ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

34 ತಿಂಗಳು ಕಳೆದರೂ ಅಂತ್ಯ ಕಾಣದ ಪ್ರಕರಣ

ವಿಚಾರಣೆ ಹಂತದಲ್ಲಿರುವ ಅಕ್ಷತಾ ಸಾವಿನ ಪ್ರಕರಣ: ಕಾಂಚನಾ ಪ್ರಕರಣದಲ್ಲಿ ಖುಲಾಸೆ
Last Updated 27 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ವಿಜಯಪುರ: ಪ್ರತ್ಯೇಕ ಘಟನೆಗಳಲ್ಲಿ ನಾಲ್ಕು ವರ್ಷದ ಬಾಲಕಿಯರಿಬ್ಬರು ಕೊಳವೆ ಬಾವಿಯೊಳಗೆ ಬಿದ್ದು ಮೃತಪಟ್ಟ ಪ್ರಕರಣ ಜಿಲ್ಲೆಯಲ್ಲಿ ಈ ಹಿಂದೆ ದಾಖಲಾಗಿವೆ. ಒಂದು ಪ್ರಕರಣದಲ್ಲಿ ಆರೋಪಿಗಳು ಖುಲಾಸೆಯಾಗಿದ್ದರೆ, ಇನ್ನೊಂದು ಪ್ರಕರಣದ ವಿಚಾರಣೆ ಇಲ್ಲಿಯ ಜೆ.ಎಂ.ಎಫ್‌.ಸಿ ನಾಲ್ಕನೇ ನ್ಯಾಯಾಲಯದಲ್ಲಿ ನಡೆದಿದೆ. 34 ತಿಂಗಳು ಕಳೆದರೂ ಈ ಪ್ರಕರಣ ಅಂತ್ಯ ಕಂಡಿಲ್ಲ.

ಇಂಡಿ ತಾಲ್ಲೂಕಿನ ದೇವರ ನಿಂಬರಗಿ ಗ್ರಾಮ ವ್ಯಾಪ್ತಿಯ ತೋಟದ ಮನೆ (ಅಜ್ಜನ ಮನೆ)ಗೆ 2009ರ ಆಗಸ್ಟ್‌ 29ರ ಸಂಜೆ ಬಂದಿದ್ದ ಕಾಂಚನಾಕಳ್ಳಿ (4) ಎಂಬ ಬಾಲಕಿಯು ವಿಫಲಗೊಂಡಿದ್ದ ತೆರೆದ ಕೊಳವೆ ಬಾವಿಯೊಳಗೆ ಬಿದ್ದು ಮೃತಪಟ್ಟಿದ್ದಳು.

ವಿಜಯಪುರ ತಾಲ್ಲೂಕು ನಾಗಠಾಣ ಸಮೀಪದ ದ್ಯಾಬೇರಿ ತೋಟದ ಮನೆಯ ಬಳಿ ಬೆನ್ನಟ್ಟಿದ್ದ ನಾಯಿಯಿಂದ ತಪ್ಪಿಸಿಕೊಳ್ಳಲು ಓಡಿದ ಸಂದರ್ಭ (2014ರ ಜೂನ್‌ 17) ಬಾಲಕಿ ಅಕ್ಷತಾ ಹನುಮಂತ ಪಾಟೀಲ (4) ಕಾಲು ಜಾರಿ ತೆರೆದ ಕೊಳವೆ ಬಾವಿಯೊಳಗೆ ಬಿದ್ದು ಕೊನೆಯುಸಿರೆಳೆದಿದ್ದಳು.

ಆರೋಪ ಮುಕ್ತ: ಕಾಂಚನಾ ಪ್ರಕರಣದಲ್ಲಿ ಜಮೀನಿನ ಮಾಲೀಕ ರಾಮಚಂದ್ರ ಹಳ್ಳಿ ವಿರುದ್ಧ ಚಡಚಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಐದು ವರ್ಷ ವಿಚಾರಣೆ ನಡೆಸಿದ ಇಂಡಿಯ ಜೆ.ಎಂ.ಎಫ್‌.ಸಿ ನ್ಯಾಯಾಲಯ ಡೊಳ್ಳಿ ಅವರನ್ನು ಆರೋಪದಿಂದ ಮುಕ್ತಗೊಳಿಸಿ, 2014ರಲ್ಲಿ ಪ್ರಕರಣ ಕೊನೆಗೊಳಿಸಿತು.

ಕೊಳವೆ ಬಾವಿಯಲ್ಲಿ 54 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಕಾಂಚನಾ ರಕ್ಷಣಾ ಕಾರ್ಯಾಚರಣೆಯು ಹಟ್ಟಿ ಚಿನ್ನದ ಗಣಿ, ಸಿಕಂದರಾಬಾದ್‌ನ ತಜ್ಞರ ಮಾರ್ಗದರ್ಶನದಲ್ಲಿ ಸತತ ಆರು ದಿನ ನಡೆದಿತ್ತು.

ನಾಲ್ಕು ಜೆ.ಸಿ.ಬಿ, 20ಕ್ಕೂ ಹೆಚ್ಚು ಟಿಪ್ಪರ್‌, ಟ್ರ್ಯಾಕ್ಟರ್‌, 100ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಅಹೋರಾತ್ರಿ ಕಾರ್ಯಾಚರಣೆ ನಡೆಸಿ, 2009ರ ಸೆ. 5ರಂದು ಬಾಲಕಿಯ ದೇಹವನ್ನು ಹೊರ ತೆಗೆದಿದ್ದರು. ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗೋವಿಂದ  ಕಾರಜೋಳ ಅವರು ಜಿಲ್ಲೆ ವ್ಯಾಪ್ತಿಯಲ್ಲಿನ ತೆರೆದ ವಿಫಲ ಕೊಳವೆಬಾವಿ ಮುಚ್ಚಲು ಅಂದೇ ಆದೇಶ ಹೊರಡಿಸಿದ್ದರು.

ವಿಚಾರಣೆ ಹಂತ: ಅಕ್ಷತಾ ಪ್ರಕರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಗಂಭೀರವಾಗಿ ಪರಿಗಣಿಸಿದ್ದರಿಂದ ವಿಜಯಪುರ ಗ್ರಾಮೀಣ ಪೊಲೀಸರು ಐವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿಕೊಂಡಿದ್ದರು.

ಹೊಲದ ಮಾಲೀಕ ರಾಮಚಂದ್ರ ಪರಸಪ್ಪ ಹಳ್ಳಿ, ಕೊಳವೆ ಬಾವಿಯಿದ್ದ ತೋಟದ ಮನೆಯಲ್ಲಿ ವಾಸವಿದ್ದ ಈತನ ಮೂವರು ಮಕ್ಕಳಾದ ಅನಿಲ್‌, ತಿಪ್ಪರಾಯ, ಬೀರಪ್ಪ ಮತ್ತು ಕೊಳವೆ ಬಾವಿ ಕೊರೆದಿದ್ದ ಏಜೆನ್ಸಿ ಮಾಲೀಕ ಪ್ರಕಾಶ್‌ ಕಿಶೋರ್ ವಿರುದ್ಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2014ರ ಜೂನ್‌ 17ರಂದು ದೂರು ದಾಖಲಾಗಿತ್ತು.

ಗ್ರಾಮೀಣ ಪೊಲೀಸರು 2015ರ ಫೆಬ್ರುವರಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆಗಿನಿಂದಲೂ ಪ್ರಕರಣದ ವಿಚಾರಣೆ ಇಲ್ಲಿಯ ಜೆ.ಎಂ.ಎಫ್‌.ಸಿ ನಾಲ್ಕನೇ ನ್ಯಾಯಾಲಯದಲ್ಲಿ ನಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೊಳವೆ ಬಾವಿಯಲ್ಲಿ 29 ಅಡಿ ಆಳದಲ್ಲಿ ಸಿಲುಕಿದ್ದ ಅಕ್ಷತಾ ರಕ್ಷಣೆಗಾಗಿ ಹಟ್ಟಿ ಚಿನ್ನದ ಗಣಿಯ ತಜ್ಞರ ತಂಡ, ಪುಣೆಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ತಮಿಳುನಾಡಿನ ಮಧುರೈನ ರೋಬೊ ತಜ್ಞ ಮಣಿಕಂಠನ್ ನೇತೃತ್ವದಲ್ಲಿ 50 ಗಂಟೆ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಜೆ.ಸಿ.ಬಿ, ಹಿಟಾಚಿ, ಟಿಪ್ಪರ್‌ ಲಾರಿಗಳು ಮತ್ತು ಏರ್‌ ಕಂಪ್ರೆಸ್ಸರ್‌ ಉಪಕರಣಗಳ ಜತೆಗೆ ಎಕ್ಸಕವೇಟರ್, ಟ್ರೈಲರ್, ಜನರೇಟರ್‌ ಇನ್ನಿತರೆ ಯಂತ್ರಗಳನ್ನು ಬಳಸಿಕೊಳ್ಳಲಾಗಿತ್ತು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಜಿಲ್ಲಾಡಳಿತದಿಂದ ಯಾವುದೇ ಹಣ ಪಡೆಯಲಿಲ್ಲ. ಆದರೆ ಆರು ಮಂದಿ ಮಾತ್ರ ₹ 6.12 ಲಕ್ಷ ವೆಚ್ಚವಾಗಿದೆ ಎಂದು ಬಿಲ್‌ ಸಲ್ಲಿಸಿದ್ದರು.

ಹಳ್ಳಿ ಕುಟುಂಬದ ಮನವಿ: ‘ಬಾಗಲಕೋಟೆ ಜಿಲ್ಲೆಯ ಸೂಳಿಕೇರಿ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದ ತಿಮ್ಮಣ್ಣನ ಪ್ರಕರಣವನ್ನು ಮಾನವೀಯ ದೃಷ್ಟಿಯಿಂದ ಸರ್ಕಾರ ವಾಪಸ್‌ ಪಡೆದಂತೆ, ಅಕ್ಷತಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಕುಟುಂಬದ ಸದಸ್ಯರ ವಿರುದ್ಧ ದಾಖಲಿಸಿರುವ ಮೊಕದ್ದಮೆಯನ್ನು ವಾಪಸ್‌ ಪಡೆದು, ಮಾನವೀಯತೆ ಮೆರೆಯಬೇಕು’ ಎಂದು ರಾಮಚಂದ್ರ ಹಳ್ಳಿ ಕುಟುಂಬ ಆ ಸಂದರ್ಭದಲ್ಲೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮೀಣ ಪೊಲೀಸರು ಕುಟುಂಬದ ನಾಲ್ವರನ್ನು ಬಂಧಿಸಿದ್ದರಿಂದ, ನಿಶ್ಚಯವಾಗಿದ್ದ ರಾಮಚಂದ್ರ ಹಳ್ಳಿ ಅವರ ಪುತ್ರಿ ಮದುವೆಯನ್ನು ಆ ಸಂದರ್ಭ ಮುಂದಕ್ಕೆ ಹಾಕಲಾಗಿತ್ತು.

ನಿರುಪಯುಕ್ತ ಬೋರ್‌ವೆಲ್ ಮುಚ್ಚಿದರೆ ₹500 ಪ್ರೋತ್ಸಾಹ

ಗಂಗಾವತಿ (ಕೊಪ್ಪಳ ಜಿಲ್ಲೆ):ನಿರುಪಯುಕ್ತ ಕೊಳವೆಬಾವಿಗಳನ್ನು ಮುಚ್ಚುವವರಿಗೆ ನಗರದ ಗ್ಯಾರೇಜ್‌ ಮಾರಣ್ಣ ಅವರು ಪ್ರೋತ್ಸಾಹ ಧನ ನೀಡಲು ಮುಂದೆ ಬಂದಿದ್ದಾರೆ.

ಇದಕ್ಕಾಗಿಯೇ ₹1 ಲಕ್ಷ  ಮೀಸಲಿಟ್ಟಿದ್ದಾರೆ. ರಾಜ್ಯದ ಯಾವುದೇ ಭಾಗದಲ್ಲಿ ಇರುವ ನಿರುಪಯುಕ್ತ ಕೊಳವೆಬಾವಿಗಳನ್ನು ಮುಚ್ಚಿ ಅದರ ಚಿತ್ರವನ್ನು ಇವರಿಗೆ ವಾಟ್ಸ್‌ಆ್ಯಪ್‌ ಮೂಲಕ ಕಳಿಸಿದರೆ ₹500  ನೀಡುತ್ತಾರೆ.

ನಗರದಲ್ಲಿ ಗ್ಯಾರೇಜ್ ಹೊಂದಿರುವ ಇವರು ಈಗಾಗಲೇ ಜಿಲ್ಲೆಯಲ್ಲಿ ನಿರುಪಯುಕ್ತ ಕೊಳವೆಬಾವಿಗಳನ್ನು ಮುಚ್ಚಿರುವ 20 ಮಂದಿಗೆ ಪ್ರೋತ್ಸಾಹಧನ ನೀಡಿದ್ದಾರೆ.

‘ನಾವು ಏನಾದರೂ ಸಾಧಿಸಬಹುದು. ಆದರೆ ಹೋದ ಜೀವ ಮತ್ತೆ ತರಲಾಗುವುದಿಲ್ಲ. ಬಡವರ ಮಕ್ಕಳು ಬಾವಿಗೆ ಬಲಿಯಾಗುತ್ತಿರುವುದನ್ನು ಕಂಡು ಈ ಕ್ರಮಕ್ಕೆ ಮುಂದಾಗಿದ್ದೇನೆ’ ಎಂದು ಹೇಳುತ್ತಾರೆ.  ಮೊ: 8861318934.

ಝುಂಜರವಾಡ ಘಟನೆ ಬಳಿಕ ಜಿಲ್ಲಾಡಳಿತ ತೆಗೆದುಕೊಂಡ ಕ್ರಮ
* ಕೇಸಿಂಗ್‌ ಪೈಪ್‌ ತೆಗೆಯುವುದಕ್ಕೆ ನಿಷೇಧ
* ವಿಫಲಗೊಂಡ ಕೊಳವೆ ಬಾವಿ 48 ತಾಸಿನಲ್ಲಿ ಮುಚ್ಚಿರಿ
* ಪಿಡಿಓ–ಕಂದಾಯ ನಿರೀಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ

* ಅಕ್ಷತಾ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ.
- ಡಾ.ಎಚ್‌.ಬಿ.ಬೂದೆಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT