ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಿತ್ತಾಟ ಬೀದಿಗೆ

ಈಶ್ವರಪ್ಪ ನೇತೃತ್ವದಲ್ಲಿ ಸಭೆ: ಬಗೆಹರಿಸಲು ಮೇ10 ಗಡುವು
Last Updated 27 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯೊಳಗಿನ ಕಿತ್ತಾಟ ಬೀದಿಗೆ ಬಂದಿದ್ದು, ಪಕ್ಷದ ಆಂತರಿಕ  ಸಮಸ್ಯೆಗಳ ಪರಿಹಾರಕ್ಕೆ ಅತೃಪ್ತ ನಾಯಕರ ಬಣ ಮೇ10ರ ಗಡುವು ನೀಡಿದ್ದರೆ, ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಕೆ.ಎಸ್‌. ಈಶ್ವರಪ್ಪ ಮತ್ತು ಅವರ ಬೆಂಬಲಿಗರನ್ನು ಉಚ್ಚಾಟಿಸಬೇಕು ಎಂದು ಯಡಿಯೂರಪ್ಪನವರ ಬಣ ಆಗ್ರಹಿಸಿದೆ.

ಬಿಜೆಪಿ ನಾಯಕರ ಎಚ್ಚರಿಕೆ ನಡುವೆಯೂ ಅರಮನೆ ಮೈದಾನದಲ್ಲಿ ಗುರುವಾರ ನಡೆದ ‘ಸಂಘಟನೆ ಉಳಿಸಿ’ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಬಂದಿದ್ದರಿಂದ ಉತ್ತೇಜಿತಗೊಂಡ ಈಶ್ವರಪ್ಪ ಆವೇಶಭರಿತರಾಗಿ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

‘ವ್ಯಕ್ತಿಗಿಂತ ಪಕ್ಷ  ದೊಡ್ಡದು. ಸರ್ವಾಧಿಕಾರಿ ಧೋರಣೆ ನಡೆಯುವುದಿಲ್ಲ. ಆಗಿರುವ ತಪ್ಪು ಸರಿಪಡಿಸಿಕೊಂಡು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಮುನ್ನಡೆಯಿರಿ ನಿಮ್ಮ ಜತೆ ನಾವೂ ಬರುತ್ತೇವೆ. ಅದನ್ನು ಬಿಟ್ಟು ಅಮಿತ್‌ ಷಾ ಅವರ ಹೆಸರು ಹೇಳಿ ನಮ್ಮನ್ನು ಹೆದರಿಸಿದರೆ ಬಗ್ಗುವುದಿಲ್ಲ’ ಎಂದು ಗುಡುಗಿದರು.

‘ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಪಕ್ಷಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಕಾರ್ಯಕರ್ತರು ನೋವು ಅನುಭವಿಸಿದರು. ಅದರಿಂದ  ಸಾಧಿಸಿದ್ದೇನು. ಕೇವಲ 6 ಸೀಟುಗಳನ್ನು ಗೆದ್ದರು.  ಬಿಜೆಪಿ ಮತಗಳು ವಿಭಜನೆಯಾಗಿ, ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಲಾಟರಿ ಹೊಡೆದಂತೆ ಮುಖ್ಯಮಂತ್ರಿ ಆದರು’ ಎಂದರು.

‘ನೀವು ಒಂದಾಗಿ ಹೋದರೆ ಅಧಿಕಾರಕ್ಕೆ ಬರುತ್ತೀರಿ ಎಂದು ಜನ ಹೇಳುತ್ತಾರೆ. ಆದರೆ, ಎಂತಹ ಸರ್ಕಾರ ಬರಬೇಕು. ಬಿಜೆಪಿ ಗಂಧ– ಗಾಳಿ ಗೊತ್ತಿಲ್ಲದವರನ್ನು ಜತೆಗಿಟ್ಟುಕೊಂಡು ಅಧಿಕಾರಕ್ಕೆ ಬರಬೇಕೆ ಅಥವಾ ಪಕ್ಷಕ್ಕೆ ದುಡಿದ ನಿಷ್ಠಾವಂತ ಕಾರ್ಯಕರ್ತರ  ಸರ್ಕಾರ ಬೇಕೆ. ರೆಸಾರ್ಟ್‌ ಸಂಸ್ಕೃತಿ ಬೇಡ ಎಂಬುದು ನಮ್ಮೆಲ್ಲರ ನಿಲುವು’ ಎಂದು ಅವರು ಹೇಳಿದರು.

‘ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಮಿತ್‌ ಷಾ ಈಗಾಗಲೇ ಘೋಷಿಸಿದ್ದಾರೆ. ಆ ಸ್ಥಾನಕ್ಕೆ ಯಾರೇ ಲಾಬಿ ಮಾಡಿದರೂ  ದ್ರೋಹವಾಗುತ್ತದೆ.   ಆದರೆ ನೀವು ಏನು ಮಾಡುತ್ತಿದ್ದೀರಿ’ ಎಂದು ಯಡಿಯೂರಪ್ಪ ಅವರನ್ನು ಈಶ್ವರಪ್ಪ ಪ್ರಶ್ನಿಸಿದರು.

‘ತುರ್ತು ಪರಿಸ್ಥಿಯಲ್ಲಿ ಜೈಲಿಗೆ ಹೋದವರು, ಒಂದು ಕೋಟಿ ಸದಸ್ಯತ್ವ ಮಾಡಲು ಶ್ರಮಿಸಿದವರನ್ನು ಅಮಾನತುಗೊಳಿಸಿದ್ದೀರಿ. ಹೊರಗಿನಿಂದ ಬಂದವರಿಗೆ ಮಣೆ ಹಾಕುತ್ತಿದ್ದೀರಿ. ಯಾವುದೇ ಕಾರಣಕ್ಕೂ ಪಕ್ಷ ಹಾಳು ಮಾಡಲು ಬಿಡುವುದಿಲ್ಲ.  ಅಪ್ಪ– ಅಮ್ಮನಿಗೆ ಹುಟ್ಟಿರುವ ನಾವು ಪಕ್ಷ ಬಿಟ್ಟು ಓಡಿ ಹೋಗುವುದಿಲ್ಲ’ ಎಂದು ಕಿಡಿ ಕಾರಿದರು.

ಭಾಗವಹಿಸಿದ ಪ್ರಮುಖರು
ವಿಧಾನಪರಿಷತ್‌ ಸದಸ್ಯರಾದ ಸೋಮಣ್ಣ ಬೇವಿನ ಮರದ, ಭಾನುಪ್ರಕಾಶ್‌, ಮಾಜಿ ಶಾಸಕರಾದ ನಿರ್ಮಲ್‌ ಕುಮಾರ್‌ ಸುರಾನ, ಸಾರ್ವಭೌಮ ಬಗಲಿ, ಬಸವರಾಜ ನಾಯ್ಕ, ಡಾ.ಶಿವಯೋಗಿಸ್ವಾಮಿ.

ಸಭೆಯ ವಿಶೇಷ
*ಸಭೆಗೆ ಬಂದವರ  ಸಂಖ್ಯೆಯನ್ನು ಪ್ರಸ್ತಾಪಿಸುವ ವೇಳೆ, ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಟಿವಿ ಮಾಧ್ಯಮವೊಂದರ ಪ್ರತಿನಿಧಿ ಮೇಲೆ ಕೆಲವರು ಹಲ್ಲೆಗೆ ಮುಂದಾದ ಪ್ರಸಂಗವೂ ನಡೆಯಿತು.
*ಯಡಿಯೂರಪ್ಪ ವಿರುದ್ದ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಯಿತು
*ಕರ್ನಾಟಕ ಜನತಾ ಪಕ್ಷದಿಂದ (ಕೆಜೆಪಿ) ಬಂದವರಿಗೆ ಆದ್ಯತೆ ನೀಡುವುದನ್ನು ಬಿಟ್ಟು,  ನಿಷ್ಠೆಯಿಂದ ಕೆಲಸ ಮಾಡುವವರಿಗೆ ಮನ್ನಣೆ ನೀಡಬೇಕು ಎಂದು ಒಕ್ಕೊರಲ ಆಗ್ರಹ ವ್ಯಕ್ತವಾಯಿತು.
*ಪದಾಧಿಕಾರಿಗಳ ನೇಮಕದಲ್ಲಿ ಅನ್ಯಾಯವಾಗಿದೆ. ಪಕ್ಷದಲ್ಲೇ ಇಲ್ಲದವರು ಜಿಲ್ಲಾಧ್ಯಕ್ಷರಾಗಿದ್ದಾರೆ ಎಂದೂ ಆರೋಪಿಸಲಾಯಿತು.
*‘ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ, ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಈಶ್ವರಪ್ಪ ಅವರಿಗೆ ಬಿಟ್ಟುಕೊಡಲಿ’ ಎಂದೂ ಹಲವರು ಬೇಡಿಕೆ ಮುಂದಿಟ್ಟರು.
*ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಸಿದ್ಧಪಡಿಸಬೇಕು ಎಂದೂ ಕೆಲವರು ಆಗ್ರಹಪಡಿಸಿದರು.

* ಕತ್ತು ಕತ್ತರಿಸಿದರೂ ಬಿಜೆಪಿ ಬಿಟ್ಟು ಹೋಗಲ್ಲ. ಪಕ್ಷ ವಿರೋಧಿ ಚಟುವಟಿಕೆ ಎಂದರೆ ತಾಯಿಗೆ ದ್ರೋಹ ಮಾಡಿದಂತೆ

-ಕೆ.ಎಸ್‌. ಈಶ್ವರಪ್ಪ, ಬಿಜೆಪಿ ಮುಖಂಡ

ಹತ್ತಾರು ಪಕ್ಷಗಳಿಗೆ ಹೋಗಿ ಬಂದ ಅಯೋಗ್ಯನೊಬ್ಬ ಈಶ್ವರಪ್ಪ ಅವರನ್ನೇ ಸಸ್ಪೆಂಡ್‌ ಮಾಡ್ತೇನೆ ಎಂದಿದ್ದಾನೆ

-ಕೆ. ಭಾನುಪ್ರಕಾಶ್‌ . ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT