ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾ! ಪುರುಷಾಭರಣ...

Last Updated 28 ಏಪ್ರಿಲ್ 2017, 5:04 IST
ಅಕ್ಷರ ಗಾತ್ರ
ಪುರುಷರು ಆಭರಣ ತೊಡುವ ಟ್ರೆಂಡ್‌ ಶುರುವಾದಂತೆ ಚಿನ್ನಕ್ಕೆ ಕೊಂಚ ಪ್ರಚಾರ ಕಡಿಮೆಯಾಗಿದೆ. ‘ಪುರುಷರು ಹೆಚ್ಚು ಖರೀದಿಸುತ್ತಿರುವುದು ಬಿಳಿ ಲೋಹವನ್ನು. ಬೆಳ್ಳಿ, ಬಿಳಿ ಚಿನ್ನ, ಟೈಟಾನಿಯಂ, ಪ್ಲಾಟಿನಂ ಆಭರಣಗಳಲ್ಲಿ ಬೇಡಿಕೆ ಹೆಚ್ಚಿದೆ’ ಎನ್ನುತ್ತಾರೆ ಮಲಬಾರ್‌ ಗೋಲ್ಡ್ಸ್‌ ಅಂಡ್‌ ಡೈಮಂಡ್‌ ಕರ್ನಾಟಕ ವಲಯ ಮುಖ್ಯಸ್ಥ ಇಫ್ಲು ರೆಹಮಾನ್‌.
 
ಚಿನ್ನದ ಆಭರಣವನ್ನು ತೊಟ್ಟರೆ ಗೆಳೆಯರೇ ಗೇಲಿ ಮಾಡುವುದು ಸಹಜ, ಕಚೇರಿಗೆ ಹೋಗುವಾಗ ಚಿನ್ನದ ಸರ, ಬ್ರೇಸ್‌ಲೆಟ್‌, ಉಂಗುರ ತೊಡುವುದು ಸೂಕ್ತವೆನಿಸುವುದಿಲ್ಲ. ಇದಕ್ಕೆ ಪರ್ಯಾಯವಾಗಿ  ಬಿಳಿ ಚಿನ್ನ ಚಾಲ್ತಿಗೆ ಬಂದಿದೆ.

ಬೆಲೆಯಲ್ಲಿ ಹಳದಿ ಚಿನ್ನ ಹಾಗೂ ಬಿಳಿ ಚಿನ್ನದಲ್ಲಿ ಯಾವುದೇ ವ್ಯತ್ಯಾಸವಿಲ್ಲ.  ಹಳದಿ ಚಿನ್ನವನ್ನೇ ಬ್ಲೀಚ್ ಮಾಡಿ, ಬಿಳಿ  ಕೋಟ್‌ ಹಾಕಿರುತ್ತಾರೆ. ಕೆಲ ಪುರುಷರು ಹಳದಿ ಚಿನ್ನ ಹಾಕಲು ಇಷ್ಟಪಡುವುದಿಲ್ಲ. ಅವರು ಈ ವೈಟ್‌ ಗೋಲ್ಡ್‌ ಆಭರಣವನ್ನು ಖರೀದಿಸಬಹುದು.  ಪುರುಷರ ಆಭರಣಗಳಲ್ಲಿ ಚಿನ್ನಕ್ಕಿಂತ ಪ್ಲಾಟಿನಂ ಈಗ ಟ್ರೆಂಡ್‌ನಲ್ಲಿ ಇದೆ. ಅಲ್ಲದೆ  ಈ ಪ್ಲಾಟಿನಂ ಆಭರಣ ಚಿನ್ನಕ್ಕಿಂತ ದುಬಾರಿಯಾಗಿದ್ದು, ಕೆಲವರಿಗೆ ಇದನ್ನು ಧರಿಸುವುದು ಪ್ರತಿಷ್ಠೆಯೂ ಹೌದು.
 
ಆಭರಣಗಳ ಬಳಕೆ ಬಗ್ಗೆ ಪುರುಷರಲ್ಲಿ ಹೆಚ್ಚುತ್ತಿರುವ ಆಸಕ್ತಿ, ಇದಕ್ಕೆ ಪೂರಕವಾಗಿ ಆಭರಣ ವಿನ್ಯಾಸಗಾರರು ವರ್ತಮಾನದ ಟ್ರೆಂಡ್‌ಗೆ ಅನುಸಾರ ಹಲವು ಬಗೆಯ ಆಭರಣಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಈಗಿನ ಆಭರಣಗಳ ಲೇಟೆಸ್ಟ್ ಟ್ರೆಂಡ್ ಬಗ್ಗೆ ಮಾಹಿತಿ ಇಲ್ಲಿದೆ.
 
ಹುಡುಗರು ಕಿವಿ ಚುಚ್ಚಿಸಿಕೊಳ್ಳುವುದು ಸಂಪ್ರದಾಯ ವಾಗಿತ್ತು. ಈಗ ಇದೇ ಫ್ಯಾಷನ್. ವಜ್ರ, ಕಪ್ಪು ಹರಳಿನ ಸ್ಟಡ್ ಎಲ್ಲರಿಗೂ ಹೊಂದುತ್ತದೆ. ಕೆಲವರು ಹರಳು ಇಷ್ಟಪಡುವುದಿಲ್ಲ. ಅವರು ಬೆಳ್ಳಿ, ಸ್ಟೀಲ್, ಟೈಟಾನಿಯಂ, ಪ್ಲಾಟಿನಂ ಲೋಹದ ಸಾದಾ ಸ್ಟಡ್‌ ಧರಿಸಬಹುದು. ಪ್ಲೇಬಾಯ್, ಕಿಂಗ್‌ಫಿಷರ್, ಬಕಾರ್ಡಿ ಹಾಗೂ ಹಲವು ಪ್ರತಿಷ್ಠಿತ ಕಂಪೆನಿಗಳ ಲೋಗೊಗಳು ಸ್ಟಡ್‌ ರೂಪದಲ್ಲಿ ಲಭ್ಯ.
 
ಸರದ ಆಯ್ಕೆಯಲ್ಲೂ ಚಿನ್ನಕ್ಕಿಂತ ಪ್ಲಾಟಿನಂ ಆಭರಣ ಹೆಚ್ಚು ಮಾರಾಟವಾಗುತ್ತಿದೆ. ಇದು ಕೊಂಚ ದುಬಾರಿ ಎನಿಸಿದರೆ ಬೆಳ್ಳಿ ಲೋಹದ ಸರಗಳನ್ನು ಖರೀದಿಸಬಹುದು. ಕೊಂಡಿಯಾ ಕಾರದ ಬಾಕ್ಸ್‌ ಸರ (ತೆಂಡೂಲ್ಕರ್‌ ಚೈನ್‌) ಹೆಚ್ಚು ಚಾಲ್ತಿಯಲ್ಲಿದೆ.
 
ಕಫ್‌ಲಿಂಕ್‌ಗಳಲ್ಲೂ ಹೊಸ ರೂಪ ಈಗ ಬಂದಿದೆ. ಮೊದಲು ಸಾಧಾರಣ ಲೋಹ ಹೆಚ್ಚೆಂದರೆ ವಜ್ರದಿಂದ ಕೂಡಿದ ಕಫ್‌ಲಿಂಕ್‌ಗಳು ಮಾರುಕಟ್ಟೆಯಲ್ಲಿ ಇದ್ದವು. ಆದರೆ ಇಂದು ಹರಳು, ರತ್ನಗಳೂ ಈ ಮಣಿಕಟ್ಟಿನಲ್ಲಿ ಸ್ಥಾನ ಪಡೆದಿವೆ. ಮದುವೆ ಹಾಗೂ ವಿಶೇಷ ಸಮಾರಂಭಗಳಿಗೆ ತಯಾರಾಗುತ್ತಿದ್ದರೆ ಬಟ್ಟೆಯ ವಿನ್ಯಾಸ, ಬಣ್ಣ ಹೇಳಿದರೆ ಅದಕ್ಕೆ ಸೂಕ್ತವಾದ ಕಫ್‌ಲಿಂಕ್‌ಗಳನ್ನು ಮಾಡಿಕೊಡುತ್ತಾರೆ.
 
ಚಿನ್ನದ ಕೈ ಗಡಿಯಾರ ಬಳಸುವ ಶೋಕಿ ಮೊದಲಿನಿಂದಲೂ ಇತ್ತಾದರೂ ಈಗ ಇದು ‘ಔಟ್‌ ಆಫ್‌ ಫ್ಯಾಷನ್‌’ ಆಗಿದೆ. ಈಗ ಪ್ಲಾಟಿನಂ ಕೈ ಗಡಿಯಾರ ಟ್ರೆಂಡ್‌ ಆಗಿದೆ. ಇನ್ನೂ ಕ್ಲಾಸಿಕ್‌ ಲುಕ್‌ ಇಷ್ಟಪಡುವವರು ಚರ್ಮದ ಕೈಗಡಿಯಾರಕ್ಕೆ ವಜ್ರ ಅಲಂಕಾರವಿರುವುದನ್ನು ಬಳಸುತ್ತಾರೆ.
 
ಶರ್ಟ್‌ ಗುಂಡಿಗೆ ಹಾಕುವ ಸರಗಳಲ್ಲೂ ನವೀನ ವಿನ್ಯಾಸ ಇದ್ದು. ವಜ್ರ, ಕುಂದನ್‌ ಹರಳಿನಲ್ಲಿ ಮಾಡಿದ ಬ್ರೋಚ್‌ಗಳು  ಟ್ರೆಂಡ್‌ನಲ್ಲಿ ಇವೆ. 
 
ಕಪಲ್‌ ಸೆಟ್‌
 
ಸರ: ಗೆಳೆಯರು, ಪ್ರೇಮಿಗಳು, ದಂಪತಿ ಈ ಕಪಲ್ ಸರಗಳನ್ನು ತೊಡಬಹುದು. ಜೋಡಿಹಕ್ಕಿ, ಮೀನು, ಹೃದಯ ಹೀಗೆ ಒಂದು ವಸ್ತುವಿನ ಎರಡು ಭಾಗಗಳು ಎರಡು ಸರದಲ್ಲಿ ಇರುತ್ತವೆ. ಎರಡೂ ಸರವನ್ನು ಕೂಡಿಸಿದಾಗ ಒಂದಾಗುತ್ತದೆ. ದೂರದೂರ ಇರುವ ಜೋಡಿಯ ನೆಚ್ಚಿನ ಉಡುಗೊರೆ ಆಯ್ಕೆ ಇದಾಗಿದೆ.

ಉಂಗುರ: ನಿಶ್ಚಿತಾರ್ಥಕ್ಕೆ ಹೆಚ್ಚು ಮಾರಾಟವಾಗುತ್ತಿರುವುದು ಈ ಕಪಲ್‌ ಶ್ರೇಣಿಯ ಉಂಗುರ. ಹೆಸರು ಬರೆಯಿಸಿಕೊಳ್ಳುವುದು, ಒಂದೇ ವಿನ್ಯಾಸ ಮಾಡಿಸಿಕೊಳ್ಳುವುದು ಸಾಮಾನ್ಯವಿತ್ತು. ಈಗ ಅದರಲ್ಲೂ ನವೀನ ಟ್ರೆಂಡ್‌ ಬಂದಿದೆ. ಪ್ರವಾಸ ಇಷ್ಟಪಡುವ ಜೋಡಿಗಳು ಬೈಕ್‌ನ ವಿನ್ಯಾಸವನ್ನು ಎರಡು ಉಂಗುರಗಳಲ್ಲಿ ಅರ್ಧ ಹಾಕಿಸಿಕೊಳ್ಳುತ್ತಾರೆ.

ಒಬ್ಬರಿಗೊಬ್ಬರು ಕೈ ಹಿಡಿದುಕೊಂಡರೆ ಒಂದೇ ಬೈಕ್‌ ಕಾಣುತ್ತದೆ. ಲಾಂಗ್‌ ಡ್ರೈವ್‌ ಹೋಗಿ ಇಂಥ ಉಂಗುರ ಕೊಟ್ಟು ಪ್ರೇಮ ನಿವೇದನೆ ಮಾಡಿದರೆ ಯಾವ ಹುಡುಗಿ ತಾನೆ ಒಪ್ಪುವುದಿಲ್ಲ?

ಪದಕ: ಹೆಚ್ಚು ಚಿನ್ನ ಹಾಕಲು ಇಷ್ಟಪಡದವರು ಚರ್ಮ ಮತ್ತು ಸೆಣಬಿನ ದಾರಕ್ಕೆ ಸಣ್ಣದೊಂದು ಪದಕ ತೊಡಬಹುದು. ಹರಳು, ಕಪಲ್ ವಿನ್ಯಾಸ, ಹೆಸರಿನ ಮೊದಲ ಅಕ್ಷರವನ್ನು ಧರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT