ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡ ಕೊಡಿಸಿದ ಮೊದಲ ಒಡವೆ

Last Updated 28 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ತಮ್ಮ ಬಳಿ ಎಷ್ಟೇ ಒಡವೆ ಇದ್ದರೂ ಗಂಡ ಕೊಡಿಸಿದ ಒಡವೆಗೆ ವಿಶೇಷ ಮಹತ್ವ. ಅಂತಹುದರಲ್ಲಿ ಮದುವೆಯಾದ ನಂತರ ಮೊದಲ ಬಾರಿಗೆ ಕೊಡಿಸಿದ ಒಡವೆಯೆಂದರೆ ಕೇಳಬೇಕೆ? ಅಂತಹ ತಮ್ಮ ಅನುಭವಗಳನ್ನು ಹಲವಾರು ಗೃಹಿಣಿಯರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಒಬ್ಬರಿಗೆ ಪತಿ ಕಷ್ಟಪಟ್ಟು ದುಡಿದ ಹಣದ ಕೊಡಿಸಿದ ಮಾಂಗಲ್ಯ ಸರವೇ  ಆಪ್ಯಾಯಮಾನ ಎನಿಸಿದರೆ, ಮತ್ತೊಬ್ಬ ರಿಗೆ  ಪತಿ ಕೊಡಿಸಿದ ಕಿವಿಯೋಲೆ  ಕೊಟ್ಟ ಖುಷಿ ಅಷ್ಟಿಷ್ಟಲ್ಲ...

ಬಳೆ ಮೇಲಿನ ವ್ಯಾಮೋಹ
28ರ ವಯಸ್ಸಿನಲ್ಲಿ ನನ್ನ ಮದುವೆಯಾಯಿತು. ಗಂಡ ಪೋಸ್ಟ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಸಂಬಳ ಕಡಿಮೆ ಇದ್ದ ಕಾರಣ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ.
ಸ್ವಲ್ಪ ಸಮಯದ ಬಳಿಕ ಅವರಿಗೆ ಗುಮಾಸ್ತರಾಗಿ ಬಡ್ತಿ ಸಿಕ್ಕಿತು. ಆದರೂ ‘ಆರಕ್ಕೆ ಏರಲ್ಲ, ಮೂರಕ್ಕೆ ಇಳಿಯಲ್ಲ’ ಎಂಬಂತೆ ಸಂಸಾರ ಸಾಗುತ್ತಿತ್ತು. ಆಗ ಗಂಡನಿಗೆ ಯಾವುದೋ ಬಾಕಿ ಹಣ ಬಂತು. ಅದಕ್ಕೆ ನಾನು ಉಳಿಸಿಕೊಂಡಿದ್ದ ದುಡ್ಡನ್ನೂ ಸೇರಿಸಿ, 20 ಗ್ರಾಂನ ಚಿನ್ನದ ಬಳೆ ಮಾಡಿಸಿಕೊಟ್ಟರು. ಅದು ನನ್ನ ಮದುವೆಯಾದ ಬಳಿಕ ತೆಗೆದುಕೊಂಡ ಮೊದಲ ಒಡವೆ. ಅದರ ನಂತರ ತುಂಬಾ ಒಡವೆಗಳನ್ನು ಖರೀದಿಸಿದ್ದರೂ ಈ ಬಳೆ ಮೇಲೆ ತುಂಬಾ ವ್ಯಾಮೋಹ. ಈ ಕತೆಯನ್ನು ಮಕ್ಕಳ ಬಳಿ ಆಗಾಗ ಹೇಳಿ ಆನಂದಿಸುತ್ತೇನೆ
– ಪದ್ಮಿನಿ ಕೆ.ಪಿ,
ಮನೋರಾಯನ ಪಾಳ್ಯ, ಆರ್‌.ಟಿ ನಗರ


ಮತ್ತೆ  ಕಟ್ಟಿಸಿಕೊಂಡ ತಾಳಿ!
ಮದುವೆಯಾದ ಹೊಸತು. ಹನಿಮೂನ್ ಮುಗಿಸಿ ಬಂದ ಕೂಡಲೆ ಆಷಾಡ ಮಾಸ ಬಂದಿತ್ತು. ನಾನು ಅಮ್ಮನ ಮನೆಗೆ ಗಂಟುಮೂಟೆ ಕಟ್ಟಿದ್ದೆ. ನಮ್ಮವರ ಮುಖ ಸಪ್ಪೆಯಾಗಿತ್ತು. ಆಗ ನನ್ನಲ್ಲಿ ಹೆಚ್ಚು ಒಡವೆ ಇರಲಿಲ್ಲ. ನಮ್ಮವರು ಮದುವೆಯಲ್ಲಿ ಹಾಕಿದ್ದ ಕರಿಮಣಿ ಸರ ಹಾಗೂ ಅದರ ತಾಳಿ ಇಷ್ಟೇ ನನ್ನ ಕಂಠಾಭರಣವಾಗಿತ್ತು. ಅದು ಉದ್ದವಾಗಿ, ಚಂದವಾಗಿತ್ತು.  ನಾನು ಆ ತಾಳಿಸರವನ್ನು ಯಾವಾಗಲೂ ಸೆರಗಿನ ಮೇಲೆ ಧರಿಸುತ್ತಿದ್ದೆ.

ಒಂದು   ದಿನ ಬಚ್ಚಲು ಮನೆಯಲ್ಲಿ ಮುಖ ತೊಳೆಯುತ್ತಿದ್ದಾಗ ತಾಳಿಯ ಕೊಂಡಿ ಕಟ್ ಆಗಿ ತಾಳಿಯು ಬಚ್ಚಲ ಮೋರಿಯಲ್ಲಿ ಬಿದ್ದು ಹೋಯಿತು. ನನಗೆ ಗಾಬರಿಯಾಯಿತು. ಆ ಕೂಡಲೆ ನಮ್ಮವರಿಗೆ ಫೋನ್ ಮಾಡಿ ವಿಷಯ ತಿಳಿಸಿ, ಅಳತೊಡಗಿದೆ.   ಅವರು ಕೂಡಲೇ ಕಚೇರಿಯಿಂದ ಅಮ್ಮನ ಮನೆಗೆ ಬಂದರು. ಮನೆಯಲ್ಲೇ ಇದ್ದ ಅಣ್ಣ ಮತ್ತು ಅವರೂ ಸೇರಿ ಬಚ್ಚಲ ಮೋರಿಗೆ ಕೋಲು ಹಾಕಿ  ಅಂತೂ ತಾಳಿಯನ್ನು ಹುಡುಕಿಯೇ ಬಿಟ್ಟರು.
ನನ್ನ ಕಣ್ಣುಗಳಲ್ಲಿ ಸಂತೋಷದ ಕಣ್ಣೀರು. ಅಮ್ಮನೂ ನೆಮ್ಮದಿಗೊಂಡು ಪಾಯಸ, ಚಿತ್ರಾನ್ನದ ಹಬ್ಬದಡುಗೆ ಮಾಡಿದರು. ದಾರದೊಡನೆ ತಾಳಿಯನ್ನು ಪೋಣಿಸಿ ದೇವರೆದುರಿಗೆ ನಿಂತು ನಮ್ಮವರು ಮತ್ತೆ ನನ್ನ ಕೊರಳಿಗೆ ತಾಳಿ ಕಟ್ಟಿದರು. ತಾಳಿಗೆ ಬಿಗಿದಿದ್ದ ತಂತಿ ಸಡಿಲಾಗಿ ಬಿದ್ದು ಅಷ್ಟೆಲ್ಲಾ ದುಃಖವಾದರೂ  ಮತ್ತೆ ತಾಳಿ ಕಟ್ಟಿಸಿಕೊಂಡ ಮಧುರ ನೆನಪು ನನ್ನೆದೆಯಲ್ಲಿ ಇನ್ನೂ ಹಸಿರಾಗಿದೆ.
–ಎಸ್.ವಿಜಯಗುರುರಾಜ,
ಪಶ್ಚಿಮ ಕಾರ್ಡ್‌ ರಸ್ತೆ

ಖುಷಿ ಕೊಟ್ಟ ಒಡವೆ
ನನ್ನ ಗಂಡ ನನಗೆ ಮದುವೆ ದಿನದಂದು ತಂದು ಕೊಟ್ಟ ಮೊದಲ ಉಡುಗೊರೆ ಕಿವಿಯೋಲೆ. ಅದು ತುಂಬಾ ಅಚ್ಚರಿ ತಂದಿತ್ತು. ಆ ದಿನವೇ ಹಾಕಿಕೊಳ್ಳಬೇಕೆಂದು ಆಸೆ ಅವರದಾಗಿತ್ತು. ನನಗೆ ಆ ಕಿವಿಯೋಲೆ ಹಾಕಿಕೊಂಡಾಗಲೆಲ್ಲ ಅದೇ ನೆನಪು. ಆ ಒಡವೆ ಬಿಟ್ಟು ಮತ್ತೆ ಯಾವ ಒಡವೆ ತೊಟ್ಟರೂ ಆ ಖುಷಿ ನೀಡಲು ಸಾಧ್ಯವೇ ಇಲ್ಲ.
–ಕವಿತಾ ಪ್ರದೀಪ್‌
ರಾಜರಾಜೇಶ್ವರಿ ನಗರ

ಮಹತ್ವದ ಮಾಂಗಲ್ಯಸರ
ನಾವು ಅರಸಿಕೆರೆ ಮೂಲದವರು. ನನ್ನ ಪತಿ ರಾಮಣ್ಣ ಅವರು ನಡೆಸುತ್ತಿದ್ದ ಸಣ್ಣ ಹೋಟೆಲ್‌ನಲ್ಲಿ ನಾನೂ ಹಗಲಿರುಳು ಅವರೊಂದಿಗೆ ಎಷ್ಟೋ ವರ್ಷಗಳ ಕಾಲ ದುಡಿದಿದ್ದೇನೆ. ನಮಗೆ ಅದುವೇ ಪ್ರಪಂಚವಾಗಿತ್ತು. ಈಗ ಬೆಂಗಳೂರಿನಲ್ಲಿ ವಾಸವಿದ್ದೇವೆ. ಇಬ್ಬರಿಗೂ ಇಳಿವಯಸ್ಸು.   ಆದರೆ ಅವರು ಕೊಡಿಸಿದ ಮಾಂಗಲ್ಯಸರ ಈಗಲೂ ನನ್ನ ಕೊರಳಲ್ಲಿದೆ. ಅದನ್ನು ಬದಲಾಯಿಸಲು ಮನಸ್ಸಾಗುವುದೇ ಇಲ್ಲ. ಯಾಕೆಂದರೆ ನನ್ನ ಪತಿಯ ಪ್ರೀತಿಯ ಕಾಣಿಕೆ ಅದು.
–ಗಾಯತ್ರಿ,  ಕೊತ್ತನೂರು ಮುಖ್ಯರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT