ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲಕ್ಕೆ ಸೆಡ್ಡು ಹೊಡೆದ ಚರಕ ಸಂಸ್ಥೆ

Last Updated 27 ಏಪ್ರಿಲ್ 2017, 6:41 IST
ಅಕ್ಷರ ಗಾತ್ರ

ಸಾಗರ: ನೈಸರ್ಗಿಕ ಬಣ್ಣದ  ಕೈಮಗ್ಗ ವಸ್ತ್ರವನ್ನು ಉತ್ಪಾದಿಸುವ ಸಾಗರ ತಾಲ್ಲೂಕಿನ ಭೀಮನಕೋಣೆ ಗ್ರಾಮದ ಚರಕ ಸಂಸ್ಥೆಯಲ್ಲಿ ಮೊದಲಿನಿಂದಲೂ ಮಿತವಾಗಿ ನೀರು ಬಳಸಲಾಗುತ್ತಿದೆ.

ಪ್ರತಿ ತಿಂಗಳು ಸರಾಸರಿ 30 ಸಾವಿರ ಮೀ.ಗಳಷ್ಟು ನೈಸರ್ಗಿಕ ಬಣ್ಣದ ಕೈಮಗ್ಗ ಬಟ್ಟೆಯನ್ನು ಉತ್ಪಾದಿಸಲಾಗುತ್ತಿದೆ.

ಚರಕ ಸಂಸ್ಥೆ ಆರಂಭವಾದಾಗಲೇ ಇಂಗುಗುಂಡಿಗಳನ್ನು  ಪರಿಣಾಮ ಕಾರಿ ಯಾಗಿ ಅಳವಡಿಸಿದ್ದರಿಂದ ಮಲೆ ನಾಡಿನಲ್ಲಿ ತೀವ್ರ ಬರದ  ಈ ಹೊತ್ತಿ ನಲ್ಲೂ ಚರಕ ಸಂಸ್ಥೆ ‘ಜಲ ಸ್ವಾವಲಂಬಿ’ ಆಗಿ ರೂಪುಗೊಂಡಿದೆ. 300 ಮಂದಿ ಕಾರ್ಮಿಕರು ಈ ಸಂಸ್ಥೆಯಲ್ಲಿ ದುಡಿ ಯುತ್ತಿದ್ದು,  ಈ ಪೈಕಿ ಹೆಚ್ಚಿನವರು ಮಹಿಳೆ ಯರು. ಇಲ್ಲಿ ಕರ್ತವ್ಯ ನಿರ್ವ ಹಿಸುವ ಮಹಿಳೆಯರಿಗೆ ಮಧ್ಯಾಹ್ನದ ಊಟವನ್ನೂ ಪೂರೈಸಲು ಕ್ಯಾಂಟೀನ್‌ ವ್ಯವಸ್ಥೆ ಇದೆ. ಕಾರ್ಮಿಕರ  ಮಕ್ಕಳಿಗಾಗಿ ಶಿಶುವಿಹಾರ ಇದೆ.

ವಸ್ತ್ರ ಉತ್ಪಾದನೆಗೆ ಬೇಕಾಗುವ ನೀರನ್ನೂ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಅಗತ್ಯವಿರುವ ನೀರಿಗಾಗಿ ಚರಕ ಇವತ್ತಿಗೂ ಕೊಳವೆ ಬಾವಿಯ ಮೊರೆ ಹೋಗಿಲ್ಲ. ಸಂಸ್ಥೆಯ ಆವರಣದಲ್ಲಿರುವ ತೆರೆದ ಬಾವಿಯ ಮೂಲಕವೇ ನೀರಿನ ನಿರ್ವಹಣೆಯನ್ನು ಸುಗಮವಾಗಿ ನಡೆಸುತ್ತಿದೆ.

ಸಂಸ್ಥೆಯ ಮೇಲ್ಭಾಗದಲ್ಲಿರುವ ಗುಡ್ಡದಲ್ಲಿ ಬಯಲು ರಂಗಮಂದಿರದ ಜೊತೆಗೆ ನೀರಿಂಗಿಸುವ ಹೊಂಡಗಳನ್ನು ನಿರ್ಮಿಸಿರುವ ಕಾರಣ ಇಲ್ಲಿ ಸಂಗ್ರಹ ವಾಗುವ ನೀರು ಹಂತ ಹಂತವಾಗಿ ಕೆಳಭಾಗದಲ್ಲಿರುವ ತೆರೆದ ಬಾವಿಗೆ ಸೇರುತ್ತದೆ. ಮಳೆಗಾಲದಲ್ಲಿ ಒಂದು ಗಂಟೆ ಭಾರೀ ಮಳೆ ಸುರಿದರೆ 50 ಸಾವಿರ ಲೀಟರ್‌ ನೀರನ್ನು ಸಂಗ್ರಹಿಸುವ ಟ್ಯಾಂಕರ್‌ನ ವ್ಯವಸ್ಥೆ ಇದೆ. ಈ ಮೂಲಕ ಒಂದು ಹನಿ ನೀರು  ವ್ಯರ್ಥವಾಗಿ ಹೋಗ ದಂತೆ ಹಿಡಿದಿಡುವ ಮಾರ್ಗವನ್ನು  ಕಂಡುಹಿಡಿಯಲಾಗಿದೆ.

ಚರಕದ ಅಂಗಸಂಸ್ಥೆ ಹೊನ್ನೆಸರ ಗ್ರಾಮದಲ್ಲಿರುವ ಶ್ರಮಜೀವಿ ಆಶ್ರಮದಲ್ಲೂ ಜಲ ಸಂರಕ್ಷಣೆಯ ಅಭಿಯಾನ ಸದ್ದಿಲ್ಲದೆ ಸಾಗಿದೆ. ಆಶ್ರಮಕ್ಕೆ ಹೊಂದಿಕೊಂಡಂತಿರುವ ಸುಮಾರು 2 ಎಕರೆ ವಿಸ್ತೀರ್ಣದ ವಿರೂಪಾಕ್ಷನ ಕೆರೆ ಹೂಳು ತುಂಬಿ ಕೆರೆಯ ಲಕ್ಷಣವನ್ನೇ ಕಳೆದುಕೊಂಡಂತಾಗಿತ್ತು.  ಸಮೃದ್ಧವಾಗಿ ನೀರು ಹರಿಯುತ್ತಿದ್ದ ಈ ಕೆರೆಯ ಮಹತ್ವವನ್ನು ಅರಿತ ಆಶ್ರಮದವರು ಈಗ ಕೆರೆಯ ಹೂಳೆತ್ತುವ ಮೂಲಕ ಅದರ ಕಾಯಕಲ್ಪಕ್ಕೆ ತೊಡಗಿದ್ದಾರೆ.

ಕೆರೆಗೆ ನೇರವಾಗಿ ನೀರು ಬಂದರೆ ಅದರ ಜೊತೆಗೆ ಹೂಳು ತುಂಬುವುದು ಮಲೆನಾಡಿನಲ್ಲಿ ಸಹಜ ಎನ್ನುವ ಕಾರಣಕ್ಕೆ ಕೆರೆಯ ಹೂಳೆತ್ತುವ ಜೊತೆಗೆ ನೀರು ಹಂತ ಹಂತವಾಗಿ ಕೆರೆಗೆ ಸೇರುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ₹ 2 ಲಕ್ಷ ವೆಚ್ಚದಲ್ಲಿ ಸರ್ಕಾರದ ಸಹಾಯ ವಿಲ್ಲದೆ ಸಾರ್ವಜನಿಕರ ನೆರವಿನಿಂದ ಈ ಕಾಮಗಾರಿ ನಡೆಯುತ್ತಿರುವುದು ಗಮನಾರ್ಹ. ನೀರಿನ ಉಳಿತಾಯದ ಜೊತೆಗೆ ಅದರ ಶುದ್ಧೀಕರಣದತ್ತಲೂ ಚರಕ ಸಂಸ್ಥೆ ಹೆಚ್ಚಿನ ಗಮನ ಹರಿಸಿದೆ. ವಸ್ತ್ರದ ಉತ್ಪಾದನೆ ಸಂದರ್ಭದಲ್ಲಿ ಬಣ್ಣಗಾರಿಕೆಗೆ ರಾಸಾಯನಿಕ ಬಳಸಿದರೆ ವಿಷಪೂರಿತ ನೀರು ಭೂಮಿಯನ್ನು ಸೇರುತ್ತದೆ ಎನ್ನುವ ಕಾರಣಕ್ಕೆ ನೈಸರ್ಗಿಕ ಬಣ್ಣಗಾರಿಕೆಗೆ ಸಂಸ್ಥೆ ಮೊರೆ ಹೋಗಿದೆ.

ಈ ಬಣ್ಣಗಾರಿಕೆಯ ನೀರನ್ನೂ ಕೂಡ ಶುದ್ಧೀಕರಿಸಿ ಅದನ್ನು  ತರಕಾರಿ ಬೆಳೆಯಲು ಬಳಸಲಾಗುತ್ತಿದೆ. ಲಭ್ಯ ಸಂಪನ್ಮೂಲಗಳನ್ನು  ಮಿತವಾಗಿ ಬಳಸುವ ಜಾಣ್ಮೆಯನ್ನು ಸಂಸ್ಥೆ ರೂಢಿಸಿಕೊಂಡಿದೆ. ಗ್ರಾಮೀಣ ಉದ್ಯಮ ಪರಿಸರಸ್ನೇಹಿ ಆಗಬಹುದು ಎಂಬುದಕ್ಕೆ ಚರಕ ಮಾದರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT