ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲರ ನಿಗ್ರಹಕ್ಕೆ ಕಾರ್ಯತಂತ್ರ ಬದಲಿಸಿ

Last Updated 26 ಏಪ್ರಿಲ್ 2017, 20:20 IST
ಅಕ್ಷರ ಗಾತ್ರ

ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್‌ಪಿಎಫ್‌) ಮೇಲೆ ನಡೆದ ನಕ್ಸಲರ ದಾಳಿಯಲ್ಲಿ 27 ಯೋಧರು ಜೀವ ಕಳೆದುಕೊಂಡಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಅತಿಹೆಚ್ಚು ಸಾವು ಕಂಡ ದಾಳಿ ಇದು.

ನಕ್ಸಲರು ಮುಂದೊಡ್ಡುತ್ತಿರುವ ಭದ್ರತಾ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವಲ್ಲಿ ಭಾರತ ಸರ್ಕಾರದ ವೈಫಲ್ಯವನ್ನು ಇದು ಮತ್ತೊಮ್ಮೆ ನೆನಪಿಸಿದೆ.

ಈ ದಾಳಿಗಳು ಹತಾಶೆಯ ಕೃತ್ಯ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ದಾಳಿಗಾಗಿ ಆಯ್ದುಕೊಂಡಿರುವ ನೆಲೆಯೂ ಸಂದೇಶವೊಂದನ್ನು ರವಾನಿಸಿದೆ. ನಿರ್ಮಾಣ ಹಂತದಲ್ಲಿದ್ದ ರಸ್ತೆಯಲ್ಲಿ ಈ ದಾಳಿ ನಡೆದಿದೆ. ಈ ರಸ್ತೆ, ಹಿಂದುಳಿದ ಹಳ್ಳಿಗಾಡಿಗೆ ಸಂಪರ್ಕ ಕಲ್ಪಿಸಿಕೊಡುವಂತಹದ್ದು.

ರಸ್ತೆ, ಸೇತುವೆಯಂತಹ ಸಂಪರ್ಕ ಕಲ್ಪಿಸುವ ಮೂಲಸೌಕರ್ಯಗಳಲ್ಲಿ ಸರ್ಕಾರದ ಅಸ್ತಿತ್ವ ಸ್ಥಾಪಿಸುವಂತಹ ಸಂಕೇತಗಳನ್ನು ಸಹಿಸದೆ ಸ್ಫೋಟಗೊಳಿಸುವ ಕೃತ್ಯಗಳನ್ನು ನಕ್ಸಲರು ನಡೆಸಿಕೊಂಡು ಬಂದಿದ್ದಾರೆ. ಈ ಪ್ರಕರಣದಲ್ಲೂ ಇದು ಪುನರಾವರ್ತನೆಯಾಗಿದೆ.

ಸುಮಾರು 300 ಜನರಿದ್ದ ನಕ್ಸಲರ ತಂಡ ಹಠಾತ್ ದಾಳಿಯನ್ನು ನಡೆಸಿದೆ. ಕೇವಲ ಒಂದು ತಿಂಗಳ ಹಿಂದೆಯಷ್ಟೇ ಇದೇ ಸುಕ್ಮಾದಲ್ಲಿ ಸಿಆರ್‌ಪಿಎಫ್ ಪಡೆ ಮೇಲೆ ಇಂತಹದೇ ನಕ್ಸಲ್ ದಾಳಿ ನಡೆದಿತ್ತು. ಆಗ 12 ಸಿಆರ್‌ಪಿಎಫ್‌ ಸಿಬ್ಬಂದಿ ಬಲಿಯಾಗಿದ್ದರು. ಇದಕ್ಕೂ ಹಿಂದೆ 2010ರ ಏಪ್ರಿಲ್‌ನಲ್ಲಿ ನಕ್ಸಲ್ ದಾಳಿಯಿಂದ 70 ಸಿಆರ್‌ಪಿಎಫ್‌ ಯೋಧರು ಸತ್ತಿದ್ದರು.

ನಕ್ಸಲರ ಮೇಲಿನ ಮಿಲಿಟರಿ ಕಾರ್ಯಾಚರಣೆಗಳು ಫಲ ನೀಡುತ್ತಿವೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿಪಾದಿಸಿಕೊಂಡು ಬರುತ್ತಿವೆ. ನಿಜ. ಇಂತಹ ಹಲವು ಕಾರ್ಯಾಚರಣೆಗಳಲ್ಲಿ ಅನೇಕ  ನಕ್ಸಲ್‌ ನಾಯಕರು ಹತ್ಯೆಯಾಗಿದ್ದಾರೆ.

ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂಬುದನ್ನು ಯಾರೂ ಅಲ್ಲಗಳೆಯಲಾಗದು. ಜೊತೆಗೆ ನಕ್ಸಲರ ಶರಣಾಗತಿಗಳೂ ಹೆಚ್ಚಾಗಿವೆ. ಹೀಗಿದ್ದೂ ನಕ್ಸಲರು ಮುಂದುವರಿಸಿಕೊಂಡು ಬರುತ್ತಿರುವ ದಾಳಿಗಳು ಹಾಗೂ ಅವರ ಬಳಿ ಕಂಡುಬರುತ್ತಿರುವ ಶಸ್ತ್ರಾಸ್ತ್ರಗಳನ್ನು ಗಮನಿಸಿದರೆ ಸಮಸ್ಯೆ ಬಗೆಹರಿದಿಲ್ಲ.

ಸಿಆರ್‌ಪಿಎಫ್‌ ಪಡೆಯ ಮೇಲೆ 300 ಮಂದಿ ನಕ್ಸಲರ ತಂಡ ದಾಳಿ ನಡೆಸುತ್ತದೆ ಎಂದರೆ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ನಕ್ಸಲರು ಹೊಂದಿದ್ದಾರೆ ಎಂಬುದು ಸ್ಪಷ್ಟ. ಇದು ಭದ್ರತಾಪಡೆಗಳಿಗೆ ದೊಡ್ಡ ಸವಾಲು. ಜೊತೆಗೆ ಇಂತಹ ಬಂಡುಕೋರ ಗುಂಪುಗಳನ್ನು ಸದೆಬಡಿಯಲು ನಮ್ಮ ಸನ್ನದ್ಧತೆಯ ಕೊರತೆಯೂ ಎದ್ದು ಕಾಣಿಸುತ್ತದೆ.

ಗುಪ್ತಚರ ಮಾಹಿತಿ ವೈಫಲ್ಯ ಇಲ್ಲಿ ಎದ್ದು ಕಾಣಿಸುವಂತಹದ್ದು. ರಾಜ್ಯ ಪೊಲೀಸ್ ಹಾಗೂ ಅರೆ ಮಿಲಿಟರಿ ಪಡೆಗಳ ಮಧ್ಯೆ ದಕ್ಷ ಸಮನ್ವಯದ ಕೊರತೆಯನ್ನೂ ಇದು ಬಿಂಬಿಸುತ್ತದೆ. ಸಿಆರ್‌ಪಿಎಫ್‌ ಮಹಾ ನಿರ್ದೇಶಕರ  ಹುದ್ದೆ ಎರಡು ತಿಂಗಳಿಂದ ಖಾಲಿ ಇತ್ತು ಈಗಷ್ಟೇ ಈ ಹುದ್ದೆ ಭರ್ತಿ ಮಾಡಲಾಗಿದೆ. ಮಿಲಿಟರಿ ಕಾರ್ಯಾಚರಣೆಯಿಂದ ಮಾತ್ರವೇ ಬಂಡುಕೋರ ಗುಂಪುಗಳನ್ನು ಸದೆಬಡಿಯಲಾಗದು.

ಇತರ ಆಯ್ಕೆಗಳನ್ನೂ ಶೋಧಿಸಬೇಕು. ಮಾತುಕತೆ ಆಯ್ಕೆಯನ್ನೂ ಗಂಭೀರವಾಗಿ ಪರಿಶೀಲಿಸುವುದು ಅಗತ್ಯ. ನಕ್ಸಲರ ಜೊತೆ ಮಾತುಕತೆ ನಡೆಸಲು ತಮ್ಮ ಸರ್ಕಾರ ಇಚ್ಛಿಸಿದೆ ಎಂದೇ ಛತ್ತೀಸಗಡ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಹೇಳಿಕೊಂಡು ಬಂದಿದ್ದಾರೆ. ಆದರೆ ಇದಕ್ಕೆ ಪೂರಕ ವಾತಾವರಣ ಸೃಷ್ಟಿ ಅಗತ್ಯ. ಈವರೆಗೆ ಅದು ಸಾಧ್ಯವಾಗಿಲ್ಲ.

ವಿಫಲ ಮಿಲಿಟರಿ ಕಾರ್ಯತಂತ್ರ ಮುಂದುವರಿಸುವುದರಿಂದ ನಮ್ಮ ಭದ್ರತಾ ಪಡೆಗಳು ಇನ್ನಷ್ಟು ದಾಳಿಗಳಿಗೆ ಒಳಗಾಗಬೇಕಾಗುತ್ತದೆ. ಇದರಿಂದ ನಕ್ಸಲರು ಬಲಗೊಳ್ಳುತ್ತಾ ಸಾಗುತ್ತಾರೆ. ಇದು ತಪ್ಪಬೇಕು. ಭದ್ರತಾ ಪಡೆ ಹಾಗೂ ಪೊಲೀಸ್ ಪಡೆಗಳ ನೈತಿಕ ಶಕ್ತಿಯನ್ನು ಹೆಚ್ಚಿಸಬೇಕಾದ ಅಗತ್ಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT