ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಬರ ಕನಸು ಮತ್ತು ನೂರೊಂದು ನೆನಪು

Last Updated 27 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
‘ಎಲ್ಲರ ಬದುಕಿನಲ್ಲಿಯೂ ಕಾಲೇಜು ಜೀವನ ಅವಿಸ್ಮರಣೀಯ ನೆನಪುಗಳ ಸುಂದರ ಗುಚ್ಛ. ಅದರಲ್ಲಿ ಸಿಹಿ–ಕಹಿ ನೆನಪುಗಳೆರಡೂ ಇವೆ. ಈ ಸಿನಿಮಾದ ಕಥೆಯೂ ಅಂಥ ನೆನಪುಗಳನ್ನು ಮರುಕಳಿಸುವ ಪ್ರಯತ್ನ.
 
ಸಾಮಾನ್ಯವಾಗಿ ಕಾಲೇಜು ಕಥೆಯಿರುವ ಸಿನಿಮಾಗಳು ಸದ್ಯದ ಯುವಜನರನ್ನು ಆಕರ್ಷಿಸುವ ಹಾಗಿರುತ್ತವೆ. ಈ ಸಿನಿಮಾ ಕೂಡ ಖಂಡಿತವಾಗಿಯೂ ಯುವ ಪೀಳಿಗೆಯನ್ನು ಆಕರ್ಷಿಸುತ್ತದೆ.
 
ಆದರೆ ಅದರ ಜೊತೆಗೇ ಹಳೆಯ ತಲೆಮಾರಿನವರಿಗೂ ತಮ್ಮ ಕಾಲೇಜು ದಿನಗಳನ್ನು ನೆನಪಿಸುವ ಮೂಲಕ ಮೆಚ್ಚುಗೆ ಗಳಿಸುತ್ತದೆ’,ನಟ ಚೇತನ್‌ ಮಾತನಾಡುತ್ತಲೇ ಇದ್ದರು.
 
ಅವರು ಮಾತಿಗೆ ಆರಂಭಿಸುವುದಕ್ಕೂ ಮುಂಚೆ ‘ಚೇತನ್‌ ಮಾತೇ ಆಡುವುದಿಲ್ಲ’ ಎಂದು ದೂರಿದ್ದ ಮೇಘನಾ ರಾಜ್‌ ತಮ್ಮ ಮಾತು ಸುಳ್ಳಾದ ಅಚ್ಚರಿಯಿಂದ ಅವರ ಮುಖವನ್ನೇ ನೋಡುತ್ತಿದ್ದರು. 
 
ಅದು ‘ನೂರೊಂದು ನೆನಪು’ ಸಿನಿಮಾದ ಟೀಸರ್‌ ಬಿಡುಗಡೆ ಕಾರ್ಯಕ್ರಮ. ನಾಯಕ ಚೇತನ್‌ಗೆ ಈ ಚಿತ್ರದ ಬಗ್ಗೆ, ಅದರಲ್ಲಿನ ತಮ್ಮ ಪಾತ್ರದ ಬಗ್ಗೆ ಸಾಕಷ್ಟು ಖುಷಿ ಮತ್ತು ವಿಶ್ವಾಸ ಇರುವುದು ಅವರ ಮಾತಿನಲ್ಲಿಯೇ ವ್ಯಕ್ತವಾಗುತ್ತಿತ್ತು. 
 
‘ನೂರೊಂದು ನೆನಪು’ ಮರಾಠಿ ಲೇಖಕ ಸುಹಾಸ್‌ ಶ್ರೀವಲ್ಕರ್‌ ಅವರ ‘ದುನಿಯಾ ದಾರಿ’ ಕಾದಂಬರಿ ಆಧರಿಸಿದ ಸಿನಿಮಾ. ಇದೇ ಹೆಸರಿನ ಸಿನಿಮಾ ಈಗಾಗಲೇ ಮರಾಠಿಯಲ್ಲಿ ಬಂದಿದೆ. ಆದ್ದರಿಂದ ‘ನೂರೊಂದು ನೆನಪು’ ರೀಮೇಕ್‌ ಎನ್ನಬಹುದು.

ಇದು ರಿಮೇಕ್‌ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ತಾವು ಮೂಲ ಕಾದಂಬರಿಗೇ ಹೆಚ್ಚು ಒತ್ತುಕೊಟ್ಟು ಸಿನಿಮಾ ಮಾಡಿದ್ದೇವೆ ಎಂದರು ನಿರ್ದೇಶಕ ಕುಮರೇಶ್‌. ಎಂಬತ್ತರ ದಶಕದಲ್ಲಿ ನಡೆಯುವ ಕಥೆಯನ್ನು ತೆರೆಯ ಮೇಲೆ ತರುತ್ತಿದ್ದಾರೆ ಅವರು. 
 
ಡಾಕ್ಟರ್‌ ಆಗಬೇಕು ಎಂಬ ಮೇಘನಾ ರಾಜ್‌ ಆಸೆ ಈ ಸಿನಿಮಾದ ಮೂಲಕ ಈಡೇರುತ್ತಿದೆ. ‘ನೂರೊಂದು ನೆನಪು’ ಸಿನಿಮಾದಲ್ಲಿ ಅವರು ವೈದ್ಯಕೀಯ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
 
‘ಮರಾಠಿಯಲ್ಲಿನ ಮೂಲ ಸಿನಿಮಾ ನೋಡಿದಾಗ ನನಗೆ ಇಂಥದ್ದೇ ಕಥೆಗಾಗಿ ಕಾಯುತ್ತಿದ್ದೆ ಅನಿಸಿಬಿಟ್ಟಿತು. ತಕ್ಷಣವೇ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡುಬಿಟ್ಟೆ. ಬಹುತೇಕ ಎಲ್ಲರೂ ಹೊಸಬರೇ ಆಗಿದ್ದರೂ ಅವರಿಂದ ಸಾಕಷ್ಟು ಸಂಗತಿಗಳನ್ನು ಕಲಿತುಕೊಂಡಿದ್ದೇನೆ. ಇದು ನನ್ನ ವೃತ್ತಿಬದುಕಿನ ಸ್ಮರಣೀಯ ಚಿತ್ರ’ ಎಂದರು ಮೇಘನಾ. 
 
ಹಿರಿಯ ನಟ ಲೋಕನಾಥ್‌ ಕೂಡ ಈ ಚಿತ್ರದಲ್ಲಿ ವಿಭಿನ್ನ ಪಾತ್ರವೊಂದರಲ್ಲಿ ನಟಿಸಿದ್ದಾರಂತೆ. ನಿರ್ದೇಶಕ ಕುಮರೇಶ್‌, ಛಾಯಾಗ್ರಾಹಕ ಎಸ್‌.ಕೆ. ರಾವ್‌, ನಟ ರಾಜ್‌ವರ್ಧನ್‌ ಸೇರಿದಂತೆ ಹಲವರಿಗೆ ಇದು ಮೊದಲ ಚಿತ್ರ.
 
‘ಇದು ಬರೀ ಸಿನಿಮಾ ಅಲ್ಲ, ನಮ್ಮೆಲ್ಲರ ಒಂದು ವರ್ಷದ ಕನಸು. ನಮ್ಮ ಬದುಕು’ ಎಂದ ಅವರು – ‘ನಾನು ಈ ಚಿತ್ರದಲ್ಲಿ ಸ್ನೇಹಕ್ಕಾಗಿ ಏನು ಬೇಕಾದರೂ ಮಾಡುವ ಕೊನೆ ಬೆಂಚ್‌ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಪಾತ್ರದ ಕುರಿತೂ ಹೇಳಿಕೊಂಡರು. ಯಶ್‌ ಶೆಟ್ಟಿ ಖಳನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
 
ಸಂಗೀತ ನಿರ್ದೇಶಕ ಗಗನ್‌ ಬದೆಯ ಅವರಿಗೆ ಎಂಬತ್ತರ ದಶಕದ ವಾತಾವರಣಕ್ಕೆ ಹೊಂದುವಂಥ ಸಂಗೀತ ಹೊಸೆಯುವುದು ಸವಾಲಾಗಿತ್ತಂತೆ. ‘ನನ್ನೆದುರಿನ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ ಖುಷಿ ಇದೆ’ ಎಂದರು ಅವರು. ಚಿತ್ರ ಈಗಾಗಲೇ ಪೂರ್ತಿಗೊಂಡಿದ್ದು, ಮೇ 19ರಂದು ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಚಿತ್ರತಂಡವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT