ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀನಾರಿಗಾದೆಯೋ ಎಲೆ ಮಾನವ?

Last Updated 26 ಏಪ್ರಿಲ್ 2017, 20:20 IST
ಅಕ್ಷರ ಗಾತ್ರ

ಡಾ. ಮನೋಜ ಗೋಡಬೋಲೆ

ಸತತ ಬರದಿಂದ ತತ್ತರಿಸಿರುವ ನಮ್ಮ ಕರುನಾಡಿಗೆ ನೀರಿನ ಭಾಗ್ಯವನ್ನು ಕರುಣಿಸಲು ಸರ್ಕಾರ ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಮೋಡ ಬಿತ್ತನೆಯಂತಹ ಪ್ರಯತ್ನಗಳೂ ನಡೆದಿವೆ. ಈಗ ಸರ್ಕಾರದ ದೃಷ್ಟಿ ಪಾತಾಳದ ನೀರಿನತ್ತ ಹೊರಳಿದೆ.

ಆಫ್ರಿಕಾ ಖಂಡವು ನಮ್ಮ ಕರ್ನಾಟಕದ ಪ್ರತಿರೂಪದಂತಿದೆ. ಅಲ್ಲಿ ಕೆಲವು ಕಡೆ ನಿತ್ಯ ಹರಿದ್ವರ್ಣ ಕಾಡುಗಳಿದ್ದರೆ, ಹಲವಾರು ಭಾಗಗಳಲ್ಲಿ ವಿಶಾಲ ಹುಲ್ಲುಗಾವಲು. ಉತ್ತರದ ಭಾಗವಂತೂ ವಿಶಾಲ ಮರುಭೂಮಿ. ಒಂದಾನೊಂದು ಕಾಲದಲ್ಲಿ ಅಲ್ಲಿಯೂ ಹೇರಳ ವೃಕ್ಷ ಸಮೂಹವಿತ್ತೆಂದು ಆಧುನಿಕ ವಿಜ್ಞಾನವು ಪುರಾವೆ ಸಮೇತ ವಿವರಿಸುತ್ತದೆ.

ಮೇಲ್ಮಟ್ಟದಲ್ಲಿ ಮರುಭೂಮಿ ಇದ್ದರೂ ಅಲ್ಲಿನ ಪಾತಾಳದಲ್ಲಿ ಮೂರ್ನಾಲ್ಕು ದೊಡ್ಡ ದೊಡ್ಡ ಅಕ್ವೀಫರ್‌ಗಳೆಂಬ ಜಲಸಾಗರಗಳೇ ಇವೆ. ಇವುಗಳ ಗಾತ್ರವನ್ನು ನಾವು ಕಲ್ಪಿಸಿಕೊಳ್ಳಲಾರೆವೇನೋ? ಸಹಾರಾ ಮರುಭೂಮಿಯ ಎಷ್ಟೋ ಮೀಟರುಗಳಷ್ಟು ಕೆಳಗಿರುವ ಈ ಜಲಸಾಗರಗಳ ಗಾತ್ರ ವಿಜ್ಞಾನಿಗಳ ಅಂದಾಜಿನಂತೆ ಭಾರತದ ವಿಸ್ತೀರ್ಣಕ್ಕಿಂತ ಎಷ್ಟೋ ಪಾಲು ದೊಡ್ಡದಿದೆ!

ಒಂದು ಅಂದಾಜಿನಂತೆ ಈ ಅಕ್ವೀಫರ್‌ಗಳು ಕಡೆಯ ಬಾರಿ ಜಲಶೇಖರಣೆ ಮಾಡಿಕೊಂಡಿದ್ದು ಸುಮಾರು 5000 ವರ್ಷಗಳಷ್ಟು ಕೆಳಗೆ. ಇದೇ ರೀತಿಯ ಅಕ್ವೀಫರ್‌ಗಳು ಆಸ್ಟ್ರೇಲಿಯಾ, ಅಮೆರಿಕ ಹಾಗೂ  ಏಷ್ಯಾದ ಅನೇಕ ನಿರ್ವಸಿತ ಭಾಗಗಳಲ್ಲಿವೆ.

ಮರುಭೂಮಿಯಲ್ಲಿ ಅಲ್ಲಲ್ಲಿ ಕಂಡು ಬರುವ ಓಯಸಿಸ್‌ಗಳ ಮೂಲ ಇದೇ ಅಕ್ವೀಫರ್‌ಗಳು. ಮೇಲ್ನೋಟಕ್ಕೆ ಮರುಭೂಮಿಯು ಬರಡಾದ ಪ್ರದೇಶದಂತೆ ಕಾಣಿಸಿದರೂ ಅಲ್ಲಿಯೂ ಆ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯಬಲ್ಲ ಅಸಂಖ್ಯಾತ ಸಸ್ಯ ಸಂಕುಲಗಳು ನೆಚ್ಚಿರುವುದು ಇದೇ ನೀರನ್ನು. ಅವುಗಳ ಬೇರು ಪಾತಾಳದವರೆಗೂ ಚಾಚಿಕೊಂಡು ನೀರನ್ನು ಅಲ್ಪ ಪ್ರಮಾಣದಲ್ಲಿ ಸೆಳೆಯುತ್ತಿರುತ್ತವೆ. ಅಂತಹ ಸಸ್ಯಗಳನ್ನು ಅವಲಂಬಿಸಿಕೊಂಡು ಅಸಂಖ್ಯಾತ ಪ್ರಾಣಿ-ಪಕ್ಷಿಗಳು, ಕೀಟ ಸಂಕುಲಗಳೆಲ್ಲ ಬದುಕುತ್ತಿರುತ್ತವೆ.

ನಾವು ನೀವೆಲ್ಲ ಬಾಯಿ ಚಪ್ಪರಿಸುತ್ತಾ ತಿನ್ನುವ ಬಗೆಬಗೆಯ ಖರ್ಜೂರ ಬೆಳೆಯುವುದು ಕೂಡ ಇದೇ ನೀರಿನಾಶ್ರಯದಲ್ಲಿ. ಇವುಗಳ ಪ್ರಾಮುಖ್ಯ ಎಷ್ಟಿದೆ ಎನ್ನುವುದನ್ನು ಗಮನಕ್ಕೇ ತೆಗೆದುಕೊಳ್ಳದೆ ನೇರವಾಗಿ ಆ ನೀರಿಗೆ ಕನ್ನ ಹಾಕಿದರೆ ಎಂತಹ ಘೋರ ಪ್ರಮಾದವಾಗಬಹುದೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಅಂತಹ ನೀರನ್ನು ಲೂಟಿ ಮಾಡುವ ಮೊದಲು ಇವೆಲ್ಲ ಅಂಶಗಳನ್ನೂ ನಾವು ಅಲೋಚಿಸಬೇಕಾಗುತ್ತದೆ. ಇಲ್ಲಿ ಉಲ್ಲೇಖಿಸಬೇಕಾದ ವಿಷಯ ಲಿಬಿಯಾದ್ದು. ಇದು ಆಫ್ರಿಕಾದ ಉತ್ತರಕ್ಕಿರುವ ರಾಷ್ಟ್ರ. ತೈಲ ಸಂಪತ್ತೇನೋ ಅಲ್ಲಿ ಅಗಾಧವಾಗಿತ್ತು. ಆದರೆ ನೀರಿನ ಕೊರತೆ ಅಪಾರ. ಹಾಗಾಗಿ ಅಲ್ಲಿಯವರು ಈ ಅಕ್ವೀಫರ್‌ಗಳಿಗೇ ಕನ್ನ ಕೊರೆದು ಅಗಾಧ ಪ್ರಮಾಣದಲ್ಲಿ ನೀರನ್ನು ಸೆಳೆಯುತ್ತಿದ್ದಾರೆ.

ಎರಡೂವರೆ ಸಾವಿರ ಕಿಲೋಮೀಟರಿಗೂ ಮಿಕ್ಕಿ ಬೃಹತ್ ಗಾತ್ರದ ಪೈಪುಗಳನ್ನು ಬೆಸೆದು, ಐನೂರು ಮೀಟರಿಗಿಂತಲೂ ಆಳದ 1,300ಕ್ಕೂ ಹೆಚ್ಚು ಬಾವಿಗಳನ್ನು ತೋಡಿ ಸೆಳೆದ ನೀರನ್ನು ದೊಡ್ಡ-ದೊಡ್ಡ ಕೃತಕ ಸರೋವರಗಳಲ್ಲಿ ಸಂಗ್ರಹಿಸಿಕೊಂಡು ಕೃಷಿಯೊಂದಿಗೆ ಸಮಸ್ತ ನಾಗರಿಕರು ಬಳಸತೊಡಗಿದ್ದಾರೆ. ಒಂದು ದೃಷ್ಟಿಯಲ್ಲಿ ಇದೊಂದು ಮಹತ್ ಕಾರ್ಯ. ಆದರೆ, ಇದರಿಂದ ಪರಿಸರದ ಮೇಲಾಗುತ್ತಿರುವ ಹಾನಿಯನ್ನೂ   ಗಮನಿಸಬೇಕಲ್ಲವೇ?

ಬೃಹತ್ ಗಾತ್ರದ ಕೊಳವೆಗಳನ್ನು ನೂರಾರು ಕಿಲೋಮೀಟರುಗಳಷ್ಟು ಉದ್ದ ಚಾಚಿಸಿ, ಅಧಿಕ ಸಾಮರ್ಥ್ಯದ ಪಂಪುಗಳಿಂದ ನೀರನ್ನು ಸೆಳೆಯುತ್ತಿರುವುದರಿಂದ ಸಮೀಪದ ಖರ್ಜೂರದ ತೋಟಗಳು ಒಣಗತೊಡಗಿವೆ. ಇನ್ನಿತರ ಬೆಳೆಗಳು ಬಾಡುತ್ತಿವೆ. ಅಕ್ವೀಫರ್‌ಗಳ ನೀರಿನ ಪ್ರಮಾಣ ತಗ್ಗತೊಡಗಿದೆ. ಮರುಭೂಮಿಯಲ್ಲಿ ಪ್ರಯಾಣ ಮಾಡುವವರಿಗೆ, ಒಂಟೆ ಮತ್ತಿತರ ಪ್ರಾಣಿಗಳಿಗೆ ಅಲ್ಲಲ್ಲಿ ಬಂಡೆಗಳ ಕೆಳಗೋ, ಕಣಿವೆಯ ಒಳಗೋ ಲಭ್ಯವಾಗುತ್ತಿದ್ದ ನೀರು ಇಲ್ಲವಾಗತೊಡಗಿದೆ.

ಇನ್ನು ಸಸ್ಯ ಹಾಗೂ ಪ್ರಾಣಿ ಸಂಕುಲಕ್ಕಾಗುತ್ತಿರುವ ಪರೋಕ್ಷ ಅನ್ಯಾಯದ ಲೆಕ್ಕವಂತೂ ಸಿಕ್ಕುವುದೇ ಅಸಾಧ್ಯ. ಇನ್ನು, ಭೂ ಮೇಲ್ಮೈಯಲ್ಲಿ ಸಂಗ್ರಹಗೊಳ್ಳುವ ಅಪಾರ ಪ್ರಮಾಣದ ನೀರು ಆವಿಯಾಗಿ ಯಾರ ಕೈಗೂ ಸಿಗುತ್ತಿಲ್ಲ. ಅಕ್ವೀಫರ್‌ಗಳು ಸಾವಿರಾರು ವರ್ಷಗಳ ಕಾಲ ಅಸಂಖ್ಯಾತ ಜೀವ ಸಂಕುಲಕ್ಕೆ ಆಶ್ರಯವಾಗಿದ್ದವು. ಆದರೆ, ಮಾನವನ ದುರಾಸೆಯೆಂಬುದು ಮಿತಿಮೀರಿ ಅವಕ್ಕೆ ಸಂಚಕಾರ ತಂದಿಟ್ಟಿದೆ.

ಪರಿಸ್ಥಿತಿ ಹೀಗಿರುವಾಗ, ನಮ್ಮಲ್ಲಿ ಅಲ್ಲಿಗಿಂತ ಎಷ್ಟೋ ಪಟ್ಟು ಹೆಚ್ಚು ಮಳೆ ಬೀಳುತ್ತಿರುವ ಪ್ರದೇಶದವರು ಮಳೆ ನೀರನ್ನು ಇಂಗಿಸುವ ಬಗ್ಗೆ, ಮಳೆ ನೀರಿನ ಸಂಗ್ರಹದ  ಬಗ್ಗೆ, ನೀರಿನ ಮಿತವ್ಯಯದ ಬಗ್ಗೆ ಆಲೋಚಿಸಬೇಕೇ ಹೊರತು ಆಳದ ನೀರಿನ ಖಜಾನೆಯನ್ನು ತೆರೆಯುವುದರೆಡೆಗಲ್ಲ.

ಯಾವುದೋ ದೇಶದ ಕಂಪೆನಿಯವರು ತಮ್ಮ ಲಾಭಕ್ಕಾಗಿ ಇಂತಹ ಯೋಜನೆಗಳನ್ನು ಸೂಚಿಸುತ್ತಾರೆ ಎಂದು ನಮ್ಮ ಖಜಾನೆಯನ್ನು ಅವರ ಮುಂದೆ ತೆರೆದಿಡುವುದು ಜಾಣತನವಲ್ಲ. ನಮ್ಮ ಬಾವಿ, ಕೊಳವೆಬಾವಿ, ಅಂತರ್ಜಲ, ಸಸ್ಯ ಸಂಕುಲವೆಲ್ಲಾ ಇಂತಹ ಆಳ ನೀರಿನಾಸರೆಯಿಂದಲೇ ಜೀವಸೆಲೆಯಾಗಿವೆ. ಅದಕ್ಕೂ ಕನ್ನ ಕೊರೆದರೆ ಅದರ ಪರಿಣಾಮ ಘೋರವಾದೀತು.

ಇತ್ತೀಚೆಗೆ ಮಿತಿಮೀರಿದ ಕೊಳವೆಬಾವಿಗಳನ್ನು ಕೊರೆದಿದ್ದರಿಂದ ತೆರೆದ ಬಾವಿಗಳ ನೀರು ಕೆಲವೇ ದಿನಗಳಲ್ಲಿ ಇಂಗುತ್ತಿರುವುದು ಕಣ್ಣೆದುರಿಗಿರುವಾಗ ಯಾವ ಧೈರ್ಯದ ಮೇಲೆ ನೀರಿನ ಖಜಾನೆಗೇ ಕೈ ಹಾಕುತ್ತಿದ್ದೇವೆ?

ನಮ್ಮ ಮಳೆ ನೀರು ಸಂಗ್ರಹದ  ಒಂದು ಮಾದರಿ ಹೇಗಿದೆ ಎಂದು ಅರಿತುಕೊಳ್ಳಲು ಬೆಂಗಳೂರಿನ ಮನೆಗಳನ್ನು, ಅಪಾರ್ಟ್‌ಮೆಂಟುಗಳನ್ನು ಒಮ್ಮೆ ವೀಕ್ಷಿಸಬೇಕು. ಅಲ್ಲೆಲ್ಲಾ ಮಳೆ ನೀರಿನ ಸಂಗ್ರಹ ಕಡ್ಡಾಯವಾಗಿದೆ. ಅದಕ್ಕೆ ಸಂಬಂಧಪಟ್ಟ ಇಲಾಖೆಯವರು ಕಟ್ಟಡ ಕಟ್ಟುವಾಗ ಸ್ಥಳ ಪರೀಕ್ಷೆ ಮಾಡಿ ಒಪ್ಪಬೇಕು.

ಹಾಗಿದ್ದರೆ ಎಲ್ಲವೂ ಚೆನ್ನ. ಆದರೆ, ನೂರಕ್ಕೆ ತೊಂಬತೊಂಬತ್ತು ಮನೆಗಳವರು ಸರಿಯಾದ ಸಂಗ್ರಹ ವ್ಯವಸ್ಥೆ  ಮಾಡದೇ ತೋರಿಕೆಗಾಗಿ ಕೆಲವು ಪೈಪ್‌ಗಳನ್ನು ಅಳವಡಿಸಿ ಬಿಟ್ಟಿದ್ದಾರೆ. ನಾಗರಿಕ ಸಮುದಾಯದ ಇಂತಹ ಲಜ್ಜೆಗೆಟ್ಟ ನಡವಳಿಕೆಯಿಂದಾಗಿಯೇ ನಮ್ಮಲ್ಲಿ ದೈವವಿದ್ದರೂ ದರಿದ್ರರಾಗುತ್ತಿದ್ದೇವೆ.

ವಿದ್ಯೆ ಕಲಿತ ಮೇಲೆ ಸುಲಭವಾಗಿ ಹೇಗೆ ಜೀವಿಸಬೇಕು ಎನ್ನುವುದನ್ನು ನಾವು ಅರಿಯಬೇಕು. ಅದನ್ನು ಬಿಟ್ಟು ವೃಥಾ ದುಂದುವೆಚ್ಚವನ್ನು ಮಾಡುತ್ತಾ, ಎಲ್ಲಾ ಜೀವ ಸಂಕುಲಗಳಿಗೂ ಅಪಾಯವನ್ನೊಡ್ಡುವ ರೀತಿ ಬದುಕಿದರೆ ನೀನಾರಿಗಾದೆಯೋ ಎಲೆ ಮಾನವ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT