ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಭ್ರಷ್ಟಾಚಾರ

Last Updated 27 ಏಪ್ರಿಲ್ 2017, 9:08 IST
ಅಕ್ಷರ ಗಾತ್ರ

ಹಾಸನ: ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ರೈತರ ಮೇಲೆ ಶೋಷಣೆ ನಡೆಯುತ್ತಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್‌ ಆರೋಪಿಸಿದರು.ಮಳೆ ಇಲ್ಲದೆ ಅಡಿಕೆ, ತೆಂಗು, ಆಲೂಗೆಡ್ಡೆ ಬೆಳೆಗಾರರು ಸಂಕಷ್ಟ ದಲ್ಲಿದ್ದು, ಸಾಲ ತೀರಿಸಲು ಆಗದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ರೈತರಿಗೆ ನೆರವಿಗೆ ನಿಲ್ಲಬೇಕಾದ ಅಧಿಕಾರಿಗಳು, ವ್ಯಾಪಾರಿಗಳ ಜತೆ ಸೇರಿಕೊಂಡು ಶೋಷಣೆ ಮಾಡುತ್ತಿದ್ದಾರೆ.

ಮಾರುಕಟ್ಟೆ ಯಲ್ಲಿ ಪಾಸ್‌ಬುಕ್‌ ನೋಂದಣಿ ಮಾಡಿಸಲು ಹಾಗೂ ಟ್ರೇ ತೆಗೆದುಕೊಳ್ಳಲು ಹಣ ನೀಡಬೇಕು.  ತೂಕವಾದ ಬಳಿಕ ಗುಣಮಟ್ಟ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಾರೆ. ರೇಷ್ಮೆ ಗೂಡು ಮಾರಾಟವಾದ ಒಂದೂವರೆ ತಿಂಗಳ ಬಳಿಕ ಚೆಕ್‌ ನೀಡಲಾಗುತ್ತಿದೆ.ಆ ಚೆಕ್‌ಗಳು ಸಹ ಬೌನ್ಸ್‌ ಆಗಿವೆ. ರೈತರಿಗೆ ನೀಡುತ್ತಿದ್ದ ₹ 50 ಸಹಾಯ ಧನ ಸಹ ನಿಲ್ಲಿಸಲಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಮಾರುಕಟ್ಟೆಯಲ್ಲಿ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ, ಕುಡಿಯಲು ನೀರಿಲ್ಲ, ಊಟ ಸಿಗುವುದಿಲ್ಲ. ಅನ್ಯಾಯ ಪ್ರಶ್ನಿಸುವ ರೈತರ ಮೇಲೆ ಹಲ್ಲೆ ನಡೆಸಿರುವ ಉದಾಹರಣೆಯೂ ಇದೆ. ರೇಷ್ಮೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇದೆಲ್ಲಾ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತಮ ಬೆಲೆ ಇದೆ ಅಂದುಕೊಂಡು ರೈತರು ರೇಷ್ಮೆ ಬೆಳೆಯುತ್ತಿದ್ದಾರೆ. ಆದರೆ ಬೆಳೆಗೆ ಸೂಕ್ತ ದರ ನಿಗದಿ ಪಡಿಸುತ್ತಿಲ್ಲ. ಅಧಿಕಾರಿಗಳು ವ್ಯಾಪಾರಿಗಳ ಜತೆ ಶಾಮೀಲಾಗಿ ರೈತರನ್ನು ವಂಚಿಸುತ್ತಿದ್ದಾರೆ. ಭ್ರಷ್ಟ ಅಧಿಕಾರಿಗಳನ್ನು ಅಮಾನತು ಪಡಿಸಿ ಪ್ರಾಮಾಣಿಕ ಅಧಿಕಾರಿಯನ್ನು ನೇಮಕ ಮಾಡಬೇಕು. ರೇಷ್ಮೆ ಕದಿಯುವುದನ್ನು ತಡೆಯಬೇಕು ಮತ್ತು ಪೊಲೀಸ್‌ ಠಾಣೆ ತೆರೆಯಬೇಕು.  ರೇಷ್ಮೆ ಗೂಡಿಗೆ ಬೆಲೆ ನಿಗದಿ ಮಾಡುವ ಮುನ್ನ ಗುಣಮಟ್ಟ ಪರೀಕ್ಷೆ ಮಾಡಬೇಕು. ಮಾರುಕಟ್ಟೆ ವತಿಯಿಂದಲೇ ಚೆಕ್‌ ನೀಡಬೇಕು ಎಂದು ಆಗ್ರಹಿಸಿದರು.

ರೇಷ್ಮೆ ಬೆಳೆಗಾರರಾದ ಜಗದೀಶ್‌, ವಿರೇಶ್‌ ಮಾತನಾಡಿ, ಮಾರಾಟವಾದ ರೇಷ್ಮೆಗೆ ತಡವಾಗಿ ಚೆಕ್‌ ನೀಡಲಾಗುತ್ತಿದೆ. ಹೀಗಾದರೆ ಜೀವನ ನಡೆಸುವುದೇ ಕಷ್ಟ. ಗೂಡು ತುಂಬಲು ನೀಡುವಕ್ರೇಟ್‌ಗೆ ₹ 20 ಹಣ ನೀಡಬೇಕು. ಇದನ್ನು ಪ್ರಶ್ನಿಸಿದರೆ ದೌರ್ಜನ್ಯ ಮಾಡುತ್ತಾರೆ ಎಂದು ಆರೋಪಿಸಿದರು.

ವರಿಷ್ಠರಿಗೆ ವರದಿ: ಬಿಜೆಪಿಯಲ್ಲಿ ಯಾರು ಏಕ್ಷಪಕ್ಷೀಯವಾಗಿ ನಡೆದುಕೊಳ್ಳುತ್ತಿಲ್ಲ. ಪಕ್ಷದ ಬೆಳವಣಿಗೆ ಸಹಿಸದವರುನನ್ನ ವಿರುದ್ಧ   ಆರೋಪ ಮಾಡುತ್ತಿದ್ದಾರೆ ಎಂದು ರಮೇಶ್‌ ಸ್ಪಷ್ಟನೆ ನೀಡಿದರು.ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ವರಿಷ್ಠರು ನೇಮಕ ಮಾಡಿದ್ದಾರೆ. ಇದನ್ನು ಪ್ರಶ್ನಿಸುವಂತಿಲ್ಲ. ಪದಾಧಿಕಾರಿಗಳ ಪಟ್ಟಿಯಲ್ಲಿ ಮೂಲ ಕಾರ್ಯಕರ್ತರು ಮತ್ತು ಹೊಸಬರು ಇದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯೆ ರತಮ್ಮ ಅವರನ್ನು ಸಭೆಗೆ ಆಹ್ವಾನಿಸಿದ್ದರೂ ಬಂದಿಲ್ಲ. ಅಭ್ಯರ್ಥಿಗಳು ಯಾರಾಗಬೇಕು ಎಂಬುದನ್ನು  ವರಿಷ್ಠರು ನಿರ್ಧರಿಸುತ್ತಾರೆ. ಎಲ್ಲ ಬೆಳವಣಿಗೆಯನ್ನು ವರಿಷ್ಠರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಸಚಿವ ಎ.ಮಂಜು ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಗೆ ಮಂಜು ದ್ರೋಹ ಮಾಡಿದ್ದಾರೆ. ರಾಜಕೀಯ ಮರು ಜೀವ ನೀಡಿದ ಪಕ್ಷಕ್ಕೆ ಅನ್ಯಾಯ ಮಾಡಿದ್ದಾರೆ. ಅವರ ಸೇರ್ಪಡೆ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದ ಅವರು, ಎ.ಟಿ.ರಾಮಸ್ವಾಮಿ ಪಕ್ಷಕ್ಕೆ ಸೇರ್ಪಡೆ ಕುರಿತು ಮಾಹಿತಿ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT