ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಹಾಡಿತು ಕೋಗಿಲೆ!

Last Updated 27 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
‘ನಿಮ್ಮನ್ನು ಮದುವೆಯಾಗಲು ಒಪ್ಪಿಕೊಂಡಿದ್ದೇ ನೀವು ಗಾಯಕ ಎಂದು. ಅದನ್ನೇ ಬಿಟ್ಟು ಬರಿ ನಟನೆ ಮಾಡುತ್ತೀರಲ್ಲ...’ ಎಂಬ ಪತ್ನಿಯ ಆರೋಪ ಮತ್ತು ಕೋಪವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಸುಜಯ್ ಶಾಸ್ತ್ರಿ. 
 
ಸುಜಯ್‌ ಶಾಸ್ತ್ರಿ ಹೆಸರಿಗಿಂತ ಅವರು ‘ಪಾಂಡುರಂಗ ವಿಠಲ’ ಧಾರಾವಾಹಿಯ ‘ಗಂಡುಗಲಿ ವಂಶದ ಏಕೈಕ ಮನೆ ಅಳಿಯ ವಿಠಲ’ ಎಂದೇ ಹೆಚ್ಚು ಪರಿಚಿತರು. ಇತ್ತೀಚೆಗೆ ಬಿಡುಗಡೆಯಾದ ಎಂ.ಜಿ. ಶ್ರೀನಿವಾಸ್‌ ನಟನೆ–ನಿರ್ದೇಶನದ ‘ಶ್ರೀನಿವಾಸ ಕಲ್ಯಾಣ’ದ ‘ಬೆಂಕಿ ಸೀನ’ ಆಗಿಯೂ ಅವರು ಜನಪ್ರಿಯ.
 
ನಟನೆ ಮತ್ತು ಸಂಗೀತ ಸುಜಯ್‌ ವೃತ್ತಿ ಮತ್ತು ಬದುಕಿನ ಮುಖ್ಯ ಭಾಗಗಳು. ಅದರಲ್ಲಿ ಸಂಗೀತದ ಒಲವಿನ ತೂಕ ತುಸು ಹೆಚ್ಚು. ಗಾಯಕನಾಗಿಯೇ ಗುರುತಿಸಿಕೊಳ್ಳಬೇಕು ಎಂಬ ಹೆಬ್ಬಯಕೆ ಹೊಂದಿದ್ದವರು ಸುಜಯ್‌. ನಡುವೆ ನಟನೆ ಕೈಹಿಡಿಯಿತು. ಅವಕಾಶಗಳೂ ಬಂದವು. ಈಗ ತುಸು ಮರೆಗೆ ಸರಿದಿರುವ ಸಂಗೀತವನ್ನು ಮರಳಿ ಅಪ್ಪಿಕೊಳ್ಳುವ ತಯಾರಿ ನಡೆಸಿದ್ದಾರೆ.
 
ರಂಗಭೂಮಿ ನಂಟು
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸುಜಯ್‌, ಓದಿದ್ದು 12ನೇ ತರಗತಿವರೆಗೆ. ಶಾಲಾದಿನಗಳಲ್ಲಿಯೇ ಬಣ್ಣದ ವ್ಯಾಮೋಹ ರಂಗಭೂಮಿಯ ನಂಟು ಬೆಳೆಸಿತು. ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಲಾರಂಭಿಸಿದ್ದರು. ತಾತಂದಿರು ಗಮಕಿಗಳು. ಅಮ್ಮ ಶಾಸ್ತ್ರೀಯ ಸಂಗೀತ ಕಲಿತವರು.
 
ಹೀಗಾಗಿ ಗಾಯನದ ಆಸಕ್ತಿ ಜೀನ್‌ನಲ್ಲಿಯೇ ಬಂದಿತ್ತು. ಮೇಳ ಮತ್ತು ನಟನೆ ವಿಚಾರದಲ್ಲಿ ತಾವು ಒಂದು ರೀತಿ ‘ರೀಪ್ಲೇಸ್‌ಮೆಂಟ್’ನಂತೆ ಇದ್ದಿದ್ದನ್ನು ಅವರು ಹೇಳಿಕೊಳ್ಳುತ್ತಾರೆ. ಕಲಾವಿದರು ಇಲ್ಲದಿದ್ದಾಗ ನಟಿಸಲು ಕರೆಬರುತ್ತಿತ್ತು. 
 
ಹಾಡುಗಾರರು ಇಲ್ಲದಿದ್ದಾಗ ಹಾಡಲು ಬುಲಾವ್‌ ಬರುತ್ತಿತ್ತು. ಖಂಜರ, ಡೋಲು, ದಮಡಿ ಬಾರಿಸುತ್ತಲೇ ಹಾಡುವುದು ಸುಲಭವಲ್ಲ. ಆ ಕಲೆ ಒಲಿದಿತ್ತು. ಹೀಗೆ ಮೇಳದಲ್ಲಿ ಸಹ ಗಾಯಕನಾಗಿ ಹಾಡುತ್ತಲೇ ಮುಖ್ಯವಾಹಿನಿಗೆ ಬಂದರು. ಸುಮಾರು 300 ರಂಗಗೀತೆಗಳಿಗೆ ದನಿ ನೀಡಿದರು.
 
99ರ ಬಳಿಕ ವೃತ್ತಿ ರಂಗಭೂಮಿಗೆ ಕಾಲಿಟ್ಟರು. ‘ಬೆನಕ’, ‘ನಟರಂಗ’, ‘ಸ್ಪಂದನ’, ‘ರಂಗಾವತಾರ’, ‘ಸಾತ್ವಿಕ’, ‘ರಂಗಪಯಣ’, ‘ರಂಗಾಯಣ’ – ಹೀಗೆ ಪ್ರಮುಖ ಕಂಪೆನಿಗಳ ಗರಡಿಯಲ್ಲಿ ನಟನೆಗೆ ಸಾಣೆ ಹಿಡಿಸಿಕೊಂಡರು. 
ತಾವಾಗಿಯೇ ಬಂದರು ‘ಮೇಷ್ಟ್ರು’!

‘‘2005ರಲ್ಲಿ ಸ್ನೇಹಿತನ ಸಂಗೀತದ ಆಲ್ಬಂ ಬಿಡುಗಡೆ ಸಮಾರಂಭಕ್ಕೆ ಗಾಯಕ ರಾಜು ಅನಂತಸ್ವಾಮಿ ಬಂದಿದ್ದರು. ಸಂಗೀತದ ಆಸಕ್ತಿಯ ಕುರಿತು ಅವರೊಂದಿಗೆ ಹರಟುವಾಗ ಮಾತಿನ ಮಧ್ಯೆ ‘ನನ್ನ ಬಳಿ ಪಾಠಕ್ಕೆ ಬನ್ನಿ’ ಎಂದರು. ನನ್ನೊಂದಿಗೆ ಮಾತನಾಡಿದಾಗಲೇ ನನಗೆ ಸಂಗೀತದ ಪಾಠ ಹೇಳಿಕೊಡುವ ಬಯಕೆ ಅವರಲ್ಲಿ ಮೂಡಿತ್ತು.
 
ಅಂತಹ ಮೇಷ್ಟ್ರು ಈಗೆಲ್ಲಿ ಸಿಗುತ್ತಾರೆ? ಅವರೇ ಒತ್ತಾಯ ಮಾಡಿ ತಮ್ಮೊಂದಿಗೆ ಕರೆದೊಯ್ದರು. ಒಮ್ಮೆ, ‘ನೀನು ಏನಾಗಬೇಕು ಎಂದುಕೊಂಡಿದ್ದಿ ಕಂದ?’ ಎಂದು ಕೇಳಿದರು. ನಾನು ‘ಹಿನ್ನೆಲೆ ಗಾಯಕ ಆಗಬೇಕು’ ಎಂದೆ. ‘ಥೂ ನಿನ್ನ. ಲೈವ್‌ ಪರ್ಫಾಮರ್ ಆಗಬೇಕು ಕಣೋ. ಅದು ನಿಜವಾದ ಸಾಧನೆ’ ಎಂದು ನನ್ನ ಬದುಕಿನ ಕಿಟಕಿ ತೆರೆದರು.
 
ತಮ್ಮ ಶಿಷ್ಯ ಏನಾಗಬೇಕೆಂಬುದನ್ನು ನಮ್ಮ ಬದುಕಿನ ಪುಸ್ತಕದ ಒಂದೊಂದೇ ಪುಟಗಳನ್ನು ಸರಿಸುವ ಮೂಲಕ ಪರೋಕ್ಷವಾಗಿ ಹೇಳಿಕೊಡತೊಡಗಿದರು’’ ಎಂದು ನೆನೆಯುತ್ತಾರೆ ಸುಜಯ್‌.

‘‘ಅವರು ಹೆಚ್ಚಿನ ಪಾಠ ಹೇಳಿಕೊಡುತ್ತಿದ್ದುದೇ ವೇದಿಕೆ ಮೇಲೆ. ಹಾಡಲು ಕುಳಿತರೆಂದರೆ ಸರ್ವಶಕ್ತಿಯನ್ನೂ ಸಂಗೀತದೊಳಗೆ ತೊಡಗಿಸಿಬಿಡುತ್ತಿದ್ದರು. ಅವರಲ್ಲೊಂದು ದೈವತ್ವವಿತ್ತು. ಕಲಿಯಲು ಹೋಗುತ್ತಿದ್ದ ನಮ್ಮನ್ನೂ ವೇದಿಕೆ ಹತ್ತಿಸಿ ಹಿಂದೆ ಕೂರಿಸಿಕೊಳ್ಳುತ್ತಿದ್ದರು.
 
‘ಮಧುರೆಗೆ ಹೋದನು ಮಾಧವಾ....’ ಎಂದು ಹಿಂದೆ ತಿರುಗಿ ಮೆಲ್ಲನೆ ಸಂಜ್ಞೆ ಮಾಡಿದರೆಂದರೆ ನಾವು ಅದನ್ನು ಪುನರಾವರ್ತಿಸಬೇಕು. ಹೀಗೆ ಅವರ ಜತೆ ಅನೇಕ ಕಾರ್ಯಕ್ರಮಗಳಲ್ಲಿ ಹಾಡಿದ್ದಿದೆ. ಅವರನ್ನು ಕಳೆದುಕೊಂಡ ಬಳಿಕ ಸಂಗೀತದ ಒಲವೂ ಕಡಿಮೆಯಾಯಿತು’’ ಎಂದು ಸುಗಮ ಸಂಗೀತದಿಂದ ಅಭಿನಯಕ್ಕೆ ಹೊರಳಿದ ಕಾರಣವನ್ನು ಹೇಳುತ್ತಾರೆ.

ರಾಜು ಅನಂತಸ್ವಾಮಿ ಅವರ ಗಾಯನ ಮಾತ್ರವಲ್ಲ, ಅವರ ಕೆಲವು ಶೈಲಿಗಳನ್ನೂ ಸುಜಯ್‌ ಅನುಕರಿಸುತ್ತಾರಂತೆ. ಅವರು ಓಡಾಡುತ್ತಿದ್ದ ರೀತಿ, ಸಂಗೀತ ಆಲಿಸುವಾಗ ತನ್ಮಯರಾಗುತ್ತಿದ್ದ ಬಗೆ ಅವರನ್ನು ತೀವ್ರವಾಗಿ ಪ್ರಭಾವಿಸಿದೆ. ನಟನೆಯ ವಿಚಾರದಲ್ಲಿ ಇದೇ ರೀತಿ ಜಹಾಂಗೀರ್‌ ಅವರ ಪ್ರಭಾವವನ್ನು ಹೇಳಿಕೊಳ್ಳುತ್ತಾರೆ.
 
ಸುಗಮ ಸಂಗೀತಕ್ಕೆ ಅತಿ ದೊಡ್ಡ ಕೊಡುಗೆ ನೀಡಿದವರು ಮೈಸೂರು ಅನಂತಸ್ವಾಮಿ ಮತ್ತು ರಾಜು ಅನಂತಸ್ವಾಮಿ. ಆದರೆ ಅವರ ಕೊಡುಗೆ ತೆರೆಮರೆಗೆ ಸರಿಯಿತು ಎನ್ನುತ್ತಾರೆ.

ಫೋನ್‌ ಕಂಪೆನಿಯಿಂದ ಎಫ್‌ಎಂಗೆ...
ಬದುಕಿನ ಪ್ರಶ್ನೆ ಎದುರಾದಾಗ ಕೆಲಸಕ್ಕೆ ಹೋಗುವುದು ಅನಿವಾರ್ಯವಾಯಿತು. ಏರ್‌ಟೆಲ್‌, ವೊಡಾಫೋನ್‌ಗಳಲ್ಲಿ ಕೆಲಸ ಮಾಡಿದರು. ಆ ಕೆಲಸ ಮನಸಿಗೆ ಹಿಡಿಸಲಿಲ್ಲ. ಹುಡುಕಾಟದ ನಡುವೆ 93.5 ಎಫ್‌ಎಂ ಉದ್ಯೋಗ ಸಿಕ್ಕಿತು. ಅಲ್ಲಿ ಕೆಲಸ ನೀಡಿದವರು ಆಗ ಆರ್‌ಜೆ ಆಗಿದ್ದ ಎಂ.ಜಿ. ಶ್ರೀನಿವಾಸ್‌. ಅಲ್ಲಿ ಸಮಯ ಸಿಗುತ್ತಿದ್ದರಿಂದ ರಂಗಭೂಮಿಯತ್ತ ಮತ್ತೆ ಓಡಾಡಲು ಶುರುಮಾಡಿದರು. 
 
ಮುಂದೆ ಎಫ್‌ಎಂ ಚಾನೆಲ್‌ ಹಿಂದಿ ಕಾರ್ಯಕ್ರಮಕ್ಕೆ ಬದಲಾಯಿತು. ಪದವಿ ಓದದಿರುವುದರಿಂದ ಬೇರೆ ಕೆಲಸವೂ ಸಿಗಲಿಲ್ಲ. ಆಗ ಧಾರಾವಾಹಿಯಲ್ಲಿ ನಟಿಸುವಂತೆ ಅವಕಾಶ ನೀಡಿದವರು ‘ಮಜಾ ಟಾಕೀಸ್‌’ ಖ್ಯಾತಿಯ ಪವನ್ ಕುಮಾರ್‌. ಆದರೆ, ಅವರ ನಿರೀಕ್ಷೆಗೆ ಪೂರಕವಾಗಿ ‘ಥ್ರೀ ಈಡಿಯೆಟ್ಸ್‌’ ಹಾಸ್ಯ ಧಾರಾವಾಹಿ ಹೆಸರು ಮಾಡಲಿಲ್ಲ.
 
ಮುಂದೇನು ಎಂದು ಯೋಚಿಸುತ್ತಿದ್ದಾಗ ಸಿಹಿ ಕಹಿ ಚಂದ್ರು ಕರೆದು ಅವಕಾಶ ನೀಡಿದರು. ಆಗ ಸಿಕ್ಕ ‘ಪಾಂಡುರಂಗ ವಿಠಲ’ದ ಮನೆಯಳಿಯನ ಪಾತ್ರ ಜನಪ್ರಿಯವಾಯಿತು. ಶ್ರೀನಿವಾಸ್‌ ನಿರ್ದೇಶನದ ‘ಟೋಪಿವಾಲಾ’ ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಬೇಕಿತ್ತು. ಸಮಯ ಹೊಂದಾಣಿಕೆಯಾಗದ ಕಾರಣ ಸಾಧ್ಯವಾಗಲಿಲ್ಲ.
 
‘ಶ್ರೀನಿವಾಸ ಕಲ್ಯಾಣ’ ಶುರುವಾಗುವ ಮುನ್ನ ಚಾನ್ಸ್‌ ಕೊಡಬೇಕು ಎಂದು ಶ್ರೀನಿವಾಸ್‌ ಬಳಿ ‘ಜಗಳ’ ಮಾಡಿ ಪಾತ್ರ ಗಿಟ್ಟಿಸಿಕೊಂಡರು. ನಾಯಕನ ಗೆಳೆಯನ ಪಾತ್ರದಲ್ಲಿ ಚಿತ್ರದುದ್ದಕ್ಕೂ ಕಾಣಿಸಿಕೊಂಡಿರುವ ಸುಜಯ್‌, ನವಿರು ಹಾಸ್ಯ ಮತ್ತು ವಿಶಿಷ್ಟ ಶೈಲಿಯ ಮೂಲಕ ಗಮನ ಸೆಳೆದಿದ್ದಾರೆ. ಈಗ ಎ.ಪಿ. ಅರ್ಜುನ್‌ ನಿರ್ದೇಶನದ ‘ಕಿಸ್‌’,  ಹೊಸಬರ ‘ಗರುಡ’, ‘ಪ್ರದೇಶ ಸಮಾಚಾರ’, ಫೇಸ್‌ಬುಕ್‌’, ‘ವಿಹಸ್ತ’ ಮುಂತಾದ ಚಿತ್ರಗಳು ಸರದಿಯಲ್ಲಿವೆ.

ಮತ್ತೆ ಹಾಡು, ಮೇಷ್ಟ್ರ ಧ್ಯಾನ
‘ನಾನು ನಟನಿಗಿಂತ ಹೆಚ್ಚಾಗಿ ಹಾಡುಗಾರ’ ಎನ್ನುತ್ತಾರೆ ಸುಜಯ್‌. ಹಾಡಿನ ಪ್ರೀತಿಯಿಂದಲೇ ಮಗಳಿಗೆ ‘ಸ್ವರ’ ಎಂಬ ಹೆಸರಿಟ್ಟಿದ್ದಾರೆ. ಹಾಡುವುದನ್ನು ಮತ್ತೆ ಶುರುಮಾಡುವಂತೆ ಆಪ್ತರು ಆಗಾಗ್ಗೆ ಹೇಳುತ್ತಲೇ ಇದ್ದಾರೆ. ಹೀಗಾಗಿ ಗಾಯನಕ್ಕೆ ಮರಳುವ ಸಿದ್ಧತೆ ನಡೆಸಿದ್ದಾರೆ.
 
ಭಾವಗೀತೆ ನಶಿಸುತ್ತಿದೆ, ಪಾಶ್ಚಿಮಾತ್ಯ ಸಂಗೀತದ ಅಳವಡಿಕೆ ಭಾವಗೀತೆಗಳ ಮಹತ್ವವನ್ನೇ ಕೊಲ್ಲುತ್ತಿದೆ ಎಂಬ ಕಳವಳ ಅವರದು. ಭಾವಗೀತೆಗಳನ್ನು ಮತ್ತೆ ಹೊಸತಾಗಿ ಜನರಿಗೆ ತಲುಪಿಸುವ ಜತೆಯಲ್ಲಿ ಗುರುಗಳಾದ ರಾಜು ಅನಂತಸ್ವಾಮಿ ಅವರ ನೆನಪನ್ನು ಉಳಿಸುವ ಕಾರ್ಯಕ್ರಮಗಳನ್ನು ವರ್ಷವಿಡೀ ನಡೆಸುವ ಉದ್ದೇಶ ಅವರದು.
 
ಆದರೆ ಅದಕ್ಕೆ ಬಂಡವಾಳದ ಕೊರತೆ ಅವರನ್ನು ಕಾಡುತ್ತಿದೆ. ಈಗಲೂ ಪ್ರತಿ ವರ್ಷ ಸಾಲ ಮಾಡಿ ಜನವರಿ 17ರಂದು ಮೇಷ್ಟ್ರ ನೆನಪಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸುತ್ತಿರುತ್ತೇನೆ ಎನ್ನುತ್ತಾರೆ.

ಗಂಭೀರ ಪಾತ್ರಗಳು ಇಷ್ಟವಾದರೂ, ಹಾಸ್ಯ ಪಾತ್ರಗಳೇ ಅವರನ್ನು ಅರಸಿ ಬರುತ್ತಿವೆ. ಪಾತ್ರಗಳಲ್ಲಿ ವೈವಿಧ್ಯವನ್ನು ಬಯಸುತ್ತಿದ್ದಾರೆ. ಹಾಗೆಂದು ಹಾಸ್ಯಪಾತ್ರಗಳನ್ನು ಅವರು ಒಲ್ಲೆ ಎನ್ನುವುದಿಲ್ಲ. ನಟನೆಯಲ್ಲಿನ ಹೊಸತನ್ನು ಕಂಡುಕೊಳ್ಳುತ್ತಲೇ, ತಮ್ಮೊಳಗಿನ ಸುಗಮ ಸಂಗೀತ ಗಾಯಕನಿಗೆ ಹೊಸ ದಿಕ್ಕು ತರುವ ಪ್ರಯತ್ನದಲ್ಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT