ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡ ಕೊಡಿಸಿದ ಮೊದಲ ಒಡವೆ

Last Updated 27 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ತಮ್ಮ ಬಳಿ ಎಷ್ಟೇ ಒಡವೆ ಇದ್ದರೂ ಗಂಡ ಕೊಡಿಸಿದ ಒಡವೆಗೆ ವಿಶೇಷ ಮಹತ್ವ. ಅಂತಹುದರಲ್ಲಿ ಮದುವೆಯಾದ ನಂತರ ಮೊದಲ ಬಾರಿಗೆ ಕೊಡಿಸಿದ ಒಡವೆಯೆಂದರೆ ಕೇಳಬೇಕೆ? ಅಂತಹ ತಮ್ಮ ಅನುಭವಗಳನ್ನು ನೂರಾರು ಗೃಹಿಣಿಯರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಒಬ್ಬರಂತೂ, ಪ್ರಿಯತಮನ ಮೊದಲ ಒಡವೆ ಮೊದಲ ಮುತ್ತಿನಷ್ಟೇ ಆಪ್ಯಾಯಮಾನ ಎಂದಿದ್ದಾರೆ! ನೀವೂ ಓದಿ ಖುಷಿಪಡಿ...

****

ಬಾಂಧವ್ಯ ಬೆಸೆದ ಹಸಿರು ನೆಕ್ಲೆಸ್ 
ನನ್ನ ಮದುವೆಯಾದ ಮೇಲೆ ದೊರೆತ ಮೊದಲ ಒಡವೆ ಎಂದರೆ ನನ್ನ ಪತಿ ಕೊಡಿಸಿದ ಹಸಿರು ಬಣ್ಣದ ಚಿನ್ನದ ನೆಕ್ಲೆಸ್. ನನಗೆ ಇದರ ಮೇಲೆ ಪ್ರೀತಿಯೂ ಗೌರವವೂ. ಈ ಒಡವೆ ನಮ್ಮಿಬ್ಬರ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಕಾರಣವಾಯಿತು.
ಕೆ.ಎಸ್.ಹೇಮಲತಾ ರಾವ್, ರಾಜಾಜಿನಗರ

ಒಡವೆಗಿಂತ ಒಳ್ಳೆಯತನ ಮುಖ್ಯ
ನನಗೆ ಈಗ 68 ವರ್ಷ. ಮದುವೆಯಾದಾಗ ನಮಗೆ ತುಂಬಾ ಬಡತನವಿತ್ತು. ನನ್ನ ಯಜಮಾನರು ನನಗೆ ಬೆಳ್ಳಿಯ ಮಾಂಗಲ್ಯಸರ ಹಾಕಿದ್ದರು. ಅವರ ಒಳ್ಳೆಯತನದ ಮುಂದೆ ಒಡವೆ ಗಿಡವೆ ಮುಖ್ಯ ಅನಿಸಲಿಲ್ಲ. ಯಾಕೆಂದರೆ ನನಗೆ ಅಪ್ಪನೂ ಇಲ್ಲ ಅಮ್ಮನೂ ಇಲ್ಲ. ಮದುವೆಯಾಗಿ 22 ವರ್ಷಗಳ ನಂತರ ನನಗೆ ಅವರು ಒಂದು ಜೊತೆ ಕಿವಿಯೋಲೆ ಕೊಡಿಸಿದರು. ಅದುವರೆಗೆ ನನ್ನ ಬಳಿ ಚಿನ್ನದ ಒಡವೆಗಳೇ ಇರಲಿಲ್ಲ. ಅವರು ಕಿವಿಯೋಲೆ ಕೊಡಿಸಿದ ಮೇಲೆ ಚಿನ್ನದ ತಾಳಿಯನ್ನೂ ಮಾಡಿಸಿಕೊಟ್ಟರು.
ಅನಸೂಯಮ್ಮ, ಜಂಬೂ ಸವಾರಿ ದಿಣ್ಣೆ,

ಮರೆಯಲಾರದ ಉಡುಗೊರೆ
ನಮ್ಮ ಮದುವೆಯ ದಿನದ ನೆನಪಿಗಾಗಿ ನನ್ನ ಯಜಮಾನರು ಒಂದು ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದರು. ಅಂದು ನನಗೆ ಏನೋ ಪಡೆದುಕೊಂಡಷ್ಟು ಖುಷಿ.  ಗಂಡ ಕೊಡಿಸಿದ ಮೊದಲ ಒಡವೆ ಅದು. ಅ ದಿನದ ಸವಿನೆನಪನ್ನು ಎಂದಿಗೂ ಮರೆಯಲಾರೆ. ಉಡುಗೊರೆ ನೀಡಿದ ಗಂಡನಿಗೆ ಕಣ್ಣಲ್ಲೇ ಕೃತಜ್ಞತೆ ಸಲ್ಲಿಸಿದೆ. ಆ ಮಧುರ ನೆನಪನ್ನು ನೆನದರೆ ಇಂದಿಗೂ ಕಣ್ಣಲ್ಲಿ ಆನಂದಭಾಷ್ಪ.
ಎನ್. ರೂಪಾ,  ಶ್ರೀನಿವಾಸ ಕಾಲೊನಿ, ಅರೆಹಳ್ಳಿ



ಬೆಲೆ ಕಟ್ಟಲಾಗದ ಕೊಡುಗೆ

ನನ್ನ ಪತಿ ಮೋಹನ್‌ ನನಗೆ ಕೊಡಿಸಿದ ಮೊದಲ ಒಡವೆ ನೆಕ್ಲೆಸ್‌.  ಅದು ನನಗೆ ಯಾವತ್ತಿಗೂ ಅಚ್ಚುಮೆಚ್ಚಿನ ಒಡವೆ. ನಮ್ಮದು ಪ್ರೇಮವಿವಾಹ. ದಾಂಪತ್ಯ ಬದುಕಿಗೆ ಪ್ರೀತಿಯೇ ಮುಖ್ಯ ಎಂದು ನಂಬಿದವಳು ನಾನು. ಆದರೂ ಅವರು ಅದೇ ಪ್ರೀತಿಯಿಂದ ನನಗೆ ಕೊಡಿಸಿದ ನೆಕ್ಲೆಸ್‌ ಬೆಲೆ
ಕಟ್ಟಲಾಗದ ಕೊಡುಗೆ.
ಸುಚಿತ್ರಾ ಮೋಹನ್‌, ಚುಂಚಘಟ್ಟ

ಮೊದಲ ಒಡವೆಯ ನೆನಪು ಸದಾ
ಮನೆಯವರೆಲ್ಲರ ವಿರೋಧದ ನಡುವೆಯೂ ಶ್ರೀಕಾಂತ್‌ ಅವರು ನನ್ನನ್ನು ಮದುವೆಯಾಗಿದ್ದರು. ಅವರ ಪ್ರೀತಿಯೇ ನನಗೆ ಎಲ್ಲವೂ ಆಗಿತ್ತು. ಆದರೆ ಅವರು ಕೊಡಿಸಿದ ಮೊದಲ ಒಡವೆ ನೆಕ್ಲೆಸ್‌. ನಂತರ ಕಿವಿಯೋಲೆ ಕೊಡಿಸಿದ್ರು. ಅದಾದ ಬಳಿಕವೂ ಸಾಕಷ್ಟು ಒಡವೆ ಕೊಡಿಸಿದ್ದರೂ ಮೊದಲ ಬಾರಿಗೆ ಕೊಡಿಸಿದ್ದು ಸದಾ ನೆನಪಿನಲ್ಲಿದೆ.
ಅಕ್ಷತಾ ಶ್ರೀಕಾಂತ್‌, ಚುಂಚಘಟ್ಟ, ಜೆ.ಪಿ.ನಗರ 8ನೇ ಹಂತ

ಮೊದಲ ಒಡವೆಯ ಕತೆ
ಇಂದಿಗೆ ಸುಮಾರು 40 ವರ್ಷಗಳ ಹಿಂದಿನ ಕತೆ. ಒಲವಿನ ಪ್ರಿಯತಮನ ಜೊತೆ ಮದುವೆಗೆ ಮುಂಚೆ ಸುತ್ತಾಡುತ್ತಿದ್ದ ಸಮಯ. ಆಗೆಲ್ಲಾ ಹಣದ ಅಭಾವ. ಚಿನ್ನ ಖರೀದಿಸುವಷ್ಟು ಚೈತನ್ಯವಿರಲಿಲ್ಲ. ಆದರೂ ಒಂದು ಒಡವೆ ಕೊಡಿಸಬೇಕೆಂಬ ಬಯಕೆ ಅವನಿಗೆ. ಸುತ್ತಾಡುತ್ತಾ ಹೀಗೆ ಒಂದು ಉಮಾ ಗೋಲ್ಡ್‌ ಅಂಗಡಿಗೆ ನುಗ್ಗಿ ಕೇವಲ ₹25ಗೆ ಒಂದು ನೆಕ್ಲೆಸ್ ಖರೀದಿಸಿ ನನಗೆ ತೊಡಿಸಿದರು.

ಅಂದು ನಿಜಕ್ಕೂ ತುಂಬಾ ಖುಷಿಯಾಯಿತು. ಚಿನ್ನ, ವಜ್ರಕ್ಕಿಂತಲೂ ನನಗೆ ಆ ಒಡವೆಯ ಮೇಲೆ ಹೆಚ್ಚು ಒಲವು. ಇಂದಿಗೂ ಅದರ ಹೊಳಪು ಮಾಸಿಲ್ಲ. ಎಂದಾದರೊಮ್ಮೆ ಧರಿಸಿ ಗತನೆನಪಿಗೆ ಜಾರುತ್ತೇನೆ. ಪ್ರಿಯತಮನ ಮೊದಲ ಒಡವೆ ಮೊದಲ ಮುತ್ತಿನಷ್ಟೇ ಆಪ್ಯಾಯಮಾನ. ನನ್ನ ಒಲವಿನ ಉಡುಗೊರೆಯ ಹೊಳಪು ಒಲವಿನಷ್ಟೇ ಇಂದಿಗೂ ಹೊಸತಾಗಿದೆ.
ರಾಜೇಶ್ವರಿ ನಾಗರಾಜ್

ಮೊದಲ  ಸಂಭ್ರಮ
ನಾನು ಮತ್ತು ನನ್ನ ಪತಿ ಇಬ್ಬರೂ ವೈದ್ಯರು. ಮದುವೆಯಾಗಿ ಏಳು ವರ್ಷದ ಬಳಿಕ ನನ್ನ ಪತಿ ಮುರಳಿ ಚಿನ್ನದ ಒಡವೆ ಕೊಡಿಸಿದರು. ಅದೂ ಸರ್‌ಪ್ರೈಸ್‌ ಆಗಿ.
ಕೊರಳ ಸರ, ಅದಕ್ಕೊಂದು ಪುಟ್ಟ ಡಾಲರ್, ವಜ್ರದ ಸ್ಟಡ್‌ ಮತ್ತು ಉಂಗುರವನ್ನು ನನಗೆ ಉಡುಗೊರೆಯಾಗಿ ಕೊಟ್ಟದ್ದನ್ನು ಮರೆಯಲು ಸಾಧ್ಯವೇ ಇಲ್ಲ. ನಾನು ಕೇಳದೆಯೇ ಅವರು ಇಷ್ಟೊಂದು ಒಡವೆಗಳನ್ನು ನನಗೆ ನೀಡಿದಾಗ ನಿಜಕ್ಕೂ ನನಗೆ ಮಾತುಗಳೇ ಹೊರಡಲಿಲ್ಲ.
ಬೇರೆ ಒಡವೆಗಳನ್ನು ಹಬ್ಬ–ಹರಿದಿನಗಳಲ್ಲಿ ಹಾಕಿಕೊಳ್ಳುವೆ. ಆದರೆ, ಅವರ ಮೇಲಿನ ಪ್ರೀತಿಗಾಗಿ ಉಂಗುರವನ್ನು ಮಾತ್ರ ಸದಾ ಧರಿಸಿರುತ್ತೇನೆ. ಥ್ಯಾಂಕ್ಸ್ ಮುರಳಿ.
ಡಾ.ಬಿಂದುಶ್ರೀ ಮುರಳೀಧರ ಪಟೇಲ್, ವಿಜಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT