಂದ ಹೊಟ್ಟೆ ತುಂಬುವುದಿಲ್ಲ ಎಂದು ಅನೇಕರು ಮೂಗುಮುರಿಯುತ್ತಾರೆ. ಆದರೆ ಅದು ಸುಳ್ಳು ಎನ್ನುವುದಕ್ಕೆ ಅನೇಕ ಉದಾಹರಣೆಗಳು ನನ್ನ ಬಳಿ ಇವೆ’ ಎನ್ನುತ್ತಾರೆ ಬಾಲು. 
 
‘ಭೂಮ್ತಾಯಿ’ ಮಡಿಲಲ್ಲಿ 
ಬಾಲು ಸಂಗೀತಗಾರ ಮಾತ್ರವಲ್ಲ, ಅವರೊಳಗೊಬ್ಬ ಹೋರಾಟಗಾರನಿದ್ದಾನೆ, ಸಮಾನತೆಯನ್ನು ಜನರಿಗೆ ತಲುಪಿಸುವ ಕುಶಲಿಯಿದ್ದಾನೆ. ‘ಜನರಿಗೆ ಈರುಳ್ಳಿಯನ್ನು ನೇರವಾಗಿ ತಿನ್ನಿಸಿದರೆ ಅವರು ತಿನ್ನುವುದಿಲ್ಲ.

ಆದರೆ ಸವಿಯಾದ ತಿನಿಸಿನೊಡನೆ ಸೇರಿಸಿದರೆ ತಮಗರಿವಿಲ್ಲದೇ ಆಸ್ವಾದಿಸುತ್ತಾರೆ. ನಾನು ಈಗ ಮಾಡುತ್ತಿರುವುದು ಕೂಡ ಅದನ್ನೇ. ಸಾಮಾಜಿಕ ಹೋರಾಟ, ಪರಿಸರ ಪ್ರಜ್ಞೆ, ಸಾರಾಯಿ ವಿರುದ್ಧದ ಜಾಗೃತಿ ಕುರಿತು ನಾವು ಭಾಷಣ ಮಾಡುವುದಿಲ್ಲ. ಬದಲಿಗೆ ಹಾಡುಕಟ್ಟುತ್ತೇವೆ, ನಾಟಕ ಆಡಿಸುತ್ತೇವೆ. ಆ ಮೂಲಕ ಜನರನ್ನು ಚಿಂತನೆಗೆ ಹಚ್ಚುತ್ತೇವೆ’ ಎನ್ನುತ್ತಾರವರು.
 
ಈ ಮಾತಿಗೆ ಪೂರಕವಾಗಿ ಅವರು ದುಡಿದ ‘ಭೂಮ್ತಾಯಿ’ ಬಳಗ ಇದೆ. ಜನಾರ್ದನ ಕೆಸರಗದ್ದೆ ನೇತೃತ್ವದಲ್ಲಿ ಆರಂಭವಾದ ಈ ತಂಡ ಅದುವರೆಗೆ ನಾಡಿನಲ್ಲಿದ್ದ ಸಂಗೀತ ಬ್ಯಾಂಡುಗಳಿಗೆ ಸವಾಲೆಸೆಯಿತು. ತಂಡದಲ್ಲಿದ್ದ ಯಾರೂ ಅಕಾಡೆಮಿಕ್‍ ಆಗಿ ಸಂಗೀತ ಕಲಿತಿರಲಿಲ್ಲ, ಬದಲಿಗೆ ಎಲ್ಲರೂ ಹುಟ್ಟು ಹಾಡುಗಾರರೇ ಆಗಿದ್ದರು. ಜನಪ್ರಿಯತೆಗಿಂತಲೂ ಜನಪರವಾದ ಹಾಡುಗಳನ್ನು ಹಾಡಿ ಗೆಲ್ಲಬಹುದು ಎಂಬುದನ್ನು ಈ ತಂಡ ಸಾಬೀತು ಮಾಡಿತು. 
 
ಫೇಲಾದೆ, ಆದರೆ ಪಾಸಾದೆ!
ಎಸ್ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎರಡು ಬಾರಿ ಫೇಲ್‍ ಆದರು ಬಾಲು. ಪರೀಕ್ಷೆಯ ದಿನವೂ ಸಂಗೀತ ನೀಡುವಲ್ಲಿ ತಲ್ಲೀನರಾಗಿದ್ದರಂತೆ ಅವರು. ತಂಡದಲ್ಲಿದ್ದ ಅನೇಕರು ಅಕ್ಷರ ಕಲಿಯಲು ಮಹತ್ವ ನೀಡುತ್ತಿದ್ದರು. ಪಾಸಾದರೆ ಇನ್ನೆಲ್ಲಿ ಕಾಲೇಜು ಮೆಟ್ಟಿಲೇರಬೇಕೋ ಎಂಬ ಭಯ ಅವರಿಗೆ! ಆದರೆ ಗುರುಗಳಾಗಿದ್ದ ಜಪಾನ್‌ನ ನೃತ್ಯಗಾತಿ ಮಿಯೋಯಿ ನಾಕಯಾಮ ಬೆನ್ನುಹತ್ತಿ ಪರೀಕ್ಷೆ ಬರೆಸಿದರು ಎಂದು ಪ್ರೀತಿಯಿಂದ ನೆನೆಯುತ್ತಾರೆ.
 
ಆ ಸರಸ್ವತಿ ಒಲಿಯದಿದ್ದರೇನಂತೆ ಈ ‘ಸರಸೋತಿ’ಯನ್ನು ಒಲಿಸಿಕೊಳ್ಳುವ ಛಲದೊಂದಿಗೆ ಸಾಗಿದ ಬಾಲು ಸಂಗೀತಕ್ಕಾಗಿ ಸಾವಿರಾರು ರೂಪಾಯಿ ಸಂಬಳದ ಕೆಲಸವನ್ನೂ ನಿರಾಕರಿಸಿದರು. ತಿಂಗಳಿಗೊಮ್ಮೆ ಸಂಬಳವೇನೋ ಸಿಗುತ್ತಿತ್ತು. ಆದರೆ ಹಾಡುಗಳನ್ನು ಆ ಸಂಸ್ಥೆಯಾಚೆಗೆ ಹಾಡುವಂತಿರಲಿಲ್ಲ. ಹಾಗಾಗಿ ಸುಖ ಜೀವನದ ಸಂಬಳಕ್ಕೆ ಗುಡ್‌ಬೈ ಹೇಳಿದರಂತೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT