ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲ್ಲಿರಾ ‘ಬೀಜದುಂಡೆ’ ಅಭಿಯಾನ

Last Updated 28 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕಳೆದ ಭಾನುವಾರ ಬಸವನಗುಡಿಯ ಕೃಷ್ಣರಾವ್‌ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 400ಕ್ಕೂ ಅಧಿಕ ಮಂದಿ ಭಾಗವಹಿಸಿ, 70 ಸಾವಿರ ‘ಬೀಜದುಂಡೆ‘ (ಸೀಡ್‌ಬಾಲ್‌) ತಯಾರಿಸಿದ್ದರು. ಅಂತಹುದೇ ಮತ್ತೊಂದು ಮಹಾ ಅಭಿಯಾನ ನಗರದ ಮೂರು ಕಡೆ ಏ. 30ರ ಭಾನುವಾರ ನಡೆಯಲಿದೆ ನೀವೂ ಪಾಲ್ಗೊಳ್ಳಬೇಕೇ? ಇಲ್ಲಿದೆ ವಿವರ...
ಬಿಳಲಲ್ಲ, ಬೇರಲ್ಲ, ಮುಂಡಕಾಂಡಗಳಲ್ಲ
ತಳಿರಲ್ಲ,  ಮಲರಲ್ಲ, ಕಾಯಿ ಹಣ್ಣಲ್ಲ
ಎಲೆ ನೀನು, ವಿಶ್ವವೃಕ್ಷದೊಳ್‌, ಎಲೆಯೊಳೊಂದು ನೀಂ
ತಿಳಿದದನು ನೆರವಾಗು
– ಮಂಕುತಿಮ್ಮ

ಈ ಜಗದ ವೃಕ್ಷದಲ್ಲಿ ನೀನು ಬಿಳಲಲ್ಲ,  ಬೇರಲ್ಲ, ಮುಂಡವಲ್ಲ, ಕಾಂಡವಲ್ಲ, ಚಿಗುರಲ್ಲ, ಹೂವಲ್ಲ, ಕಾಯಿ ಹಣ್ಣು ಅಲ್ಲ, ಈ ವೃಕ್ಷದ ಸಹಸ್ರಾರು ಎಲೆಗಳಲ್ಲಿ ನೀನೂ ಸಹ ಒಂದು ಎಲೆ.  ನಾನೇ ಎನ್ನುವ ಭಾವ ಬಿಟ್ಟು, ನಾನೂ ಎಲ್ಲರಂತೆ ಈ ಬದುಕೆಂಬ ವೃಕ್ಷದಲ್ಲಿ ಒಂದಾಗಿ ಈ ವೃಕ್ಷಕ್ಕೆ ನೆರವಾಗು
–‘ಕಗ್ಗರಸಧಾರೆ’ಯಲ್ಲಿ ಡಿ.ವಿ. ಗುಂಡಪ್ಪ ತಿಳಿಸಿದಂತೆ ನಡೆಯುತ್ತಿದ್ದಾರೆ ‘ಉತ್ತಿಷ್ಠ ಭಾರತ’ ಸಂಘಟನೆಯ ಕಾರ್ಯಕರ್ತರು.          

ಪರಿಸರ  ನಮಗಾಗಿ ಎಲ್ಲವನ್ನೂ ನೀಡಿದೆ. ಆದರೆ ಇದನ್ನು  ಮರೆತು ನಾಶ ಮಾಡುತ್ತಿರುವ ಈ ಕಾಲಘಟ್ಟದಲ್ಲಿ ಅದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ  ಸಂಘಟನೆಯು ಪ್ರಕೃತಿಗಾಗಿ ಒಂದು ದಿನ– ‘ಬೀಜದುಂಡೆ‘ (ಸೀಡ್‌ಬಾಲ್‌) ಮಹಾ ಅಭಿಯಾನ  ಹಮ್ಮಿಕೊಂಡಿದೆ. 2015ರಲ್ಲಿ 10 ಸಾವಿರ ಬೀಜದ ಉಂಡೆ ತಯಾರಿಸುವ ಉದ್ದೇಶದೊಂದಿಗೆ ಈ ಅಭಿಯಾನವು ಆರಂಭಗೊಂಡಿತು. 

ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದ್ದರಿಂದ ಜಿಲ್ಲೆಯಿಂದ ರಾಜಧಾನಿಗೂ ಕಾರ್ಯಕ್ರಮವನ್ನು ವಿಸ್ತರಿಸಲಾಗಿದೆ. ರಾಜ್ಯದಾದ್ಯಂತ 12 ಲಕ್ಷಕ್ಕೂ ಅಧಿಕ ಬೀಜದ ಉಂಡೆಗಳನ್ನು ತಯಾರಿಸಲಾಗಿದ್ದು, ಮುಂದಿನ ವರ್ಷದ ವೇಳೆ 3 ಕೋಟಿ ತಯಾರಿಸುವ ಗುರಿ ಇದೆ ಎಂದು ಉತ್ತಿಷ್ಠ ಭಾರತದ ಸಂಯೋಜಕ ನೀರಜ್‌ ಕಾಮತ್‌ ವಿವರಿಸುತ್ತಾರೆ.

ಬೆಂಗಳೂರಿನಲ್ಲಿ ಇದುವರೆಗೆ 10 ಕಾರ್ಯಕ್ರಮ ನಡೆಸಲಾಗಿದ್ದು, 12 ಲಕ್ಷ ಅಧಿಕ ಉಂಡೆಗಳನ್ನು ತಯಾರಿಸಲಾಗಿದೆ.  ಕಳೆದ ಭಾನುವಾರ ಬಸವನಗುಡಿಯ ಕೃಷ್ಣರಾವ್‌ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 400ಕ್ಕೂ ಅಧಿಕ ಮಂದಿ ಭಾಗವಹಿಸಿ, 70 ಸಾವಿರ ಉಂಡೆ ಗಳನ್ನು ತಯಾರಿಸಿದ್ದರು.

ಉತ್ತಿಷ್ಠ ಭಾರತ ಸಂಘಟನೆ ಕಾರ್ಯಕರ್ತರೇ ಎಲ್ಲವನ್ನೂ ಒದಗಿಸಿ, ನಗರವಾಸಿಗಳಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ವಿಚಾರ.
l ಬೀಜದ ಉಂಡೆ ತಯಾರಿ ಹೇಗೆ ?
ಸ್ಥಳೀಯವಾಗಿ ದೊರೆಯುವ ಮಣ್ಣು, ಸೆಗಣಿ, ಹಾಗೂ ಗಂಜಲ ಬಳಸಿ ಮರಗಳ ಬೀಜ ಹಾಕಿ ಒಣಗಿಸಲಾಗುತ್ತದೆ. ಎರಡು  ಮಳೆ ಭೂಮಿಗೆ ಬಿದ್ದ ನಂತರ ಇದನ್ನು ಭೂಮಿಗೆ ಹಾಕುವುದು ಸೂಕ್ತ.

lಯಾವ ಬೀಜಗಳಿದ್ದರೆ ಸೂಕ್ತ..?
ಹುಣಸೆ, ಬೇವು, ಸುಬಾಬುಬುಲ್‌, ಮಾವಿನವಾಟೆ ಹಾಗೂ  ಹೊಂಗೆ ಬೀಜ. ಬೀಜವನ್ನು ಸಂಗ್ರಹಿಸುವವರ ಬಳಿ, ಹಾಗೂ ರೈತರ ಬಳಿಯಿಂದ ಬೀಜ ಸಂಗ್ರಹಿಸಿದರೆ ಒಳ್ಳೆಯದು.

ಏಪ್ರಿಲ್‌ 30ರಂದು ನಡೆಯುವ ಕಾರ್ಯಕ್ರಮ
lಸರ್ಕಾರಿ ಪ್ರಾಥಮಿಕ ಶಾಲೆ ಆವರಣ, ಸಂಧ್ಯಾಸಾಗರ್‌ ಹೋಟೆಲ್‌ ಹಿಂಭಾಗ, ನಂಜಪ್ಪ ಸರ್ಕಲ್‌,  ಶಾಂತಿನಗರ
l ಮಾಧಿಯಂ ಹೋಶಾಲೆ, ಸೂಲಿಕುಂಟೆ ವರ್ತೂರು ಸರ್ಜಾಪುರ ರಸ್ತೆ
lಗಣೇಶ ದೇವಸ್ಥಾನ ಪಾರ್ಕ್‌, ಎಚ್‌ಎಸ್‌ಆರ್‌ ಲೇಔಟ್‌ 1ನೇ ಹಂತ,11ನೇ ಅಡ್ಡರಸ್ತೆ
ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ರ ತನಕ
ಸಂಪರ್ಕ ಸಂಖ್ಯೆ : 99641 42207

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT